ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂದನ್‌ಕೊಳಂ ಅಣು ವಿದ್ಯುತ್ ಘಟಕ: ಉಪವಾಸ ಕೈಬಿಟ್ಟ ಗ್ರಾಮಸ್ಥರು

Last Updated 21 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಚೆನ್ನೈ, (ಪಿಟಿಐ): ಕಂದನ್‌ಕೊಳಂ ಅಣು ವಿದ್ಯುತ್ ಘಟಕ ಯೋಜನೆ ವಿರೋಧಿಸಿ 11 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಸ್ಥಳೀಯರು ಬುಧವಾರ ಕೈಬಿಟ್ಟಿದ್ದಾರೆ.

ಮುಖ್ಯಮಂತ್ರಿ ಜಯಲಲಿತಾ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯರ ನಿಯೋಗ, ಅವರು ನೀಡಿದ ಭರವಸೆ ಹಿನ್ನೆಲೆಯಲ್ಲಿ ಸತ್ಯಾಗ್ರಹ ಹಿಂತೆಗೆದುಕೊಂಡಿದ್ದಾಗಿ ತಿಳಿಸಿದೆ.

ಯೋಜನೆ ಸ್ಥಗಿತಕ್ಕಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು, ಬಳಿಕ ಈ ಕುರಿತು ಚರ್ಚಿಸಲು ಪ್ರಧಾನಿ ಭೇಟಿಗೆ ಸಮಯ ನಿಗದಿ ಪಡಿಸಲಾಗುವುದು ಎಂಬ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದು ಪ್ರತಿಭಟನೆಯ ಸಂಯೋಜಕ ಎಸ್.ಪಿ.ಉದಯಕುಮಾರ್ ತಿಳಿಸಿದರು.

ರಾಜ್ಯ ಸರ್ಕಾರದಿಂದ ಯಾವುದೇ ಸಮಸ್ಯೆ ಎದುರಾಗಿಲ್ಲ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಮುಂದುವರಿಸಲಾಗುವುದು ಎಂದು ಹೇಳಿದರು.

ಪ್ರಧಾನಿ ಕಾರ್ಯಾಲಯದ ಸಚಿವ ನಾರಾಯಣ ಸ್ವಾಮಿ ಅವರು ಗ್ರಾಮಕ್ಕೆ ಭೇಟಿ ನೀಡುವ ವಿಷಯ ಕೊನೆಯ ಗಳಿಗೆಯಲ್ಲಿ ತಿಳಿಸಿದ ಕಾರಣ ಪ್ರತಿಭಟನಾಕಾರರು ಅವರೊಂದಿಗೆ ಮಾತುಕತೆ ನಡೆಸಲು ನಿರಾಕರಿಸಿದರು. ನಂತರ ಅವರ ಮನವೊಲಿಸಲಾಯಿತು.  

`ಪ್ರಧಾನಿಗೆ ತಿಳಿಸುವೆ~
ಕಂದನ್‌ಕೊಳಂ ಅಣು ವಿದ್ಯುತ್ ಘಟಕ ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ಸ್ಥಳೀಯರು ಮತ್ತು ತಮಿಳುನಾಡು ಸರ್ಕಾರ ವ್ಯಕ್ತಪಡಿಸಿದ ಕಳವಳವನ್ನು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರ ಗಮನಕ್ಕೆ ತರುವುದಾಗಿ ಪ್ರಧಾನಮಂತ್ರಿ ಕಾರ್ಯಾಲಯದ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಹೇಳಿದ್ದಾರೆ.

ಈ ಯೋಜನೆ ವಿರೋಧಿಸಿ ಸ್ಥಳೀಯರು ಉಪವಾಸ ಕೈಗೊಂಡಿದ್ದ ಕಂದನ್‌ಕೊಳಂ ಗ್ರಾಮಕ್ಕೆ ಭೇಟಿ ನೀಡಿ ಮರಳಿದ ಬಳಿಕ ಬುಧವಾರ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

`ಪ್ರಧಾನಿ ಸಂದೇಶ ಹೊತ್ತು ಬಂದಿದ್ದ ನಾನು ಅದನ್ನು ಜಯಲಲಿತಾ ಅವರಿಗೆ ತಲುಪಿಸಿದ್ದೇನೆ. ಅದರಂತೆ ಅವರು ನೀಡಿರುವ ಕೆಲವು ಸಂದೇಶಗಳನ್ನು ಪ್ರಧಾನಿಗೆ ತಲುಪಿಸುತ್ತೇನೆ. ಪ್ರತಿಭಟನಾಕಾರರೊಂದಿಗೆ ನಡೆಸಿದ ಮಾತುಕತೆಯ ವಿವರವನ್ನು ಜಯಾ ಅವರಿಗೆ ನೀಡಿದ್ದೇನೆ. ಈ ವಿಷಯದಲ್ಲಿ ಪ್ರಧಾನಿ ಅವರೇ ಅಂತಿಮ ತೀರ್ಮಾನ ಕೈಗೊಳ್ಳುತ್ತಾರೆ~ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT