ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಲಿದ ಹಾದಿಯಲ್ಲಿ ರಾಧಿಕಾ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗವನ್ನು ಒಂದು ಕಾಲದಲ್ಲಿ ಆಳಿದ `ರ~ಕಾರ ತ್ರಯ ನಟಿಯರಲ್ಲಿ ಒಬ್ಬರಾಗಿದ್ದ ರಾಧಿಕಾ ತೆರೆಮರೆಗೆ ಸರಿದು ಸುಮಾರು ನಾಲ್ಕು ವರ್ಷಗಳೇ ಕಳೆದಿತ್ತು. `ಅನಾಥರು~ ಚಿತ್ರದ ಬಳಿಕ ವೈಯಕ್ತಿಕ ಬದುಕಿನ ಪಲ್ಲಟಗಳು ಅವರನ್ನು ಸಾರ್ವಜನಿಕ ಬದುಕಿನಿಂದ ತುಸು ದೂರ ಇಟ್ಟಿತ್ತು. ಒಮ್ಮೆ `ಈಶ್ವರ್~ ಚಿತ್ರದ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದು ಬಿಟ್ಟರೆ ಅವರು ಮತ್ತೆ ಕಾಣಿಸಿಕೊಂಡಿರಲಿಲ್ಲ. ಅವರೇ ಹೇಳುವಂತೆ ಇಷ್ಟು ವರ್ಷದ ಅಂತರದಲ್ಲಿ ಅವರು ಚಿತ್ರರಂಗದಲ್ಲಿ ಸಂಪರ್ಕವಿರಿಸಿಕೊಂಡಿದ್ದ ಏಕೈಕ ವ್ಯಕ್ತಿಯೆಂದರೆ ನಟಿ ರಮ್ಯಾ. ಹಾಗಂತ ಅವರ ಬಗ್ಗೆ ಜನರಿಗಿದ್ದ ಕುತೂಹಲ ಇಮ್ಮಡಿಯಾಗಿತ್ತೇ ಹೊರತು ಕುಂದಿರಲಿಲ್ಲ. ಈಗ ಚಿತ್ರರಂಗದಲ್ಲಿ ಎರಡನೇ ಅಧ್ಯಾಯ ಪ್ರಾರಂಭಿಸುವ ನಿಟ್ಟಿನಲ್ಲಿ ರಾಧಿಕಾ ಕುಮಾರಸ್ವಾಮಿ ಮೊದಲ ಹೆಜ್ಜೆ ಇರಿಸಿದ್ದಾರೆ.

ನಟಿಯಾಗಿ ಜನಪ್ರಿಯರಾದ ಅವರೀಗ ಚಿತ್ರ ನಿರ್ಮಾಪಕಿ. ನಟಿ ರಮ್ಯಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿ ಚಿತ್ರ ನಿರ್ಮಾಣಕ್ಕಿಳಿದಾಗ ರಾಧಿಕಾ ಇನ್ನು ತೆರೆ ಮೇಲೆ ಬರುವುದಿಲ್ಲವೇ? ನಿರ್ಮಾಪಕರಾಗಿಯೇ ಉಳಿಯುತ್ತಾರೆಯೇ? ರಾಜಕೀಯಕ್ಕೆ ಕಾಲಿಡುತ್ತಾರೆಯೇ? ಹೀಗೆ ಹಲವಾರು ಪ್ರಶ್ನೆಗಳು, ಊಹಾಪೋಹಗಳೂ ಒಟ್ಟೊಟ್ಟಿಗೆ ಎದ್ದಿದ್ದವು. ಹೀಗೆ ಎದ್ದ ಪ್ರಶ್ನೆಗಳು ಹೆಮ್ಮರವಾಗಿ ಬೆಳೆಯುವ ಮುನ್ನವೇ ರಾಧಿಕಾ ಕುಮಾರಸ್ವಾಮಿ ತಮ್ಮದೇ ನಿರ್ಮಾಣದ `ಲಕ್ಕಿ~ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಉತ್ತರ ನೀಡಿದ್ದಾರೆ. ತಾವು ನಡೆದ ಹಾದಿಯೆಲ್ಲವೂ ತಾವು ಕಂಡ ಕನಸಿನ ಹಾದಿಯಲ್ಲ. ಅದೆಲ್ಲವೂ ತಾನಾಗಿಯೇ ಒಲಿದು ಬಂದಿದ್ದು. ಹೀಗಾಗಿ ಭವಿಷ್ಯದ ಬಗ್ಗೆ ಏನೆಂದು ಹೇಳಲಿ ಎಂದು ನಗುವ ರಾಧಿಕಾ ತಮ್ಮ ಕೆಲ ಆಸೆಗಳನ್ನು ಹಂಚಿಕೊಂಡರು.

ಚಿತ್ರರಂಗದಿಂದ ದೂರವಿದ್ದ ಇಷ್ಟು ವರ್ಷದಲ್ಲಿ ನಿರಂತರ ಸಂಪರ್ಕ ಇಟ್ಟುಕೊಂಡಿದ್ದು ನಟಿ ರಮ್ಯಾ ಜೊತೆ ಮಾತ್ರ ಎಂಬ ಮಾತನ್ನೂ ಸೇರಿಸಿದರು. ಅಂದಹಾಗೆ `ಲಕ್ಕಿ~ ಸಿ.ಡಿ.ಗಳನ್ನು ಬಿಡುಗಡೆ ಮಾಡಿದ್ದು ಅವರ ಮಗಳು ಶಮಿಕಾ ಕುಮಾರಸ್ವಾಮಿ.

ವರ್ಷಕ್ಕೆ ಒಂದು ಪ್ರಾಜೆಕ್ಟ್‌ನಂತೆ ಚಿತ್ರ ನಿರ್ಮಾಣ ಮಾಡುತ್ತೀರಾ?

ಹಾಗೇನಿಲ್ಲ. ನಿರ್ಮಾಪಕಿಯಾಗಿ `ಲಕ್ಕಿ~ ಮೊದಲ ಚಿತ್ರ. ಈಗಲೇ ಒಳ್ಳೆಯ ಕಥೆ ಬಂದರೆ ಮತ್ತೊಂದು ಚಿತ್ರ ನಿರ್ಮಿಸಲು ಸಿದ್ಧ.

ಮತ್ತೆ ನಟಿಸುವ ಆಸೆ ಇದೆಯೇ?

ನಿಜ ಹೇಳಬೇಕೆಂದರೆ ಆಸೆ ಇದೆ. ಸುಮಾರು ನಾಲ್ಕೈದು ವರ್ಷಗಳೇ ಕಳೆದು ಹೋಗಿದೆ ನಟನೆಯಿಂದ ದೂರ ಸರಿದು. ನಟನೆ ನನ್ನ ಅಚ್ಚುಮೆಚ್ಚಿನ ಕ್ಷೇತ್ರ. ನಟಿಸುವುದನ್ನು ತುಂಬಾ ಪ್ರೀತಿಸುತ್ತೇನೆ. ನಟಿಸುವ ತುಡಿತ, ಹಂಬಲ ನನ್ನಲ್ಲಿ ಇನ್ನೂ ಇದೆ. ನನಗೆ ಮಾತು ಸಲೀಸಾದ ವಿಷಯವಲ್ಲ. ಆದರೆ ನಟನೆ, ನೃತ್ಯಗಳಲ್ಲಿ ಮುಂದೆ. ಒಳ್ಳೆ ಸಬ್ಜೆಕ್ಟ್ ಇರುವ ಚಿತ್ರ ಬಂದರೆ ಖಂಡಿತ ಮಾಡುತ್ತೇನೆ.

ನೀವು ನಟಿಸಿದ ಚಿತ್ರವೊಂದು ಇನ್ನೂ ಬಿಡುಗಡೆಯಾಗದೆ ಉಳಿದಿದೆಯಲ್ಲ?

ಹೌದು. ಬಾಲಾಜಿ ಅವರೊಂದಿಗೆ ನಟಿಸಿರುವ `ಈಶ್ವರ್~ ಇನ್ನೂ ತೆರೆಕಂಡಿಲ್ಲ. ಈ ಕುರಿತು ನಿರ್ಮಾಪಕ ಶಂಕರೇಗೌಡ ಅವರೊಂದಿಗೆ ಮಾತನಾಡಿ ಶೀಘ್ರವೇ ಬಿಡುಗಡೆಗೆ ಪ್ರಯತ್ನಿಸುತ್ತೇನೆ. ಚಿತ್ರದ ಬಗ್ಗೆ ನನಗೆ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರದ ಹಂಚಿಕೆಯನ್ನೂ ನಾನೇ ವಹಿಸಿಕೊಂಡಿದ್ದೇನೆ. ಹಾಗೆಯೇ ತೆಲುಗು ಚಿತ್ರವೊಂದು ಬಾಕಿ ಉಳಿದಿದೆ. ಅದು ತುಂಬಾ ಹಿಂದಿನದು. ಅದನ್ನು ಸಹ ಮುಗಿಸಿಕೊಡುತ್ತೇನೆ.

ಮುಂದಿನ ವಿಧಾನಸಭೆ ಚುನಾವಣೆಯ ಪ್ರಚಾರಕ್ಕೆ ಹೋಗುತ್ತೀರಾ?

ರಾಜಕೀಯಕ್ಕೆ ಬರುವ ವಯಸ್ಸು ಆಗಿಲ್ಲ ನನಗೆ.

ರಾಜಕೀಯದಲ್ಲಿ ನಿಮ್ಮ ನಡೆ?

ಜನರ ಸೇವೆ ಮಾಡುವ ಆಸೆಯೇನೋ ಇದೆ. ಆದರೆ ಈಗಲೇ ಬೇಡ.

ಒಂದು ವೇಳೆ ಸ್ಪರ್ಧಿಸುವಂತೆ ಒತ್ತಡ ಬಂದರೆ?

ಆ ಸಮಯದಲ್ಲಿ ಯೋಚನೆ ಮಾಡುತ್ತೇನೆ.. ಏಕೆಂದರೆ ಮೊದಲು ನಟಿಯಾಗಿದ್ದಾಗ ನಿರ್ಮಾಪಕಿ ಆಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಎಲ್ಲದಕ್ಕೂ ಸಿದ್ಧ.

ಪೂಜಾ ಗಾಂಧಿ ಜೆಡಿಎಸ್ ಸೇರಿದ್ದಾರೆ. ಅವರು ಅನುಭವದಲ್ಲಿ ನಿಮಗಿಂತ ಚಿಕ್ಕವರೇ ಅಲ್ಲವೇ.?

ಈ ವಿಷಯದ ಬಗ್ಗೆ ಹೆಚ್ಚು ಗೊತ್ತಿಲ್ಲ. ಹಾಗಾಗಿ ನಾನು ಮಾತನಾಡೊಲ್ಲ.... ನೋಡೋಣ ಮುಂದೆ ಏನು ಬೇಕಾದರೂ ಆಗಬಹುದು... 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT