ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಗಾಲಾದ ಕರಡಿ ಧಾಮ

Last Updated 26 ಮೇ 2014, 19:30 IST
ಅಕ್ಷರ ಗಾತ್ರ

ಬಳ್ಳಾರಿ ಎನ್ನುತ್ತಿದ್ದಂತೆ ಬಿರು ಬಿಸಿಲಿನ ಚಿತ್ರಣ ಕಣ್ಣ ಮುಂದೆ ಹಾದು ಹೋಗುತ್ತದೆ. ಗಣಿಗಾರಿಕೆಯ ಕಿಡಿಯಿಂದ ತತ್ತರಿಸಿ ಹೋಗಿರುವ ಈ ಊರಿನಲ್ಲಿ ವಿಜಯನಗರದ ಗತ ವೈಭವದ ನೆನಪು ಹಾಸುಹೊಕ್ಕಾಗಿದೆ. ಇವೆಲ್ಲದರ ನಡುವೆ ಬಳ್ಳಾರಿಯನ್ನು ಗುರುತಿಸಲು ಇನ್ನೂ ಒಂದು ಕಾರಣವಿದೆ. ಅದೇ ದರೋಜಿ ಕರಡಿ ಧಾಮ.

ಇದು ಬಳ್ಳಾರಿ ಜಿಲ್ಲೆಯಲ್ಲಿನ ಹೊಸಪೇಟೆ ಮತ್ತು ಸಂಡೂರು ತಾಲ್ಲೂಕಿನ 5587.30 (55 ಚ.ಕಿ.ಮಿ) ಹೆಕ್ಟೇರ್‌ ಪ್ರದೇಶದಲ್ಲಿರುವ ವಿಶ್ವದ ಮೊದಲ ಕರಡಿಧಾಮ ಎಂಬ ಹೆಗ್ಗಳಿಕೆ ಪಡೆದಿದೆ. ರಾಶಿ ರಾಶಿ ಬಂಡೆಗಳಿಂದ ಆವೃತ್ತವಾದ ಬೆಟ್ಟದಲ್ಲಿನ ಗುಹೆಗಳಲ್ಲಿ ವಾಸಿಸುತ್ತಾ ಸಂತಾನಾಭಿವೃದ್ಧಿ ಮಾಡುತ್ತಿದ್ದ ಕರಡಿಗಳ ಚಿತ್ರಣ ಕೆಲವೇ ವರ್ಷಗಳ ಹಿಂದೆ ಇತ್ತು.

ಆದರೆ ಈಗಿನ ಪರಿಸ್ಥಿತಿ ಸಂಪೂರ್ಣ ಭಿನ್ನ. ಕರಡಿಗಳಿಗೆಂದೇ ರೂಪಿಸಲಾಗಿರುವ ಈ ಧಾಮದಲ್ಲಿ ಮೂಲಸೌಕರ್ಯಗಳಿಗೇ ಕೊರತೆ. ಧಾಮದಲ್ಲಿ ಕರಡಿಗೆ ಪ್ರಿಯವಾದ ಹಲಸಿಗೆ ಹಾಹಾಕಾರ; ಜೇನಿಗೆ ಪರದಾಟ; ಗೆದ್ದಲು ಹುಳು, ಇರುವೆ ಮಾಯ; ಕಾರೆ, ಕವಳೆ, ಬಿಕ್ಕಿ, ಉಲುಪಿ, ಜಾನೆ, ಬೋರೆ, ನೆರಳೆ ಹಣ್ಣುಗಳಿಗೆ ಹೆಣಗಾಟ!

ರಾಮಾಯಣ ಕಾಲದ ಕಿಷ್ಕಿಂದೆ(ಹಂಪಿ) ಪಕ್ಕದಲ್ಲಿಯೇ ತಲೆ ಎತ್ತಿರುವ ದರೋಜಿ ಕರಡಿಧಾಮಕ್ಕೀಗ 20 ವರ್ಷ. ಭಾರತ ಹಾಗೂ ಶ್ರೀಲಂಕಾ ದೇಶಗಳಲ್ಲಿ ಮಾತ್ರ ಕಾಣಬಹುದಾದ ಅಪರೂಪದ ಕರಡಿಗಳು ಇಲ್ಲಿವೆ. ಮಾಜಿ ಸಚಿವ ದಿವಂಗತ ಎಂ.ವೈ.ಘೋರ್ಪಡೆ ಅವರ ವನ್ಯಜೀವಿ ಪ್ರೇಮದ ಪ್ರತೀಕವಾದ ಈ ಕರಡಿ ಧಾಮ ಆರಂಭವಾಗಿದ್ದು 1994ರಲ್ಲಿ. ಆದರೆ ಎರಡು ದಶಕ ಕಂಡಿರುವ ಈ ಧಾಮದಲ್ಲೀಗ ಇಪ್ಪತ್ತು ಕರಡಿಗಳು ಕಾಣಸಿಗುವುದೂ ಅಪರೂಪ. ಇದು ಕರಡಿ ಧಾಮವಾಗಿದ್ದರೂ ಇಲ್ಲಿ ಚಿರತೆ, ತೋಳ, ಕತ್ತೆ ಕಿರುಬ, ಕಾಡುಹಂದಿ, ನಕ್ಷತ್ರ ಆಮೆ, ಮುಳ್ಳುಹಂದಿ, ಪಾಂಗೋಲಿನ್, ಮುಂಗುಸಿ, ನವಿಲು, ಕೌಜುಗ, ಕಾಡುಕೋಳಿ ಮುಂತಾದ ವನ್ಯಜೀವಿಗಳೂ ನೆಲೆ ಕಂಡುಕೊಂಡಿದ್ದವು. ಈಗ ಅವೂ ಎಲ್ಲೋ ಮಾಯ!

ಬಣಗುಡುತ್ತಿದೆ ಧಾಮ
ಶ್ರವಣ ಹಾಗೂ ದೃಷ್ಟಿ ಸಾಮರ್ಥ್ಯದಲ್ಲಿ ಮಂದವಾಗಿರುವ ಕರಡಿಗಳು, ವಾಸನೆ ಮೂಲಕ ಆಹಾರ ಅರಸುವುದರಲ್ಲಿ ಚುರುಕು. ನಿಸರ್ಗವನ್ನೇ ಅವಲಂಬಿಸಿ ಜೀವಿಸುವ ಇವು ಕೃತಕ ಆಹಾರ ತಿನ್ನುವುದಿಲ್ಲ. ಕಾಡು ಹಣ್ಣು, ಗೆದ್ದಲು ಹುಳು, ಇರುವೆಗಳೇ ಇವುಗಳ ಆಹಾರ. ಜೇನು ಅಂದರೆ ಅದಕ್ಕೆ ಪಂಚ ಪ್ರಾಣ. ಆದರೆ ಈಚೆಗೆ ಇಲ್ಲಿ ತೀವ್ರವಾಗಿ ಆಹಾರದ ಕೊರತೆ ಎದುರಾಗಿದೆ. ನೈಸರ್ಗಿಕವಾಗಿ ದೊರೆಯುವ ಹಣ್ಣುಗಳು ಬರದಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ದೊರೆಯುತ್ತಿಲ್ಲ.

  ಕಾಡಿನಲ್ಲಿರುವ ಕುರುಚಲು ಗಿಡಗಳು ಬೇಸಿಗೆಯಲ್ಲಿ ಒಣಗುತ್ತವೆ. ಅಂತಹ ಗಿಡಗಳಲ್ಲಿ ಗೆದ್ದಲು ಹುಳು, ಇರುವೆಗಳು ಮನೆ ಮಾಡಿಕೊಂಡು ಸಂತಾನೋತ್ಪತ್ತಿ ಮಾಡುತ್ತವೆ. ಇವುಗಳನ್ನು ತಿನ್ನುವುದೆಂದರೆ ಕರಡಿಗಳಿಗೆ ಎಲ್ಲಿಲ್ಲದ ಹಿಗ್ಗು. ಆದರೆ ಈಗ ಕುರುಚಲು ಗಿಡಗಳು ಗ್ರಾಮಸ್ಥರ ಮನೆ ಸೇರುತ್ತಿವೆ. ಇನ್ನೆಲ್ಲಿಯ ಹುಳುಗಳು, ಎಲ್ಲಿಯ ಆಹಾರ...? ಗಿಡಮರಗಳಲ್ಲಿ ಕಟ್ಟುವ ಜೇನುಗೂಡಿನ ಜೇನನ್ನು ಹೀರುವುದೆಂದರೆ ಕರಡಿಗಳಿಗೆ ಬಲುಖುಷಿ.

ಜೇನು ಹುಳುಗಳು ಎಷ್ಟೇ ದಾಳಿ ಮಾಡಿದರೂ ಜೇನಿನ ಸವಿಯ ಮುಂದೆ ಕರಡಿಗಳಿಗೆ ಮಿಕ್ಕೆಲ್ಲವೂ ಗೌಣ. ಆದರೆ ದುರದೃಷ್ಟವಶಾತ್‌ ಧಾಮದ ವ್ಯಾಪ್ತಿಯಲ್ಲಿ ಇತ್ತೀಚಿಗೆ ವೃತ್ತಿ ನಿರತ ಜೇನು ಬಿಡಿಸುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ಕರಡಿಗಳ ಜೇನಿನ ಆಸೆಗೆ ತಣ್ಣೀರೆರೆಚಿದಂತಾಗಿದೆ. ಕರಡಿಯ ಆಹಾರಗಳು ಮನುಷ್ಯರ ಪಾಲಾಗಿದೆ. ಇದರಿಂದ ಕರಡಿಗಳು ಆಹಾರ ಅರಸಿ ಗ್ರಾಮಕ್ಕೆ ನುಗ್ಗುವ ಸಾಧ್ಯತೆಯೂ ಇದೆ. ಜಮೀನುಗಳಿಗೆ ಲಗ್ಗೆ ಹಾಕಬಹುದು, ಮನುಷ್ಯರ ಪ್ರಾಣಕ್ಕೆ ಕುತ್ತು ತರಬಹುದು. 

ಸಸಿ ನೆಡುವ ಸಿದ್ಧತೆಯಲ್ಲಿ...
ಕರಡಿಗಳ ಆಹಾರ ಕೊರತೆಯ ಗಂಭೀರ ಪರಿಸ್ಥಿತಿ ಅರಿತಿರುವ ಅರಣ್ಯ ಇಲಾಖೆ, ಈಗಾಗಲೇ ಕರಡಿಧಾಮದಲ್ಲಿ ಕೆಲವು ಕಾಡು ಹಣ್ಣಿನ ಸಸಿ ನೆಡಲು ಸಿದ್ಧತೆ ನಡೆಸಿದೆ. ಆಹಾರದ ಕೊರತೆಯಿಂದ ಕರಡಿಗಳು ಬೇರೆಡೆ ವಲಸೆ ಹೋಗಬಾರದು ಎನ್ನುವ ಉದ್ದೇಶದಿಂದ ಬಯಲು ಜಾಗದಲ್ಲಿ ಹಣ್ಣಿನ ಸಸಿ ನೆಡುವ ಪ್ರಸ್ತಾವವನ್ನು ಇಲಾಖೆ ಒಪ್ಪಿಕೊಂಡಿದೆ. ಶೀಘ್ರದಲ್ಲಿಯೇ ಈ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಅದರ ಜೊತೆಗೆ ಕರಡಿಧಾಮ ಹಾಗೂ ಕರಡಿಗಳ ರಕ್ಷಣೆಗೆ ಅಗತ್ಯವಿರುವ ಸಿಬ್ಬಂದಿ ನೇಮಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ತಿಳಿಸುತ್ತಾರೆ.

‘ಕುರುಚಲು ಕಾಡಿನಲ್ಲಿ ದೊರೆಯುವ ಹುಳು- ಹುಪ್ಪಡಿಗಳು, ಹಣ್ಣುಗಳೇ ಕರಡಿಗಳಿಗೆ ಪ್ರಮುಖ ಆಹಾರವಾಗಿರುವುದರಿಂದ ಕರಡಿಧಾಮದಲ್ಲಿ ನೈಸರ್ಗಿಕ ಆಹಾರದ ಪ್ರಮಾಣ ವೃದ್ಧಿಸಲು ಇಲಾಖೆ ಮುಂದಾಗಬೇಕಿದೆ. ಹಾಗೆಯೇ ಅಪರೂಪದ ಈ ದರೋಜಿ ಕರಡಿಧಾಮದ ರಕ್ಷಣೆಗೆ ಸ್ಥಳೀಯರೂ ಇಲಾಖೆಯೊಂದಿಗೆ ಕೈಜೋಡಿಸಬೇಕಿದೆ’ ಎನ್ನುತ್ತಾರೆ ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು.

ಭಾರತೀಯ ವನ್ಯಜೀವಿ ಕಾಯ್ದೆಯ 1972ರ 1(31ಸಿ) ಅಡಿಯಲ್ಲಿ ಕರಡಿಯನ್ನು ಸಂರಕ್ಷಿತ ಸಸ್ತನಿ ಎಂದು ವರ್ಗೀಕರಿಸಲಾಗಿದೆ. ಈಗಾಗಲೇ ಅಳಿವಿನ ಅಂಚಿನಲ್ಲಿರುವ ಕರಡಿ ಹಾಗೂ ವೈಶಿಷ್ಟ್ಯತೆಯನ್ನು ಹೊಂದಿರುವ ದರೋಜಿ ಕರಡಿಧಾಮದ ರಕ್ಷಣೆಗೆ ನಿಲ್ಲುವುದು ಸರ್ಕಾರದ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT