ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ರೂಪಾಯಿ ಮಾರ್ಕೆಟ್

Last Updated 16 ಜನವರಿ 2012, 6:25 IST
ಅಕ್ಷರ ಗಾತ್ರ

ಗದಗ: ಇಲ್ಲಿ ಎಲ್ಲ ತರಕಾರಿಯೂ ಐದು ರೂಪಾಯಿ. ಕೆ.ಜಿ.ಗೆ ಬದಲಾಗಿ ಗುಡ್ಡೆಯಲ್ಲಿ ಲೆಕ್ಕ. ಬೇಕಾದ ಗುಡ್ಡೆ ಎತ್ತಿ ಬ್ಯಾಗಿಗಿಳಿಸಿಕೊಂಡು ಐದು ರೂಪಾಯಿ ನೀಡಿ ಮುಂದೆ ಸಾಗಬಹುದು. ಈ ಗುಡ್ಡೆ ತರಕಾರಿ ಮಾರಾಟವೇ ಇಲ್ಲಿನ ಮುಂಜಾನೆ ಮಾರುಕಟ್ಟೆಯ ವಿಶೇಷ.

 ನಗರದ ಬಸವೇಶ್ವರ ವೃತ್ತ ಸಮೀಪದಲ್ಲಿರುವ ಗ್ರೇನ್ ಮಾರು ಕಟ್ಟೆಯಲ್ಲಿ ಭಾನುವಾರ ಕೂಡ ವ್ಯಾಪಾರ ಜೋರಿನಿಂದ ನಡೆದಿತ್ತು. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿದ್ದ ಜನರು ಈ ತರಕಾರಿ ಮಾರುಕಟ್ಟೆಯಲ್ಲಿ ಉತ್ಸಾಹದಿಂದ ಖರೀದಿಯಲ್ಲಿ ಪಾಲ್ಗೊಂಡರು.

ಇಲ್ಲಿನ ರಸ್ತೆ ಬದಿಯಲ್ಲಿ ಹೀಗೆ ನಿತ್ಯ ವ್ಯಾಪಾರ ನಡೆಯುತ್ತದೆ. ವಿಶೇಷ ಎಂದರೆ ಇದು ಕೇವಲ ಮುಂಜಾವಿನ ವ್ಯಾಪಾರ. ಬೆಳಿಗ್ಗೆ 7ಕ್ಕೆಲ್ಲ ವ್ಯಾಪಾರ ಆರಂಭವಾಗಿ 9ರ ಹೊತ್ತಿಗೆ ವ್ಯಾಪಾರ ಮುಕ್ತಾಯವಾಗುತ್ತದೆ. ಹೀಗಾಗಿ ಇದು ಕೇವಲ 2 ತಾಸಿನ ವ್ಯಾಪಾರ. ಬೆಂಡೆ, ಬದನೆ, ಮೂಲಂಗಿ, ಹೀರೆಕಾಯಿ, ಸೌತೆಕಾಯಿ, ಉಳ್ಳಾಗಡ್ಡಿ, ಟೊಮ್ಯಾಟೊ, ಮೆಣಸಿನಕಾಯಿ, ಮೆಂತ್ಯ, ಕೊತ್ತಂಬರಿ, ನಿಂಬೆಹಣ್ಣು ಹೀಗೆ ನಿತ್ಯಬಳಕೆಯ ಎಲ್ಲ ಬಗೆಯ ಕಾಯಿಪಲ್ಲೆಗಳು ಇಲ್ಲಿ ಸಿಗುತ್ತವೆ. ಇದಲ್ಲದೆ ವಿವಿಧ ಧಾನ್ಯಗಳು, ಸಾಂಬಾರ ಪದಾರ್ಥಗಳೂ ಐದು ರೂಪಾಯಿ ವಿಶೇಷ ಪ್ಯಾಕೆಟ್‌ಗಳಲ್ಲಿ ಇಲ್ಲಿ ಲಭ್ಯವಿದೆ.

ಉದ್ಯೋಗದಲ್ಲಿರುವ, ಬೆಳಿಗ್ಗೆಯಷ್ಟೇ ಬಿಡುವಿರುವ ಮಂದಿಗೆ ಅನುಕೂಲ. ಬೆಳಿಗ್ಗೆ ವಾಕ್‌ನ ಜೊತೆಗೆ ತಾಜಾ ತರಕಾರಿಗಳನ್ನು ಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ.

ರೈತರು ಹಾಗೂ ಗ್ರಾಹಕರ ನಡುವೆ ನೇರ ಖರೀದಿ ಏರ್ಪಡುವುದು ಇಲ್ಲಿನ ಮತ್ತೊಂದು ವಿಶೇಷ. ಹುಲಕೋಟಿ, ನಾಗಾವಿ, ಬಿಂಕದಕಟ್ಟಿ, ಕಳಸಾಪುರ, ನರಸಾಪುರ, ನಾಗಸಮುದ್ರ, ಹೊಂಬಳ, ಲಕ್ಕುಂಡಿ, ಹರ್ಲಾಪುರ ಮೊದಲಾದ ಗದುಗಿನ ಆಸುಪಾಸಿನ ಹಳ್ಳಿಗಳ ರೈತರು ತಮ್ಮ ಉತ್ಪನ್ನಗಳನ್ನು ಇಲ್ಲಿಗೆ ವ್ಯಾಪಾರಕ್ಕೆ ತರುತ್ತಾರೆ.

ಗ್ರಾಹಕರು ಇವರೊಡನೆ ಚೌಕಾಸಿ ನಡೆಸಿ ಉತ್ಪನ್ನಗಳನ್ನು ಕೊಳ್ಳುತ್ತಾರೆ. ಮಾರುಕಟ್ಟೆ ದರಕ್ಕಿಂತ ಬೆಲೆ ಕೊಂಚ ಕಡಿಮೆಯೇ ಇರುತ್ತದೆ. ಉತ್ಪನ್ನಗಳ ಗುಣಮಟ್ಟದಲ್ಲೂ ವೈವಿಧ್ಯವಿದ್ದು, ಗುಣಮಟ್ಟದ ಸೊಪ್ಪು- ತರಕಾರಿಗಳೂ ಇಲ್ಲಿ ಸಿಗುತ್ತವೆ.

`ಸುತ್ತಲಿನ ಹಳ್ಳಿಗಳ ಜನರೂ ಇಲ್ಲಿಗೆ ಬಂದು ಮಾರಾಟ ಮಾಡುತ್ತೇವೆ. ನಮ್ಮ ವ್ಯಾಪಾರ ಏನಿದ್ದರೂ ಎರಡು  ತಾಸು ಅಷ್ಟೇ. ಬೇರೆ ಮಾರುಕಟ್ಟೆಗೆ ಹೋಲಿಸಿದರೆ ನಮ್ಮಲ್ಲಿ ಒಂದು ರೂಪಾಯಿ ಕಡಿಮೆಯೇ ಬೆಲೆ ಇರುತ್ತದೆ. ತಾಜಾ ಉತ್ಪನ್ನವೂ ಜನರಿಗೆ ಸಿಗುತ್ತದೆ~ ಎನ್ನುತ್ತಾರೆ ನಾಗಾವಿಯಿಂದ ಬಂದ ಮೋತಿಲಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT