ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ಕ್ಷೇತ್ರ ಶೇ 14 ವೃದ್ಧಿ:ನಾಸ್ಕಾಂ

Last Updated 1 ಮೇ 2012, 19:30 IST
ಅಕ್ಷರ ಗಾತ್ರ

 ನವದೆಹಲಿ(ಪಿಟಿಐ): ಭಾರತದ 10 ಸಾವಿರ ಕೋಟಿ ಅಮೆರಿಕನ್ ಡಾಲರ್ (ಸದ್ಯದ ವಿನಿಮಯ ದರದಲ್ಲಿ ರೂ 5.25 ಲಕ್ಷ ಕೋಟಿ) ಮೌಲ್ಯದ ಮಾಹಿತಿ ತಂತ್ರಜ್ಞಾನ(ಐಟಿ) ಮತ್ತು ಹೊರಗುತ್ತಿಗೆ ಸೇವೆ(ಬಿಪಿಒ) ಉದ್ಯಮ ಶೇ 11ರಿಂದ 14ರ ಪ್ರಮಾಣದಲ್ಲಿ ವೃದ್ಧಿ ಹೊಂದಲಿದೆ....

ಹೀಗೆ ಹೇಳಿದ್ದು, ಐಟಿ-ಬಿಪಿಒ ಉದ್ಯಮದ ಪ್ರಾತಿನಿಧಿಕ ಸಂಸ್ಥೆ `ನಾಸ್ಕಾಂ~ನ ನೂತನ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ಎನ್.ಚಂದ್ರಶೇಖರನ್.

ಯೂರೋಪ್ ಒಕ್ಕೂಟದ ಹಲವು ರಾಷ್ಟ್ರಗಳಲ್ಲಿ 2008ರ ಆರ್ಥಿಕ ಹಿಂಜರಿತ ಭೀತಿ ಮತ್ತೆ ತಲೆದೋರಿದ್ದರೂ, ಭಾರತದ ಐಟಿ ಕಂಪೆನಿಗಳ ಬಗ್ಗೆ ಸ್ಟಾಂಡರ್ಡ್ ಅಂಡ್ ಪೂರ್ ಸಂಸ್ಥೆ `ಋಣಾತ್ಮಕ~ ರೇಟಿಂಗ್ ಸೂಚನೆ ನೀಡಿದ್ದರೂ, ಚಂದ್ರಶೇಖರನ್ ಮಾತ್ರ ದೇಶದ ಐಟಿ-ಬಿಪಿಒ ಉದ್ಯಮದ ಪ್ರಗತಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

`ಈ ವರ್ಷವೋ, ಇನ್ನೊಂದು ವರ್ಷವೋ ಒಟ್ಟಾರೆ ಹೇಳುವುದಾದರೆ ಏನೇ ಇದ್ದರೂ ತಂತ್ರಜ್ಞಾನ ಕ್ಷೇತ್ರ ಮಹತ್ವದ ಪಾತ್ರ ವಹಿಸಿಯೇ ಇರುತ್ತದೆ. ದೇಶದ ಮಾರುಕಟ್ಟೆ ಮತ್ತು ವಹಿವಾಟು ಮೇಲೂ ತನ್ನದೇ ಆದ ಪರಿಣಾಮ ಬೀರಿಯೇ ಬೀರುತ್ತದೆ. ಹಾಗಾಗಿಯೇ ಈಗ ಮತ್ತಷ್ಟು ಶಕ್ತಿಶಾಲಿಯಾಗಿರುವ ಸುಧಾರಿತ ತಂತ್ರಜ್ಞಾನಕ್ಕೆ ದೇಶದಲ್ಲಿ ಮತ್ತು ಜಾಗತಿಕವಾಗಿಯೂ ಅದ್ಭುತ ಅವಕಾಶಗಳು ಎದುರು ನೋಡುತ್ತಿವೆ~ ಎಂದು ಉದ್ಯಮವನ್ನು ಉತ್ತೇಜಿಸುವ ಮಾತುಗಳನ್ನಾಡಿದ್ದಾರೆ.

ಸುದ್ದಿಗಾರರ ಜತೆ ಮಂಗಳವಾರ ಮಾತನಾಡಿದ ಅವರು, ಜಾಗತಿಕ ಆರ್ಥಿಕ ಪರಿಸ್ಥಿತಿ ಅಸ್ಥಿರವಾಗಿರುವುದರಿಂದ ಪಶ್ಚಿಮದ ದೇಶಗಳ ಗ್ರಾಹಕ ಕಂಪೆನಿಗಳಿಂದ ಐಟಿ-ಬಿಪಿಒ ಸೇವೆಯ ಬೇಡಿಕೆ ಕಡಿಮೆ ಆಗಬಹುದು. ಮುಖ್ಯವಾಗಿ ಅಮೆರಿಕ ಮತ್ತು ಯೂರೋಪ್ ಒಕ್ಕೂಟ ದೇಶಗಳಿಂದಲೇ ಹೆಚ್ಚಿನ ವರಮಾನ ಪಡೆಯುತ್ತಿರುವ ಭಾರತದ ಕಂಪೆನಿಗಳಿಗೆ ಆತಂಕ ಉಂಟು ಮಾಡಬಹುದು.

ಅದರಲ್ಲೂ ಇನ್‌ಫೋಸಿಸ್ ಮತ್ತು ವಿಪ್ರೊ 2012ರ 1ನೇ ತ್ರೈಮಾಸಿಕದ ಬಗ್ಗೆ ಆಶಾದಾಯಕ ನಿರೀಕ್ಷೆ ಹೊಂದಿಲ್ಲದೇ ಇರುವುದು ಈ ಆತಂಕವನ್ನು ಹೆಚ್ಚಿಸಬಹುದು. ಆದರೆ, ಟಿಸಿಎಸ್ ಮತ್ತು ಎಚ್‌ಸಿಎಲ್ ಟೆಕ್ನಾಲಜೀಸ್ ಮಾತ್ರ ಭವಿಷ್ಯದ ದಿನಗಳ ಬಗ್ಗೆ ಸಣ್ಣ ಮಟ್ಟಿಗಾದರೂ ಆಶಾದಾಯಕ ಮುನ್ನೋಟ ಬೀರಿರುವುದು ನಮ್ಮ ಆತ್ಮವಿಶ್ವಾಸ ಹೆಚ್ಚಿಸುವಂತಿದೆ~ ಎಂದು ಟಿಸಿಎಸ್ ಸಿಇಒ ಸಹ ಆಗಿರುವ ನಾಸ್ಕಾಂ ಅಧ್ಯಕ್ಷ ವಿಶ್ಲೇಷಿಸಿದರು.


`ಭಾರತದ ಐಟಿ-ಬಿಪಿಒ ಉದ್ಯಮಕ್ಕೆ ವಿಶ್ವಾಸ ಹೆಚ್ಚಿಸುವಂತಹ ಅಂಶಗಳಿವೆ. ನಾವಿನ್ನೂ ಪೂರ್ವ ಯೂರೋಪ್ ದೇಶಗಳು, ಲ್ಯಾಟಿನ್ ಅಮೆರಿಕ, ಜಪಾನ್ ಮಾರುಕಟ್ಟೆಯತ್ತ ಗಮನವನ್ನೇ ಹರಿಸಿಲ್ಲ. ಅಲ್ಲಿ ಸಾಕಷ್ಟು ಪ್ರಮಾಣದ ಅವಕಾಶಗಳಿವೆ~ ಎಂದು ಐಟಿ-ಬಿಪಿಒ ಉದ್ಯಮದ ಬೆಳವಣಿಗೆಗೆ ಇರುವ ಪರ್ಯಾಯ ಮಾರ್ಗಗಳತ್ತ ಚಂದ್ರಶೇಖರನ್ `ದೂರದೃಷ್ಟಿ~ ಹರಿಸಿದರು.

ಭಾರತದ ಐಟಿ ಕಂಪೆನಿಗಳಿಗೆ 2012-13ರಲ್ಲಿ ಎದುರಾಗಲಿರುವ ಸವಾಲುಗಳ ಕುರಿತ ಪ್ರಶ್ನೆಗೆ ಉತ್ತರಿಸಿದರ `ನಾಸ್ಕಾಂ~ನ ನೂತನ ಉಪಾಧ್ಯಕ್ಷ `ಮೈಂಡ್ ಟ್ರೀ~ ಕಂಪೆನಿಯ ಸಿಇಒ ಕೃಷ್ಣಕುಮಾರ್ ನಟರಾಜನ್, `ಮೆಕೆನ್ಸಿ ಅವರ ಅಂದಾಜಿನ ಪ್ರಕಾರ ಭಾರತದ ಐಟಿ-ಬಿಪಿಒ ಉದ್ಯಮ 2020ರ ವೇಳೆಗೆ 22000ರಿಂದ 30000 ಕೋಟಿ ಅಮೆರಿಕ ಡಾಲರ್(ರೂ 11.56 ಲಕ್ಷ ಕೋಟಿಯಿಂದ 15.76 ಲಕ್ಷ ಕೋಟಿ) ಮೌಲ್ಯದ್ದಾಗಿ ಬೆಳವಣಿಗೆ ಕಾಣಲಿದೆ.

ಇದು ಭಾರತದ ಪಾಲಿಗೆ ಬಹುದೊಡ್ಡ ಅವಕಾಶವಾಗಿರಲಿದೆ. ಸದ್ಯ ಎದುರಾಗಿರುವ ಸವಾಲುಗಳು ಅಲ್ಪಕಾಲದವು ಅಷ್ಟೆ. ದೀರ್ಘ ಕಾಲದತ್ತ ಕಣ್ಣು ಹಾಯಿಸಿದಾಗ ದೊಡ್ಡ ಸ್ಪರ್ಧೆ ಕಂಡರೂ ಭಾರತದ ಐಟಿ ಉದ್ಯಮ ಅದನ್ನು ಸಮರ್ಥವಾಗಿ ಎದುರಿಸುವಷ್ಟು ಶಕ್ತಿಶಾಲಿಯಾಗಿದೆ~ ಎಂದು ತಮ್ಮ ಉದ್ಯಮದ ಬಗ್ಗೆ ಭಾರಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ನಂತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಚಂದ್ರಶೇಖರನ್, `ನಾಸ್ಕಾಂನ ಆಡಳಿತ ಮಂಡಳಿ ಹೊಸ ಬಗೆಯ ವಾಣಿಜ್ಯ ಮಾದರಿಗಳನ್ನು ರೂಪಿಸಿಕೊಡಲಿದೆ. ಭಾರತದ ಐಟಿ ಕಂಪೆನಿಗಳ ಸಂಶೋಧನಾ ಸಾಮರ್ಥ್ಯ ವೃದ್ಧಿಗೂ ನೆರವಾಗಲಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT