ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟಕಟೆಯಲ್ಲಿ ಬಿಎಸ್‌ವೈ

Last Updated 29 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು:  ನಿರೀಕ್ಷಣಾ ಜಾಮೀನು ಅರ್ಜಿ ಹೈಕೋರ್ಟ್‌ನಲ್ಲಿ ವಜಾ ಆದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೋಮವಾರ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದ ಎರಡು ಪ್ರತ್ಯೇಕ ಪ್ರಕರಣಗಳ ವಿಚಾರಣೆಗಾಗಿ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರಾದರು.

ಮಾಜಿ ಮುಖ್ಯಮಂತ್ರಿಯೊಬ್ಬರು `ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ (ಲೋಕಾಯುಕ್ತ) ವಿಶೇಷ ನ್ಯಾಯಾಲಯದ ಕಟಕಟೆಯಲ್ಲಿ ನಿಂತಿದ್ದು ರಾಜ್ಯದ ಇತಿಹಾಸದಲ್ಲಿ ಇದೇ ಮೊದಲು.

ವಕೀಲ ಸಿರಾಜಿನ್ ಬಾಷಾ ಸಲ್ಲಿಸಿರುವ ಮೂರನೇ ಖಾಸಗಿ ದೂರಿನ ಪ್ರಮುಖ ಆರೋಪಿಗಳಾಗಿರುವ ತಮ್ಮ ಪುತ್ರರಾದ ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಮತ್ತು ಅಳಿಯ ಆರ್.ಎನ್.ಸೋಹನ್‌ಕುಮಾರ್ ಅವರೊಂದಿಗೆ ಸೋಮವಾರ ಮಧ್ಯಾಹ್ನ 2.45ಕ್ಕೆ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಸಭಾಂಗಣ ಪ್ರವೇಶಿಸಿದ ಯಡಿಯೂರಪ್ಪ 3.30ರವರೆಗೂ ಕಟಕಟೆಯಲ್ಲಿ ನಿಂತಿದ್ದರು.

ಅನಾರೋಗ್ಯದಿಂದ ಕಳೆದ ಶನಿವಾರ ನ್ಯಾಯಾಲಯಕ್ಕೆ ಗೈರು ಹಾಜರಾಗಿದ್ದ ಯಡಿಯೂರಪ್ಪ, ಆ ದಿನದ ಮಟ್ಟಿಗೆ  ಖುದ್ದು ಹಾಜರಿಯಿಂದ ವಿನಾಯಿತಿ ಪಡೆದಿದ್ದರು. ಆದರೆ ಸೋಮವಾರ ಖುದ್ದು ಹಾಜರಿರುವಂತೆ ನ್ಯಾಯಾಲಯ ಆದೇಶಿಸಿದ್ದರಿಂದ ಕೋರ್ಟ್ ಮೆಟ್ಟಿಲೇರುವುದು ಅನಿವಾರ್ಯವಾಗಿತ್ತು.

45 ನಿಮಿಷ...
ಸೋಮವಾರ ಮಧ್ಯಾಹ್ನ 3 ಗಂಟೆಗೆ ವಿಚಾರಣೆಗೆ ಸಮಯ ನಿಗದಿಯಾಗಿತ್ತು. ಆದರೆ ಯಡಿಯೂರಪ್ಪ, ಅವರ ಇಬ್ಬರು ಪುತ್ರರು ಮತ್ತು ಅಳಿಯ 15 ನಿಮಿಷ ಮೊದಲೇ ನ್ಯಾಯಾಲಯಕ್ಕೆ ಬಂದು ಕಟಕಟೆಯಲ್ಲಿ ನಿಂತಿದ್ದರು. ಮೂರು ಗಂಟೆಗೆ ವಿಚಾರಣೆ ಆರಂಭಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಅವರು 3.30ರವರೆಗೆ ಎರಡೂ ಪ್ರಕರಣಗಳ ವಿಚಾರಣೆ ನಡೆಸಿದರು. ಇದಾದ ನಂತರ ಯಡಿಯೂರಪ್ಪ ಮತ್ತು ಅವರ ಕುಟುಂಬದವರು ನ್ಯಾಯಾಲಯದಿಂದ ಹೊರನಡೆದರು.

ನ್ಯಾಯಾಧೀಶರು ಕೋರ್ಟ್ ಪ್ರವೇಶಿಸುತ್ತಿದ್ದಂತೆಯೇ ಕೈಮುಗಿದು ನಮಸ್ಕರಿಸಿದ ಯಡಿಯೂರಪ್ಪ ಅರ್ಧ ಗಂಟೆ ಸುಮ್ಮನೆ ನಿಂತಿದ್ದರು. ನಂತರ ಹೊರಡುವಾಗಲೂ ನಮಸ್ಕರಿಸಿದರು. ನ್ಯಾಯಾಧೀಶರು ಆಗಮಿಸುವುದಕ್ಕೂ ಮೊದಲು 15 ನಿಮಿಷ ನಿಂತಿದ್ದಾಗಲೂ ಅವರ ಮುಖದಲ್ಲಿ ನಗು ಇರಲಿಲ್ಲ. ಅವರ ಪುತ್ರರ ಮುಖದಲ್ಲಿ ಬೇಸರ ಎದ್ದು ಕಾಣುತ್ತಿತ್ತು.

ಸೋಮವಾರ ಬೆಳಿಗ್ಗೆ ಹೈಕೋರ್ಟ್ ಕಲಾಪ ಆರಂಭವಾಗುತ್ತಿದ್ದಂತೆಯೇ ಯಡಿಯೂರಪ್ಪ ಅವರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಲ್.ನಾರಾಯಣ ಸ್ವಾಮಿ ವಜಾ ಮಾಡಿದರು. ಇದಾದ ಕೆಲವೇ ನಿಮಿಷಗಳಲ್ಲಿ ಲೋಕಾಯುಕ್ತ ವರದಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಯಡಿಯೂರಪ್ಪ ವಾಪಸ್ ಪಡೆದರು.

ಬಾಷಾ ಸಲ್ಲಿಸಿರುವ ಮೂರನೇ ಖಾಸಗಿ ದೂರಿನ ಪ್ರಕರಣದ ವಿಚಾರಣೆಗಾಗಿ ಯಡಿಯೂರಪ್ಪ, ಅವರ ಇಬ್ಬರು ಪುತ್ರರು ಮತ್ತು ಅಳಿಯ ಸೋಮವಾರ ಮಧ್ಯಾಹ್ನ 12ಕ್ಕೆ ಲೋಕಾಯುಕ್ತ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಬೇಕಿತ್ತು. ಆದರೆ ಮಧ್ಯಾಹ್ನ ಮತ್ತೊಂದು ಪ್ರಕರಣ ಇರುವ ಹಿನ್ನೆಲೆಯಲ್ಲಿ ತಮ್ಮ ಕಕ್ಷಿದಾರರು ಮಧ್ಯಾಹ್ನ ಹಾಜರಾಗಲಿದ್ದಾರೆ. ಇದಕ್ಕೆ ಅನುಮತಿ ನೀಡಬೇಕು ಎಂದು ವಕೀಲ ರವಿ.ಬಿ.ನಾಯ್ಕ ನ್ಯಾಯಾಲಯಕ್ಕೆ  ಮನವಿ ಮಾಡಿದರು.

ಇದಕ್ಕೆ ಒಪ್ಪಿಗೆ ಸೂಚಿಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ಪ್ರಕರಣದ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿದರು. ಮಧ್ಯಾಹ್ನ ಮೂರು ಗಂಟೆಗೆ ಎರಡನೇ ದೂರಿನ ವಿಚಾರಣೆ ಆರಂಭಿಸಿದ ಸುಧೀಂದ್ರ ರಾವ್, ಪ್ರಕರಣದ ಎಲ್ಲ ಆರೋಪಿಗಳು ಹಾಜರಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳುತ್ತಿದ್ದಂತೆಯೇ, ಯಡಿಯೂರಪ್ಪ ಪರ ವಕೀಲ ರವಿ ಬಿ.ನಾಯ್ಕ ಅವರು ಆರೋಪಿಗಳ ಪರವಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಹಿಂದಕ್ಕೆ
ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಜುಲೈ 27ರಂದು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಸಲ್ಲಿಸಿರುವ ಅರ್ಜಿಯನ್ನು ಸೋಮವಾರ ಹಿಂದಕ್ಕೆ ಪಡೆದುಕೊಳ್ಳಲಾಯಿತು.

ಈ ವರದಿಯ ಆಧಾರದ ಮೇಲೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳದೇ ಇರುವಾಗ ಅರ್ಜಿಯನ್ನು ಸಲ್ಲಿಸಿರುವುದು ಏತಕ್ಕೆ ಎಂದು ನ್ಯಾಯಮೂರ್ತಿ ಕೆ.ಎಲ್.ಮಂಜುನಾಥ ನೇತೃತ್ವದ ವಿಭಾಗೀಯ ಪೀಠ ಪ್ರಶ್ನಿಸಿತು. ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ಹಿಂದಕ್ಕೆ ಪಡೆಯುವುದಾಗಿ ಯಡಿಯೂರಪ್ಪನವರ ಪರ ವಕೀಲ ರವಿ ಬಿ. ನಾಯ್ಕ ಹೇಳಿದರು. ಇದಕ್ಕೆ ಪೀಠ ಅನುಮತಿ ನೀಡಿತು.

ಈ ವರದಿಯ ಅನ್ವಯ ಏನಾದರೂ ಪ್ರಶ್ನೆ ಉದ್ಭವಿಸಿದರೆ ಕೋರ್ಟ್‌ಗೆ ಅರ್ಜಿ ಸಲ್ಲಿಸಲು ತಮಗೆ ಅನುಮತಿ ನೀಡಬೇಕು ಎಂದು ವಕೀಲರು ಮೌಖಿಕವಾಗಿ ಮಾಡಿಕೊಂಡ ಮನವಿಯನ್ನು ಪೀಠ ತಿರಸ್ಕರಿಸಿತು. ಲೋಕಾಯುಕ್ತರು ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಅನೂರ್ಜಿತಗೊಳಿಸಬೇಕು ಎನ್ನುವುದು ಯಡಿಯೂರಪ್ಪನವರ ಮನವಿಯಾಗಿತ್ತು.

ಇದಕ್ಕೆ ಸಮ್ಮತಿಸಿದ ನ್ಯಾಯಾಧೀಶರು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿದರು.
ಯಡಿಯೂರಪ್ಪ ವಿರುದ್ಧ ದೂರು ದಾಖಲಿಸಿರುವ ಸಿರಾಜಿನ್ ಬಾಷಾ ಪರವಾಗಿ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ವಾದ ಮಾಡುವುದು ಸರಿಯಲ್ಲ, ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ನೇಮಕ ಮಾಡಬೇಕು ಎಂದು ಯಡಿಯೂರಪ್ಪ ಪರ ವಕೀಲ ರವಿ ಬಿ.ನಾಯ್ಕ ವಾದಿಸಿದರೆ, `ಇದು ಖಾಸಗಿ ದೂರು ಆಗಿರುವುದರಿಂದ ಪಬ್ಲಿಕ್ ಪ್ರಾಸಿಕ್ಯೂಟರ್ ಅಗತ್ಯವಿಲ್ಲ. ನಾವೇ ವಾದ ಮಾಡುತ್ತೇವೆ~ ಎಂದು ಸಿ.ಎಚ್.ಹನುಮಂತರಾಯ ತಿಳಿಸಿದರು.

ಎರಡೂ ಕಡೆಯ ಅಭಿಪ್ರಾಯಗಳನ್ನು ಆಲಿಸಿದ ನ್ಯಾಯಾಧೀಶರು, ಸಿಆರ್‌ಪಿಸಿಯ 24ನೇ ಸೆಕ್ಷನ್ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಸೆಕ್ಷನ್ 24 ಸೇರಿದಂತೆ ವಿವಿಧ ಸೆಕ್ಷನ್‌ಗಳನ್ನು ಪರಿಶೀಲಿಸಿ ಸೂಕ್ತ ತೀರ್ಪು ನೀಡುವುದಾಗಿ ತಿಳಿಸಿದರು. ವಿಚಾರಣೆ ಸಂದರ್ಭದಲ್ಲಿ ಸುಮಾರು 400 ವಕೀಲರು ಸೇರಿದ್ದರಿಂದ ಸಭಾಂಗಣದಲ್ಲಿ ಹೆಜ್ಜೆ ಇಡಲೂ ಸ್ಥಳವಿರಲಿಲ್ಲ.

ಎರಡನೇ ಖಾಸಗಿ ದೂರು: ಬೆಂಗಳೂರಿನ ಅರಕೆರೆ, ದೇವರಚಿಕ್ಕನಹಳ್ಳಿ ಮತ್ತು ಗೆದ್ದಲಹಳ್ಳಿಯಲ್ಲಿ ಬಿಡಿಎ ಸ್ವಾಧೀನಪಡಿಸಿಕೊಂಡಿದ್ದ ಭೂಮಿಯ `ಡಿನೋಟಿಫಿಕೇಷನ್~ಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು ಯಡಿಯೂರಪ್ಪ ಮೊದಲ ಆರೋಪಿ. ಶಿವಮೊಗ್ಗ ತಾಲ್ಲೂಕಿನ ಕುಂಸಿ ಹೋಬಳಿಯ ಎನ್.ಅಕ್ಕಮಹಾದೇವಿ, ಹೊನ್ನಾಳಿ ಪಟ್ಟಣದ ಎನ್.ಎಸ್.ಮಹಾಬಲೇಶ್ವರ, ಬೆಂಗಳೂರಿನ ಬಿಟಿಎಂ ಬಡಾವಣೆಯ ಸತ್ಯಕುಮಾರಿ, ದೊಮ್ಮಲೂರಿನ ಮೋಹನ್ ರಾಜ್, ಜೆ.ಪಿ.ನಗರ ಮೂರನೇ ಹಂತದ ವಿ.ಪ್ರಕಾಶ್, ದೇವರಚಿಕ್ಕನಹಳ್ಳಿಯ ಕಾಮಾಕ್ಷಮ್ಮ, ಶಿವಮೊಗ್ಗ ತಾಲ್ಲೂಕಿನ ಕುಂಸಿಯ ಎಂ.ಮಂಜುನಾಥ್, ಬೆಂಗಳೂರಿನ ಜಯನಗರ 4ನೇ `ಟಿ~ ಬ್ಲಾಕ್‌ನ ವಿ.ಅನಿಲ್‌ಕುಮಾರ್, ಬನಶಂಕರಿ ಎರಡನೇ ಹಂತದ ಬಿ.ರಮೇಶ್, ಗೆದ್ದಲಹಳ್ಳಿಯ ಶಾಂತಾ ದೇವಿ, ಕೆ.ಶಿವಪ್ಪ ಇತರ ಆರೋಪಿಗಳಾಗಿದ್ದಾರೆ.

ಸಿನಿಮಾ ನೋಡಿದ ಯಡಿಯೂರಪ್ಪ
ಜಿಂದಗಿ ನಾ ಮಿಲೇಗಿ ದುಬಾರಾ...!
ಡಿನೋಟಿಫಿಕೇಷನ್ ಹಗರಣ ಸಂಬಂಧ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೋಮವಾರ ಸಂಜೆ ವೀಕ್ಷಿಸಿದ ಚಿತ್ರ `ಜಿಂದಗಿ ನಾ ಮಿಲೇಗಿ ದುಬಾರಾ~ (ಜೀವನ ಇನ್ನೊಮ್ಮೆ ಸಿಗಲಾರದು).

ಹೃತಿಕ್ ರೋಷನ್ ಅಭಿನಯದ ಈ ಚಿತ್ರವನ್ನು ಯಡಿಯೂರಪ್ಪ ಅವರು ತಮ್ಮ ಪುತ್ರರು, ಪುತ್ರಿ ಮತ್ತು ಮೊಮ್ಮಕ್ಕಳ ಜೊತೆ ನಗರದ ಮಲ್ಟಿಪ್ಲೆಕ್ಸ್ ಚಿತ್ರಮಂದಿರದಲ್ಲಿ ವೀಕ್ಷಿಸಿದರು.

`ಆದೇಶಕ್ಕೆ ತಲೆಬಾಗುವೆ~: ಇದಕ್ಕೂ ಮೊದಲು ನ್ಯಾಯಾಲಯದಲ್ಲಿ ವಿಚಾರಣೆ ಮುಂದೂಡಿದ ನಂತರ ಯಡಿಯೂರಪ್ಪ ಅವರು ಅಲ್ಲಿಂದ ನೇರವಾಗಿ ತಮ್ಮ ನಿವಾಸಕ್ಕೆ ತೆರಳಿದರು. ಅಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ನ್ಯಾಯಾಲಯ ನೀಡುವ ಆದೇಶಕ್ಕೆ ತಲೆಬಾಗುವೆ~ ಎಂದರು.



ಮತ್ತೊಂದು ದೂರು: ಅಗರ ಗ್ರಾಮದಲ್ಲಿ 2.5 ಎಕರೆ, ಉತ್ತರಹಳ್ಳಿಯಲ್ಲಿ 10 ಎಕರೆ ಡಿನೋಟಿಫಿಕೇಷನ್ ಮತ್ತು ಆನೇಕಲ್ ತಾಲ್ಲೂಕಿನಲ್ಲಿ 380 ಎಕರೆ ಕೃಷಿ ಭೂಮಿಯನ್ನು ವಸತಿ ಉದ್ದೇಶಕ್ಕೆ ಪರಿವರ್ತನೆ ಮಾಡಿ ಕೃಷ್ಣಯ್ಯ ಶೆಟ್ಟಿ, ಹೇಮಚಂದ್ರ ಸಾಗರ್ ಅವರಿಗೆ ಅನುಕೂಲ ಮಾಡಿಕೊಟ್ಟು ಧವಳಗಿರಿ ಪ್ರಾಪರ್ಟಿ ಡೆವಲಪರ್ಸ್, ಭಗತ್ ಹೋಮ್ಸಗೆ ಆರ್ಥಿಕ ನೆರವು ಪಡೆದಿರುವ ಪ್ರಕರಣದ ವಿಚಾರಣೆಯೂ ಸೋಮವಾರ ನಡೆಯಿತು.

ಯಡಿಯೂರಪ್ಪ ಅವರ ಇಬ್ಬರು ಪುತ್ರರು, ಅಳಿಯ ಸೋಹನ್‌ಕುಮಾರ್, ಶಾಸಕರಾದ ಡಾ.ಡಿ.ಹೇಮಚಂದ್ರ ಸಾಗರ್, ಎಸ್.ಎನ್.ಕೃಷ್ಣಯ್ಯ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ ಒಡೆತನದ ಬಾಲಾಜಿ ಕೃಪ ಎಂಟರ್‌ಪ್ರೈಸಸ್ ಮೊದಲಾದವರು ಇರುವ  ಈ ಪ್ರಕರಣದಲ್ಲೂ ಆರೋಪಿಗಳ ಪರ ಜಾಮೀನು ಕೋರಿದ  ಅರ್ಜಿಯ  ವಿಚಾರಣೆ ಸಹ ಸೆಪ್ಟೆಂಬರ್   7ರಂದೇ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT