ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮ ಮರು ಆಯ್ಕೆ: ಪ್ರಚಾರ ವೇದಿಕೆಯಾದ ಜಂಟಿ ಅಧಿವೇಶನ

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಎರಡನೇ ಅವಧಿಗೆ ಆಯ್ಕೆ ಬಯಸಿರುವ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಅಧ್ಯಕ್ಷೀಯ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ಎದುರಿಸುತ್ತಿರುವ ಕಾರಣ ಕಾಂಗ್ರೆಸ್ ಜಂಟಿ ಅಧಿವೇಶನವನ್ನು ತಮ್ಮ ಮರು ಆಯ್ಕೆಗೆ ಪ್ರಚಾರ ವೇದಿಕೆಯನ್ನಾಗಿ ಮಾಡಿಕೊಂಡು ಮಂಗಳವಾರ ಭಾಷಣ ಮಾಡಿದ್ದಾರೆ.

ಉಭಯ ಸದನಗಳ ವಾರ್ಷಿಕ ಜಂಟಿ ಅಧಿವೇಶನವನ್ನು ಮೂರನೇ ಬಾರಿಗೆ ಉದ್ದೇಶಿಸಿ ಮಾತನಾಡಿದ ಒಬಾಮ, ಅಮೆರಿಕ ಈಗಲೂ ವಿಶ್ವದ ಬಲಿಷ್ಠ ರಾಷ್ಟ್ರವಾಗಿದ್ದು; ಮುಂಚೂಣಿಯಲ್ಲಿದೆ ಮತ್ತು ಮುಂದೆಯೂ ಇರುತ್ತದೆ ಎಂಬ ವಿಶ್ವಾಸವನ್ನು ಮತದಾರರಲ್ಲಿ ಮೂಡಿಸುವಂತಹ ಮಾತುಗಳನ್ನೂ ಆಡಿದ್ದಾರೆ.

`ದೇಶದ ಹಣಕಾಸು ಸ್ಥಿತಿಯನ್ನು ಸುಧಾರಿಸಲು ದೇಶೀಯವಾಗಿಯೇ ಬಲವರ್ಧನೆ ಮಾಡುವಂತಹ ಕಾರ್ಯಕ್ರಮಗಳು ಅವಶ್ಯಕ. ಈ ನಿಟ್ಟಿನಲ್ಲಿ ಮೊದಲು ರಾಷ್ಟ್ರೀಯ ಮೌಲ್ಯಗಳು ಪುನರ್ ಜಾಗೃತಗೊಳ್ಳಬೇಕಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಳ ಮತ್ತು ಅಮೆರಿಕ ನಾಗರಿಕರಲ್ಲಿ ಕೌಶಲ್ಯ ವೃದ್ಧಿಸುವಂತಹ ಯೋಜನೆಗಳು ರೂಪುಗೊಳ್ಳಬೇಕಿದೆ. ಅದಕ್ಕಾಗಿ ಭವಿಷ್ಯದ ಆರ್ಥಿಕ ನೀಲನಕ್ಷೆ ಸಿದ್ಧ ಮಾಡಬೇಕಿದೆ~ ಎಂದರು.

ಹೊರಗುತ್ತಿಗೆ: ಅಮೆರಿಕ ಅಧ್ಯಕ್ಷ ಕಿಡಿ
ಹೊರಗುತ್ತಿಗೆ ನೀಡುವ ಪ್ರವೃತ್ತಿ ಕುರಿತು ಕಿಡಿಕಾರಿರುವ ಅಧ್ಯಕ್ಷ ಬರಾಕ್ ಒಬಾಮ, ಅಮೆರಿಕದಲ್ಲೇ ಉದ್ಯೋಗ ಸೃಷ್ಟಿಸುವ ಉದ್ದಿಮೆಗಳಿಗೆ ಉತ್ತೇಜನ, ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆ.

`ಹೊರಗುತ್ತಿಗೆ ನೀಡಿ ಉದ್ಯೋಗಾವಕಾಶವನ್ನು ದೇಶದಿಂದ ಹೊರಹೋಗುವಂತೆ ಮಾಡುತ್ತಿರುವ ಕಂಪೆನಿಗಳು ದಂಡನೆಗೆ ಅರ್ಹವಾಗಿವೆ. ಇಂತಹ ಕಂಪೆನಿಗಳಿಗೆ ಯಾವುದೇ ಕಾರಣಕ್ಕೂ ತೆರಿಗೆಯಲ್ಲಿ ರಿಯಾಯಿತಿ ನೀಡುವುದಿಲ್ಲ~ ಎಂದೂ ಅವರು ಎಚ್ಚರಿಸಿದರು.

`ದೇಶದಲ್ಲಿ ನಿರುದ್ಯೋಗ ಸಮಸ್ಯೆ ಇದೆ. ಇದರಿಂದ ಆರ್ಥಿಕ ಪುನಶ್ಚೇತನಕ್ಕೂ ಅಡ್ಡಿಯಾಗಿದೆ. ಈಗ ನಮಗೆ (ಅಮೆರಿಕಕ್ಕೆ) ಎರಡು ಸವಾಲಿನ ಆಯ್ಕೆಗಳು ಎದುರಾಗಿವೆ. ಬೇರೆಯವರಿಗೆ (ಹೊರಗುತ್ತಿಗೆ) ಅವಕಾಶ ಬಿಟ್ಟುಕೊಡುವುದು ಅಥವಾ ದೇಶವಾಸಿಗಳು ಏಳಿಗೆ ಹೊಂದುವಂತೆ ಮಾಡುವುದು~ ಎಂದರು.

ಹೊರಗುತ್ತಿಗೆ ಬಗ್ಗೆ ಒಬಾಮ ಕಠಿಣ ನಿಲುವು ತಳೆದಿರುವುದರಿಂದ ಅಮೆರಿಕ ಕಂಪೆನಿಗಳಿಂದ ಹೊರಗುತ್ತಿಗೆ ಪಡೆಯುತ್ತಿರುವ ಭಾರತದ ಉದ್ದಿಮೆಗಳಿಗೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

`ಸಾಲಗಳಿಂದ ಮುಕ್ತರಾಗುವುದು, ಕಪಟತನದ ಹಣಕಾಸು ಲಾಭಗಳಿಂದ ಹೊರಬರುವುದು ಆರ್ಥಿಕತೆಯನ್ನು ಸದೃಢಗೊಳಿಸುವ ಮಾರ್ಗೋಪಾಯಗಳು~ ಎಂದೂ ಅವರು ಹೇಳಿದರು.


`ಕುಟಿಲತನದ ವಾಣಿಜ್ಯ ವ್ಯವಹಾರಗಳಿಗೆ ಕಡಿವಾಣ ಹಾಕಲು ಮತ್ತು ಅಕ್ರಮಗಳ ಬಗ್ಗೆ ತನಿಖೆ ನಡೆಸಲು ವಾಣಿಜ್ಯ ಜಾರಿ ಘಟಕವೊಂದನ್ನು ಸ್ಥಾಪಿಸಲಾಗುವುದು~ ಎಂದರು.

`ಜಾಗತಿಕವಾಗಿ ಬದಲಾವಣೆಗಳಾಗುತ್ತಿವೆ. ಎಲ್ಲಾ ಬೆಳವಣಿಗೆಗಳನ್ನೂ ನಾವು ನಿಯಂತ್ರಿಸಲಾಗದು. ಆದರೆ, ಅಮೆರಿಕ ಯಾವತ್ತೂ ಜಾಗತಿಕವಾಗಿ ಕಡೆಗಣಿಸುವಂತಹ ರಾಷ್ಟ್ರವಾಗಲಾರದು. ನಾನು ಅಧ್ಯಕ್ಷನಾಗಿರುವವರೆಗೂ ದೇಶಕ್ಕೆ ಅಂತಹ ಅವಸ್ಥೆ ಬಾರದಂತೆ ನೋಡಿಕೊಳ್ಳುವೆ~ ಎಂದು ಭರವಸೆ ನೀಡಿದರು.

ಒಂದು ತಾಸಿಗೂ ಹೆಚ್ಚು ಕಾಲದ ಭಾಷಣದಲ್ಲಿ ತಾವು ಜಾರಿಗೆ ತಂದಿರುವ ಸಿರಿವಂತರಿಗೆ ಅಧಿಕ ಕರ , ವಾಲ್ ಸ್ಟ್ರೀಟ್ ಸುಧಾರಣೆ, ಆರೋಗ್ಯ ಸುಧಾರಣೆ ಮತ್ತಿತರ ನೀತಿಗಳನ್ನು ಒಬಾಮ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT