ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡಕ್ಕೆ ಶಂಕುಸ್ಥಾಪನೆಯ ನೆನಪು

Last Updated 15 ಫೆಬ್ರುವರಿ 2012, 8:45 IST
ಅಕ್ಷರ ಗಾತ್ರ

 ಗಂಗಾವತಿ: ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಕ್ಷದಲ್ಲಿನ ಪ್ರಭಾವಿ ನಾಯಕ ಮತ್ತು ಸಚಿವರಲ್ಲೊಬ್ಬರಾದ ವಿ.ಎಸ್. ಆಚಾರ್ಯ ಅವರಿಗೂ ಕೊಪ್ಪಳ ಜಿಲ್ಲೆ ಅದರಲ್ಲೂ ಗಂಗಾವತಿಗೂ ವಿಶೇಷ ನಂಟು.

ಕೊಪ್ಪಳ ಜಿಲ್ಲೆಯಲ್ಲಿ ಜಿಲ್ಲಾ ಕೇಂದ್ರ ಹಿಂದಿಕ್ಕಿ ನಾಗಲೋಟದಲ್ಲಿ ಮುಂದುವರೆಯುತ್ತಿರುವ ವಾಣಿಜ್ಯ ನಗರಿ ಗಂಗಾವತಿಯಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜು ಆರಂಭವಾಗಬೇಕೆಂಬ ಜನತೆಯ ಬಹು ದಿನಗಳ ಕನಸ್ಸು ಸಾಕಾರಗೊಳಿಸಿದವರು ವಿ.ಎಸ್. ಆಚಾರ್ಯ.

ಕೇವಲ ಆಡಳಿತಾತ್ಮಕ ಒಪ್ಪಿಗೆ ಮಾತ್ರವಲ್ಲ, ಹಣಕಾಸಿನ ಮಂಜೂರಾತಿಗೂ ಸಂಪುಟದಲ್ಲಿ ಒಪ್ಪಿಗೆ ಪಡೆದು ಎಂಜಿನಿಯರಿಂಗ್ ಕಾಲೇಜು ಎಂಬ ಕಲ್ಪನೆಗೆ ಮೂರ್ತ ರೂಪ ಕೊಟ್ಟವರು. ಭತ್ತದ ಕಣಜಕ್ಕೆ ಕಳೆದ ವರ್ಷ ಜುಲೈ 12ರಂದು ಆಚಾರ್ಯ ಕೊನೆಯ ಭೇಟಿ ನೀಡಿದ್ದರು.

ಎಂಜಿನಿಯರಿಂಗ್ ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿದಲ್ಲದೇ ನಗರದ ಐಎಂಎ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಪತ್ರಿಕಾ ದಿನಾಚರಣೆಯ ಅಂಗವಾಗಿ ಪತ್ರಿಕಾ ಭವನದ ಮುಂದೆ ಅವರು ನೆಟ್ಟ ಸಸಿ ಇನ್ನೂ ಹಸಿರಾಗಿಯೇ ಇದೆ.

ನಿಧನಕ್ಕೆ ಗಣ್ಯರ ಕಂಬನಿ: `ವಿ.ಎಸ್. ಆಚಾರ್ಯ ಪಕ್ಷಕ್ಕೆ ಗಟ್ಟಿ ಬೇರಾಗಿ ಸಂಘಟನೆಗೆ ಶ್ರಮಿಸಿದ್ದರು. ಪಕ್ಷದಲ್ಲಿ ಹಿರಿಯ ಉತ್ತಮ ಸಲಹೆಗಾರರಾಗಿ ಸಂಘ ಮತ್ತು ಪಕ್ಷದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು~ ಎಂದು ಸಂಸದ ಎಸ್. ಶಿವರಾಮಗೌಡ ಸಂತಾಪ ಸೂಚಿಸಿದ್ದಾರೆ. 

ನಗರಕ್ಕೆ ಇಂಜಿನಿಯರಿಂಗ್ ಕಾಲೇಜು ಮಂಜೂರಾಗುವಲ್ಲಿ ಆಚಾರ್ಯ ಅವರ ಪಾತ್ರ ಮುಖ್ಯ. ಗಂಗಾವತಿ-ಕೊಪ್ಪಳ ಕ್ಷೇತ್ರಕ್ಕೆ ಉನ್ನತ ಶಿಕ್ಷಣದ ಸೌಲಭ್ಯ ನೀಡುವಲ್ಲಿ ಆಚಾರ್ಯ ಉತ್ಸುಕರಾಗಿದ್ದರು. ಅವರ ಅಗಲಿಕೆ ಭರಿಸಲಾರದ ನಷ್ಟುಂಟು ಮಾಡಿದೆ ಎಂದು ಶಿವರಾಮಗೌಡ ತಿಳಿಸಿದ್ದಾರೆ.

ಶಾಸಕ ಮುನವಳ್ಳಿ:
`ಆಚಾರ್ಯರ ಆಕಸ್ಮಿಕ ನಿಧನ ಅಘಾತ ಉಂಟು ಮಾಡಿದೆ. ಪಕ್ಷಕ್ಕೆ ಮತ್ತು ಸಂಘ ಪರಿವಾರದ ದೊಡ್ಡ ಆಸ್ತಿಯಾಗಿದ್ದರು. ಕರ್ನಾಟಕದಲ್ಲಿ ಬಿಜೆಪಿ ಕಟ್ಟುವಲ್ಲಿ ಆಚಾರ್ಯ ಅವರ ಪಾತ್ರ ಚಿರಸ್ಮರಣೀಯ~ ಎಂದು ಶಾಸಕ ಪರಣ್ಣ ಮುನವಳ್ಳಿ ಸಂತಾಪ ಸೂಚಿಸಿದ್ದಾರೆ.

`ಸುಸಂಸ್ಕೃತ ಹಿನ್ನೆಲೆಯ ಉನ್ನತ ವಿಚಾರಧಾರೆಯ ವ್ಯಕ್ತಿತ್ವ ಹೊಂದಿದ್ದ ಆಚಾರ್ಯ ತಾರತಮ್ಯವಿಲ್ಲದೇ ಕಿರಿಯರಿಗೆ ಮಾರ್ಗದರ್ಶನ ಮಾಡುತ್ತಿದ್ದರು. ಸಾಕಷ್ಟು ವಿಚಾರದಲ್ಲಿ ನನಗೂ ಸಲಹೆ ನೀಡಿದ್ದರು. ಅವರ ವಿಧಿವಶ ತುಂಬಲಾರದ ನಷ್ಟ~ ಎಂದು ಮುನವಳ್ಳಿ ವಿಷಾಧಿಸಿದರು.

ಇಕ್ಬಾಲ್ ಅನ್ಸಾರಿ:
ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರ್ಕಾರದ `20-20~ರ ಮ್ಯಾಚ್‌ನಲ್ಲಿ ಆಚಾರ್ಯ ಒಳ್ಳೆಯ ಬ್ಯಾಟ್ಸ್‌ಮನ್ ಆಗಿದ್ದರು. ಬಿಜೆಪಿಯ ಸಚಿವರಿಗೆ ಹಾಗೂ ಡಿಸಿಎಂ ಆಗಿದ್ದ ಯಡಿಯೂರಪ್ಪ ಅವರಿಗೆ ಆಚಾರ್ಯ ರೈಟ್ ಹ್ಯಾಂಡಾಗಿ ಕೆಲಸ ಮಾಡಿದ್ದರು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೆನಪಿಸಿಕೊಂಡರು.

ವೈದ್ಯಕೀಯ, ಗೃಹ ಮತ್ತು ಉನ್ನತ ಶಿಕ್ಷಣ ಸಚಿವರಾಗಿದ್ದಷ್ಟು ಕಾಲ ಉತ್ತಮ ಕಾರ್ಯ ಮಾಡಿದ್ದಾರೆ. ಸಾಧನೆ ಮಾಡಿಯೂ ಗುರುತಿಸಿಕೊಳ್ಳದವರ ಸಾಲಲ್ಲಿ ಅಚಾರ್ಯ ಮೊದಲಿಗರು ಎಂದು ಆಚಾರ್ಯ ಅವರೊಂದಿಗೆ ಕಳೆದ ದಿನಗಳನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮೆಲಕು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT