ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಇಳಿ ಸಂಜೆಯ ಪಯಣ

Last Updated 12 ಜುಲೈ 2013, 19:59 IST
ಅಕ್ಷರ ಗಾತ್ರ

ಬಾಗಲಕೋಟೆಯ ನೇತ್ರ ತಜ್ಞರ ಬಳಿ ಕಣ್ಣಿನ ನೋವು ತೋರಿಸಿಕೊಳ್ಳಲು ಹೋಗಿದ್ದೆ. ಮುಂಜಾನೆಯಿಂದ ತಾಸಿಗೊಂದು ಸಲ ಡ್ರಾಪ್ಸ್ ಬಿಟ್ಟು, ಕಣ್ಣಿನ ಒತ್ತಡ ಹಾಗೂ ರಕ್ತ ಸೋರಿದ್ದ ಬಗ್ಗೆ ತನಿಖೆ ಪ್ರಾರಂಭಿಸಿದ್ದರು. ಹಾಕಿದ ಔಷಧಿ ಹನಿಗಳಿಂದ ಕಣ್ಣು ಬರೀ ಬಿಳಿ ಪರದೆಯಂತಾಗಿತ್ತು. `ವಾಪಸ್ಸು ಊರಿಗೆ ಹೇಗೆ ಹೋಗೋದು' ಎಂಬ ಆತಂಕ ಎದೆಯೊಳಗೆ ಇಳಿಯಿತು. ತಂಗಿ ಆಫೀಸಿನಿಂದ ಫೋನಾಯಿಸಿದ್ದಳು. `ಆಫೀಸು ಮುಗಿದ ತಕ್ಷಣ ನಾನೇ ಬಂದು ನಿನ್ನ ಊರಿಗೆ ಕರೆದೊಯ್ಯುತ್ತೇನೆ. ಒಬ್ಬಳೇ ಬಸ್‌ಸ್ಟಾಂಡಿಗೆ ಹೋಗಬೇಡ' ಅಂತ ತಿಳಿಸಿದ್ದಳು.

ಅವಳು ಬಂದಾಗ ಸಂಜೆ 6 ಗಂಟೆ ದಾಟಿತ್ತು. ಮಬ್ಬುಗತ್ತಲೆಯಲ್ಲಿ ಆಟೊ ಹಿಡಿದು ಬಸ್‌ಸ್ಟಾಂಡಿಗೆ ಬಂದಾಗ ಅಲ್ಲಿದ್ದವರು `ಈಗ ತಾನೇ ಒಂದು ಬಸ್ ಬಾದಾಮಿಗೆ ಪಾಸ್ ಆಯ್ತುರೀ' ಅಂದಾಗ, ಇನ್ನು ಏಳು ಗಂಟೆಯ ಕೊನೆಯ ಬಸ್ಸೇ ಗತಿ ಎಂದುಕೊಂಡು ನಾವಿಬ್ಬರೂ ಬೆಂಚಿನ ಮೇಲೆ ಕುಳಿತುಬಿಟ್ಟೆವು. ಕೆಟ್ಟ ಬ್ಯಾಸಗಿ, ತಂದ ನೀರು ಖಲಾಸ್ ಆಗಿತ್ತು. ತಂಗಿ ಒಂದು ಬಾಟಲಿ ಬಿಸ್ಲೇರಿ ಕೊಂಡುತಂದಳು.

`ಬಹಳ ದಿವಸದ್ದು ಅಂತ ಕಾಣಿಸುತ್ತದೆ ಸ್ವಲ್ಪವೇ ಕುಡಿ' ಅಂದಳು. ವಿದ್ಯಾಗಿರಿಯ ಕಡೆ ಮುಳುಗುತ್ತಿದ್ದ ಸೂರ್ಯನ ಕೆಂಬಣ್ಣ ಹರಡಿತ್ತು. ಪರದೆ ಹಾಕಿದ ಕಣ್ಣಿಗೆ ಮಬ್ಬಾಗಿ ಬಣ್ಣ, ಜನರು, ಬಸ್ಸುಗಳು ಕಾಣಿಸಿದವು. ದೇವರೇ ಪರ್ಮನೆಂಟಾಗಿ ಕಣ್ಣು ಇಲ್ಲದಿದ್ದರೆ ಹೇಗಿರಬಹುದು ಎಂಬ ವಿಚಾರದಿಂದ ತಲೆ ತುಂಬ ಕೆಂಜಿರುವಿ ಮುತ್ತಿಕೊಂಡಂತೆ ಆಯಿತು.

7.15ಕ್ಕೆ ಬಸ್ಸು ಬಂತು. ಮೂರು ಬಸ್ ಜನ ಬುದು ಬುದು ಗುದ್ದಾಡಿ ಒಳಹೊಕ್ಕರು. ಒಂದಿಷ್ಟು ಜನ ಬಸ್ ಮೇಲೆ ಹತ್ತಿದರು. ತಂಗಿ ಛತ್ರಿ ಕಿಟಕಿಯೊಳಗೆ ತೂರಿಸಿ ಎರಡು ಸೀಟು ಗಿಟ್ಟಿಸಿದ್ದಳು. ಮೇಲೆ ಹತ್ತಲೂ ಆಗದಂತೆ ಜನ ಬಾಗಿಲಲ್ಲಿ ಮುಕುರಿದ್ದರು. ಅಂತೂ ಇಂತೂ ಒದ್ದಾಡಿ, ಒಬ್ಬರ ಕಾಲನ್ನು ಒಬ್ಬರು ತುಳಿಯುತ್ತಾ, ಕೈ ತಿವಿಯುತ್ತಾ ಹರಸಾಹಸ ಮಾಡಿ ಬಸ್ಸು ಏರಿದರೆ, ಕಾಯ್ದಿಟ್ಟ ಸೀಟುಗಳ ಛತ್ರಿಗಳೇ ಮಾಯವಾಗಿ ದಢೂತಿ ಹಾಗೂ ಅವನ ಮಗ ನಮ್ಮ ಸೀಟನ್ನು ಆಕ್ರಮಿಸಿದ್ದರು. ತಂಗಿ ಅಲವತ್ತುಕೊಂಡಳು.

`ಕಣ್ಣು ಬಹಳ ತ್ರಾಸ್ ಆಗೇದ. ಏನೂ ಕಾಣದು, ದಯವಿಟ್ಟು ಸೀಟು ಬಿಟ್ಟುಕೊಡ್ರಿ, ಮತ್ತ ಛತ್ರಿಗಳನ್ನು ಎಲ್ಲಿ ಇಟ್ಟೀರಿ' ಅಂತ ಕೇಳಿದಳು. ಮೊದ ಮೊದಲು ಸೀಟು ಬಿಟ್ಟುಕೊಡಲು ಸತಾಯಿಸಿದ ಆಸಾಮಿ, ನನ್ನ ಬಾತುಕೊಂಡ ಕಣ್ಣುಗಳನ್ನ ನೋಡಿ ಸೀಟು ಬಿಟ್ಟುಕೊಡುತ್ತ `ನನ್ನ ಮಗನ್ನ ನಿಮ್ಮ ತೊಡಿಮ್ಯಾಗ ಹಾಕ್ಕೊಳ್ರಿ' ಅಂತ, ತನ್ನ ಕೈಚೀಲದೊಳಗೆ ಸೇರಿಸಿದ್ದ ನಮ್ಮಿಬ್ಬರ ಛತ್ರಿಗಳನ್ನು ನಿಧಾನವಾಗಿ ತೆಗೆದುಕೊಟ್ಟ.

ಹೊರಲಾರದೇ ಅವನ ಮಗನನ್ನು ತೊಡಿ ಮ್ಯಾಲೆ ಕೂಡಿಸಿಕೊಂಡು ನಾವಿಬ್ಬರೂ ಬೆವರು ಸುರಿಸುತ್ತ ಕುಳಿತಿದ್ದೆವು. ಬಸ್‌ಸ್ಟಾಂಡಿಗೆ ಬಂದು 20 ನಿಮಿಷವಾದರೂ ಕಂಡಕ್ಟರ್ ಇನ್ನೂ ಬಂದಿಲ್ಲ. ಜನರ ಮಧ್ಯೆ ಡ್ರೈವರ್ ಕೂಡಾ ಕಾಣುತ್ತಿಲ್ಲ. `ಲಾಂಗ್‌ರೂಟ್ ಬಸ್ ಕಂಡಕ್ಟರ- ಡ್ರೈವರ ಚಹಾ ಕುಡಿಯಲಿಕ್ಕೆ ಹೋಗ್ಯಾರಿ. ಒತ್ತಬ್ಯಾಡ್ರಿ ಸ್ವಲ್ಪ ಸಂಭಾಳಿಸಿಕೊಳ್ರಿ' ಒಳಗಿದ್ದ ಜನ ತಮ್ಮತಮ್ಮಲ್ಲೇ ಮಾತನಾಡುತ್ತ, ಇಡ್ಲಿ ಅಟ್ಟದ ಉಗಿಯಲ್ಲಿ ಬೆಂದಂತೆ ಬೇಯುತ್ತಿದ್ದರು. ತಂಗಿ ಹುಡುಗನ ಭಾರಕ್ಕೆ ಒದ್ದಾಡುತ್ತಿದ್ದಳು.

ಒಂದು ಗಿಡ- ಮರವೂ ಅಲ್ಲಾಡದೆ ಹನಿ ಗಾಳಿಯೂ ಬೀಸುತ್ತಿರಲಿಲ್ಲ. ಎಲೆಕ್ಷನ್ ಗಲಾಟೆಯಲ್ಲಿ, ಗೊಂದಲದಲ್ಲಿ ಬಸ್ ಏರಿದ ಜನ ಹೊರಗಿನ ಧಗೆ ಮತ್ತು ಟಿಕೆಟ್ ಸಿಗದ ಕಾವಿನಲ್ಲಿ, ಈ ಪಾಟಿ ತುಂಬಿ ತುಳುಕುತ್ತಿದ್ದ ಬಸ್‌ನಲ್ಲಿ ಸೆಟಗೊಂಡವರಂತೆ, ಜಗಳವಾಡುವವರಂತೆ ಜೋರು ಜೋರು ಮಾತನಾಡುತ್ತಿದ್ದರು. ಹೇಳಿ ಕೇಳಿ ಉತ್ತರ ಕರ್ನಾಟಕದ ಮಂದಿ. `ಏನಾರ ಆಗ್ಲಿ, ಈ ಎಲೆಕ್ಷನ್‌ದಾಗ ಒಂದು ಕೈ ನೋಡೇ ಬಿಡಾಣ. ನಾವು ಎಂತಾ ಮಂದಿ ಅಂತ ಇಡೀ ಕರ್ನಾಟಕಕ್ಕೆ ತೋರಿಸಿಬಿಡುವಾ. ಬಹಳ ತುರುಸಾತು ಬಿಡು. ಎಷ್ಟಂತ ಬರಗಾಲದಾಗ ಜೀವನ ಕಳೆಯೋದು, ಒಬ್ಬನೂ ಇತ್ತಾಗ ಹಣಕೇ ಹಾಕವಲ್ಲ. ತಿಳಿದಾ ಬಿಡಲಿ ಈ ಸರ್ತಿ' ಮಾತಿನ ಖಾರ ಇಡೀ ಬಸ್ಸಲ್ಲಿದ್ದವರ ಕಣ್ಣಲ್ಲಿ ಉರಿ ಹೆಚ್ಚಿಸಿತ್ತು.

ಡ್ರೈವರ್ ಬಸ್ ಏರಿ ಕುಳಿತಿದ್ದ. ಕಂಡಕ್ಟರ್ ಇನ್ನೂ ಒಳಗೆ ಬಂದಿರಲಿಲ್ಲ. ಇರುವೆ ಆಡಲೂ ಜಾಗವಿಲ್ಲದಷ್ಟು ಮಂದಿ ತುಂಬಿದ್ದರು. ಡ್ರೈವರ್ ಹಾರ್ನ್ ಹಾಕುತ್ತಲೇ ಇದ್ದ. ಡಿಪೋದಿಂದ ಕಂಡಕ್ಟರ್ ಓಡಿ ಬರುವುದು ಕಂಡಿತು. ಹರಾ ಶಿವಾ ಅಂತ ತುಂಬಿದ ಬಸುರಿ, ಅವಳಜ್ಜಿ ಬಸ್ಸನ್ನೇರಲು ಧಾವಂತದಿಂದ ಬಂದರು. ಬಾಗಿಲ ಬಳಿ ಬಂದ ಕಂಡಕ್ಟರ್, `ಮುಂದ ಸರಕೊಳ್ರಿ, ಮುಂದ ಸರಕೊಳ್ರಿ' ಅಂತ ಜೋರಾಗಿ ಬಾಯಿ ಮಾಡುತ್ತಿದ್ದ. ಮುದುಕಿ ಕಂಡಕ್ಟರನನ್ನು ಕೇಳಿಕೊಳ್ಳುತ್ತಿದ್ದಳು `ಹ್ಯಾಂಗಾದ್ರ ಮಾಡಿ ನನ್ನ ಮೊಮ್ಮಗಳನ್ನ ಒಳಗೆ ಹತ್ತಿಸಪ್ಪ.

ತುಂಬಿದ ಬಸುರಿ ದಿನದಾಗ ಬಾದಾಮಿಯಿಂದ ಮುಂದ ಜಾಲೀಹಾಳಕ್ಕ ಹೋಗಬೇಕು ನನ ಮಗನೇ, ಹ್ಯಾಂಗಾದ್ರ ಮಾಡಪ್ಪ' ಅಂತ ಅಲವತ್ತುಕೊಂಡಳು. ಕಂಡಕ್ಟರ್ ನಿಂತವರಲ್ಲಿ ಇಬ್ಬರು ಚಿಕ್ಕ ವಯಸ್ಸಿನವರನ್ನು, ಟಾಪ್‌ಗೆ ಏರಲು ಹೇಳಿ, ಮುದುಕಿ ಹಾಗೂ ಬಸುರಿಯನ್ನು ಬಸ್ಸಿನೊಳಗೆ ತೂರಿಸಿಬಿಟ್ಟ. ಜನರೆಲ್ಲರೂ ಸರಿದಾಡುತ್ತಾ ಆ ಹೆಣ್ಣು ಮಗಳು ಮುಂದೆ ಹೋಗಲು ಅನುವು ಮಾಡಿಕೊಟ್ಟರು.

ಮುದುಕಿ ನಮ್ಮನ್ನು ಒರಗಿ ನಿಂತುಕೊಂಡಿತು. ಕಂಡಕ್ಟರ್ ಸೀಟಿ ಊದಿದ. ನೂರಾಐವತ್ತರ ಮೇಲಿದ್ದ ಜನರನ್ನು ತುಂಬಿಸಿಕೊಂಡು ಬಸ್ ಚಲಿಸತೊಡಗಿತು. ಅದರೊಟ್ಟಿಗೆ ಬಸ್ಸಿನೊಳಗೆ ಗಾಳಿ ತೂರಿಕೊಂಡಾಗ, ಬೆವರಿನಲ್ಲಿ ತೊಯ್ದು ತಪ್ಪಡಿಯಾದ ಜನ ನಿಟ್ಟುಸಿರು ಬಿಟ್ಟರು. ಮರಗಳು, ಮನೆಗಳು, ಜನ, ಕೈಗಾಡಿಗಳು, ಬೀದಿ ದೀಪಗಳು ಹಿಂದೆ ಹಿಂದೆ ಸರಿಯತೊಡಗಿದವು.

ಕಂಡಕ್ಟರ್ ಒಂಟಿ ದೀಪದಲ್ಲಿ ಟಿಕೆಟ್ ಹರಿಯುತ್ತಾ ತುಂಬಿದ ಜನರ ಸರಿಸುತ್ತಾ, ಒತ್ತಡವನ್ನು ಕಡಿಮೆ ಮಾಡತೊಡಗಿದ. ಇನ್ನೂ ಅರ್ಧ ಬಸ್ ಜನರ ಟಿಕೆಟ್ ಆಗಿರಲಿಲ್ಲ. ಕಂಡಕ್ಟರ್ ಸೀಟಿ ಊದಿ ಬಸ್ ನಿಲ್ಲಿಸಿ, ಟಾಪ್‌ನಲ್ಲಿ ಇದ್ದವರ ಟಿಕೆಟ್ ಹರಿಯಲು ಕೆಳಗೆ ಇಳಿದು ಹೋದ.

ಬಾಗಲಕೋಟೆ ದಾಟಿ 3-4 ಕಿಲೊ ಮೀಟರ್ ಬಸ್ಸು ಚಲಿಸಿತ್ತು. ಮತ್ತೆ ಸೆಖೆ ಭುಗಿಲ್ಲೆಂದು ಬಸ್ಸಿನೊಳಗೆ ನುಗ್ಗಿತು. ನಿಂತ ಜನ ಮತ್ತೆ ಕೆಳಗಿಳಿದರೆ ನಿಲ್ಲಲು ಜಾಗ ಸಿಗದೇ ಹೋಗಬಹುದೆಂದು, ಒಬ್ಬರನ್ನೊಬ್ಬರು ಒತ್ತುತ್ತಾ ನಿಂತಿದ್ದರು. ನನ್ನ ಕಣ್ಣ ಮಂಜು ಪರದೆಯಲ್ಲಿ ಜನಗಳ ಮುಖ ಸರಿಯಾಗಿ ಕಾಣುತ್ತಿರಲಿಲ್ಲ. ಬದಿಯಲ್ಲಿ ನಿಂತ ಮುದುಕಿ, ತನ್ನ ಕೈಚೀಲವನ್ನು ತಂಗಿಯ ಕೈಗೆ ಕೊಡುತ್ತ `ಇದನ್ನ ಬಿಚ್ಚಿ ಕೊಡವ್ವಾ' ಎಂದಳು. ದಢೂತಿಯ ಮಗ ತೊಡೆಯ ಮೇಲಿದ್ದರಿಂದ ತಂಗಿ ಆ ಚೀಲವನ್ನು ನನಗೆ ವರ್ಗಾಯಿಸಿದಳು. ಮಬ್ಬಾದ ಕಣ್ಣಿಗೆ ಚೀಲದಲ್ಲಿನ ಗಂಟು ಸರಿಯಾಗಿ ಕಾಣಲಿಲ್ಲ. ತಿಣುಕಾಡುತ್ತಾ ಬಿಚ್ಚಿದೆ. ಒಳಗೆ ರೊಟ್ಟಿಗಳ ಬುತ್ತಿ ಇತ್ತು. ಕಂಡಕ್ಟರ್ ಬಸ್ ಏರಿ ಸೀಟಿ ಊದಿದ. ಬಸ್ ಚಲಿಸತೊಡಗಿತು. ಬೆಳ್ಳುಳ್ಳಿ ಹಿಂಡಿಯ ವಾಸನೆ ಜನರ ಬೆವರ ವಾಸನೆಯೊಂದಿಗೆ ಸೇರಿಕೊಂಡು ಬಿಟ್ಟಿತು.

ಮುದುಕಿ ಗದ್ದಲದಲ್ಲಿ ಬಾಗಿ, ನಾನು ತೊಡೆಯ ಮೇಲಿಟ್ಟಕೊಂಡು ಬಾಯಿತೆರೆದ ಅರಿವೆಯ ಗಂಟಿನಿಂದ ಎರಡು ರೊಟ್ಟಿ, ಒಂದಿಷ್ಟು ಹೆಸರುಕಾಳು ಪಲ್ಯೆ, ಬದನೀಕಾಯಿ ಮತ್ತು ಕಲ್ಲಾಗಿನ ಹಿಂಡಿ ಕೈಯಲ್ಲಿ ಬಳಿದುಕೊಂಡು ರೊಟ್ಟಿ ಮ್ಯಾಲಿಟ್ಟು `ಬೇ ಸಾವಂತ್ರವ್ವ ಹಿಡಿ ಇಲ್ಲಿ, ಒಂಚೂರು ಕಳ್ಳಮುಸರಿ ಮಾಡಿಕೋ ಬೇ, ದಿನ ತುಂಬ್ಯಾವ ಕೂಸು' ಅನ್ನೋ ಹೊತ್ತಿಗೆ ಕಂಡಕ್ಟರ್ ನಮ್ಮ ಹತ್ತಿರ ಟಿಕೆಟ್ ಕೊಡಲು ಒದ್ದಾಡುತ್ತಾ ಬಂದ. ಮುದುಕಿ ರೊಟ್ಟಿ ಹಿಡಕೊಂಡು `ಯಪ್ಪಾ ಇದನ್ನ ನನ್ನ ಮೊಮ್ಮಗಳ ಕೈಗೆ ದಾಟಿಸಪ್ಪಾ. ತುಂಬಿದ ಬಸುರಿಯಪ್ಪಾ' ಅಂದಳು. `ಬೇ ನನಗೇನ ಬ್ಯಾರೇ ಕೆಲಸ ಇಲ್ಲಬೇ, ಟಿಕೆಟ್ ಕೊಡೋದು ಬಿಟ್ಟ ಬರೀ ಇದನ್ನ ಮಾಡಲೇ ಹೋಗಬೇ, ಊರಿಗೆ ಹೋಗಿ ಉಣ್ಣುವಿರಂತೆ' ಅಂದ. `ಅಲ್ಲಪ್ಪ ನನ್ನ ಮಗ, ಆಕಿ ಗಂಡ ಜಗಳಾಡಿ ಕಳಸ್ಯಾನ. ಮುಂಜಾನೆಯಿಂದ ಹೊಟ್ಟಿಗೆ ಹನಿ ನೀರು ಕುಡಿದಿಲ್ಲ.

ಬಸರಿ ಹೆಣ್ಣ ಮಗಳಪ್ಪ. ಎರಡು ಜನ್ಮ ವಿಲಿವಿಲಿ ಒದ್ದಾಡುತವ. ಮುಂದಕ್ಕೆ ದಾಟಿಸಿ ಬಿಡಪ್ಪ. ನಿನ್ನ ಕೈ ಏನ ಮುರಕೊಂಡು ಬೀಳೋದಿಲ್ಲ ನನ್ನಪ್ಪ' ಅನ್ನುತ್ತ ಒತ್ತಾಯದಲ್ಲಿ ಅವನ ಕೈಯಾಗೆ ರೊಟ್ಟಿಗಳನ್ನು ತುರುಕಿಯೇ ಬಿಟ್ಟಳು. ಕಂಡಕ್ಟರ್ ಅದನ್ನು ಮುಂದಿನವನ ಕೈಗೆ ಕೊಟ್ಟು `ದಾಟಿಸಪ್ಪ' ಅಂತ ಹೇಳಿದ.

ರೊಟ್ಟಿ ಪಲ್ಲೆ ಕೈಯಿಂದ ಕೈಗೆ ದಾಟುತ್ತ, ಬಸುರಿ ಕೈ ಸೇರಿತು. ಸೆರಗಿನಲ್ಲಿ ಮುಖ ಒರೆಸುತ್ತ, ತೇಲಾಡುವ ಬಸ್ಸಿನಲ್ಲಿ ದಣಿದ ಬಸುರಿ, ಮೆಲ್ಲಗೆ ಮುರಿದು ಬಾಯಿಗಿಟ್ಟುಕೊಂಡಳು. ಮಬ್ಬುಗಣ್ಣಿನಲ್ಲಿ ತೊಡೆಯ ಮೇಲಿನ ಗಂಟು ನೋಡುತ್ತಾ ನಾನು ಕುಳಿತಿದ್ದೆ. ಮತ್ತೆ ಬಾಗಿ ಮುದುಕಿ ತಾನೆರಡು ರೊಟ್ಟಿ ಹಚ್ಚಕೊಂಡು ನಿಂತೇ ತಿನ್ನತೊಡಗಿದಳು. ಬೆಳ್ಳುಳ್ಳಿಯ ವಾಸನೆಗೆ ನನಗೆ ಹೊಟ್ಟೆಯಲ್ಲಾ ತೊಳಿಸಿಬಂದ ಹಾಗಾಯ್ತು. ಮುದುಕಿ ಯಾವ ಆತಂಕವೂ ಇಲ್ಲದೆ, ಕೈಚೀಲದ ಬುತ್ತಿಗಂಟು ನನ್ನ ತೊಡೆಯ ಮೇಲೆ ಇರಿಸಿ ಯಾವ ರಗಳೆಯೂ ಆಗಿಲ್ಲ ಎಂಬಂತೆ ರೊಟ್ಟಿ ಜಗಿಯತೊಡಗಿದಳು.

`ತಂಗೀ ನೀರಿನ ಬಾಟ್ಲಿ ಇದ್ರ ಕೊಡವ್ವ. ಗಂಟಲಿಗೆ ರೊಟ್ಟಿ ಅಮರಿಕೊಂಡೈತಿ' ಅಂದಳು. ತಂಗಿ ತಂದ ಬಿಸಲೇರಿ ಬಾಟಲಿಯನ್ನು ಅವಳ ಕೈಗೆ ಇರಿಸಿದಳು. ಮುದುಕಿ ಗಟಗಟ ಅರ್ಧ ಬಾಟಲಿ ನೀರು ಕುಡಿದು, ಬಳಿಕ ಅದನ್ನು ದೂರದಲ್ಲಿ ನಿಂತಿದ್ದ ಮೊಮ್ಮಗಳಿಗೆ ದಾಟಿಸಿ ಬಿಟ್ಟಿತು. ಸಂತೆಯೊಳಗಿನ ಹುಚ್ಚರಂತೆ ಕಣ್ಣು ಬಾಯಿ ಬಿಟ್ಟುಕೊಂಡು, ಹೊರಲಾರದ ಮಗುವನ್ನು ಹೊತ್ತುಕೊಂಡು, ಗಂಟಲೊಣಗಿ ಚುಚ್ಚುತ್ತಿದ್ದರೂ ಮುದುಕಿಗೆ ನೀರಿನ ಬಾಟಲಿಯನ್ನು ಕೊಟ್ಟು ನಾವಿಬ್ಬರೂ ಸುಮ್ಮನೆ ಕುಳಿತಿದ್ದೆವು.

ಮುದುಕಿ ಊಟ ಮುಗಿಸಿ, ಉಳಿದ ಬುತ್ತಿಯನ್ನು ಗಂಟುಕಟ್ಟಿ ಚೀಲದೊಳಗೆ ಸೇರಿಸಿತು. ಮತ್ತ ನಮ್ಮ ಕಡೆ ನೋಡಿ `ರಾಡ್ಯಾ ಹೆಣ್ಣಗ ಹಡೆದರ ಮತ್ತ ಮನೀಗ ಬರಬ್ಯಾಡ ಅಂತ ಹುಡುಗಿ ಜೀವಾ ತಿಂದಾನೆ. ಮೂರು ಹೆಣ್ಣು ಹಡೆದಾಳ. ಎರಡು ತೀರಕೊಂಡಾವ. ಈ ಸರ್ತಿ ಹೆಣ್ಣು ಹಡೆದರೆ ಬಾವ್ಯಾಗ ನೂಕ್ತೀನಿ ಅಂತಾನ. ಮುಂಜಾನಿಂದ ಬರೀ ಜಗಳನಾ ಮಾಡ್ಯಾನ. ಹೊಟ್ಟಿಗೆ ಏನೂ ತಿಂದಿಲ್ರೀ. ಅದಕ ಬುತ್ತಿ ಬಿಚ್ಚಿ ಉಂಡೇವ್ರಿ. ನೀರ ಕೊಟ್ಟು ಪುಣ್ಯ ಕಟ್ಟಗೊಂಡ್ರಿ. ಹೆಣ್ಣ ಮಕ್ಕಳ ತ್ರಾಸ್ ನಿಮಗೆ ತಿಳಿಯದೇನ್ರಿ. ಊರ ಮುಟ್ಟಾಕ ಇನ್ನೂ ಎರಡ ತಾಸ' ಎಂದಿತು. ಜನ ಯಾವ ಭಾವವೂ ಇಲ್ಲದೆ ಒತ್ತೊತ್ತಾಗಿ ನಿಂತಿದ್ದರು.

ಕ್ಯಾಲೊರಿ ಫುಡ್, ಫಿಲ್ಟರ್ ಮಾಡಿ ಕುಡಿದ ನೀರು, ಸ್ವಚ್ಛ ಅಡುಗೆ ಮನೆ, ಎಲ್ಲದರಲ್ಲೂ ಶೋಧ, ಶುಚಿಯಾದ ಬಟ್ಟೆ... ನಗರದ ಮಂದಿಯ ನಾಜೂಕು ನೆನಪಿಗೆ ಬಂತು. ಇಳಿಯುವಾಗ `ನೀ ಹೆಣ್ಣ ಹಡಿಬೇ. ಸರಕಾರ ಸಹಾಯ ಮಾಡ್ತದ' ಅಂದೆ. ಪ್ರತಿ ತಿಂಗಳೂ ಬಸುರಿಯರು, ಹೆಣ್ಣು ಮಕ್ಕಳ ಜನನ ಮುಂತಾದ ದಾಖಲೆಗಳನ್ನು ಸರ್ಕಾರಕ್ಕೆ ಕಳಿಸುವ ತಂಗಿ ಬುದ್ಧ ನಗೆ ನಕ್ಕಳು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT