ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದೆಡೆ ಪೋಲು, ಇನ್ನೊಂದೆಡೆ ಹನಿಹನಿಗೂ ಪರದಾಟ.ನಗರದಲ್ಲಿ ನೀಗದ ಕುಡಿಯುವ ನೀರಿನ ಬವಣೆ

Last Updated 26 ಫೆಬ್ರುವರಿ 2011, 10:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಬೇಸಿಗೆ ಬಿಸಿಗಾಳಿ ಬೀಸಲು ಆರಂಭಿಸಿದೆ. ಬಿಸಿಲಿನ ತಾಪದ ಜತೆ  ತಾಪತ್ರಯಗಳು ಆರಂಭವಾಗಿದೆ. ‘ಜಲ್’ ಚಂಡಮಾರುತ ಬಂದರೂ ನಗರದಲ್ಲಿ ನೀರಿನ ಬವಣೆ ಮಾತ್ರ ತಪ್ಪಿಲ್ಲ. ನಗರದಲ್ಲಿ ಹನಿ ನೀರಿಗೂ ಪರಿತಪಿಸುವ ಪರಿಸ್ಥಿತಿ ಉಂಟಾಗಿದೆ.ಈ ಬಾರಿ ಮುಂಗಾರು ಮತ್ತು ಹಿಂಗಾರಿನಲ್ಲಿ ಸುರಿದ ಮಳೆಯಿಂದ ನೀರಿನ ಅಭಾವ ಯಾವುದೇ ಕಾರಣಕ್ಕೂ ಉಂಟಾಗುವುದಿಲ್ಲ ಎಂದು ಜನರ ಮನದಲ್ಲಿ ಮೂಡಿತ್ತು. ಸ್ಮಶಾನದಲ್ಲಿ ಎರಡು-ಮೂರು ಅಡಿ ತೆಗೆದರೂ ನೀರು ಬರುತ್ತಿತ್ತು. ಇನ್ನೂ ಕಟ್ಟಡಗಳ ನೆಲಮಾಳಿಗೆಗಳು ಬಸಿದು ಸಂಪೂರ್ಣ ಜಲಾವೃತಗೊಳ್ಳುವುದು ಸಾಮಾನ್ಯವಾಗಿತ್ತು. ನಾಗರಿಕರಿಗೆ ಮಾತ್ರ ನೀರಿನ ಬವಣೆ ತಪ್ಪಿಲ್ಲ.

ನಗರದ ಕೆಲವೆಡೆ ನೀರು ಪ್ರತಿದಿನ ಧಾರಾಳವಾಗಿ ಪೋಲಾಗುತ್ತಿದ್ದರೆ, ಇನ್ನೊಂದೆಡೆ ವಾರ, ಹದಿನೈದು ದಿನ ಕಳೆದರೂ ಹನಿ ನೀರು ದೊರೆಯದ ಪರಿಸ್ಥಿತಿ ಇದೆ. ಇನ್ನೂ ನೀರು ಸಂಗ್ರಹಿಸುವ ಕಂದವಾಡಿ ಬಳಿ ಟ್ಯಾಂಕ್ ತುಂಬಿ ಹರಿದರೂ ನೋಡುವವರೂ ಗತಿ ಇಲ್ಲ.ನಗರಸಭೆಯಿಂದ ಅಸಮರ್ಪಕ ನೀರಿನ ನಿರ್ವಹಣೆ, ವಿದ್ಯುತ್ ಅಭಾವ, ಪದೇ ಪದೇ ಪಂಪ್‌ಸೆಟ್‌ಗಳಲ್ಲಿ ಉಂಟಾಗುವ ತಾಂತ್ರಿಕ ದೋಷಗಳು ಆಪರೇಟರ್‌ಗಳ ಅಸಡ್ಡೆ ಮನೋಭಾವ ಇತ್ಯಾದಿ ಅಂಶಗಳು ಮೇಳೈಸಿ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿವೆ.

ನಗರದ 1ರಿಂದ 7ನೇ ವಾರ್ಡ್‌ವರೆಗೆ ವಾರಕ್ಕೊಮ್ಮೆ ನೀರು ದೊರೆತರೆ ಅಪರೂಪ ಎನ್ನುವ ಸ್ಥಿತಿ ಇದೆ. ಜೋಗಿಮಟ್ಟಿ ರಸ್ತೆಯ ಪ್ರದೇಶಗಳಲ್ಲಿನ ನಿವಾಸಿಗಳು ನೀರಿಗಾಗಿ ಪ್ರತಿನಿತ್ಯ ಪರದಾಡುವ ಪರಿಸ್ಥಿತಿ ಸಾಮಾನ್ಯವಾಗಿದೆ. ಖಾಜಿಮೊಹಲ್ಲಾ ಪ್ರದೇಶದಲ್ಲಿ, ವಾಸವಿ ಶಾಲೆ ಹಿಂಭಾಗ, ಧರ್ಮಶಾಲಾ ರೋಡ್ ಮತ್ತಿತರ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಹರಸಾಹಸ ಮಾಡುವ ಪರಿಸ್ಥಿತಿ ಇದೆ.

‘ಮನೆಯಲ್ಲಿ ನಲ್ಲಿ ಇದ್ದರೂ ನೀರು ಬರುವುದಿಲ್ಲ. ಸರಿಯಾಗಿ ನೀರು ಪೂರೈಸುವುದಿಲ್ಲ. ತಮಗೆ ಬೇಕಾದತ್ತ ವಾಲ್ವ್ ತಿರುಗಿಸುತ್ತಾರೆ. ಇನ್ನೂ ಕೆಲವು ನಲ್ಲಿಗೆ ಮೋಟಾರ್ ಅಳವಡಿಸುತ್ತಾರೆ’ ಎನ್ನುವುದು ಖಾಜಿಮೊಹಲ್ಲಾ ನಿವಾಸಿಯೊಬ್ಬರ ದೂರು.

‘ವಾರಕ್ಕೊಮ್ಮೆ ನೀರು ಬಂದರೆ ಹೆಚ್ಚು. ಅದು ಸಹ 5-10 ನಿಮಿಷ ಬರುತ್ತದೆ. ನಗರಸಭೆಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮಕೈಗೊಂಡಿಲ್ಲ’ ಎಂದು ಜೋಗಿಮಟ್ಟಿ ರಸ್ತೆಯ ನಿವಾಸಿ ಗುರುಮೂರ್ತಿ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಯಂತ್ರಗಳ ದೋಷ
ಶಾಂತಿಸಾಗರದಲ್ಲಿ ಅಳವಡಿಸಿರುವ ಮೂರು ಪಂಪ್‌ಗಳು ಸರಿಯಾಗಿ ಕಾರ್ಯ ನಿರ್ವಹಿಸದಿರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ.ಈ ಪಂಪ್‌ಗಳಲ್ಲಿ ತಾಂತ್ರಿಕ ವಿನ್ಯಾಸದಲ್ಲಿಯೇ ದೋಷಗಳಿವೆ. ಇದರಿಂದಾಗಿ 15 ದಿನಕ್ಕೊಮ್ಮೆಯಾದರೂ ‘ಬೇರಿಂಗ್’ ಮತ್ತಿತರ ಬಿಡಿಭಾಗಗಳನ್ನು ಬದಲಾಯಿಸಬೇಕಾಗಿದೆ. ಪ್ರತಿ ಬೇರಿಂಗ್‌ಗೆ ಕನಿಷ್ಠ ರೂ 14 ಸಾವಿರ ತಗಲುತ್ತದೆ ಎನ್ನುವುದು ಎಂಜಿನಿಯರ್‌ಗಳ ಅಭಿಪ್ರಾಯ.

ಜತೆಗೆ ಶಾಂತಿಸಾಗರದಿಂದ ನಗರಕ್ಕೆ ನೀರು ತರುವ ಮಾರ್ಗದಲ್ಲಿನ 15 ಹಳ್ಳಿಗಳಿಗೆ ನೀರು ಪೂರೈಸಲು ‘ವಾಲ್ವ್’ ವ್ಯವಸ್ಥೆ ಇಲ್ಲ. ಈಗ 15 ಹಳ್ಳಿಗಳಿಗೂ ಪ್ರತ್ಯೇಕ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಸಲು ಚಿಂತನೆ ನಡೆದಿದೆ.‘ವಾಣಿವಿಲಾಸ ಸಾಗರದ ನೀರು ನಾಲ್ಕು ದಿನಕ್ಕೆ ಸಿಕ್ಕರೆ ಪುಣ್ಯ. ನಮ್ಮ ವಾರ್ಡ್‌ಗೂ ನೀರು ಬರುತ್ತಿಲ್ಲ. ವಿತರಣೆ ಸರಿ ಇಲ್ಲ. ಪಂಪ್‌ಸೆಟ್‌ಗಳನ್ನು ದುರಸ್ತಿ ಮಾಡುವುದರಲ್ಲಿ ನಗರಸಭೆ ಹಣ ಪೋಲಾಗುತ್ತಿದೆ. ಶಾಂತಿಸಾಗರದಲ್ಲಿ 3ಪಂಪ್‌ಸೆಟ್‌ಗಳಿದ್ದರೂ ಒಂದು ಮಾತ್ರ ಕೆಲಸ ಮಾಡುತ್ತಿದೆ. ಇಡೀ ನಗರಕ್ಕೆ ಕನಿಷ್ಠ ಪಂಪ್‌ಸೆಟ್‌ಗಳಾದರೂ ಬೇಕು. ಕನಿಷ್ಠ ಎರಡು ದಿನಕ್ಕೊಮ್ಮೆ ಸಮರ್ಪಕವಾಗಿ ನೀರು ವಿತರಿಸುವ ವ್ಯವಸ್ಥೆಯಾಗಬೇಕು’ ಎನ್ನುವುದು ನಗರಸಭೆ ಸದಸ್ಯ ಸಿ.ಟಿ. ಕೃಷ್ಣಮೂರ್ತಿ ಅಭಿಪ್ರಾಯ.

‘ಕುಡಿಯುವ ನೀರು ಸಾಕಷ್ಟಿದೆ. ಆದರೆ, ನಿರ್ವಹಣೆ ಸಮರ್ಪಕವಾಗುತ್ತಿಲ್ಲ. ಸಮಸ್ಯೆಯನ್ನು ಸೃಷ್ಟಿಸಲಾಗುತ್ತಿದೆ. ಕೆಲವು ವಾಲ್ವಮನ್‌ಗಳನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಗುವುದು. ಜತೆಗೆ ನೀರೆತ್ತಲು ಅಗತ್ಯ ಇರುವಷ್ಟು ಪಂಪ್‌ಸೆಟ್‌ಗಳನ್ನು ಅಳವಡಿಸಲಾಗುವುದು’ ಎಂದು ನಗರಸಭೆ ಅಧ್ಯಕ್ಷೆ ಸುನೀತಾ ಮಲ್ಲಿಕಾರ್ಜುನ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT