ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡಕ್ಕೆ ಅಧಿಕಾರಿಗಳ ಕಿತ್ತಾಟ

Last Updated 22 ಜೂನ್ 2011, 5:50 IST
ಅಕ್ಷರ ಗಾತ್ರ

ಸಿದ್ದಾಪುರ:  ಪಟ್ಟಣದಲ್ಲಿರುವ ಹಳೆಯ ಕಟ್ಟಡವೊಂದು ಸರ್ಕಾರಿ ಇಲಾಖೆಗಳ ಅಧಿಕಾರಿಗಳ ನಡುವೆ  ವೈಮನಸ್ಸು  ಬೆಳೆಯುವಂತೆ ಮಾಡಿದೆ.

ಈ ಕಟ್ಟಡದ ಮಾಲೀಕತ್ವ ಆರೋಗ್ಯ ಇಲಾಖೆಯದ್ದಾಗಿದ್ದರೇ ವಾಸ್ತವ್ಯ ಜಿ.ಪಂ. ಎಂಜನಿಯರಿಂಗ್ ಇಲಾಖೆ ಯದ್ದು. ಹೀಗಾಗಿ ಕಟ್ಟಡದ ಬಗ್ಗೆ ಈ ಎರಡೂ ಇಲಾಖೆಗಳು ತೀವ್ರ ಸೆಣೆಸಾಟಕ್ಕೆ ಇಳಿದುಬಿಟ್ಟಿವೆ.  ಸುಮಾರು 24 ವರ್ಷಗಳ ಹಿಂದೆ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆ ಇದೇ ಕಟ್ಟಡದಲ್ಲಿತ್ತು. 1987ರಲ್ಲಿ ಸ್ಥಳೀಯ ನೆಹರೂ ಮೈದಾನದ ಪಕ್ಕದಲ್ಲಿ ಆಸ್ಪತ್ರೆಗಾಗಿ ನೂತನ ಕಟ್ಟಡ ನಿರ್ಮಾಣವಾದ ಬಳಿಕ ತಾಲ್ಲೂಕು ಆಸ್ಪತ್ರೆ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಆ ನಂತರ ಜಿ.ಪಂ. ಎಂಜನಿಯರಿಂಗ್ ಇಲಾಖೆ ಖಾಲಿಯಿದ್ದ `ಹಳೆಯ ಆಸ್ಪತ್ರೆಯ ಕಟ್ಟಡ~ವನ್ನು ತನ್ನ ಕಚೇರಿಯನ್ನಾಗಿಸಿ ಕೊಂಡಿತು.

ಎರಡು ದಶಕಗಳಿಂದ ಆಸ್ಪತ್ರೆಯ ಕಟ್ಟಡದಲ್ಲಿಯೇ ನೆಮ್ಮದಿಯಾಗಿದ್ದ ಜಿ.ಪಂ. ಎಂಜನಿಯರಿಂಗ್ ಇಲಾಖೆಗೆ ಕಳೆದವಾರ ಅಚ್ಚರಿ ಕಾದಿತ್ತು. ಸ್ಥಳೀಯ ತಾಲ್ಲೂಕು ಆಸ್ಪತ್ರೆಯ ಅಧಿಕಾರಿಗಳು, `ತಕ್ಷಣದಲ್ಲಿ ನಮ್ಮ ಕಟ್ಟಡವನ್ನು ನಮಗೆ ಬಿಡಿ~ ಎಂದು ಆಗ್ರಹಿಸಿದಾಗ ಎಂಜನಿಯರಿಂಗ್ ಇಲಾಖೆಯ ಸಿಬ್ಬಂದಿ ದಂಗಾದರು.

`ಈಗ ಪಟ್ಟಣದ ತಾಲ್ಲೂಕು ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ   ಪರಿವರ್ತನೆ ಮಾಡ ಲಾಗಿದೆ.  ಕಟ್ಟಡ ಮಾತ್ರ 30 ಹಾಸಿಗೆ ಗಳ ಸೌಲಭ್ಯಕ್ಕೆ ತಕ್ಕದ್ದಾಗಿದೆ. ಪ್ರಸ್ತುತ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಪ್ರತ್ಯೇಕ ಕಚೇರಿ ಮಾಡಬೇಕಾಗಿದೆ. ಎಚ್‌ಐವಿ ತಪಾಸಣೆ ಘಟಕ  ತೆರೆಯಬೇಕಾಗಿದೆ.

ಈ ಹಿಂದೆ  ಕೇವಲ 4 ನಾಲ್ವರು  ವೈದ್ಯರಿದ್ದರು. ಈಗ ಸಂಖ್ಯೆ 11ಕ್ಕೇರಿದೆ. ಸಿಬ್ಬಂದಿಯ ಸಂಖ್ಯೆ 29 ಇದ್ದುದು 64ಕ್ಕೆ ಹೆಚ್ಚಾಗಿದೆ.  ಇದಕ್ಕೆಲ್ಲ  ಹೆಚ್ಚಿನ ಸ್ಥಳಾವಕಾಶದ ಅಗತ್ಯವಿದೆ. ಆದ್ದರಿಂದ ನಮ್ಮದೇ ಕಟ್ಟಡವನ್ನು ನಾವು ಕೇಳುತ್ತಿದ್ದೇವೆ~ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ನಂಜುಂಡಯ್ಯ ತಮ್ಮ ಕ್ರಮಕ್ಕೆ ಸಮರ್ಥನೆ ನೀಡುತ್ತಾರೆ.

`ಇಷ್ಟು ವರ್ಷಗಳಿಂದ ನಮ್ಮ ಕಟ್ಟಡದಲ್ಲಿರುವ ಜಿ.ಪಂ. ಎಂಜನಿಯರಿಂಗ್ ಇಲಾಖೆಯವರು ತಮ್ಮದೇ ಕಟ್ಟಡ ಹೊಂದಲು ಯಾಕೆ ಪ್ರಯತ್ನ ಮಾಡಲಿಲ್ಲ? ಎಂದೂ ಅವರು ಪ್ರಶ್ನೆ ಮಾಡುತ್ತಾರೆ.

ಈ ಕಟ್ಟಡವನ್ನು ತಕ್ಷಣ ಬಿಡದಿರುವುದಕ್ಕೂ ಕಾರಣ ನೀಡುವ ಜಿ.ಪಂ. ಎಂಜನಿಯರಿಂಗ್ ಇಲಾಖೆಯ ಅಧಿಕಾರಿಗಳು, `ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಪತ್ರ ವ್ಯವಹಾರ ನಡೆಸಿದ್ದೇವೆ~  ಎನ್ನುತ್ತಾರೆ.

`ಆದರೂ ಸರ್ಕಾರದ ಆದೇಶ ಬಂದರೆ ತಕ್ಷಣ ಬಿಟ್ಟು ಕೊಡುತ್ತೇವೆ. ಲಿಖಿತ ಆದೇಶವಿಲ್ಲದೇ ಕಟ್ಟಡ ಬಿಟ್ಟುಕೊಡಿ ಎಂದರೆ ಹೇಗೆ? ಈ ಕಟ್ಟಡದ ನಿರ್ವಹಣೆಗಾಗಿ ಪ್ರತಿವರ್ಷವೂ ಸುಮಾರು ಒಂದರಿಂದ ಒಂದೂವರೆ ಲಕ್ಷ ರೂಪಾಯಿಗಳನ್ನು ನಾವು ವೆಚ್ಚ ಮಾಡಿದ್ದೇವೆ. ನಮ್ಮ ನಿರ್ವಹಣೆ ಇರದಿದ್ದರೇ ಈ ಕಟ್ಟಡ ಉಳಿಯುತ್ತಿರಲಿಲ್ಲ. ನಮಗೆ ಪರ್ಯಾಯ ವ್ಯವಸ್ಥೆ ಆಗದೇ ನಾವು ಕಚೇರಿ ಖಾಲಿ ಮಾಡಲು ಅಸಾಧ್ಯ~ ಎನ್ನುತ್ತಾರೆ ಜಿ.ಪಂ. ಸಹಾಯಕ ಕಾರ್ಯನಿರ್ವಾಹಕ ಎಂಜನಿಯರ್ ಮಾಳೋದೆ.

ಆರೋಗ್ಯ ಇಲಾಖೆ ಮತ್ತು ಜಿ.ಪಂ. ಎಂಜನಿಯರಿಂಗ್ ಇಲಾಖೆಯ ನಡುವಿನ ತಿಕ್ಕಾಟ ಈಚೆಗೆ  ತಾಲ್ಲೂಕು ಆರೋಗ್ಯ ಸಮಿತಿಯ ಸಭೆಯಲ್ಲಿ ಬಹಿರಂಗಗೊಂಡಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಉಪಸ್ಥಿತರಿದ್ದ ಈ ಸಭೆಯಲ್ಲಿ ಎರಡೂ ಇಲಾಖೆಗಳ ಅಧಿಕಾರಿಗಳು ತಮ್ಮದೇ ವಾದಕ್ಕೆ ಬದ್ಧರಾಗಿ ಮಾತನಾಡಿದ್ದರಿಂದ ಸಮಸ್ಯೆಗೆ ಪರಿಹಾರ ಸಾಧ್ಯವಾಗಲಿಲ್ಲ. `ಜಿ.ಪಂ. ಎಂಜನಿಯರಿಂಗ್  ಕಚೇರಿಗೆ ಬಾಡಿಗೆ ಕಟ್ಟಡ ಸಿಗುವವರೆಗೆ ಅವರ ಕಾರ್ಯಾಲಯ ಅದೇ ಕಟ್ಟಡದಲ್ಲಿರಲಿ~ ಎಂದು ಸಚಿವರು ಕೊನೆಯಲ್ಲಿ ಸೂಚನೆ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT