ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಕ್ಕಲಿಗರ ಸಭೆಯಲ್ಲಿ ಗೊಂದಲ; ವಾಗ್ವಾದ

Last Updated 21 ಜುಲೈ 2013, 20:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಕಾರ್ಯವೈಖರಿ ಬಗ್ಗೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ನಡೆದ ಸಂಘದ ಸರ್ವ ಸದಸ್ಯರ ಸಭೆ ಗೊಂದಲದ ಗೂಡಾಯಿತು.

`ಆದಿಚುಂಚನಗಿರಿ ಮಠಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವುದು ಖಂಡನೀಯ. ಈ ಘಟನೆಯಿಂದ ಸಮುದಾಯದ ಜನರು ತಲೆ ತಗ್ಗಿಸುವಂತಾಗಿದೆ. ದಾಳಿಯ ವಿರುದ್ಧ ಸಂಘ ಪ್ರತಿಭಟನೆ ವ್ಯಕ್ತಪಡಿಸಿಲ್ಲ' ಎಂದು ಸದಸ್ಯ ಈಶ್ವರ್ ಕೆ.ಎ.ಎಸ್ ಅಸಮಾಧಾನ ವ್ಯಕ್ತಪಡಿಸಿದರು.

`ಒಕ್ಕಲಿಗ ಸಮುದಾಯಕ್ಕೆ ಸೇರಿದ ಶಾಸಕರು ಸಭೆ ಗೈರುಹಾಜರಾಗಿದ್ದಾರೆ. ಗೆದ್ದ ಬಳಿಕ ಸಂಘವನ್ನು ಮರೆಯಲಾಗುತ್ತಿದೆ. ಇಂತಹ ಜನಪ್ರತಿನಿಧಿಗಳನ್ನು ಸಂಘದಿಂದ ಉಚ್ಛಾಟನೆ ಮಾಡಬೇಕು' ಎಂದು ಕೆಲವು ಸದಸ್ಯರು ಆಗ್ರಹಿಸಿದರು. ಅಧ್ಯಕ್ಷ ಕೆಂಚಪ್ಪ ಗೌಡ ಪ್ರತಿಕ್ರಿಯಿಸಿ, `ಶಾಸಕರು ಕೆಲವೇ ನಿಮಿಷಗಳಲ್ಲಿ ಸಭೆಗೆ ಬರಲಿದ್ದಾರೆ. ಒಂದು ಪಕ್ಷ ಸಭೆಗೆ ಹಾಜರಾಗದೇ ಇದ್ದಲ್ಲಿ ಸದಸ್ಯರ ಸಲಹೆಯಂತೆ ಮುಂದುವರಿಯಲಾಗುವುದು' ಎಂದು ಭರವಸೆ ನೀಡಿದರು.

ಸದಸ್ಯ ಕೃಷ್ಣೇಗೌಡ, `ಒಕ್ಕಲಿಗರಿಗೆ ತೊಂದರೆಯಾದ ಸಂದರ್ಭದಲ್ಲಿ ಸಂಘ ಧ್ವನಿ ಎತ್ತಬೇಕು. ಆದರೆ, ಈಗ ಆ ಕೆಲಸ ಆಗುತ್ತಿಲ್ಲ. ಇದಲ್ಲದೆ ಸಂಘದ ವರದಿಯಲ್ಲಿ ಸಾಕಷ್ಟು ತಪ್ಪುಗಳಿವೆ. ಈ ಮೂಲಕ ಸಂಘದ ಸದಸ್ಯರಿಗೆ ಮೋಸ ಮಾಡಲಾಗುತ್ತಿದೆ. ಸಂಘಕ್ಕೆ ಸೇರಿದ ಶಿಕ್ಷಣ ಸಂಸ್ಥೆಗಳಲ್ಲಿ ಬಡ ಮಕ್ಕಳಿಗೆ ಕಡಿಮೆ ಪ್ರಮಾಣದಲ್ಲಿ ಸೀಟು ನೀಡಲಾಗುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

`ಬೇರೆ ಸಮುದಾಯದ ಜನರು ನಮ್ಮನ್ನು ಗಮನಿಸುತ್ತಿದ್ದಾರೆ. ಅನಗತ್ಯವಾಗಿ ಗದ್ದಲ ಸೃಷ್ಟಿ ಮಾಡಬೇಡಿ. ಸದಸ್ಯರ ಸಲಹೆಗಳನ್ನು ಸ್ವೀಕರಿಸಿ ಸಂಘ ಮುಂದಿನ ಕ್ರಮಗಳನ್ನು ಕೈಗೊಳ್ಳಬೇಡಿ. ಗಲಾಟೆ ಮಾಡುವುದರಿಂದ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತದೆ' ಎಂದು ಕೆಂಚಪ್ಪ ಗೌಡ ಬೇಸರ ವ್ಯಕ್ತಪಡಿಸಿದರು.

`ರಾಜ್ಯದಲ್ಲಿ ಒಕ್ಕಲಿಗರ ಸಂಘ ಇದೆಯಾ ಎಂಬ ಅನುಮಾನ ಮೂಡುತ್ತಿದೆ. ಕೆಲವೇ ವಿಷಯಗಳಿಗೆ ಸಂಘ ಸ್ಪಂದಿಸುತ್ತಿದೆ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಂಘ ಸಕ್ರಿಯವಾಗಿಲ್ಲ. ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪದಾಧಿಕಾರಿಗಳ ನೇಮಕ ಮಾಡಲು ಕೂಡಲೇ ಕ್ರಮ ಕೈಗೊಳ್ಳಬೇಕು' ಎಂದು ಕೆಲವು ಸದಸ್ಯರು ಆಗ್ರಹಿಸಿದರು.

ಸಭೆ ಗದ್ದಲದೊಂದಿಗೆ ಆರಂಭವಾಯಿತು. ಆಕ್ರೋಶಗೊಂಡ ಸದಸ್ಯರನ್ನು ಸಮಾಧಾನಪಡಿಸಲು ಪದಾಧಿಕಾರಿಗಳು ಹರಸಾಹಸ ಮಾಡಿದರು. ಮೈಕ್ ಸುತ್ತಮತ್ತ ಹತ್ತಾರು ಮಂದಿ ಜಮಾಯಿಸಿ ಮಾತನಾಡಲು ಪೈಪೋಟಿ ನಡೆಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT