ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಗ್ಗಕ್ಕೆ ಬಂತು ಕುತ್ತು

Last Updated 2 ಜುಲೈ 2012, 19:30 IST
ಅಕ್ಷರ ಗಾತ್ರ

ಒಂದು ಕಾಲದಲ್ಲಿ  ಕುಮಟಾ ತಾಲ್ಲೂಕಿನ ಅಘನಾಶಿನಿ ನದಿ ಹಿನ್ನೀರು ಪ್ರದೇಶದ ಗಜನಿ ಭೂಮಿಯಲ್ಲಿ ಸಮೃದ್ಧವಾಗಿ ಬೆಳೆಯುತ್ತಿದ್ದ ಅಪರೂಪದ `ಕಗ್ಗ~ ಬತ್ತದ ತಳಿ ನಶಿಸುತ್ತಿದೆ. ಗದ್ದೆಗಳಲ್ಲಿ ಸಹಜವಾಗಿದ್ದ ಮೀನು, ಸೀಗಡಿ ಮತ್ತು ಏಡಿ ಪ್ರಮಾಣ ಕುಸಿದಿದೆ.

ಸುಮಾರು 40 ವರ್ಷಗಳ ಹಿಂದೆ ಗಜನಿಗುಂಟ ನಿರ್ಮಿಸಿದ್ದ ಖಾರ್‌ಲ್ಯಾಂಡ್ ಕಟ್ಟೆ (ಉಪ್ಪುನೀರು ತಡೆಗೋಡೆ) ನಿರ್ವಹಣೆ ಇಲ್ಲದೆ ಕುಸಿದು ಹೋಗುತ್ತಿರುವುದೇ ಇದಕ್ಕೆ ಕಾರಣ.

ಕುಮಟಾ ತಾಲ್ಲೂಕಿನ ಹೆಗಡೆ ಗ್ರಾಮದಿಂದ ಹೊಸಕಟ್ಟಾ ವರೆಗೆ ಅಘನಾಶಿನಿ ನದಿಯ ಎಡ-ಬಲ ದಂಡೆ ಪ್ರದೇಶಗಳಲ್ಲಿ ಹರಡಿರುವ ಸುಮಾರು 10 ಸಾವಿರ ಎಕರೆಗೂ ಅಧಿಕ ಹಿನ್ನೀರು- ಗಜನಿ ಪ್ರದೇಶ ರಾಜ್ಯ ಕರಾವಳಿಯಲ್ಲಿಯೇ ಅತ್ಯಂತ ವಿಶಾಲ ಹಾಗೂ ವೈವಿಧ್ಯಮಯ. ಕೆಲಮಟ್ಟಿಗೆ ಕೊಂಕಣ ರೇಲ್ವೆ ಮಾರ್ಗ ನಿರ್ಮಾಣ ಬಿಟ್ಟರೆ ಉಳಿದಂತೆ ಈ ಹಿನ್ನೀರು ಪ್ರದೇಶ ಇನ್ಯಾವುದೇ ಬೃಹತ್ ಯೋಜನೆಗಳಿಗೆ ಬಲಿಯಾಗಿಲ್ಲ.

 ಇದರಲ್ಲಿ ಹಿಂದೆ ಸುಮಾರು 25 ಗಜನಿಗಳ 3,244 ಎಕರೆ ಪ್ರದೇಶದಲ್ಲಿ 3,011 ಕುಟುಂಬಗಳು  ಜೀವನೋಪಾಯಕ್ಕಾಗಿ ಅಪರೂಪದ `ಕಗ್ಗ~ ಬತ್ತದ ಕೃಷಿಯೊಂದಿಗೆ ಮೀನುಗಾರಿಕೆ ನಡೆಸಿಕೊಂಡು ಬಂದಿದ್ದವು.

ಹಿನ್ನೀರು ಪ್ರದೇಶದ ಕೆಲವೇ ಮೈಲುಗಳ ಅಂತರದಲ್ಲಿ ಅಘನಾಶಿನಿ ನದಿ ತದಡಿ ಹಾಗೂ ಅಘನಾಶಿನಿ ಗ್ರಾಮಗಳ ನಡುವೆ ಸಮುದ್ರ ಸೇರುತ್ತದೆ. ಹೀಗಾಗಿ ಭರತ (ಉಬ್ಬರ) ಸಂದರ್ಭದಲ್ಲಿ ನದಿ ಮೂಲಕ ಸಮುದ್ರದ ಉಪ್ಪು ನೀರು ಹಿನ್ನೀರು ಪ್ರದೇಶಗಳಿಗೆ ನುಗ್ಗುತ್ತದೆ.

ಇಂಥ ಭೂಮಿಯಲ್ಲಿ ಉಪ್ಪು ನೀರಿನಲ್ಲೂ ಬೆಳೆಯುವ `ಕಗ್ಗ~ ತಳಿಯ ಬತ್ತದ ಹೊರತಾಗಿ  ಬೇರೆ ಯಾವುದೇ ವ್ಯವಸಾಯ ಸಾಧ್ಯವಿಲ್ಲ. ಯಾವುದೇ ಗೊಬ್ಬರ, ಔಷಧಿಯ ಅಗತ್ಯವಿಲ್ಲದೆ ಅತ್ಯಂತ ಸಹಜವಾಗಿ ಬೆಳೆಯುವ ` ಕಗ್ಗ~ದ ಅಕ್ಕಿಗೆ ಪೌಷ್ಟಿಕತೆಯಲ್ಲಿ ಮೊದಲ ಸ್ಥಾನ. ಉದ್ದುದ್ದ ಕಾಳಿನ ಅಕ್ಕಿಯ ಹಂಚುರೊಟ್ಟಿ, ಗಂಜಿಯ ರುಚಿಯನ್ನು ಬಲ್ಲವರೇ ಬಲ್ಲವರು. `ಕಗ್ಗ~ದ ಕೃಷಿ ಜೊತೆ ಗಜನಿಯಲ್ಲಿ ಸಹಜವಾಗಿ ಬೆಳೆವ ಏಡಿ, ಮೀನು, ಸೀಗಡಿಗಳು ರೈತರ ಬಳಕೆಗೆ ಸಿಗುತ್ತಿದ್ದವು.

ಖಾರ್‌ಲ್ಯಾಂಡ್ ಯೋಜನೆ
ಗಜನಿ ಭೂಮಿಯಲ್ಲಿ `ಕಗ್ಗ~ ಹಾಗೂ ಸಹಜ ಮೀನು ಕೃಷಿಗೆ ಅನುಕೂಲವಾಗುವ ಉದ್ದೇಶದಿಂದ ದಿ. ರಾಮಕೃಷ್ಣ ಹೆಗಡೆ ಹಣಕಾಸು ಮಂತ್ರಿಯಾಗಿದ್ದಾಗ 1970-71ರಲ್ಲಿ ಜಾರಿಗೆ ಬಂದ `ಖಾರ್‌ಲ್ಯಾಂಡ್ ಯೋಜನೆ~ ರೈತರ ಪಾಲಿಗೆ ವರವಾಯಿತು.

ಈ ಯೋಜನೆಯಡಿ ಅಘನಾಶಿನಿ ನದಿಯ ದಡದ ಹಾಗೂ ಹಿನ್ನೀರು ಪ್ರದೇಶದ ಗಜನಿ ಭೂಮಿಯ ಗಡಿಗುಂಟ 25 ಕಿಮಿ ಉದ್ದಕ್ಕೂ ಕೆಂಪು ಮಣ್ಣಿನಿಂದ ಐದರಿಂದ ಎಂಟು ಅಡಿ ಎತ್ತರ ಹಾಗೂ ಸುಮಾರು 15 ಅಡಿ ಅಗಲ (ಅಂದರೆ ಒಂದು ಲಾರಿ ಸುಲಭವಾಗಿ ಓಡಾಡುವಷ್ಟು ಅಗಲ) ಉಪ್ಪು ನೀರು ತಡೆಗೋಡೆ ನಿರ್ಮಾಣ ಮಾಡಲಾಯಿತು.

ಮಳೆಗಾಲದಲ್ಲಿ ನದಿ ನೀರು ಗಜನಿಯಿಂದ ಹೊರ ಹೋಗಲು ತಡೆಗೋಡೆಗೆ ಅಲ್ಲಲ್ಲಿ ಕಿಂಡಿ ಅಣೆ (ಜಂತ್ರಡಿ) ಕಟ್ಟಲಾಯಿತು.  ವರ್ಷಾನುಗಟ್ಟಲೆ ನಡೆದ ಈ  ಬೃಹತ್ ಯೋಜನೆಯ ಕಾಮಗಾರಿಗೆ 40 ವರ್ಷಗಳ ಹಿಂದೆ ಸುಮಾರು 30-30 ಲಕ್ಷ ರೂ.
ಖರ್ಚಾಗಿರಬಹುದೆಂದು ಅಂದಾಜು.

ರೈತರು ಗಜನಿಯಲ್ಲಿ ಕಗ್ಗ, ಇತರೆ ಬತ್ತ ಹಾಗೂ ಮೀನಿನ ಸಹಜ ಕೃಷಿ ನಡೆಸುತ್ತಿರುವಾಗಲೇ ಸೀಗಡಿ ಕೃತಕ ಕೃಷಿ ಎಂಬ ಬಿರುಗಾಳಿ ಬೀಸಿತು. ವಿಶ್ವ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯಿದ್ದ ಹಸಿರು ಮಿಶ್ರಿತ ಬಣ್ಣದ ಟೈಗರ್ ಸೀಗಡಿ (ಕಾಯಿಶೆಟ್ಲಿ) ಬೆಳೆಯಲು ಸಾವಿರಾರು ಎಕರೆ ಬತ್ತದ ಗಜನಿ ಬಳಸಿಕೊಳ್ಳಲಾಯಿತು.

ರೈತರಲ್ಲದ ದೇಶ, ವಿದೇಶಗಳ ಉದ್ಯಮಿಗಳು ಸೀಗಡಿ ಬೆಳೆಯಲು ಗಜನಿ ಭೂಮಿಯನ್ನು  ರೈತರಿಂದ ಗುತ್ತಿಗೆಗೆ ಪಡೆದುಕೊಂಡರು. ಗಜನಿಯಲ್ಲಿ ಆರೇಳು ಅಡಿ ಆಳದ ಬೃಹತ್ ಸೀಗಡಿ ಕೊಳಗಳು ನಿರ್ಮಾಣಗೊಂಡು ಅದರ ಸಹಜ ಗಡಿಗಳು ಮಾಯವಾದವು.

ಹೊರದೇಶಗಳಿಂದ ಲಕ್ಷಾಂತರ ಸೀಗಡಿ ಮರಿಗಳನ್ನು ತಂದು ಈ ಕೊಳಗಳಲ್ಲಿ ಬೆಳೆಸಲಾಯಿತು. ಸೀಗಡಿ ಮರಿಗಳನ್ನು ಹದ್ದು, ಕಾಗೆ ಕಚ್ಚಿಕೊಂಡು ಹೋಗದಂತೆ ಮೇಲೆ ರಕ್ಷಣೆಗಾಗಿ ಬಲೆ ಹೊದೆಸಲಾಯಿತು. ಕೊಯ್ಲಿಗೆ ಬಂದ ಸೀಗಡಿಗಳನ್ನು ರಾತ್ರಿ ಕಳ್ಳರು ಕದ್ದೊಯ್ಯದಂತೆ ಕೊಳಗಳ ಸುತ್ತ ಝಗಮಗಿಸುವ ಹತ್ತಾರು ಟ್ಯೂಬ್ ಲೈಟ್ ಬೆಳಕು ಹಾಗೂ ಕಾವಲು ವ್ಯವಸ್ಥೆ ಮಾಡಲಾಯಿತು.

ಸೀಗಡಿ ಕೊಯ್ಲು ಮಾಡುವಾಗ ಮಂಜುಗಡ್ಡೆ ತುಂಬಿದ ಮಿನಿ ಲಾರಿಗಳು, ಉದ್ಯಮಿಗಳ ಕಾರುಗಳು ಖಾರ್‌ಲ್ಯಾಂಡ್ ಕಟ್ಟೆಯ ಮೇಲೆ ಗಜನಿ ಸಮೀಪವೇ ಬರತೊಡಗಿದವು. ಉದ್ಯಮಿಗಳ ಜೊತೆ ಮಾಡಿಕೊಂಡ ಒಪ್ಪಂದದ ಪ್ರಕಾರ ರೈತರ ಕೈಯಲ್ಲೂ ಅಷ್ಟಿಷ್ಟು ಹಣ ಓಡಾತೊಡಗಿತು. ಹಸಿರು ಮಿಶ್ರಿತ ಬಣ್ಣದ, ಹೊಳೆಯುವ ಕಾಲುಗಳ ಕೃತಕ ಟೈಗರ್ ಸೀಗಡಿ ತರುವ ಆದಾಯ ನಿರೀಕ್ಷೆ ಮೀರಿತು. ಆಗ ಅದನ್ನು `ಜೀವಂತ ಡಾಲರ್~ ಎಂದೇ ಕರೆಯಲಾಯಿತು.

ತಮ್ಮ ಗಜನಿ ಭೂಮಿಯಲ್ಲಿ ಅಪರೂಪಕ್ಕೆ ಕಾಣುತ್ತಿದ್ದ ಟೈಗರ್ ಶೆಟ್ಲಿಯನ್ನು ದೊಡ್ಡ ದೊಡ್ಡ ಕೊಳಗಳಲ್ಲಿ ಮೂರೇ ತಿಂಗಳಲ್ಲಿ ಲಾರಿಗಟ್ಟಲೆ ಕೃತಕವಾಗಿ ಬೆಳೆಯುವುದನ್ನು ಕಂಡು ರೈತರು ಅಚ್ಚರಿಯಿಂದ ಕಣ್ಣು ಕಣ್ಣು ಬಿಟ್ಟರು. ಶತಮಾನಗಳಿಂದ ನಡೆದು ಬಂದ ಸಾಂಪ್ರದಾಯಿಕ ಕಗ್ಗ ಕೃಷಿ, ಮೀನುಗಾರಿಕೆಯಿಂದ ಮೈಕೈ ಕೆಸರು ಮಾಡಿಕೊಳ್ಳುತ್ತಿದ್ದ ರೈತರು ತಮ್ಮ ಬತ್ತದ ಗದ್ದೆಯ ಗುತ್ತಿಗೆ ಹಣ ತೆಗೆದುಕೊಂಡು ನೆಮ್ಮದಿಯಿಂದ ಉಳಿದರು.
 
ಆದರೆ ಎಲ್ಲರ ನಿರೀಕ್ಷೆ ಮೀರಿ ಕೆಲವೇ ವರ್ಷಗಳಲ್ಲಿ ಕೃತಕ ಸೀಗಡಿಗೆ ಬಿಳಿ ಚುಕ್ಕೆ ರೋಗ ತಗಲಿತು. ಏನೇ ಕ್ರಮ ಕೈಗೊಂಡರೂ ರೋಗ ಹತೋಟಿಗೆ ಬರಲಿಲ್ಲ. ಕೊಳದಲ್ಲಿದ್ದ ಮರಿಗಳು, ಬೆಳೆದ ಸೀಗಡಿ ರೋಗಕ್ಕೆ ತುತ್ತಾದವು. 

ಹೀಗಾಗಿ ಕೊಳಗಳು ಬರಿದಾಗಿ ಭಣಗುಟ್ಟತೊಡಗಿದವು. ತಲೆ ಮೇಲೆ ಕೈ ಹೊತ್ತ ಉದ್ಯಮಿಗಳು ಇದ್ದಕ್ಕಿದ್ದಂತೆ ಮಾಯವಾದರು. ರೈತರ ಕೈಗೆ ಆಗಾಗ  ಬರುತ್ತಿದ್ದ  ಗಜನಿ ಗುತ್ತಿಗೆ ಹಣವೂ ನಿಂತು ಹೋಯಿತು.

ಅತ್ತ ಸೀಗಡಿ ಕೃಷಿಯೂ ಇಲ್ಲದೆ, ಇತ್ತ ಬತ್ತದ ಕೃಷಿಯೂ ಸಾಧ್ಯವಾಗದೆ ಸೀಗಡಿ ಕೊಳಗಳೆಲ್ಲ ಮಳೆಗಾಲದಲ್ಲಿ ಈಜು ಕೊಳಗಳಾದವು. ಸೀಗಡಿ ಕೃಷಿಯಿಂದ ಶ್ರೀಮಂತರಾದ ಅನೇಕರು ಬಿಳಿಚಿಕ್ಕೆ ರೋಗದಿಂದಾಗಿ ದಿವಾಳಿ ಹೊಂದಿದರು. ತಮ್ಮ ಗಜನಿಯ್ಲ್ಲಲಿ ತಾವೇ ಸಿಗಡಿ ಕೃಷಿ ಮಾಡಿದ ಕೆಲ ದೊಡ್ಡ ದೊಡ್ಡ  ರೈತರ ಸ್ಥಿತಿಯೂ ಇದಕ್ಕಿಂತ ಹೊರತಾಗಿರಲಿಲ್ಲ.

ಕೃತಕ ಸೀಗಡಿ ಬೇಸಾಯಕ್ಕೆ ಕೃತಕ ಆಹಾರ, ರಾಸಾಯನಿಕಯುಕ್ತ ಔಷಧ ಬಳಸಿದ್ದರಿಂದ ಗಜನಿಗಳಲ್ಲಿ ಮತ್ತೆ ಕೃಷಿ ಕಾರ್ಯ ಅಸಾಧ್ಯವೆನಿಸಿತು. ಸುಮಾರು ಎರಡು ದಶಕ ಗಜನಿ ಕೊಳಗಳನ್ನು ರೈತರು ಕೃಷಿಗೆ ಮರು ಬಳಕೆ ಮಾಡಿಕೊಳ್ಳಲಾಗಲಿಲ್ಲ. 40 ವರ್ಷ ಸತತ ಮಳೆ, ನೀರಿನ ಪ್ರವಾಹಕ್ಕೆ ಸಿಕ್ಕ ಖಾರ್‌ಲ್ಯಾಂಡ್ ಕಟ್ಟೆಯ ಹೆಚ್ಚಿನ ಭಾಗ ಈಗ ಕುಸಿದು ಹೋಗಿದೆ. ಕಗ್ಗ ಬೆಳೆಯುವ ಪ್ರದೇಶವೂ 3,200 ಎಕರೆಯಿಂದ ಈಗ  ಕೇವಲ 100 ಎಕರೆಗೆ ಇಳಿದಿದೆ.

ನಶಿಸುತ್ತಿರುವ ಈ ಬತ್ತದ ತಳಿಯನ್ನು ಉಳಿಸುವ ಉದ್ದೇಶದಿಂದ ಸಮೀಪದ ಮಾಣಿಕಟ್ಟಾ ಸುತ್ತಲಿನ ಗಜನಿ ರೈತರು ಸಹಕಾರಿ ಪದ್ಧತಿಯಲ್ಲಿ `ಕಗ್ಗ~ ಕೃಷಿ ಕೈಕೊಳ್ಳುತ್ತಿದ್ದಾರೆ. ಕಗ್ಗದ ಹಳೆಯ ವೈಭವವನ್ನು ಕೊಂಚಮಟ್ಟಿಗಾದರೂ ಮತ್ತೆ ತರುವ ಪ್ರಯತ್ನವಾಗಿ ಕುಸಿಯುತ್ತಿರುವ ಖಾರ್‌ಲ್ಯಾಂಡ್ ಕಟ್ಟೆಯ ಸಂಪೂರ್ಣ ದುರಸ್ತಿ ಮಾಡಲು ಸರ್ಕಾರಕ್ಕೆ ಮೊರೆ ಇಟ್ಟಿದ್ದಾರೆ.

ಇದಕ್ಕಾಗಿ ಸರ್ಕಾರ 60-70 ಕೋಟಿ ರೂ ವಿನಿಯೋಗಿಸಿದರೆ ಇವರ ಬದುಕು ಮತ್ತೆ ಚೇತರಿಸಿಕೊಳ್ಳುತ್ತದೆ. ಅಗತ್ಯವ್ದ್ದಿದಲ್ಲೆಲ್ಲ ಜಂತ್ರಡಿ ಹಾಗೂ ಖಾರ್‌ಲ್ಯಾಂಡ್ ಕಟ್ಟೆಯನ್ನು ರೈತರೇ ದುರಸ್ತಿ ಮಾಡಿಕೊಂಡಿದ್ದಾರೆ. ಆದರೆ ಇವೆಲ್ಲ ಹೊಳೆಯಲ್ಲಿ ಹುಣಸೇ ತೊಳೆದಂತೆಯೇ ಸರಿ.
 
ಸರ್ಕಾರ ಈ ಬಗ್ಗೆ ಸ್ಪಂದಿಸಿದರೆ ನಶಿಸುತ್ತಿರುವ ಅಪರೂಪದ ಕಗ್ಗ ಬತ್ತದ ರಕ್ಷಣೆ, ಮೀನು-ಸೀಗಡಿಯ ಸಹಜ ಕೃಷಿಯ ಜೊತೆ ಇಡೀ ರಾಜ್ಯದಲ್ಲಿಯೇ ಅತ್ಯಂತ ವೈವಿಧ್ಯಮಯವಾದ ಹಿನ್ನೀರು ಪ್ರದೇಶದ ರಕ್ಷಣೆಯೂ ಸಾಧ್ಯವಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT