ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣ್ಮುಚ್ಚುತ್ತಿವೆ ತೆರೆದ ಬಾವಿಗಳು

Last Updated 28 ಜೂನ್ 2012, 9:45 IST
ಅಕ್ಷರ ಗಾತ್ರ

ಮುಳಬಾಗಲು: ತಾಲ್ಲೂಕಿನಲ್ಲಿ ಅಳಿದುಳಿದ ತೆರೆದ ಬಾವಿಗಳೂ ಕಣ್ಮುಚ್ಚುತ್ತಿವೆ.ತಾಲ್ಲೂಕಿನಲ್ಲಿ ಬಹುತೇಕ ಬಾವಿಗಳು ಬರಡಾಗಿ ಬಹಳ ವರ್ಷಗಳೇ ಕಳೆದಿವೆ. ಸುಮಾರು ಮೂವತ್ತು ವರ್ಷಗಳ ಹಿಂದೆ ವಿಪುಲವಾಗಿ ನೀರು ದೊರೆಯುತ್ತಿದ್ದ ಬಾವಿಗಳ ಜೊತೆಗೆ ಇಂದು ವಿಫಲ ಕೊಳವೆಬಾವಿಗಳು ಸೇರಿಕೊಂಡಿವೆ. ಬರೀ ಹತ್ತು ಮೊಟ್ಟು ಅಂದರೆ ಗರಿಷ್ಠ ಮೂವತ್ತು ಅಡಿಗಳ ಬಾವಿಯಲ್ಲಿ ನೀರು ಸಿಗುತ್ತಿತ್ತು. ಇಂದು ಒಂದು ಸಾವಿರ ಅಡಿಗೆ ಕೊರೆದರೂ ನೀರು ಸಿಗುವುದು ದುರ್ಲಭವೆಂಬ ಸ್ಥಿತಿ ಇದೆ.

ಮೂವತ್ತು ವರ್ಷಗಳ ಹಿಂದೆ ಪ್ರತಿ ರೈತನ ಆಸೆ ಬಾವಿ ಕೊರೆಯಿಸುವುದೇ ಆಗಿತ್ತು. ಒಂದು ಬಾವಿ ಕೊರೆಯಿಸಿ ಕಲ್ಲಿನಿಂದ ಸ್ವತಃ ಮನೆಗಳಿಗೆ ಸರಿಸಮನಾಗಿ ಕಟ್ಟಡ ಕಟ್ಟಿ ಏತ ಪದ್ಧತಿಯಲ್ಲಿ ಕೃಷಿ ಮಾಡುತ್ತಿದ್ದರು. ಇದು ಸಾವಿರಾರು ವರ್ಷಗಳಿಂದ ನಡೆದು ಬಂದ ಪದ್ಧತಿ.  ಮೂವತ್ತು ಅಡಿ ಆಳದಿಂದ ಕಲ್ಲು ಕಟ್ಟಡ ನಿರ್ಮಾಣ ಮಾಡಲು ಮೇಸ್ತ್ರಿಗಳ ಪಡೆಗಳೇ ಇದ್ದವು. ತುಂಬ ಎಚ್ಚರದಿಂದ ಶ್ರಮವಹಿಸಿ ಬಾವಿಗಳ ನಿರ್ಮಾಣ ಮಾಡಲಾಗುತ್ತಿತ್ತು. ಈಗ ಅಂಥ ಬಾವಿಗಳಲ್ಲಿ ನೀರಿಲ್ಲದ ಕಾರಣ ಮುಚ್ಚಲಾಗುತ್ತಿದೆ.

ಕೊಳವೆಬಾವಿ ಬಂದ ಮೇಲೆ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯೇ ಉಂಟಾಗಿತ್ತು. ಎರಡು ಎಕರೆಯಷ್ಟು ಜಮೀನು ಇರುವ ರೈತರೂ ಕೊಳವೆಬಾವಿಗಳ ಕನಸು ಹೊತ್ತರು. ಅದನ್ನು ಸಾಕರಗೊಳಿಸಿಕೊಳ್ಳಲು ಸಾಲ ಮಾಡಲೂ ಹಿಂಜರಿಯಲಿಲ್ಲ.

ಈ ಸನ್ನಿವೇಶ ಮಿತಿ ಮೀರಿ, ಗ್ರಾಮಠಾಣ ಬಳಿ ಗ್ರಾಮಕ್ಕೆ ನೀರು ಸರಬರಾಜು ಮಾಡಲೂ ಅಡ್ಡಿ ಅತಂಕ ಎದುರಾದವು.  ಅದನ್ನು ಅರಿತ ಸರ್ಕಾರ ಯಾವುದೇ ಸರ್ಕಾರಿ ಕೊಳವೆ ಬಾವಿಗಳಿಗೆ ಖಾಸಗಿಯವರು 825 ಅಡಿ ದೂರದಲ್ಲಿ ಮಾತ್ರ ಕೊಳವೆಬಾವಿ ಕೊರೆಯಿಸಿಕೊಂಡರೆ ಮಾತ್ರ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದು ಹೊಸ ಕಾನೂನನ್ನೇ ತರಬೇಕಾಯಿತು.

ಕೃಷಿ  ಕ್ಷೇತ್ರದಲ್ಲಿ ಪೈಪೋಟಿಗೆ ತಕ್ಕಂತೆ ಕೊರೆಯಲಾದ ಕೊಳವೆ ಬಾವಿಗಳು ಪ್ರತಿ ಗ್ರಾಮದಲ್ಲಿ ನೂರರ ಸಂಖ್ಯೆ ದಾಟಿವೆ. ಅಂತರ್ಜಲ ಮಟ್ಟ ಕ್ರಮೇಣ ಕುಸಿಯತೊಡಗಿದೆ. ತೆರೆದ ಬಾವಿಗಳು ಬರಡಾಗಿ ಮೂಲೆಗುಂಪಾಗಿವೆ. ಇಂದು ನೂರಕ್ಕೆ 99ರಷ್ಟು ಬಾವಿಗಳಲ್ಲಿ ನೀರು ಇಲ್ಲ. ಮಳೆ ಬಂದರೆ ಮಾತ್ರ ಅಲ್ಪಸ್ವಲ್ಪ ನೀರು ಸಂಗ್ರಹವಾಗುತ್ತದೆ ಅಷ್ಟೆ.

ಮಳೆ ಸಮಯಕ್ಕೆ ಸರಿಯಾಗಿ ಬಂದಿದ್ದರೆ ಅಂತರ್ಜಲ ಮಟ್ಟ ಹೆಚ್ಚುತ್ತಿತ್ತು. ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಎರಡು ವರ್ಷಗಳ ಹಿಂದೆ ಜಿಲ್ಲೆಯ ಅಂತರ್ಜಲ ಮಟ್ಟದ ಬಗ್ಗೆ ವರದಿ ಸಿದ್ಧಪಡಿಸಿದೆ. ಮುಂದಿನ ಹತ್ತು ವರ್ಷಗಳಲ್ಲಿ ಇದೇ ಪರಿಸ್ಥಿತಿ ಮುಂದುವರಿದರೆ ಜಿಲ್ಲೆ ಅಂತರ್ಜಲದಿಂದ ನೀರು ಪಡೆಯುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಎಂಬುದು ವರದಿಯ ಸಾರಾಂಶ.

ಕೃಷಿ ಚಟುವಟಿಕೆಗಳ ಭಾಗವಾಗಿ ತಾಲ್ಲೂಕಿನಲ್ಲಿ ರೈತರು ಕೊಳವೆ ಬಾವಿಗಳನ್ನು ಕೊರೆಯಿಸುತ್ತಲೆ ಇದ್ದಾರೆ. ಹತ್ತರಲ್ಲಿ ಒಂದು ಅಥವಾ ಎರಡು ಕೊಳವೆಬಾವಿಗಳಲ್ಲಿ ನೀರು ಸಿಗಬಹುದಷ್ಟೆ. ಮೂರು ದಿನದ ಹಿಂದೆ ಸೊನ್ನವಾಡಿ ಗ್ರಾಮದ ರೈತರೊಬ್ಬರು ಎರಡು ಕೊಳವೆಬಾವಿ ಕೊರೆಯಿಸಿದರು. ಎರಡರಲ್ಲೂ ನೀರಿನ ಜಾಡೇ ಇಲ್ಲದೇ ನಿರಾಶೆಗೊಂಡರು. ಇದಕ್ಕೆ ಸೂಕ್ತ ಪರಿಹಾರವೇನು ಎಂಬುದು ಸದ್ಯದ ಪ್ರಶ್ನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT