ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಬಿಎಂ: ಆವಿಷ್ಕಾರ...!

Last Updated 3 ಜನವರಿ 2012, 19:30 IST
ಅಕ್ಷರ ಗಾತ್ರ

ಎಟಿಎಂ ಮಷಿನ್ ಬಳಿ ಹೋಗಿ ನಿಂತು ನಿಮ್ಮ ಹೆಸರು ಹೇಳಿದರೆ ಸಾಕು, ಕಾರ್ಡ್ ಸ್ವೈಪ್ ಮಾಡದೆ ತನ್ನಿಂತಾನಾಗಿಯೇ ಹಣ ನಿಮ್ಮ ಕೈಗೆ ದೊರಕುತ್ತದೆ. ನಿಮ್ಮ ಮನೆಯ ಉಪಕರಣಗಳಿಗೆ ಅಗತ್ಯವಿರುವ ವಿದ್ಯುತ್ ಅನ್ನು ನೀವೇ ಉತ್ಪಾದಿಸುವ ಮೂಲಕ ಏರುತ್ತಿರುವ ವಿದ್ಯುತ್ ಬಿಲ್‌ನಿಂದ ಮುಕ್ತಿ ಪಡೆಯುವುದು...ಇವಿಷ್ಟೇ ಅಲ್ಲ, ನಿಮ್ಮ ಪಕ್ಕದಲ್ಲೇ ಕುಳಿತ ವ್ಯಕ್ತಿಯ ತಲೆಯಲ್ಲಿ ಏನೆಲ್ಲಾ ವಿಚಾರಗಳು ಬಂದು ಹೋಗುತ್ತಿವೆ ಎಂಬ ಸಂಗತಿಗಳೂ ಕುಳಿತಲ್ಲಿಯೇ ನಿಮಗೆ ತಿಳಿಯುತ್ತದೆ.

ಇವೆಲ್ಲ ಯಾವುದೋ ವೈಜ್ಞಾನಿಕ ಕಟ್ಟುಕಥೆಯಂತೆ ಕಂಡುಬಂದರೂ ಮುಂದಿನ ಐದು ವರ್ಷಗಳಲ್ಲಿ ಇವು ಸಾಧ್ಯ ಎನ್ನುತ್ತದೆ ತಂತ್ರಜ್ಞಾನದ ದಿಗ್ಗಜ ಕಂಪನಿಯಾದ ಇಂಟರ್‌ನ್ಯಾಷನಲ್ ಬಿಸಿನೆಸ್ ಮಷಿನ್ (ಐಬಿಎಂ).

ಅದು ನಿಜವೇ ಅನ್ನಿ. ವೈಜ್ಞಾನಿಕ ಕ್ಷೇತ್ರದಲ್ಲಿ ಮಾನವನ ಊಹೆಗೂ ಮೀರಿ ಆವಿಷ್ಕಾರಗಳು ನಡೆಯುತ್ತಲೇ ಇವೆ. ಅದರ ಫಲವೆನ್ನುವಂತೆ ಮುಂದಿನ ಐದು ವರ್ಷಗಳಲ್ಲಿ ಜನರ ಜೀನವಶೈಲಿ ಮತ್ತು ಕಾರ್ಯವೈಖರಿಯನ್ನೇ ಬದಲಾಯಿಸಲು  ಸಾಮರ್ಥ್ಯವುಳ್ಳ `ಫೈವ್ ಇನ್ ಫೈವ್~ ಎಂಬ ತನ್ನ ಆರನೇ ವಾರ್ಷಿಕ  ಆವಿಷ್ಕಾರಗಳ ಪಟ್ಟಿಯನ್ನು `ಐಬಿಎಂ~ ಬಿಡುಗಡೆಗೊಳಿಸಿದೆ.

ಮುಂಬರುವ ದಿನಗಳಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕಂಡುಬರಲಿರುವ ಮಹತ್ತರ ಆವಿಷ್ಕಾರಗಳಿಂದಾಗಿ ಜನರು ತಮ್ಮ ಪ್ರತಿದಿನದ ಚಟುವಟಿಕೆಗಳ ಮೂಲಕ ಉತ್ಪಾದಿಸುವ ಶಕ್ತಿಯನ್ನು ಅವರೇ ಬಳಸಿಕೊಳ್ಳಲು ಸಾಧ್ಯ ಎನ್ನುತ್ತದೆ ಕಂಪನಿ.
 
ಸುಮ್ಮನೆ ವ್ಯರ್ಥವಾಗಿ ಹೋಗುತ್ತಿರುವ ಈ ಚಲನ ಶಕ್ತಿಯನ್ನು ಜನರು ತಮ್ಮ ಮನೆಗಳಲ್ಲಿ, ಕಚೇರಿಗಳಲ್ಲಿ ಬಳಸುವ ಸಾಧ್ಯ ಎಂಬುದು `ಐಬಿಎಂ~ ನಂಬಿಕೆ. ಇದರಿಂದ ಪರಿಸರ ಸ್ನೇಹಿಯಾಗಿ ಬದುಕುವುದರೊಂದಿಗೆ ಇಂಧನ ಲಾಭವೂ ಸಾಧ್ಯ ಎನ್ನುವುದು ಕಂಪನಿಯ ವಾದವಾಗಿದೆ.

ಇದೇ ವೇಳೆ ವ್ಯಕ್ತಿಗಳ ಮನಸ್ಸನ್ನು ಓದುವ ತಂತ್ರಜ್ಞಾನವೂ ಸದ್ಯದಲ್ಲೇ ಆವಿಷ್ಕಾರಗೊಳ್ಳಲಿದೆ ಎಂದೂ ಅಲ್ಲಿನ ಸಂಶೋಧಕರು ತಿಳಿಸುತ್ತಾರೆ. ಆ ಹಿನ್ನೆಲೆಯಲ್ಲಿಯೇ ವ್ಯಕ್ತಿಯ ಮಿದುಳನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ಗೆ ಹೇಗೆ ಸಂಪರ್ಕ ಕಲ್ಪಿಸಬಹುದು ಎನ್ನುವುದರ ಕುರಿತು ಐಬಿಎಂ ವಿಜ್ಞಾನಿಗಳು ಈಗ ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ.

ವಿಜ್ಞಾನಿಗಳ ಈ ಪ್ರಯತ್ನ ಪೂರ್ಣಗೊಂಡಲ್ಲಿ ಯಾರೊಂದಿಗಾದರೂ ಮಾತನಾಡಬೇಕೆಂದು ನಾವು ಮನಸ್ಸಿನಲ್ಲಿ ಯೋಚಿಸಿದರೆ ಸಾಕು, ಅದೇ ತಾನಾಗಿ ಆ ವ್ಯಕ್ತಿಗೆ ಕರೆ ಹೋಗುತ್ತದೆ. 
ಅಥವಾ ಕಂಪ್ಯೂಟರ್‌ನಲ್ಲಿ ಕರ್ಸರ್ ಅನ್ನು ಎಲ್ಲಿ ಚಲಿಸಬೇಕೆಂದು ಮನಸ್ಸಿನಲ್ಲಿ ಎಣಿಸುತ್ತೀರೋ ಕೂಡಲೇ ಅದು ಅಲ್ಲಿಗೆ ಹೋಗಿ ಕ್ಲಿಕ್ ಆಗುತ್ತದೆ ಎನ್ನುತ್ತಾರೆ ಅವರು.

`ಬಯೊ ಇನ್‌ಫೋಮ್ಯಾಟಿಕ್ಸ್~ ನಲ್ಲಾದ ಕ್ರಾಂತಿಯೇ ಇದಕ್ಕೆ ಕಾರಣ. ಇದೀಗ ಬಯೊ ಇನ್‌ಫೋಮ್ಯಾಟಿಕ್ಸ್‌ನ ವಿಜ್ಞಾನಿಗಳು ಉನ್ನತ ದರ್ಜೆಯ ಸೆನ್ಸಾರ್‌ಗಳಿರುವ ಹ್ಯಾಂಡ್‌ಸೆಟ್‌ಗಳನ್ನು ಅಭಿವೃದ್ಧಿಪಡಿಸಿದ್ದು, ಈ ಸೆನ್ಸಾರ್‌ಗಳು ಮಿದುಳಿನ ವಿದ್ಯುತ್‌ವಾಹಕ ಚಟುವಟಿಕೆಗಳನ್ನು ಓದುವ ಮೂಲಕ ಮುಖದ ಚಹರೆ, ಉದ್ವೇಗ ಮತ್ತು ಏಕಾಗ್ರತೆಯ ಮಟ್ಟವನ್ನು ಅಳೆಯುತ್ತವಂತೆ.  ಮುಂದಿನ ಐದು ವರ್ಷಗಳಲ್ಲಿ ಪ್ರಾರಂಭಿಕ ಹಂತದಲ್ಲಿ ವಿನೋದ ಮತ್ತು ಮನರಂಜನೆ ಕ್ಷೇತ್ರಗಳಲ್ಲಿ ಈ ತಂತ್ರಜ್ಞಾನ ಬಳಕೆಯಾಗಲಿದೆ ಎನ್ನುವುದು ವಿಜ್ಞಾನಿಗಳ ಹೇಳಿಕೆ.

ಅಷ್ಟೇ ಅಲ್ಲದೆ, ವೈದ್ಯಕೀಯ ಕ್ಷೇತ್ರದಲ್ಲಿಯೂ ಈ ತಂತ್ರಜ್ಞಾನ ಬಹಳಷ್ಟು ನೆರವು ನೀಡಲಿದೆ ಎನ್ನುತ್ತಾರೆ ಅವರು. ಮಿದುಳಿನ ಏರುಪೇರುಗಳನ್ನು ಅರಿಯುವ ಮೂಲಕ ಬುದ್ಧಿಮಾಂದ್ಯ ಮಕ್ಕಳ ಚಿಕಿತ್ಸೆಗೂ ಇದು ನೆರವಾಗಲಿದೆಯಲ್ಲದೆ  ಪಾರ್ಶ್ವವಾಯು ಪೀಡಿತರು ಚೇತರಿಸಿಕೊಳ್ಳುವಲ್ಲಿಯೂ ಇದು ಪರಿಣಾಮಕಾರಿಯಾಗಲಿದೆ.

ಬಯೋಮೆಟ್ರಿಕ್ ದತ್ತಾಂಶ: ವ್ಯಕ್ತಿಯೊಬ್ಬ ತನ್ನ ದೈನಂದಿನ ಚಟುವಟಿಕೆಗಳಲ್ಲಿ ಹಲವು ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾಗುತ್ತದೆ. ಪ್ರತೀಯೊಂದು ವ್ಯಕ್ತಿಯ ಜೈವಿಕ ಹೊಂದಾಣಿಕೆಯೇ ಆ ವ್ಯಕ್ತಿಯ ವಿಶಿಷ್ಟ ವ್ಯಕ್ತಿತ್ವಕ್ಕೆ ಕಾರಣವಾಗಿದ್ದು ಮುಂದಿನ ದಿನಗಳಲ್ಲಿ ಅದೇ ಎಲ್ಲದಕ್ಕೂ ಕೀಲಿಕೈಯಾಗಲಿದೆ. ಇದನ್ನೇ ಸಂಶೋಧಕರು `ಬಯೊ ಮೆಟ್ರಿಕ್ ಡಾಟಾ~ ಎಂದು ಕರೆಯುತ್ತಾರಲ್ಲದೆ ಇದರಿಂದ ಪಾಸ್‌ವರ್ಡ್‌ಗಳ ಜಂಜಾಟದಿಂದ ಮುಕ್ತಿ ಹೊಂದಿ ನಿರಾತಂಕವಾಗಿ ಸಾಗಬಹುದು ಎನ್ನುತ್ತಾರೆ ಐಬಿಎಂ ವಿಜ್ಞಾನಿಗಳು.

ಪ್ರತಿ  ವ್ಯಕ್ತಿಯೂ ಅವರದ್ದೇ ಆದ ನಿರ್ದಿಷ್ಟ ಜೈವಿಕ ವ್ಯಕ್ತಿತ್ವವನ್ನು ಹೊಂದಿದ್ದು ಮುಖದ ಚಹರೆಗಳು, ರೆಟಿನಾ ನಡೆಸುವ ಸ್ಕ್ಯಾನ್‌ಗಳು ಮತ್ತು ಸ್ವರತಂತುಗಳನ್ನು ಜತೆಗೂಡಿಸಿ ವಿಶಿಷ್ಟವಾದ ಡಿಎನ್‌ಎ ಆನ್‌ಲೈನ್ ಪಾಸ್‌ವರ್ಡ್‌ಗಳನ್ನು ತಯಾರಿಸುವ ಸಾಫ್ಟ್‌ವೇರ್‌ಗಳ ಅಭಿವೃದ್ಧಿಯಲ್ಲಿ ಅವರೀಗ ನಿರತರಾಗಿದ್ದಾರೆ.

ಮೇಲೆ ವಿವರಿಸಲಾದ ಮಾನವನ ಊಹೆಗೂ ನಿಲುಕದ ವೈಜ್ಞಾನಿಕ ಕ್ಷೇತ್ರದ ಬೆಳವಣಿಗೆಗಳಿಗೆ ಈ ಬಯೊ ಮೆಟ್ರಿಕ್ ಡಾಟಾಗಳೇ ಕಾರಣ. ಇದರಿಂದಾಗಿಯೇ ಎಟಿಎಂ ಯಂತ್ರದ ಬಳಿ ನಿಂತು ಮುಖ ತೋರಿಸಿದರೆ ಹಣ ತನ್ನಿಂತಾನಾಗಿಯೇ ಹೊರಬರುತ್ತದೆ. ಜತೆಗೆ ಪಕ್ಕದಲ್ಲೇ ಕುಳಿತ ವ್ಯಕ್ತಿಯ ಮನಸ್ಸನ್ನು ಓದಲೂ ಇದೇ ಕಾರಣ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT