ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣಿವೆ ರಾಜ್ಯದಲ್ಲಿ ಬ್ಯಾಂಕಿಂಗ್ ಕ್ಷೇತ್ರಕ್ಕೆ ಮಹಿಳೆಯರ ಲಗ್ಗೆ

Last Updated 4 ಜನವರಿ 2014, 19:30 IST
ಅಕ್ಷರ ಗಾತ್ರ

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಿದ ಬಳಿಕ ಅದರ ಫಲಿತಾಂಶ ನಿಧಾನವಾಗಿ ಈಗ ಹೊರಹೊಮ್ಮುತ್ತಿದೆ. ಕಳೆದ ಕೆಲ ವರ್ಷಗಳಿಂದ ರಾಜ್ಯದ ಬ್ಯಾಂಕುಗಳಲ್ಲಿ ಮಹಿಳೆಯರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದೇ ಇದಕ್ಕೆ ಸಾಕ್ಷಿ.
ರಾಜ್ಯ ಬ್ಯಾಂಕರ್ಸ್ ಸಮಿತಿಯ ಅಂಕಿ ಅಂಶಗಳ ಪ್ರಕಾರ, ಕಳೆದ ಕೆಲ ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸದ್ಯ ರಾಜ್ಯದ ಬ್ಯಾಂಕಿಂಗ್ ವಲಯದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ 25ರಷ್ಟು ಇದೆ.

ಕಳೆದ ಐದು ವರ್ಷಗಳ ಅವಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಯುವತಿಯರು ಬ್ಯಾಂಕಿಂಗ್ ಕ್ಷೇತ್ರಕ್ಕೆ ಲಗ್ಗೆ ಇಟ್ಟಿದ್ದಾರೆ. ರಾಜ್ಯದಲ್ಲಿ ಸದ್ಯ ರಾಜ್ಯ ಹಣಕಾಸು ನಿಗಮ ಮತ್ತು 41 ಬ್ಯಾಂಕುಗಳು ಇದ್ದು, ಇವುಗಳ 1,656 ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

‘ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಹೆಚ್ಚಿನ ವೇತನ ಲಭಿಸುವುದರಿಂದ ಯುವತಿಯರು ದೊಡ್ಡ ಪ್ರಮಾಣದಲ್ಲಿ ಆ ಕಡೆ ಆಕರ್ಷಿತರಾಗುತ್ತಿದ್ದಾರೆ. ಬ್ಯಾಂಕುಗಳ ಶಾಖೆಗಳು ಕೂಡ ನಿರಂತರವಾಗಿ ರಾಜ್ಯದಲ್ಲಿ ಪ್ರಾರಂಭವಾಗುತ್ತಿವೆ. ಮುಂಬರುವ ಕೆಲ ವರ್ಷಗಳವರೆಗೆ ಇದು ಹೀಗೆಯೇ ಮುಂದುವರಿಯಲಿದೆ’ ಎನ್ನುತ್ತಾರೆ ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಉದ್ಯಮ ಮತ್ತು ಹಣಕಾಸು ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಖುರ್ಷಿದ್ ಅಲಿ.

‘ಈ ಬೆಳವಣಿಗೆ ಕಾಶ್ಮೀರಿಯರಲ್ಲಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಇದು ಮುಂಬರುವ ದಿನಗಳಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಗಲಿದೆ. ಇಷ್ಟಾದರೂ, ನಮ್ಮ ಸಮಾಜ ಮಹಿಳೆಯರು ಪ್ರಭಾವಿ ಹುದ್ದೆಗಳನ್ನು ಹೊಂದುವುದರ ಬಗ್ಗೆ ಮುಕ್ತ ಮನಸ್ಸು ಹೊಂದದೇ ಇರುವುದು ದುರದೃಷ್ಟಕರ’ ಎಂದು ಕಾಶ್ಮೀರ ವಿ.ವಿಯಲ್ಲೇ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ. ಬಶೀರ್ ಅಹಮ್ಮದ್‌ ದಬ್ಲಾ ಅವರು ಹೇಳುತ್ತಾರೆ.

‘ಇದು ತಡವಾಗಿ ಆರಂಭವಾದ ಉತ್ತಮ ಪ್ರಕ್ರಿಯೆಯಾಗಿದೆ. ಈಗ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸಲು ಮುಂದೆ ಬರುತ್ತಿರುವುದು ಒಳ್ಳೆಯ ಸಂಗತಿ. ಶಿಕ್ಷಣ ಪಡೆದ ಯುವತಿಯರು ಉದ್ಯೋಗ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಬಹುತೇಕರ ಆಯ್ಕೆ ಬ್ಯಾಂಕಿಂಗ್‌ ಕ್ಷೇತ್ರವಾಗಿದೆ. ರಾಜ್ಯದ ಒಳಗಡೆಯೇ ಕಾರ್ಯನಿರ್ವಹಿಸಲು ಬ್ಯಾಂಕುಗಳು ಅನುವು ಮಾಡಿಕೊಡುತ್ತಿರುವುದು ಕೂಡ ಇದಕ್ಕೆ ಇನ್ನೊಂದು ಕಾರಣ’ ಎನ್ನುತ್ತಾರೆ ದಬ್ಲಾ.

ಈ ಎಲ್ಲ ಬೆಳವಣಿಗೆಯ ಮಧ್ಯೆಯೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಲಿಂಗ ತಾರತಮ್ಯ ಇದೆ. ನಗರ ಪ್ರದೇಶಗಳಿಗೆ ಹೋಲಿಸಿದರೆ ಗ್ರಾಮಾಂತರ ಭಾಗದಲ್ಲಿ ಇದು ಹೆಚ್ಚಿನ ಪ್ರಮಾಣದಲ್ಲಿದೆ. ಶಾಲೆಗಳು ಇಲ್ಲದೇ ಇರುವುದು ಮತ್ತು ಅಭದ್ರತೆಯ ಕಾರಣಕ್ಕೆ ಪೋಷಕರು ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವುದು, ಕೃಷಿ ಹಾಗೂ ಇತರ ಗೃಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದು ಸೇರಿದಂತೆ ವಿವಿಧ ಅಂಶಗಳೇ ಇದಕ್ಕೆ ಕಾರಣ ಎಂದು ಅವರು ವಿವರಿಸುತ್ತಾರೆ.

‘ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿಗಳಿಗೆ ಕಾಶ್ಮೀರದಲ್ಲಿ ಅವಕಾಶಗಳು ವಿರಳಾತಿ ವಿರಳ. ಬ್ಯಾಂಕಿನಲ್ಲಿ ಉದ್ಯೋಗಕ್ಕೆ ಸೇರುವುದು ಬಿಟ್ಟರೆ ನನ್ನ ಮುಂದೆ ಬೇರೆ ಆಯ್ಕೆಯೇ ಇರಲಿಲ್ಲ’ ಎಂದು ಎರಡು ವರ್ಷಗಳ ಹಿಂದೆ ಬ್ಯಾಂಕಿನಲ್ಲಿ ನೌಕರಿಗೆ ಸೇರಿದ (ಎಂಬಿಎ ವಿದ್ಯಾರ್ಥಿನಿ) ರುಹಿಲಾ ಅವರ ಮಾತಿದು.

2011ರ ಜನಗಣತಿ ಪ್ರಕಾರ, ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಾಕ್ಷರತೆ ಪ್ರಮಾಣ ಶೇ. 13ರಷ್ಟು ಹೆಚ್ಚಾಗಿದೆ
(ಶೇ 55ರಿಂದ ಶೇ 68ಕ್ಕೆ ಏರಿಕೆ). ಮಹಿಳೆಯರ ಸಾಕ್ಷರತೆ ಮಟ್ಟ ಶೇ 42.22ರಿಂದ ಶೇ 58.01ಕ್ಕೆ ಏರಿಕೆಯಾಗಿದೆ. ಈ ಎಲ್ಲ ಬೆಳವಣಿಗೆಗಳ ಹೊರತಾಗಿಯೂ ರಾಜ್ಯದಲ್ಲಿ ಮಹಿಳೆಯರ ನಿರುದ್ಯೋಗ ಸಮಸ್ಯೆ ಪೂರ್ಣ ಪ್ರಮಾಣದಲ್ಲಿ ನೀಗಿಲ್ಲ.

ಅಧಿಕೃತ ಅಂಕಿ ಅಂಶಗಳ ಪ್ರಕಾರ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರ ಪಾಲು ಅರ್ಧದಷ್ಟಿದೆ. ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಶೇ 3ಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ಮಹಿಳೆಯರಿದ್ದಾರೆ. ಕಾಶ್ಮೀರ ಆಡಳಿತ ಸೇವೆಯಲ್ಲಿ (ಕೆಎಎಸ್) ಶೇ 12ರಷ್ಟಿದ್ದಾರೆ.  ರಾಜ್ಯ ಪೊಲೀಸ್ ಗೆಜೆಟೆಡ್‌ ಸೇವೆಯಲ್ಲಿ (ಕೆಪಿಎಸ್) ಈ ಪ್ರಮಾಣ ಕೇವಲ ಶೇ 3ರಷ್ಟು. ಕೆಎಎಸ್‌ ಹಿರಿಯ ಶ್ರೇಣಿ ವಿಭಾಗದಲ್ಲಿ ಮಹಿಳಾ ಅಧಿಕಾರಿಗಳ ಸಂಖ್ಯೆ
ಶೇ 12.3ರಷ್ಟು ಮತ್ತು ಕಿರಿಯರ ವಿಭಾಗದಲ್ಲಿ ಈ ಪ್ರಮಾಣ ಶೇ 11.87ರಷ್ಟಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ, ಅಂದರೆ ಶೇ 52ರಷ್ಟು ಸ್ತ್ರೀಯರಿದ್ದಾರೆ. ನಂತರದ ಸ್ಥಾನ ಸಮಾಜ ಕಲ್ಯಾಣ ಇಲಾಖೆಯದು. ಅಲ್ಲಿ ಶೇ 48.87ರಷ್ಟು ಮಹಿಳಾ ಉದ್ಯೋಗಿಗಳಿದ್ದಾರೆ. ಪ್ರಾಥಮಿಕ ಶಿಕ್ಷಣ ಇಲಾಖೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಶೇ. 30ರಷ್ಟಿದ್ದರೆ, ಉನ್ನತ ಶಿಕ್ಷಣದಲ್ಲಿ
ಶೇ. 41ರಷ್ಟಿದೆ.

ಮಹಿಳೆಯರ ಸಬಲೀಕರಣದ ಪ್ರಶ್ನೆ ಬಂದಾಗ ಅದರ ಶ್ರೇಯ ನ್ಯಾಷನಲ್ ಕಾನ್ಫರೆನ್ಸ್‌ಗೆ (ಎನ್.ಸಿ) ಸಲ್ಲಬೇಕು ಎಂದು ಹೇಳುವ ಮೂಲಕ ರಾಜ್ಯದ ಹಣಕಾಸು ಸಚಿವ ಅಬ್ದುಲ್ ರಹೀಮ್ ಅವರು ತಮ್ಮ ಬೆನ್ನು ತಟ್ಟಿಕೊಳ್ಳುತ್ತಾರೆ. ‘ಸದ್ಯ ಕೇಂದ್ರದಲ್ಲಿ ನವೀಕರಿಸಬಹುದಾದ ಇಂಧನ ಖಾತೆ ಸಚಿವರಾಗಿರುವ ಡಾ. ಫಾರೂಕ್ ಅಬ್ದುಲ್ಲಾ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದ ವೇಳೆ ಅನೇಕ ಎಡರು ತೊಡರುಗಳ ನಡುವೆಯೂ ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಶೇ 50ರಷ್ಟು ಎಂ.ಬಿ.ಬಿ.ಎಸ್ ಸೀಟುಗಳನ್ನು ಹೆಣ್ಣು ಮಕ್ಕಳಿಗೆ ಮೀಸಲಿಟ್ಟಿದ್ದರು.

ಇದು ಮಹಿಳೆಯರ ಸಬಲೀಕರಣ ಕುರಿತಾಗಿ ಪಕ್ಷಕ್ಕಿರುವ ಕಾಳಜಿಯನ್ನು ಎತ್ತಿ ತೋರಿಸುತ್ತದೆ’ ಎನ್ನುತ್ತಾರೆ ಅವರು. ರಾಜ್ಯದಲ್ಲಿ ಈಗ ಪ್ರತ್ಯೇಕ ಮಹಿಳಾ ಆಯೋಗ ಅಸ್ತಿತ್ವಕ್ಕೆ ಬಂದಿದೆ. ಪಂಚಾಯತ್ ರಾಜ್‌ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲು ಕಲ್ಪಿಸಲಾಗಿದೆ. ಇದಕ್ಕಾಗಿ ಪಂಚಾಯತ್ ರಾಜ್‌ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಸ್ತ್ರೀಯರ ಸಬಲೀಕರಣದ ನಿಟ್ಟಿನಲ್ಲಿ ಇದೊಂದು ದೊಡ್ಡ ಕ್ರಾಂತಿಕಾರಕ ಹೆಜ್ಜೆಯೇ ಸರಿ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಪಂಚಾಯತ್‌ ರಾಜ್ ಕಾಯ್ದೆ ತಿದ್ದುಪಡಿಯಿಂದ  ಪ್ರಮುಖ ಸಮಸ್ಯೆಯೊಂದು ಬಗೆಹರಿದಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕೈಗೊಂಡಿರುವ ಉತ್ತಮ ನಿರ್ಧಾರ ಇದು ಎಂದು ರಾಜ್ಯದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಹೇಳಿದ್ದಾರೆ.

ರಾಜ್ಯದ ಇತಿಹಾಸದಲ್ಲಿ ಇದುವರೆಗೆ ಕೇವಲ ಮೂವರು ಮಹಿಳೆಯರು ಮಾತ್ರ ಸಂಸತ್ ಪ್ರವೇಶಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷ್ಣಾ ಮೆಹ್ತಾ, ಬೇಗಂ ಅಕ್ಬರ್ ಜಹಾನ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಇವರಲ್ಲಿ ಸೇರಿದ್ದಾರೆ. ನಿಜಕ್ಕೂ ಇದು ಕಳವಳದ ವಿಷಯ. ರಾಜ್ಯದ ಒಟ್ಟು 12,548,926 ಜನಸಂಖ್ಯೆಯಲ್ಲಿ 5,883,365 ಮಹಿಳೆಯರಿದ್ದಾರೆ. ಒಟ್ಟು 64 ಲಕ್ಷ ಮತದಾರರ ಪೈಕಿ 31 ಲಕ್ಷ ಮಹಿಳಾ ಮತದಾರರಿದ್ದಾರೆ. ಇಷ್ಟಾಗಿಯೂ ಜಮ್ಮು ಮತ್ತು ಕಾಶ್ಮೀರದ ಅಧಿಕಾರದ ಮೊಗಸಾಲೆಯಲ್ಲಿ ಸ್ತ್ರೀಯರ ಪಾಲು ನಗಣ್ಯ.

‘ರಾಜ್ಯದಲ್ಲಿನ ಲಿಂಗ ಅನುಪಾತದ ನಡುವಿನ ಅಂತರ­ವನ್ನು ತುರ್ತಾಗಿ ಹೋಗಲಾಡಿಸಬೇಕು. ಏಕೆಂದರೆ ಒಟ್ಟು ಜನಸಂಖ್ಯೆಯ ಅರ್ಧದಷ್ಟು ಜನರ ಪಾಲ್ಗೊ­ಳ್ಳು­ವಿಕೆ ಇಲ್ಲದೇ ಯಾವುದೇ ಸಮಾಜ ಅಥವಾ ನಾಗರಿಕತೆ ಮುಂದುವರಿಯಲು ಸಾಧ್ಯವಿಲ್ಲ’ ಎನ್ನುತ್ತಾರೆ ದಬ್ಲಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT