ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಲಕಿನಾರೆಯಲ್ಲಿ ಜನಸಾಗರ

Last Updated 24 ಜನವರಿ 2011, 11:25 IST
ಅಕ್ಷರ ಗಾತ್ರ

ಮಂಗಳೂರು: ಪಣಂಬೂರು ಬೀಚ್ ಸಾಗರದತ್ತ ಭಾನುವಾರ ಮಧ್ಯಾಹ್ನದ ಬಿಸಿಲು ಕರಗುತ್ತಿದ್ದಂತೆ ಜನಸಾಗರ ಧಾವಿಸಿತು. ಎಂದಿನ ವಿಹಾರಕ್ಕೆ ಬರುವವರ ಜತೆ ಬೀಚ್ ಉತ್ಸವದ ಕೊನೆಯ ದಿನವಾದ ಭಾನುವಾರ ವಿವಿಧ ಮಾದರಿಯ ಗಾಳಿಪಟಗಳ ಹಾರಾಟ ವೀಕ್ಷಿಸಲು, ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು, ಕರಿದ ಮೀನು ಸವಿಯಲು ಜನರು ತಂಡೋಪತಂಡವಾಗಿ ಬಂದರು.

ಕತ್ತಲು ಕವಿಯುತ್ತಿದ್ದರೂ, ಜನಸಮೂಹ ಒಂದೇಸಮನೆ ಬೀಚ್‌ನತ್ತ ಧಾವಿಸುವುದು ನಿಂತಿರಲಿಲ್ಲ. ಹೀಗಾಗಿ ಪ್ರತಿವರ್ಷದ ಬೀಚ್ ಉತ್ಸವದ ರೀತಿಯಲ್ಲೇ ಪಣಂಬೂರು ಕಡಲ ತೀರ ಸಾವಿರಾರು ಜನರಿಂದ ಗಿಜಿಗುಟ್ಟಿತು. ಸಸ್ಯಾಹಾರಿ, ಮಾಂಸಾಹಾರಿ ಖಾದ್ಯಗಳು, ಐಸ್‌ಕ್ರೀಂ, ಪಾನಿಪುರಿ, ಚುರುಮುರಿ ಪ್ರವಾಸಿಗರ ಹಸಿವನ್ನು ತಣಿಸಿತು. ಮಕ್ಕಳು ಒಂಟೆಸವಾರಿಯ ಮೋಜು ಅನುಭವಿಸಿದರು. ದೋಣಿವಿಹಾರದಲ್ಲಿ ಪಾಲ್ಗೊಂಡು ಖುಷಿಪಟ್ಟರು.

ಅಗಸದಲ್ಲಿ ಹಾರುತ್ತಿದ್ದ ವೈವಿದ್ಯಮಯ ಗಾಳಿಪಟಗಳನ್ನು ನೋಡಿ ಜನರು ಖುಷಿಪಟ್ಟರು. ಹೊರಗೆ ಬರುವ ದಾರಿಯಲ್ಲಿ ಗಾಳಿಪಟಗಳ ಮಾರಾಟವೂ ಪ್ರತಿವರ್ಷದಂತೆ ಭರದಿಂದ ನಡೆಯಿತು.

ಮನೋರಂಜನಾ ವೇದಿಕೆಯ ಕಾರ್ಯಕ್ರಮಗಳೂ ಗಮನ ಸೆಳೆದವು. ಮೈಮ್ ರಾಮದಾಸ್ ‘ಕಡಲಮಗೆ’ ಚಿತ್ರದ ‘ಕಡಲಪರ್ಬಯೇ’ ಹಾಡಿನೊಡನೆ ಕಾರ್ಯಕ್ರಮ ಆರಂಭಿಸಿದರು. ಪ್ರತೀಕ್ಷಾ, ‘ಹೊಸ ಬೆಳಕು’ ಚಿತ್ರದ ‘ತೆರೆದಿದೆ ಮನೆ ಓ ಬಾ ಅತಿಥಿ...’ ಹಾಡಿನ ಮೂಲಕ ಪ್ರೇಕ್ಷಕರನ್ನು ಸ್ವಾಗತಿಸಿದಂತಿತ್ತು. ಮೈಥಿಲಿ ಪೈ ಹಾಡಿದ ಜನಪ್ರಿಯ ಹಿಂದಿ ಚಿತ್ರಗೀತೆ ‘ಮೈ ನೇಮ್ ಈಸ್ ಶೀಲಾ...’ (ತೀಸ್‌ಮಾರ್ ಖಾನ್) ಹಾಡಿನ ನಂತರ ಗಣೇಶ್ ನಾರಾಯಣ್, ಕಿಶೋರ್ ಕುಮಾರ್ ಅವರ ಹಳೆಯ ಗೀತೆಗಳನ್ನು ಹಾಡಿದರು. ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಮತ್ತು ಚೈತ್ರಾ ಅವರ ಕಾರ್ಯಕ್ರಮ ಪ್ರಧಾನ ಆಕರ್ಷಣೆಯಾಗಿತ್ತು.

ಬಹು ನಿರೀಕ್ಷಿತ ಬೀಚ್ ಉತ್ಸವದಲ್ಲಿ ಭಾನುವಾರ ಜಿಲ್ಲಾಧಿಕಾರಿ ಸುಬೋಧ್ ಯಾದವ್, ತಹಸೀಲ್ದಾರ್, ಪೊಲೀಸ್ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು. ಅಲ್ಲಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು.ಕತ್ತಲು ಅದರೆ ಬೀಚ್ ಸನಿಹದಲ್ಲೇ ಬೀದಿ ದೀಪಗಳು ಉರಿಯದೇ ಆ ಪ್ರದೇಶದಲ್ಲಿ ಕತ್ತಲು ಆವರಿಸಿತ್ತು. ಈ ಬಗ್ಗೆ ಕೆಲವರು ದೂರಿದ್ದೂ ಕೇಳಿಸಿತು.

ಹೆಚ್ಚು ಕಾರ್ಯಕ್ರಮ: ಬೀಚ್ ಉತ್ಸವಕ್ಕೆ ಬರುತ್ತಿದ್ದ ಜನಸ್ತೋಮ ನೋಡಿ ಬೆರಗಾದ ಜಿಲ್ಲಾಧಿಕಾರಿ ಸುಬೋಧ್ ಯಾದವ್, ‘ಜನರ ಉತ್ಸಾಹ ಗಮನದಲ್ಲಿಟ್ಟುಕೊಂಡು ಮುಂದಿನ ವರ್ಷದ ಬೀಚ್ ಉತ್ಸವದಲ್ಲಿ ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಯೋಚಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT