ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲಿ ಕನ್ನಡದ ಪ್ರತಿಭೆಗಳು...

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಮೂರು ದಿನಗಳ ಹಿಂದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಲಿಷ್ಠ  ಮುಂಬೈ ಎದುರು ಗೆಲುವು ಸಾಧಿಸಿ ವಿಜೃಂಭಿಸಿತ್ತು. ಮೊದಲ ಸಲ ಆರ್‌ಸಿಬಿ ತಂಡದ ಸಾರಥ್ಯ ವಹಿಸಿಕೊಂಡಿದ್ದ ವಿರಾಟ್ ಕೊಹ್ಲಿ ಸಂತಸ ಎಲ್ಲೆ ಮೀರಿತ್ತು. ಕೊಹ್ಲಿ ಬಳಗದಲ್ಲಿ `ಉಲ್ಲಾ ಲೇ ಉಲಾಲ...' ಸಂಭ್ರಮದ ಹಾಡು ಮಾರ್ದನಿಸಿತ್ತು. ಇದಕ್ಕೆಲ್ಲಾ ಕಾರಣವಾಗಿದ್ದು `ದಾವಣಗೆರೆ  ಎಕ್ಸ್‌ಪ್ರೆಸ್' ಖ್ಯಾತಿಯ ಕನ್ನಡಿಗ  ಆರ್. ವಿನಯ್ ಕುಮಾರ್...!

ಇನ್ನೇನು ಪಂದ್ಯ ಕೈ ತಪ್ಪಿ ಹೋಗಲಿದೆ ಎನ್ನುವ ಆತಂಕ ಕಾಡಿದ್ದಾಗ ವಿನಯ್ ಗೆಲುವಿನ ತೋರಣ ಕಟ್ಟಿಬಿಟ್ಟರು. ಮುಂಬೈ ಗೆಲುವಿಗೆ ಕೊನೆಯ ಎಸೆತದಲ್ಲಿ ಅಗತ್ಯವಿದ್ಯ ನಾಲ್ಕು ರನ್ ಗಳಿಸಲು ಅವಕಾಶ ನೀಡದಂತೆ ಮಾಡಿದರು. ಇದು ಒಂದು ಉದಾಹರಣೆಯಷ್ಟೆ. ಐಪಿಎಲ್‌ನ ವಿವಿಧ ತಂಡಗಳಲ್ಲಿ ಆಡುತ್ತಿರುವ ಕರ್ನಾಟಕದ ಆಟಗಾರರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅನೇಕ ಪಂದ್ಯಗಳ ವಿಜಯಕ್ಕೂ ಕಾರಣರಾಗಿದ್ದಾರೆ. ಈ ಚುಟುಕು ಆಟದಲ್ಲಿ ಮೊದಲ ಶತಕ ಸಿಡಿಸಿದ ದಾಖಲೆ ಹೊಂದಿದ್ದು ದೇಶಿಯ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಮನೀಷ್ ಪಾಂಡೆ ಎಂಬ ಅಪ್ಪಟ ಪ್ರತಿಭೆ.

ಕರ್ನಾಟಕ ಕ್ರಿಕೆಟ್ ಪ್ರತಿಭೆಗಳ ತವರೂರು. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ಬೆಂಗಳೂರಿನಲ್ಲಿ ಇರುವುದರಿಂದ ಅನೇಕ ಕ್ರಿಕೆಟ್ ತಾರೆಯರು ಇಲ್ಲಿಗೆ ಬರುತ್ತಾರೆ. ಅವರನ್ನು ಬೇಟಿಯಾಗುವ, ಸಲಹೆ ಪಡೆಯುವ ಅವಕಾಶ ಇಲ್ಲಿನ ಯುವಪ್ರತಿಭೆಗಳಿಗೆ ಲಭಿಸುತ್ತದೆ.

ಬೇರೆ ಬೇರೆ ರಾಜ್ಯಗಳ ಆಟಗಾರರು ಕರ್ನಾಟಕದತ್ತ ಆಕರ್ಷಿತರಾಗಲು ಇಲ್ಲಿರುವ ಉತ್ತಮ ಕ್ರಿಕೆಟ್ ವಾತಾವರಣವೂ ಕಾರಣ. ಇನ್ನೊಂದು ರಾಜ್ಯದಿಂದ ಬಂದು ತಮ್ಮ ವೃತ್ತಿ ಜೀವನವನ್ನು ಉಜ್ವಲಗೊಳಿಸಿಕೊಂಡವರು, ಐಪಿಎಲ್‌ನಲ್ಲಿ ತಮ್ಮ `ಬೆಲೆ' ಹೆಚ್ಚಿಸಿಕೊಂಡವರು ಹಲವರಿದ್ದಾರೆ. ಅವರಲ್ಲಿ ಬಲಗೈ ಬ್ಯಾಟ್ಸ್‌ಮನ್ ಮನೀಷ್ ಕೂಡಾ ಒಬ್ಬರು. ಮೂಲತಃ ಉತ್ತರಖಂಡದವರಾದ ಮನೀಷ್ ಐದು ವರ್ಷಗಳಿಂದ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಾ ಬಂದಿದ್ದಾರೆ. 2009ರ ಐಪಿಎಲ್‌ನ ಡೆಕ್ಕನ್ ಜಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಮನೀಷ್ (ಅಜೇಯ) ಕೇವಲ 73 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಆ ಆವೃತ್ತಿಯಲ್ಲಿ ದಾಖಲಾದ ವೈಯಕ್ತಿಕ ಗರಿಷ್ಠ ಮೊತ್ತವೂ ಇದಾಗಿದೆ.

ಪಲಾಯನ: ಆಟಗಾರರ ಪ್ರದರ್ಶನ ಮಟ್ಟ ಉತ್ತಮಗೊಳ್ಳುತ್ತಾ ಹೋದಂತೆಲ್ಲಾ ಅವರ ಸ್ಥಾನಮಾನ, `ಬೆಲೆ' ಹೆಚ್ಚುತ್ತಾ ಹೋಗುತ್ತದೆ. ಇದು ಪಲಾಯನಕ್ಕೂ ಕಾರಣವಾಗಿದೆ. `ಮಿಲಿಯನ್ ಡಾಲರ್ ಬೇಬಿ' ಐಪಿಎಲ್‌ನಲ್ಲಿ ಇದು ಸಹಜ. ಇದಕ್ಕೊಂದು ಉದಾಹರಣೆ ವಿಕೆಟ್ ಕೀಪರ್ ಕರ್ನಾಟಕದ ಸಿ.ಎಂ. ಗೌತಮ್. 2012ರ ಆವೃತ್ತಿಯಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಗೌತಮ್, ಈಗ ಡೆಲ್ಲಿ ಡೇರ್‌ಡೆವಿಲ್ಸ್‌ಗೆ ಜಿಗಿದಿದ್ದಾರೆ.

ಬೆಂಗಳೂರಿನ ತಂಡದಲ್ಲಿದ್ದ ಗೌತಮ್, ಈಗ ತಮ್ಮ ಬೆಲೆ ಹೆಚ್ಚಿಸಿಕೊಂಡಿದ್ದಾರೆ. ಈ ಸಲದ ರಣಜಿ ಋತುವಿನಲ್ಲಿ ನೀಡಿದ ಪ್ರದರ್ಶನವೇ ಇದಕ್ಕೆ ಕಾರಣ. 2012-13ರ ರಣಜಿ ಋತುವಿನಲ್ಲಿ ಗರಿಷ್ಠ ರನ್ ಗಳಿಸಿದ ಭಾರತದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕರ್ನಾಟಕದ ಆಟಗಾರನಿಗೆ ಅಗ್ರಸ್ಥಾನ. ಅಷ್ಟೇ ಅಲ್ಲ, ರಣಜಿ ಹಾಗೂ ಟ್ವೆಂಟಿ-20 ಎಂಬ ಮಾದರಿಯನ್ನು ಲೆಕ್ಕಕ್ಕೆ ತಗೆದುಕೊಳ್ಳದೇ ಚೆಂಡನ್ನು ಚೆಂದವಾಗಿ ದಂಡಿಸುವುದೇ ಇವರ ಇನ್ನೊಂದು ವಿಶೇಷ. ಇದು ಗೌತಮ್ `ಬೆಲೆ'ಯನ್ನು ದುಪ್ಪಟ್ಟಾಗಿಸಿದೆ.

ಸ್ಮರಣೀಯ ಪಂದ್ಯ: ಎರಡು ವರ್ಷಗಳ ಹಿಂದೆ ಚಾಂಪಿಯನ್ಸ್ ಲೀಗ್‌ನ ಪಂದ್ಯವೊಂದನ್ನು ಇಲ್ಲಿ ನೆನಪಿಸಿಕೊಳ್ಳಲೇಬೇಕು. `ಚಿನ್ನಸ್ವಾಮಿ'ಯಲ್ಲಿ ಆರ್‌ಸಿಬಿ ಪಡೆದ ಅತ್ಯಂತ ರೋಚಕ ಗೆಲುವು ಅದು. ಬೆಂಗಳೂರು ತಂಡ ಗೆಲುವು ಪಡೆಯಲು ಕೊನೆಯ ಎಸೆತದಲ್ಲಿ ಆರು ರನ್‌ಗಳ ಅಗತ್ಯವಿತ್ತು.

ಒತ್ತಡ, ಬಲಿಷ್ಠ ಎದುರಾಳಿ ಬೌಲರ್, ಪ್ರೇಕ್ಷಕರ ನಡುವೆ ಮಡುಗಟ್ಟಿದ ಗಂಭೀರ ಮೌನದ ನಡುವೆಯೂ ಕೊನೆಯ ಎಸೆತವನ್ನು ತಮಿಳುನಾಡಿನ ಅರುಣ್ ಕಾರ್ತಿಕ್ ಸಿಕ್ಸರ್ ಸಿಡಿಸಿ ಆರ್‌ಸಿಬಿಗೆ ಅಮೋಘ ಗೆಲುವು ತಂದುಕೊಟ್ಟಿದ್ದರು. ಈ ವೇಳೆ ನಾನ್ ಸ್ಟ್ರೈಕರ್ ಆಗಿದ್ದು ಬೆಂಗಳೂರಿನ ಅರವಿಂದ್. ಅಂದಿನ ಪಂದ್ಯದ ನಾಯಕರಾಗಿದ್ದ ಡೇನಿಯನ್ ವೆಟೋರಿ ಜೊತೆ ಸೇರಿ ಕೊಹ್ಲಿ, ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್‌ಗೇಲ್ ಅವರು ಅರವಿಂದ್ ಹಾಗೂ ಕಾರ್ತಿಕ್ ಅವರನ್ನು ತಬ್ಬಿಕೊಂಡು ಖುಷಿ ವ್ಯಕ್ತಪಡಿಸಿದ್ದರು. ಒತ್ತಡದ ಸಂದರ್ಭದಲ್ಲೂ ಯುವ ಆಟಗಾರರು ತೋರಿದ್ದ ದಿಟ್ಟ ಆಟಕ್ಕೆ ಅವರು ಮನದೂಗಿದ್ದರು.

ಕಾರ್ತಿಕ್‌ಗೆ ಕನ್ನಡಿಗ ಅರವಿಂದ್ ನೆರವು ನೀಡಿದ್ದರಿಂದ ಆರ್‌ಸಿಬಿ ರೋಚಕ ಗೆಲುವು ಪಡೆದಿತ್ತು. ಈ ಗೆಲುವಿನಿಂದ ಬೆಂಗಳೂರು ತಂಡಕ್ಕೆ ಫೈನಲ್‌ವರೆಗೆ ಮುನ್ನುಗ್ಗಲು ಸಾಧ್ಯವಾಗಿತ್ತು. ಅಂದು ಪ್ರೇಕ್ಷಕರ ಗ್ಯಾಲರಿಯಿಂದ ತವರೂರ ಹುಡುಗನ ಪರ ತೂರಿ ಬಂದ ಖುಷಿಯ ಅಲೆ ಎಂದಿಗೂ ಮರೆಯಲು ಸಾಧ್ಯವಿಲ್ಲ. ಹೀಗೆ ಅನೇಕ ಸಲ ಕರ್ನಾಟಕದ ಆಟಗಾರರು ಪಂದ್ಯ ಗೆಲ್ಲಿಸಿಕೊಡಲು ನೆರವಾಗಿದ್ದಾರೆ.

ಅವಕಾಶ: ಅಂತರರಾಷ್ಟ್ರೀಯ ಟೆಸ್ಟ್ ಹಾಗೂ ಏಕದಿನ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿರುವ ಕಲಾತ್ಮಕ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಆಟವನ್ನು ನೋಡಲು ಅದೆಷ್ಟು ಜನ ಮುಗಿಬೀಳುತ್ತಾರೋ, ಏನೋ? ಪಂದ್ಯದಲ್ಲಿ ಯಾರೆ ಗೆಲ್ಲಲಿ, ಆದರೆ ಕರ್ನಾಟಕದ ದ್ರಾವಿಡ್ ಮಿಂಚಬೇಕು ಎನ್ನುವ ತುಡಿತ.  `ದಿ ವಾಲ್' ವಿಭಿನ್ನ ಬ್ಯಾಟಿಂಗ್ ಶೈಲಿಯೇ ಇದಕ್ಕೆ ಕಾರಣ.

ದ್ರಾವಿಡ್ ಆಡುವುದನ್ನು ನೋಡಲು ಸದ್ಯಕ್ಕೆ ಉಳಿದಿರುವುದು ಐಪಿಎಲ್ ಮಾತ್ರ. ರಾಜಸ್ತಾನ ರಾಯಲ್ಸ್ ತಂಡದ ನಾಯಕರಾಗಿರುವ ಅವರ ಆಟವನ್ನು ನೋಡುವ ಅವಕಾಶವನ್ನು ಯಾರೂ ತಪ್ಪಿಸಿಕೊಳ್ಳಲು ಇಷ್ಟಪಡುವುದಿಲ್ಲ. ಟೆಸ್ಟ್‌ನಲ್ಲಿ `ಗೋಡೆ' ಕಟ್ಟುವ ದ್ರಾವಿಡ್ ಚುಟುಕು ಆಟದಲ್ಲಿ ರನ್ ಮಹಲ್ ಕಟ್ಟುವುದರಲ್ಲಿಯೂ ಹಿಂದೆ ಬಿದ್ದಿಲ್ಲ.

ಸವಾಲು: ಆರನೇ ಆವೃತ್ತಿಯಲ್ಲಿ ಕರ್ನಾಟಕದ 13 ಆಟಗಾರರು ವಿವಿಧ ತಂಡಗಳಲ್ಲಿದ್ದಾರೆ. ದೇಶಿಯ ಟೂರ್ನಿಗಳಲ್ಲಿ ನೀಡಿದ ಪ್ರದರ್ಶನದ ಆಧಾರದ ಮೇಲೆ ಫ್ರಾಂಚೈಸ್‌ಗಳು ಅವರನ್ನು ಹರಾಜಿನಲ್ಲಿ ಖರೀದಿ ಮಾಡಿದ್ದಾರೆ. ಆದರೆ, ಅವಕಾಶದ ಕೊರತೆ ಕಾಡುತ್ತಿದೆಯಾದರೂ, ಕೆಲ ತಂಡಗಳಲ್ಲಿ ಕರ್ನಾಟಕದವರೇ ಪ್ರಮುಖ ಪಾತ್ರ ವಹಿಸಿದ್ದಾರೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.

ಪ್ರಯೋಗಕ್ಕೆ ಆಸ್ಪದವೇ ಇಲ್ಲದ 120 ಎಸೆತಗಳ ಚುಟುಕು ಆಟದಲ್ಲಿ ಪ್ರತಿ ಎಸೆತವನ್ನೂ ದಂಡಿಸಬೇಕಾದ ಅನಿವಾರ್ಯತೆ. ಕೊಂಚ ಎಚ್ಚರ ತಪ್ಪಿದರೂ, ಅಂತಿಮ ಹನ್ನೊಂದರಲ್ಲಿ ಆಡುವ ಅವಕಾಶ ತಪ್ಪಿ ಹೋಗಿಬಿಡುತ್ತದೆ. `ಮಿನಿ ಮಹಾಸಮರ'ದಲ್ಲಿ ಚೆಂಡು ಇರುವುದೇ ದಂಡಿಸಲು ಎಂಬ ಸಿದ್ಧಾಂತವನ್ನು ಅಪ್ಪಿತಪ್ಪಿಯೂ ಮರೆಯುವಂತಿಲ್ಲ.

ಗೌತಮ್, ಎಸ್. ಅರವಿಂದ್, ಮಯಾಂಕ್ ಅಗರ್‌ವಾಲ್, ಅಭಿಮನ್ಯು ಮಿಥುನ್ ಅವರು ಅಂತಿಮ ಹನ್ನೊಂದರಲ್ಲಿ ಸ್ಥಾನ ಪಡೆಯಲು ಪ್ರತಿ ಸಲವೂ ಕಠಿಣ ಹೋರಾಟ ನಡೆಸಬೇಕಾಗುತ್ತದೆ. ತಂಡದಲ್ಲಿ ಉಳಿದ ಆಟಗಾರರು ಗಾಯಗೊಂಡು ಅಥವಾ ಅಲಭ್ಯರಾಗಿದ್ದಾಗ ಮಾತ್ರ ಯುವ ಆಟಗಾರರಿಗೆ ಅವಕಾಶ. ಸಿಕ್ಕ ಸ್ಥಾನವನ್ನೇ ಗಟ್ಟಿಮಾಡಿಕೊಳ್ಳುವ ಸವಾಲು ಕರ್ನಾಟಕದ ಆಟಗಾರರು ಸೇರಿದಂತೆ ಎಲ್ಲಾ ಯುವ ಕ್ರಿಕೆಟಿಗರ ಮೇಲಿದೆ. ಇಲ್ಲವಾದರೆ, ಅವಕಾಶವನ್ನು ಬಾಚಿಕೊಳ್ಳಲು ಇನ್ನೊಬ್ಬ ಆಟಗಾರ ನಿಂತಿರುವ ಅಪಾಯವನ್ನೂ ತಳ್ಳಿ ಹಾಕುವಂತಿಲ್ಲ.

ಐಪಿಎಲ್ ಆರನೇ ಆವೃತ್ತಿಯಲ್ಲಿ ವಿವಿಧ ತಂಡಗಳಲ್ಲಿರುವ ಕರ್ನಾಟಕದ ಆಟಗಾರರು
ಆಟಗಾರ                                      ತಂಡ
ಕರುಣ್ ನಾಯರ್                           ಆರ್‌ಸಿಬಿ
ಮಯಾಂಕ್ ಅಗರ್‌ವಾಲ್                ಆರ್‌ಸಿಬಿ
ಕೆ.ಪಿ. ಅಪ್ಪಣ್ಣ                                ಆರ್‌ಸಿಬಿ
ವಿನಯ್ ಕುಮಾರ್                        ಆರ್‌ಸಿಬಿ
ಅಭಿಮನ್ಯು ಮಿಥುನ್                      ಆರ್‌ಸಿಬಿ
ಎಸ್. ಅರವಿಂದ್                           ಆರ್‌ಸಿಬಿ
ರೋನಿತ್ ಮೋರೆ                         ಚೆನ್ನೈ ಸೂಪರ್ ಕಿಂಗ್ಸ್
ಮನೀಷ್ ಪಾಂಡೆ                          ಪುಣೆ ವಾರಿಯರ್ಸ್
ರಾಬಿನ್ ಉತ್ತಪ್ಪ                          ಪುಣೆ ವಾರಿಯರ್ಸ್
ಭರತ್ ಚಿಪ್ಲಿ                                 ಸನ್‌ರೈಸರ್ಸ್ ಹೈದರಾಬಾದ್
ರಾಹುಲ್ ದ್ರಾವಿಡ್                       ರಾಜಸ್ತಾನ ರಾಯಲ್ಸ್
ಸ್ಟುವರ್ಟ್ ಬಿನ್ನಿ                            ರಾಜಸ್ತಾನ ರಾಯಲ್ಸ್
ಸಿ.ಎಂ. ಗೌತಮ್                          ಡೆಲ್ಲಿ ಡೇರ್‌ಡೆವಿಲ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT