ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಚೇರಿಯಲ್ಲಿ ದೇವೇಗೌಡರ ಭಾವಚಿತ್ರ: ಮಣಿದ ಸಿ.ಎಂ

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸೌಧದಲ್ಲಿರುವ ಮುಖ್ಯಮಂತ್ರಿಯವರ ಕಚೇರಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಭಾವಚಿತ್ರವನ್ನು ಮತ್ತೆ ಇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಕೊಂಡಿದ್ದಾರೆ. ಇದರೊಂದಿಗೆ ಭಾವಚಿತ್ರಕ್ಕೆ ಸಂಬಂಧಿಸಿದ ವಿವಾದಕ್ಕೆ ತೆರೆಬಿದ್ದಿದೆ.

ಮುಖ್ಯಮಂತ್ರಿ ಕಚೇರಿಯಲ್ಲಿ ಈ ಮೊದಲು ಇರಿಸಿದ್ದ ದೇವೇಗೌಡರ ಭಾವಚಿತ್ರವನ್ನು ತೆರವುಗೊಳಿಸಿದ್ದ ವಿಷಯ ಬುಧವಾರವೇ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತ್ತು. ಆಗ ಉತ್ತರ ನೀಡಿದ್ದ ಸಿದ್ದರಾಮಯ್ಯ ಅವರು, `ಅದು ಉದ್ದೇಶಪೂರ್ವಕವಾಗಿ ನಡೆದ ಕೆಲಸ ಅಲ್ಲ' ಎಂದು ಸಮರ್ಥಿಸಿಕೊಂಡಿದ್ದರು. ಗುರುವಾರ ಶೂನ್ಯವೇಳೆಯಲ್ಲಿ ಮತ್ತೆ ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಎನ್.ಚೆಲುವರಾಯಸ್ವಾಮಿ, ಗೌಡರ ಭಾವಚಿತ್ರವನ್ನು ತೆರವುಗೊಳಿಸುವುದಕ್ಕೆ ಕಾರಣ ನೀಡುವಂತೆ ಪಟ್ಟು ಹಿಡಿದರು.

`ಕರ್ನಾಟಕದಿಂದ ಪ್ರಧಾನಿ ಹುದ್ದೆಗೇರಿದ ಏಕೈಕ ವ್ಯಕ್ತಿ ದೇವೇಗೌಡರು. ಆ ಕಾರಣಕ್ಕಾಗಿಯೇ ಜೆ.ಎಚ್. ಪಟೇಲರ ಅವಧಿಯಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ಗೌಡರ ಭಾವಚಿತ್ರ ಹಾಕಲಾಗಿತ್ತು. ಈಗ ಸಿದ್ದರಾಮಯ್ಯ ಅವರು ರಾಜಕೀಯ ಉದ್ದೇಶದಿಂದ ಅದನ್ನು ತೆಗೆಸಿ ಹಾಕಿದ್ದಾರೆ' ಎಂದು ಚೆಲುವರಾಯಸ್ವಾಮಿ ದೂರಿದರು.

ಜೆಡಿಎಸ್ ಸದಸ್ಯರ ಮಾತಿಗೆ ದನಿಗೂಡಿಸಿದ ಬಿಜೆಪಿ ನಾಯಕ ಜಗದೀಶ ಶೆಟ್ಟರ್, `ಮುಖ್ಯಮಂತ್ರಿ ಕಚೇರಿಯಲ್ಲಿ ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿ ಅವರ ಭಾವಚಿತ್ರವೂ ಇತ್ತು. ಅದನ್ನೂ ತೆಗೆದು ಹಾಕಿದ್ದಾರೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿಯವರ ಭಾವಚಿತ್ರ ಇರಿಸಿಕೊಂಡಿದ್ದಾರೆ. ಅಧಿಕಾರಕ್ಕೆ ಬಂದ ತಕ್ಷಣ ಈ ಕೆಲಸ ಮಾಡಿದ್ದಾರೆ' ಎಂದು ವಾಗ್ದಾಳಿ ನಡೆಸಿದರು.

ಬಳಿಕ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, `ಸರ್ಕಾರಿ ಕಚೇರಿಗಳಲ್ಲಿ ಭಾವಚಿತ್ರ ಇರಿಸುವ ಸಂಬಂಧ 1977ರಲ್ಲಿ ಮೊದಲ ಆದೇಶ ಪ್ರಕಟವಾಗಿತ್ತು. ಆ ಪ್ರಕಾರ, ರಾಷ್ಟ್ರಪತಿ ಮತ್ತು ಮಹಾತ್ಮ ಗಾಂಧಿಯವರ ಭಾವಚಿತ್ರ ಇರಿಸಬೇಕಿತ್ತು. 1981ರಲ್ಲಿ ಎರಡನೇ ಆದೇಶ ಹೊರಡಿಸಿ ಪ್ರಧಾನಿಯವರ ಭಾವಚಿತ್ರವನ್ನೂ ಇರಿಸಬೇಕೆಂದು ಸೇರಿಸಲಾಗಿತ್ತು.

2000ನೇ ಸಾಲಿನಲ್ಲಿ ಮೂರನೇ ಆದೇಶ ಹೊರಡಿಸಿದ್ದು, ಮಹಾತ್ಮ ಗಾಂಧಿ, ರಾಷ್ಟ್ರಪತಿ ಮತ್ತು ಪ್ರಧಾನಿಯವರ ಭಾವಚಿತ್ರಗಳ ಜೊತೆ ಇತರೆ ಯಾವ ವ್ಯಕ್ತಿಗಳ ಚಿತ್ರ ಇರಿಸಿಕೊಳ್ಳಬೇಕು ಎಂಬುದು ಇಲಾಖಾ ಮುಖ್ಯಸ್ಥರ ವಿವೇಚನೆಗೆ ಬಿಟ್ಟ ವಿಷಯ ಎಂದು ಹೇಳಲಾಗಿದೆ' ಎಂದರು.

ಮಾಜಿ ಪ್ರಧಾನಿಗಳಲ್ಲಿ ಕೆಲವರ ಭಾವಚಿತ್ರಗಳು ಮಾತ್ರ ಕಚೇರಿಯಲ್ಲಿ ಇದ್ದವು. ಈ ಕಾರಣಕ್ಕಾಗಿ ಅವುಗಳನ್ನು ತೆರವು ಮಾಡಲಾಗಿದೆ. ಇದರ ಹಿಂದೆ ಯಾವುದೇ ದುರುದ್ದೇಶ ಇಲ್ಲ. ಕಾನೂನಿನ ಪ್ರಕಾರವೂ ಅದು ತಮ್ಮ ವಿವೇಚನೆಗೆ ಬಿಟ್ಟ ವಿಷಯವಾಗಿದೆ. ಇದರಲ್ಲಿ ಯಾವುದೇ ಬದಲಾವಣೆ ಸಾಧ್ಯವಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿಯವರ ಉತ್ತರದಿಂದ ಅಸಮಾಧಾನಗೊಂಡ ಜೆಡಿಎಸ್ ಸದಸ್ಯರು ಸಭಾಧ್ಯಕ್ಷರ ಪೀಠದ ಎದುರು ಧರಣಿ ಆರಂಭಿಸಿದರು. ಗೌಡರ ಭಾವಚಿತ್ರವನ್ನು ಮತ್ತೆ ಸಿ.ಎಂ ಕಚೇರಿಯಲ್ಲಿ ಇರಿಸುವಂತೆ ಪಟ್ಟು ಹಿಡಿದರು. ಸಭಾಧ್ಯಕ್ಷರ ಪೀಠದಲ್ಲಿದ್ದ ನೂತನ ಉಪಾಧ್ಯಕ್ಷ ಎನ್.ಎಚ್.ಶಿವಶಂಕರ ರೆಡ್ಡಿ ಪ್ರತಿಪಕ್ಷ ಸದಸ್ಯರನ್ನು ಮನವೊಲಿಸಲು ಯತ್ನಿಸಿದರು. ಅಷ್ಟರಲ್ಲೇ ಪೀಠಕ್ಕೆ ಆಗಮಿಸಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು, ಕಲಾಪ ಮುಂದೂಡಿ ವಿವಿಧ ಪಕ್ಷಗಳ ನಾಯಕರ ಸಭೆ ಕರೆದರು.

ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ನಾಯಕ ಜಗದೀಶ ಶೆಟ್ಟರ್, ಕಾನೂನು ಸಚಿವ ಟಿ.ಬಿ.ಜಯಚಂದ್ರ, ಶಾಸಕ ಕೆ.ಆರ್. ರಮೇಶ್‌ಕುಮಾರ್ ಮತ್ತಿತರರು ಸ್ಪೀಕರ್ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ್ದರು. ಕಾಗೋಡು ತಿಮ್ಮಪ್ಪ, ರಮೇಶ್‌ಕುಮಾರ್ ಅವರು ಮುಖ್ಯಮಂತ್ರಿಯವರ ಮನವೊಲಿಸಿದರು. ಕಚೇರಿಯಲ್ಲಿ ಗೌಡರ ಭಾವಚಿತ್ರವನ್ನು ಮತ್ತೆ ಇರಿಸಲು ಸಿದ್ದರಾಮಯ್ಯ ಒಪ್ಪಿಕೊಂಡರು.

ಬಳಿಕ ಕಲಾಪ ಆರಂಭವಾದಾಗ, `ದುರುದ್ದೇಶದಿಂದ ಭಾವಚಿತ್ರ ತೆಗೆದು ಹಾಕಿಲ್ಲ. ಸ್ವಾಭಾವಿಕವಾಗಿ ನಡೆದಿರುವ ಪ್ರಕ್ರಿಯೆ. ಈ ರೀತಿ ಮಾಡಿರುವುದರಿಂದ ಜನರಲ್ಲಿ ಸಣ್ಣ ಅನುಮಾನ ಮೂಡಿದೆ. ಈ ವಿಚಾರ ಗೊಂದಲಕ್ಕೂ ಎಡೆಮಾಡಿದೆ. ಇದಕ್ಕೆ ತೆರೆ ಎಳೆಯುವ ದೃಷ್ಟಿಯಿಂದ ಪುನಃ ಭಾವಚಿತ್ರವನ್ನು ಕಚೇರಿಯಲ್ಲಿ ಇರಿಸಲು ಮುಖ್ಯಮಂತ್ರಿಯವರು ಒಪ್ಪಿಕೊಂಡಿದ್ದಾರೆ' ಎಂದು ಸ್ಪೀಕರ್ ಪ್ರಕಟಿಸಿದರು. ಜೆಡಿಎಸ್ ಸದಸ್ಯರು ಧರಣಿ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT