ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ: ಮೂರನೆಯವನು

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಎಂಬೆಸಿ ಪಾಯಿಂಟ್‌ನಲ್ಲಿ ಧುತ್ತನೆ ಎದುರಾದ ಹುಡುಗ ಥೇಟ್ ಅನಿರುದ್ಧನೇ. ಸಾವಿರಾರು ಕಿಲೋಮೀಟರು ದೂರದಲ್ಲಿರುವ ಅವನು ಇಲ್ಲಿ ಪ್ರತ್ಯಕ್ಷನಾಗಿದ್ದು ಹೇಗೆ? ಮನಸ್ಸು ಒಂದು ಕ್ಷಣ ಗಲಿಬಿಲಿಗೊಂಡಿತು. ಸಾವರಿಸಿಕೊಂಡು ಕೆಲ ಸೆಕೆಂಡು ಅವನನ್ನೇ ರೆಪ್ಪೆ ಮಿಟುಕಿಸದೆ ನೋಡಿದ.

ಎಷ್ಟೋ ಸಲ ಬೀದಿಯಲ್ಲಿ ಹೋಗುತ್ತಿರುವಾಗ ಎದುರಾಗುವ ಅಪರಿಚಿತ ಆ ಕ್ಷಣದ ಮಟ್ಟಿಗೆ `ಇವನನ್ನು ಎಲ್ಲೋ ನೋಡಿದಂತಿದೆಯಲ್ಲ~ ಎಂಬ ಭಾವ ಹುಟ್ಟಿಸಿ ಬಿಡುತ್ತಾನಲ್ಲ ಹಾಗೆ. ಅವನ ಹಸನ್ಮುಖ ನೋಡಿ ಇವನೂ ಮುಖದ ಮೇಲೆ ನಗೆಯ ಎಳೆಯನ್ನು ಆವಾಹಿಸಿಕೊಳ್ಳಲು ಪ್ರಯತ್ನಿಸುತ್ತ ಅವನತ್ತಲೇ ನೋಡಿದ.
 
ಆ ಹುಡುಗ ತಕ್ಷಣ ದೃಷ್ಟಿ ಬದಲಿಸಿ ಎತ್ತಲೋ ನೋಡುತ್ತ ಮುಂದೆ ನಡೆದು ಹೋದ. ಈ ಅಪರಿಚಿತ ಹುಡುಗ ಒಂದು ಕ್ಷಣ ಮಗ ಅನಿರುದ್ಧನೇ ಎದುರಿಗೆ ಬಂದೇಬಿಟ್ಟನೆಂಬ ಭಾವ ಮೂಡಿಸಿದ್ದ. ಕೆಲವು ಹೆಜ್ಜೆ ಮುಂದೆ ಹೋಗಿ ಮತ್ತೆ ತಿರುಗಿ ನೋಡಿದ. ಏನನ್ನೋ ಯೋಚಿಸುತ್ತ ನಡೆಯುತ್ತಿದ್ದವನಿಗೆ ಆ ಕ್ಷಣದ ಮಟ್ಟಿಗೆ ಮರೆತಿದ್ದ ಮಗನನ್ನು ಮನಸ್ಸಿನ ಭಿತ್ತಿಯಲ್ಲಿ ತಂದು ಕೂರಿಸಿಬಿಟ್ಟಿದ್ದ!

ಅನಿರುದ್ಧ ನ್ಯೂಜೆರ್ಸಿಗೆ ಹೋಗಿ ಐದು ವರ್ಷಗಳಾಗಿವೆ. `ಒಂದೇ ವರ್ಷ ಅಲ್ಲಿ ಕೆಲಸ ಮಾಡಿ ಬಂದುಬಿಡುತ್ತೇನೆ. ಅಲ್ಲಿಯವರೆಗೆ ನೀವು ಒಬ್ಬರೇ ಹೇಗೋ ಮ್ಯಾನೇಜ್‌ಮಾಡಿ.

ಮನೆ ಕಟ್ಟುವ ಯೋಚನೆ ಸದ್ಯಕ್ಕೆ ಬೇಡ. ನಾನು ಬಂದ ಮೇಲೆ ಒಂದು ಕಟ್ಟಿದ ಮನೆಯನ್ನೇ ಖರೀದಿ ಮಾಡಿದರಾಯಿತು...~ ಹಣ ಇದ್ದರೆ ಎಲ್ಲವೂ ಸಲೀಸು ಎಂಬ ಆತ್ಮವಿಶ್ವಾಸದ ಭಾವದಲ್ಲಿ ಹೇಳಿ ಹೋದವನು ಈಗ ಹಿಂದಕ್ಕೆ ಬರುವ ಮಾತೇ ಆಡುತ್ತಿಲ್ಲ. ವಾರಕ್ಕೊಮ್ಮೆ ಕಳಿಸುವ `ಇ-ಮೇಲ್~ಗಳಲ್ಲೂ ಅದರ ಪ್ರಸ್ತಾಪವಿಲ್ಲ.

ಬದಲಾಗಿ `ಜೆನ್ನಿ ನಿಮ್ಮನ್ನು  ನೋಡಬೇಕು ಅಂತಿದಾಳೆ. ಒಂದು ಸಲ ಬಂದು ಹೋಗಿ. ಯಾವಾಗ ಬರುತ್ತೀರ? ತಿಳಿಸಿದರೆ ಏರ್ ಟಿಕೆಟ್ ಕಳಿಸುತ್ತೇನೆ. ಒಂದು ತಿಂಗಳ ಮಟ್ಟಿಗೆ ಬಿಡುವು ಮಾಡಿಕೊಂಡು ಬನ್ನಿ~ ಎಂಬ ಸಾರಾಂಶ ಅವನು ಕಳಿಸುತ್ತಿದ್ದ `ಇ-ಮೇಲ್~ಗಳಲ್ಲಿ ಪುನರಾವರ್ತನೆಯಾಗಿತ್ತು.

`ಇ-ಮೇಲ್~ಗಳ್ಲ್ಲಲೂ ಆತ್ಮೀಯತೆ ಇಲ್ಲ. ಅದು ಅವನ    ತಪ್ಪಲ್ಲ, ಅವನ ಇಂಗ್ಲಿಷ್‌ನದು. ಇಲ್ಲಿದ್ದಾಗ ಆಡುತ್ತಿದ್ದಂತಹ ಮಾತುಗಳನ್ನೇ ರೋಮನ್ ಸ್ಕ್ರಿಪ್ಟ್‌ನಲ್ಲಿ ಬರೆದು `ಇ-ಮೇಲ್~ ಮಾಡಿದ್ದರೂ ಮನಸ್ಸು, ಹೃದಯಕ್ಕೆ ಹತ್ತಿರವಾಗುತ್ತಿತ್ತು ಎಂದು ಅನೇಕ ಸಲ ಅನ್ನಿಸಿದೆ.

ಆದರೆ ಅದನ್ನು ಅವನಿಗೆ ಹೇಳುವುದು ಹೇಗೆ? ಒಂದು ತಿಂಗಳು ಬಿಡುವು ಮಾಡಿಕೊಳ್ಳಿ ಅಂದರೆ? ಒಂದು ತಿಂಗಳು ಮಾತ್ರ ನೀವು ಇಲ್ಲಿರಬಹುದು ಎಂದರ್ಥವೇ? ಇಲ್ಲಿಗೇ ಬಂದುಬಿಡಿ ಅಂತ ಅವನು ಕರೆಯುತ್ತಿಲ್ಲ! ಅವನು ಕ್ರಮೇಣ ನನ್ನಿಂದ ದೂರ ಸರಿಯುತ್ತಿದ್ದಾನೆ ಅಂತ ಅನ್ನಿಸುತ್ತಿದೆ. ಅದನ್ನೇ ಯೋಚನೆ ಮಾಡಿದರೆ ಕೊನೆಯಲ್ಲಿ ಒಂದು ಬಗೆಯ ವಿಷಣ್ಣ ಭಾವ ಸ್ಥಾಯಿಯಾಗಿ ಉಳಿದುಬಿಡುತ್ತಿತ್ತು.

ಅನಿರುದ್ಧ ಮದುವೆಯಾದ ಮೇಲೆ ನಾನು ಅವನಿಗೆ ಹೊರಗಿನವನಾಗಿಬಿಟ್ಟೆ ಎಂಬ ಯೋಚನೆ ಪದೇಪದೇ ಅವನನ್ನು ಕಾಡುತ್ತಿತ್ತು. ಮಗ-ಸೊಸೆಯ ನಡುವೆ ನಾನು ಮೂರನೆಯವನೇ ಅಲ್ಲವೇ ಅನ್ನಿಸಿ ಅದೇ ಭಾವ ಗಟ್ಟಿಯಾಗುತ್ತಿತ್ತು.

 ಜಾನಕಿ ಸತ್ತಾಗ ಅನಿರುದ್ಧನಿಗೆ ಹದಿನೆಂಟು ವರ್ಷ. ಮೂವರಿದ್ದ ಮನೆಯಲ್ಲಿ ಇಬ್ಬರಾದರು. ಅಮ್ಮನನ್ನು ಕಳೆದುಕೊಂಡ ಮಗ ಎಂಬ ಭಾವದಲ್ಲೇ ಮಗನನ್ನು ಸಂತೈಸಲು ಪ್ರಯತ್ನಿಸುವ ಮೊದಲೇ ಅನಿರುದ್ಧನೇ ಅಪ್ಪನನ್ನು ಸಂತೈಸಿದ. ಆಗ ಅವನಲ್ಲಿದ್ದ ಸಂತೈಸುವ ಭಾವ, ಮನಸ್ಸು ಈಗ ಇಲ್ಲ.
 
ಈಗ ಅವನಿಗೆ ಇಪ್ಪತ್ತೆಂಟು. ಮದುವೆಯಾಗಿದೆ. ಹೆಂಡತಿ ಗರ್ಭಿಣಿಯಂತೆ. ಅನಿರುದ್ಧ- ಅವನ ಹೆಂಡತಿ ಇಲ್ಲಿಯೇ ಇದ್ದಿದ್ದರೆ? ಜಾನಕಿಯೂ ಬದುಕಿದ್ದರೆ? ಜೀವನ ಹೇಗಿರುತ್ತಿತ್ತು ಎಂದು ಅನ್ನಿಸಿದಾಗಲೆಲ್ಲ ಒಂದು ಬಗೆಯ ನೆಮ್ಮದಿಯ ಭಾವ ಹುಟ್ಟುತ್ತಿತ್ತು. ಆದರೆ ಕಲ್ಪನೆ ಎನ್ನುವುದು ನೆನಪಾಗಿ ವಾಸ್ತವಕ್ಕೆ ಬಂದುಬಿಡುತ್ತಿದ್ದ. ಮರುಕ್ಷಣವೇ ನಾನು ಒಂಟಿ ಎಂಬ ಭಾವ ಮನಸ್ಸಿನಲ್ಲಿ ಬಲಿಯುತ್ತಿತ್ತು. ದಿನ ಕಳೆದ ಹಾಗೆ ಒಂಟಿತನ ಇನ್ನಷ್ಟು ಗಾಢವಾಗುತ್ತದೆ ಅನ್ನಿಸಿದಾಗ ಅದು ಖಿನ್ನತೆಯಾಗಿ ಆವರಿಸಿಕೊಂಡು ಬಿಡುತ್ತಿತ್ತು.

 ಇಂಗ್ಲೆಂಡ್ ಮೂಲದ ಸೊಸೆ ಒಂದೆರಡು ಸಲ ಫೋನಿನಲ್ಲಿ ಕೆಲವೇ ಮಾತುಗಳನ್ನು ಆಡಿದ್ದನ್ನು ಬಿಟ್ಟರೆ ಅವಳು ಅಪರಿಚಿತೆ. ಅವಳು ಏನು ಹೇಳಿದಳು ಎನ್ನುವುದು ಸರಿಯಾಗಿ ಅರ್ಥವೇ ಆಗಿರಲಿಲ್ಲ. ಮೇಲ್‌ನಲ್ಲಿ ಅನಿರುದ್ಧ ಕಳುಹಿಸಿದ್ದ ಫೋಟೊಗಳಲ್ಲಿ ಅವಳು ಸಂಭಾವಿತಳಂತೆ ಕಾಣಿಸಿದ್ದಳು. ಅದೊಂದೇ ಸಮಾಧಾನ ಅವನಿಗೆ.

`ಅನಿರುದ್ಧನಿಗೆ ಉಪನಯನ ಮಾಡಲು ಮರೆಯಬೇಡಿ~ ಎಂದು ಸಾಯುವ ಹಿಂದಿನ ದಿನ ಸಂಜೆ ಜಾನಕಿ ಮೂರ್ನಾಲ್ಕು ಸಲ ಹೇಳಿದ್ದಳು. ಕೊನೆಗೂ ಅವಳ ಮಾತನ್ನು ನಡೆಸಿಕೊಡಲು ಆಗಲೇ ಇಲ್ಲ. ಉಪನಯನದ ಮಾತು ಬಂದಾಗಲೆಲ್ಲ `ಅನಿರುದ್ಧನೇ ಅದಕ್ಕೇನು ಅವಸರ? ಮುಂದೆ ಮಾಡಿಕೊಳ್ಳಬಹುದು.

ಭವಿಷ್ಯ ಮುಖ್ಯ ಅಲ್ಲವೇ~ ಎಂದು ಹೇಳಿ ಅಪ್ಪನ ಬಾಯಿ ಮುಚ್ಚಿಸಿದ್ದ. ಮದುವೆ ಸಂದರ್ಭದಲ್ಲಿ ಮಾಡಿದರಾಯಿತು ಎಂದುಕೊಂಡರೆ ಅದಕ್ಕೂ ಅವಕಾಶ ಸಿಗಲಿಲ್ಲ. ಉಪನಯನ, ಮದುವೆ, ಸೊಸೆಯ ಸೀಮಂತ, ಮೊಮ್ಮಗನ ನಾಮಕರಣ ಇತ್ಯಾದಿಯನ್ನೆಲ್ಲ ಮಾಡುವ ಅವಕಾಶ ಇಲ್ಲ ಅನ್ನಿಸಿದಾಗಲೆಲ್ಲ ಮನಸ್ಸಿನಲ್ಲಿ ಒಂದು ಬಗೆಯ ವಿಷಾದದ ಭಾವ ಆವರಿಸಿಕೊಂಡು ಬಿಡುತ್ತಿತ್ತು.

ಮದುವೆಯಾಗುವ ವಿಷಯವನ್ನೂ ಅನಿರುದ್ಧ ಮೇಲ್ ಮೂಲಕವೇ ತಿಳಿಸಿದ್ದ. `ಇಲ್ಲಿ ನನ್ನ ಫ್ರೆಂಡ್ ಜೆನ್ನಿ ಅಂತ... ಅವಳ ತಂದೆ ಇಂಗ್ಲೆಂಡಿನವರು. ತಾಯಿ ಅಮೆರಿಕನ್. ಬಹಳ ವರ್ಷಗಳಿಂದ ಇಲ್ಲೇ ಇದ್ದಾರೆ. ನಾನು- ಜೆನ್ನಿಯನ್ನು ಮದುವೆ ಮಾಡಿಕೊಳ್ಳುವುದೆಂದು ತೀರ್ಮಾನ ಮಾಡಿದ್ದೇನೆ. ಮದುವೆಯಾದರೆ ಈ ದೇಶದ ಸಿಟಿಜನ್‌ಶಿಪ್ ಸಿಗುತ್ತೆ. ಮದುವೆಯಿಂದ ನಾನು ಸುಖವಾಗಿರುತ್ತೇನೆ ಅನ್ನಿಸಿದೆ.

ಮದುವೆ ಸಂದರ್ಭದಲ್ಲಿ ನೀವು ಇರುವುದಿಲ್ಲವಲ್ಲ ಎನ್ನುವ ನೋವು ನನಗಿದೆ..... ನಾಳೆ ಬೆಳಿಗ್ಗೆ ಇಲ್ಲಿ ಆರ್ಯ ಸಮಾಜದ ಪದ್ಧತಿಯಂತೆ ಮದುವೆ. ನನ್ನ ಫ್ರೆಂಡು, ಅಶುತೋಶ್ ಬ್ಯಾನರ್ಜಿ ಎಲ್ಲ ವ್ಯವಸ್ಥೆ ಮಾಡಿದ್ದಾನೆ. ಬೆಳಿಗ್ಗೆ 9.37ಕ್ಕೆ ಮಾಂಗಲ್ಯಧಾರಣೆ. ನೀವು ಅಲ್ಲಿಂದಲೇ ಆಶೀರ್ವಾದ ಮಾಡಿ. ಮುಂದಿನ ಸಮ್ಮರ್‌ಗೆ ನಾನು- ಜೆನ್ನಿ ಇಂಡಿಯಾಕ್ಕೆ ಬರುತ್ತೇವೆ~ ಎಂದು ಎರಡು ದಿನಗಳ ಮೊದಲು `ಇ-ಮೇಲ್~ ಕಳಿಸಿದ್ದ.

ಬೇರೆ ದೇಶ, ಧರ್ಮದ ಹುಡುಗಿಯನ್ನು ಮದುವೆಯಾಗುತ್ತೇನೆ. ನೀವು ಅವಳನ್ನು ಒಂದುಸಲ ನೋಡಿ, ಒಪ್ಪಿಗೆ ಕೊಡಿ ಎಂದು ಅವನು ಕೇಳಲಿಲ್ಲ! ನನ್ನ ಮದುವೆ, ನನ್ನದೇ ನಿರ್ಧಾರ ಎನ್ನುವಂತೆ ವರ್ತಿಸಿದ್ದ. ಅನಿರುದ್ಧನ ಮದುವೆ ಆಗಿ ಎರಡು ವರ್ಷ ಕಳೆದಿವೆ. ಎರಡು ಬೇಸಿಗೆ ಕಳೆದು ಮೂರನೆಯದು ಕಾಲೂರುತ್ತಿದೆ. ಅವನೂ ಇಲ್ಲ, ಅವನ ಇಂಗ್ಲಿಷ್ ಹೆಂಡತಿಯೂ ಇಲ್ಲ. ಆದರೆ ಈಗ ಒಂದು ಆ್ಯಂಗಲ್‌ನಲ್ಲಿ ಅವನ ಪಡಿಯಚ್ಚಿನಂತಿರುವ ಈ ಹುಡುಗ ಇಲ್ಲಿ ಕಾಣಿಸಿಕೊಂಡು ಆ ಕ್ಷಣಕ್ಕೆ ಮರೆತಿದ್ದ ಎಲ್ಲಾ ಸಂಗತಿಗಳನ್ನೆಲ್ಲ ನೆನಪು ಮಾಡಿ ಹೃದಯವನ್ನು ಭಾರ ಮಾಡಿದ ಅನ್ನಿಸಿತು.

ಸಾವರಿಸಿಕೊಂಡು ಚರ್ಚ್‌ಸ್ಟ್ರೀಟಿನ `ಸಿಟಿ ರೆಸ್ಟುರಾ~ಗೆ ಬಂದು ಕುಳಿತ. ಸುಮಾರು ಹದಿನೈದು-ಇಪ್ಪತ್ತು ಸೆಕೆಂಡುಗಳಷ್ಟೇ ಕಾಣಿಸಿ ಮರೆಯಾದ ಹುಡುಗ ಇಡೀ ದಿನ ನೆನಪಾಗುತ್ತಲೇ ಇದ್ದ. ಅವನನ್ನು ತಡೆದು ನಿಲ್ಲಿಸಿ ಅವನ ಪೂರ್ವಾಪರಗಳನ್ನು ವಿಚಾರಿಸಬೇಕಿತ್ತು ಅಂತ ಅನ್ನಿಸಿ ಪೇಚಾಡಿಕೊಂಡ. ನಾಳೆ ಮತ್ತೆ ಇದೇ ಸಮಯಕ್ಕೆ ಎಂಬೆಸಿ ಪಾಯಿಂಟ್‌ಗೆ ಹೋದರೆ ಅವನು ಕಾಣಬಹುದೇ ಅನ್ನಿಸಿದಾಗ ಸ್ವಲ್ಪ ನೆಮ್ಮದಿ ಅನ್ನಿಸಿತು. ಮರುಕ್ಷಣವೇ ಅವನು ಈ ಊರಿಗೆ ಹೊಸಬನಾಗಿದ್ದರೆ? ಎಂಬ ಯೋಚನೆ ಬಂದು ಮನಸ್ಸು ಭಾರವಾದಂತಾಗಿ ಕೊನೆಗೆ ಖಾಲಿಯಾಯಿತು.

ಬೆಳಿಗ್ಗೆ ಆಫೀಸಿಗೆ ಬರುತ್ತಿದ್ದಂತೆ ಟೇಬಲ್ ಮೇಲೊಂದು ಇನ್‌ಲ್ಯಾಂಡ್ ಕವರ್ ಇತ್ತು. ಬಣ್ಣ ಕಳೆದುಕೊಂಡ ಕವರ್. ಎಂದೋ ಖರೀದಿಸಿದ್ದ ಕವರ್. ಅದರ ಮೇಲೆ ಬರೆದ ವಿಳಾಸದ ಅಕ್ಷರಗಳನ್ನು ನೋಡಿದ. ಅವು ಪರಿಚಿತ ಅನ್ನಿಸತೊಡಗಿತು.

ಇತ್ತೀಚಿನ ವರ್ಷಗಳಲ್ಲಿ ಯಾರೂ ಅವನಿಗೆ ಪತ್ರ ಬರೆದಿಲ್ಲ. ಅವನಿಗೂ ಪತ್ರ ಬರೆಯುವ ಅಭ್ಯಾಸ ತಪ್ಪಿಹೋಗಿದೆ. ಹಲವು ವರ್ಷಗಳ ನಂತರ ಬಂದ ಪತ್ರದಲ್ಲಿ ಏನೋ ವಿಶೇಷ ಇರಬೇಕು ಅನ್ನಿಸಿ ಎತ್ತಿಕೊಳ್ಳುವಾಗ ಪತ್ರ `ಅವಳ~ದ್ದಿರಬಹುದೇ? ಎಂಬ ಯೋಚನೆ ಸುಳಿಯಿತು. ಸಣ್ಣಗೆ ಉದ್ವೇಗ ಶುರುವಾಯಿತು. ಕವರಿನ ಮೇಲಿನ ವಿಳಾಸವನ್ನು ಮತ್ತೊಮ್ಮೆ ನೋಡುತ್ತ ಪತ್ರದ ಮೇಲೆ ನವಿರಾಗಿ ಬೆರಳಾಡಿಸಿದ...

... ನಮಸ್ಕಾರ,
ಎಂದು ಶುರುವಾದ ಪತ್ರ. ಮುಂದಕ್ಕೆ ಓದುವ ಮೊದಲು ಕೊನೆ ಸಾಲಿನ ಕೆಳಗಿನ ಸಹಿ ನೋಡಿದ. ಅವನ ಊಹೆ ನಿಜವಾಗಿತ್ತು. `ಅವಳ~ದ್ದೇ ಪತ್ರ! ತಕ್ಷಣ ಸಣ್ಣ ಉದ್ವೇಗ ಕಾಣಿಸಿಕೊಂಡು ಎದೆ ಬಡಿತ ಹೆಚ್ಚಾಯಿತು.

ಪತ್ರದಲ್ಲಿ ಕ್ಷೇಮ ವಿಚಾರಿಸುವ `ಹೇಗಿದ್ದೀರಿ~ ಎಂಬ ಒಂದೇ ಒಂದು ಪದ ಮಾತ್ರ ಇತ್ತು. `ಬಹಳ ವರ್ಷಗಳ ನಂತರ ಬರೆಯುತ್ತಿದ್ದೇನೆ... ಮುಂದಿನ ತಿಂಗಳು ಚೆನ್ನೈನಲ್ಲಿ ಒಂದು ಸೆಮಿನಾರ್ ಇದೆ. ಹೈದರಾಬಾದ್‌ನ ಸವೇರಾ ಹೊಟೇಲ್ ಗ್ರೂಪ್‌ನ ಅಖಿಲಾ ಗೋವಿಂದರೆಡ್ಡಿ ಅಂತ ಪಿಆರ್‌ಒ ಫೋನ್ ಮಾಡಿದ್ದರು. ಚೆನ್ನೈನಲ್ಲಿ ಸೆಮಿನಾರ್ ಇದೆ ಬನ್ನಿ ಅಂತ ಕರೆದಿದ್ದಾರೆ. ಬೆಂಗಳೂರಿನಿಂದ ಚೆನ್ನೈಗೆ ಹೋಗಿಬರಲು ಏರ್ ಟಿಕೆಟ್ ಕಳಿಸಿಕೊಡ್ತೀವಿ ಅಂತ ಹೇಳಿದ್ದಾರೆ. ಸೆಮಿನಾರ್ ಯಾವುದು ಅಂತ ಹೇಳಿದರೆ ನಿಮಗೆ ನಗು ಬರಬಹುದು~.

ದಕ್ಷಿಣ ಭಾರತದ ಸಾಂಪ್ರದಾಯಿಕ ತಿಂಡಿ- ಅಡುಗೆ ಪದಾರ್ಥಗಳನ್ನು ಹೊಸ ತಲೆಮಾರಿನ ಗ್ರಾಹಕರಿಗೆ ಪರಿಚಯಿಸಲು ಸವೇರಾ ಗ್ರೂಪ್‌ನ ಮ್ಯಾನೇಜ್‌ಮೆಂಟ್ ತೀರ್ಮಾನಿಸಿದೆಯಂತೆ. ಅದಕ್ಕೆ ಸಂಬಂಧಿಸಿದ ಸೆಮಿನಾರ್! ಆಮೇಲೆ ಒಂದು ಪುಟ್ಟ ಡೆಮೊ ಇದೆಯಂತೆ. ಅಲ್ಲಿ ಯಾವುದಾದರೂ ಖಾರದ ಅಥವಾ ಸಿಹಿ ತಿಂಡಿ ಮಾಡುವುದನ್ನು ತೋರಿಸಿ ಅಂತ ಕೇಳಿದ್ದಾರೆ.

ಏಳೆಂಟು ವರ್ಷಗಳ ಹಿಂದೆ ಪತ್ರಿಕೆಯೊಂದರ ನಿಮ್ಮ ರುಚಿ ವಿಭಾಗಕ್ಕೆ ಒಂದು ಲೇಖನ ಬರೆದಿದ್ದೆ. ಆ ಪತ್ರಿಕೆಯವರು ನನ್ನ ಹೆಸರನ್ನು ಸಜೆಸ್ಟ್ ಮಾಡಿದರಂತೆ... ಬರಲೇಬೇಕು ಅಂತ ಎರಡು ಸಲ ಫೋನ್ ಮಾಡಿ ಒತ್ತಾಯಿಸಿದ್ದಾರೆ. ಹೋಗೋಣ ಅಂತ ಇದ್ದೀನಿ...
ಬೆಂಗಳೂರಿಗೆ ಬಂದಾಗ ನಿಮ್ಮನ್ನು ಭೇಟಿಯಾಗಬೇಕು. ಬೆಂಗಳೂರಿಗೆ ಬಂದು ಬಹಳ ವರ್ಷಗಳಾದವು. ನನಗೆ ಎಲ್ಲ ಮರೆತು ಹೋಗಿದೆ. ಏರ್‌ಪೋರ್ಟ್‌ಗೆ ಹೋಗಲು ನಿಮ್ಮ ಹೆಲ್ಪ್ ಬೇಕು. ಅದಕ್ಕಿಂತ ಮುಖ್ಯವಾಗಿ ನಿಮ್ಮ ಜತೆ ಮಾತಾಡುವುದಿದೆ.

ಸೆಮಿನಾರ್‌ಗಿಂತ ನಿಮ್ಮ ಜತೆ ಮಾತಾಡುವುದು ಬಹಳ ಮುಖ್ಯ...
`ಅವರು~ ಹೋದ ಮೇಲೆ ಒಂದು ಬಗೆಯ ವಿಚಿತ್ರ ಮನಸ್ಥಿತಿಯಲ್ಲಿದ್ದೇನೆ... ಮಗ ಆಸ್ಟ್ರೇಲಿಯಾದಲ್ಲಿದ್ದಾನೆ. ನನ್ನನ್ನು ಮರೆತೇ ಬಿಟ್ಟಿದ್ದಾನೆ. ತೋಟ ಹಾಳಾಗುತ್ತಿದೆ.

ಆನೆಗಳ ಕಾಟ. ಪಕ್ಕದ ತೋಟದವನು ಒತ್ತುವರಿ ಮಾಡುತ್ತಲೇ ಇದ್ದಾನೆ. ಅದನ್ನೆಲ್ಲ ನಿಭಾಯಿಸುವ ಶಕ್ತಿ ನನಗಿಲ್ಲ. ಅದನ್ನು ಮಾರಿ ಬಿಡಬೇಕು. ಮಾರಿದ ಮೇಲೆ ಮುಂದೇನು ಮಾಡಬೇಕು ಎನ್ನುವುದು ಗೊತ್ತಾಗುತ್ತಿಲ್ಲ. ಒಬ್ಬಳೇ ಬದುಕುವ ಕಷ್ಟ ನನ್ನ ಶತ್ರುವಿಗೂ ಬೇಡ... ಇತ್ಯಾದಿ ವೈಯಕ್ತಿಕ ಸಂಕಟಗಳನ್ನು ಸಂಕ್ಷಿಪ್ತವಾಗಿ ತೋಡಿಕೊಂಡಿದ್ದಳು... ಈಗ ನನಗೆ ಫೋನಿದೆ. ಸಾಧ್ಯವಾದರೆ ಮಾತಾಡಿ ಎಂಬ ಸೂಚನೆಯ ಜತೆಗೆ ಪೋನ್ ನಂಬರನ್ನೂ ಪತ್ರದ ಕೊನೆಯಲ್ಲಿ ಬರೆದಿದ್ದಳು.

ಪತ್ರ ಓದಿದ ಮೇಲೆ ಸ್ವಲ್ಪ ಹೊತ್ತು ಸುಮ್ಮನೆ ಕುಳಿತ. ಒಂದು ಗಂಟೆ ಕಳೆಯುವ ಹೊತ್ತಿಗೆ ಮನಸ್ಸು ಸಮಸ್ಥಿತಿಗೆ ಬಂದು ನಂತರ ನಿರಾಳವಾದ...
`ಅವಳು~ ಅವನ ಗೆಳತಿ. ಗೆಳತಿ ಅಷ್ಟೇ ಅಲ್ಲ, ಕಾಲೇಜಿಗೆ ಸೇರಿದ ಹೊಸದರಲ್ಲಿ ಹರೆಯದ ಆಕರ್ಷಣೆಗೆ ಒಳಗಾಗಿ ಪರಸ್ಪರ ಇಷ್ಟಪಟ್ಟಿದ್ದರು. ಅವರ ಪ್ರೀತಿ ಸುಖಾಂತ್ಯ ಕಾಣಲಿಲ್ಲ. ಅವಳಪ್ಪ ಅವಳಿಗೆ ಮದುವೆ ಮಾಡಿ ಇಬ್ಬರನ್ನೂ ವಿರುದ್ಧ ದಿಕ್ಕಿನ ಕಡೆ ನಡೆಯುವಂತೆ ನೋಡಿಕೊಂಡರು.

ಆಮೇಲೆ ಅವರ ಬದುಕು ಪ್ರತಿ ಕ್ಷಣವೂ ಕವಲೊಡೆಯುತ್ತಲೇ ಸಾಗಿತು. ಇಬ್ಬರೂ ಒಂದೊಂದು ದಿಕ್ಕಿಗೆ ಹೆಜ್ಜೆ ಹಾಕಿದರು. ಆ ದಾರಿಯಲ್ಲಿ ನಡೆಯುತ್ತ ಹೊಸಬರನ್ನು ಪರಿಚಯಿಸಿಕೊಳ್ಳುತ್ತ ಹಳಬರನ್ನು ನೇಪಥ್ಯಕ್ಕೆ ಸರಿಸಿದರು. ಆದರೂ ಇಬ್ಬರಿಗೂ ಹಳೆಯ ಆ `ಮಧುರ~ ನೆನಪುಗಳನ್ನು ಮರೆಯಲು ಸಾಧ್ಯವೇ ಆಗಲಿಲ್ಲ.

ಒಟ್ಟಿಗೆ ಕಳೆದ ಕ್ಷಣಗಳನ್ನು ಮನಸ್ಸಿನ ಭಿತ್ತಿಯಲ್ಲಿ ಉಳಿಸಿಕೊಂಡರು. ಅವನು ಒಮ್ಮೆ ಮಾತ್ರ ಹೆಂಡತಿಯೊಂದಿಗೆ ಮಾತನಾಡುವಾಗ ತನ್ನ ಕ್ಲಾಸ್‌ಮೇಟ್‌ಗಳನ್ನು ನೆನಪು ಮಾಡಿಕೊಳ್ಳುವ ನೆಪದಲ್ಲಿ ಅವಳ ಹೆಸರು ಹೇಳಿದ್ದ. ಅವಳೂ ಅಷ್ಟೆ. ಅದೊಂದು ಕನಸು ಅಂದುಕೊಂಡರೂ ಮನಸ್ಸಿನ ಮೂಲೆಯಲ್ಲಿ ಅವನ `ಚಿತ್ರ~ವನ್ನು ಮಾಸದೆ ಉಳಿಸಿಕೊಂಡಿದ್ದಳು. ಈಗ ಇಬ್ಬರೂ ವಿರುದ್ಧ ದಿಕ್ಕಿನಲ್ಲಿ ನಿಂತಿದ್ದಾರೆ.

ನಡುವೆ ಒಮ್ಮೆ ಒಂದು ವಿಚಿತ್ರ ಸನ್ನಿವೇಶದಲ್ಲಿ ಭೇಟಿಯಾಗಿ ತಮ್ಮ ಇರುವಿಕೆಯನ್ನು ತೋರಿಸಿಕೊಂಡು, ತಮ್ಮ ವಿಳಾಸಗಳನ್ನು ವಿನಿಮಯ ಮಾಡಿಕೊಂಡಿದ್ದರು!
ಅವನು ಜಾನಕಿಯನ್ನು ಆಸ್ಪತ್ರೆಗೆ ಕರೆದು ತಂದ ಸಂದರ್ಭ ಅದು. ಅದೇ ಸಮಯದಲ್ಲಿ ಅವಳ ಗಂಡ ಬೇಟೆಯಾಡಲು ಹೋದವನು ಕಾಡುಹಂದಿಯಿಂದ ತಿವಿಸಿಕೊಂಡು ನುಜ್ಜುಗುಜ್ಜಾಗಿ ಅದೇ ಆಸ್ಪತ್ರೆ ಸೇರಿದ್ದ.

ಇಬ್ಬರೂ ದುಃಖದ ಸನ್ನಿವೇಶದಲ್ಲಿ ಮುಖಾಮುಖಿಯಾಗಿದ್ದರು. ಈಗ ಅವಳ ಪತ್ರ ಬಂದಿದೆ. ಇಬ್ಬರೂ ಈಗ ಒಂಟಿ. ಇಬ್ಬರ ಮಕ್ಕಳು ದೂರದೇಶಗಳಲ್ಲಿದ್ದಾರೆ. ಅವರಿಗೆ ಅವರದೇ ಆದ ಬದುಕಿದೆ.

ಹೈಸ್ಕೂಲು ಮುಗಿಸಿ ಪಿಯುಸಿಗೆ ಕಾಲೇಜಿಗೆ ಸೇರಿದ್ದ ಮೊದಲ ದಿನವೇ ಅವನಿಗೆ ಇಂಗ್ಲಿಷ್ ಕಲಿಯದಿದ್ದರೆ ಇಲ್ಲಿ ಉಳಿಗಾಲವಿಲ್ಲ ಅನ್ನಿಸಿತ್ತು. ರೇಮನ್ ಡಿಸೋಜ ಎಂಬ ಮಂಗಳೂರು ಕಡೆಯ ಮೇಷ್ಟರು ನಡೆಸುತ್ತಿದ್ದ ಇಂಗ್ಲಿಷ್ ಸ್ಪೀಕಿಂಗ್ ಕೋರ್ಸಿಗೆ ಸೇರಿದ್ದ.
ಇವನು ಅವಳನ್ನು ಮೊದಲು ನೋಡಿದ್ದು ಅಲ್ಲೇ. ನೀಳ ಮೂಗಿನ, ಜೇನಿನ ಬಣ್ಣದ ಕಣ್ಣುಗಳ ಹುಡುಗಿ. ಮೊದಲ ನೋಟದಲ್ಲೇ ಇಷ್ಟವಾಗಿದ್ದಳು. ಅವಳು ಶ್ರೀಮಂತೆ ಎನ್ನುವುದು ತಿಳಿದಾಗಲೇ ತನ್ನ ಬಡತನ ಅವನಿಗೆ ನೆನಪಾಗಿತ್ತು.

ಎರಡನೇ ದಿನವೇ ಕ್ಲಾಸಿನಲ್ಲಿ ಒಬ್ಬಳು ದೊಡ್ಡ ಧ್ವನಿಯಲ್ಲಿ ಅವಳ ಹೆಸರು ಕೂಗಿ ಕರೆದಾಗ ಇವನಿಗೆ ನಿರಾಸೆಯಾಗಿತ್ತು. ಹುಡುಗಿ `ನಮ್ಮವಳೇ~ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅಂತ ಅವನಿಗೆ ಅನ್ನಿಸಿತ್ತು. ಕೊನೆಯ ಬೆಂಚಿನ ತುದಿಯಲ್ಲಿ ಕೂರುತಿದ್ದ ಅವನ ಕಡೆಗೆ ಅವಳು ಆಗಾಗ ತಿರುಗಿ ನೋಡುವಷ್ಟು ಪರಿಚಯ ಮುಂದಿನ ದಿನಗಳಲ್ಲಿ ಬೆಳೆಯಿತು. ಇವನೂ ಮತ್ತೆ ಮತ್ತೆ ಅವಳನ್ನು ನೋಡಿದ.

ಅವಳ ಜಾತಿಯಷ್ಟೇ ಅಲ್ಲ, ಧರ್ಮವೂ ಬೇರೆ ಅನ್ನುವ ವಾಸ್ತವವನ್ನು ಅರಗಿಸಿಕೊಳ್ಳಲು ಬಹಳಷ್ಟು ಸಮಯಬೇಕಾಯಿತು. ಬರೀ  ಸ್ನೇಹ ಉಳಿಸಿಕೊಳ್ಳುವುದರಲ್ಲಿ ಅಂತಹ ವಿಶೇಷವೇನೂ ಇಲ್ಲ ಎಂಬ ಮನಸ್ಸಿನ ಮಾತನ್ನು ಅವನ ಹೃದಯ ಕೇಳಲಿಲ್ಲ.

ಇಬ್ಬರೂ ಇಷ್ಟಪಟ್ಟರು. ಮದುವೆಯಾಗಿ ಒಟ್ಟಿಗೆ ಬದುಕುವ ಕನಸು ಕಂಡರು. ಓದು ಮುಗಿಸಿ ಕೆಲಸ ಹಿಡಿದ ಮೇಲೆ ಮದುವೆ ಆಗುವುದೆಂದು ನಿರ್ಧರಿಸಿದರು.

ಅವರ ಹಳೆಯ ಪ್ರೇಮಕಥೆಯ ಬಗ್ಗೆ ಹೇಳಿದರೆ ಸಾಕು-
ಅವನು ಡಿಗ್ರಿ ಓದಲು ಮಂಗಳೂರಿಗೆ ಹೋದ. ಅವಳು ಪಿಯುಸಿ ಮುಗಿಸಲು ಎರಡು ವರ್ಷ ತೆಗೆದುಕೊಂಡಳು. ಒಂದು ದಿನ ಅವನು ಎರಡನೇ ವರ್ಷದ ಡಿಗ್ರಿಯಲ್ಲಿದ್ದಾಗ ಅವಳ ಮದುವೆಯ ಆಮಂತ್ರಣ ಪತ್ರ ಬಂತು. ಅದರ ಜತೆಗೆ ಪತ್ರ.

`ಅಪ್ಪ ನನ್ನ ಮದುವೆ ಗೊತ್ತು ಮಾಡಿದ್ದಾರೆ. ಹುಡುಗ ನಮ್ಮ ಸಂಬಂಧಿಕ. ನಮಗಿಂತ ಶ್ರೀಮಂತರು. ನಿನ್ನೆ ರಾತ್ರಿ ಅಪ್ಪನ ಎದುರು ನಿಂತು ನಮ್ಮ `ವಿಷಯ~ವನ್ನೆಲ್ಲ ಹೇಳಿ ನನಗೆ ಈ ಮದುವೆ ಬೇಡ ಎಂದೆ. ಆದರೆ ಅವರು ನನ್ನ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ನಮ್ಮ ಧರ್ಮ `ಅವನ~ನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿಬಿಟ್ಟರು.

`ನನ್ನ ಮಾತು ಮೀರಿ ಮದುವೆಯಾದರೆ, ನಿನ್ನ ಪಾಲಿಗೆ ನಾನು ಇಲ್ಲ ಅಂತ ತಿಳಕೋ... ನನ್ನ ಹೆಣ ದಾಟಿಕೊಂಡು ನೀನು ಅವನನ್ನು ಮದುವೆಯಾಗಬಹುದು~ ಅಂದರು. ಅಪ್ಪನ ಮಾತು ಮೀರಲು ಆಗುತ್ತಿಲ್ಲ... ಏನು ಮಾಡಲಿ... ನನ್ನನ್ನು ಕ್ಷಮಿಸು...

ನನ್ನನ್ನೇ ಮದುವೆ ಆಗುತ್ತೇನೆಂದು ಅವಳು ಹಟ ಹಿಡಿಯಲಿಲ್ಲ. ಬೇರೆ ಜಾತಿ, ಧರ್ಮದವನನ್ನು ಕಟ್ಟಿಕೊಂಡು ಜೀವನಪರ್ಯಂತ ಹೆಣಗುವ ಬದಲು ಶ್ರೀಮಂತ ಸಂಬಂಧಿಕನ ರೋಲ್ಸ್‌ರಾಯ್‌ನಲ್ಲಿ ಪ್ರಯಾಣ ಮಾಡುವುದು ಸಲೀಸು ಎಂಬ ವ್ಯಾವಹಾರಿಕ ನಿಲುವು ತಾಳಿದಳೇ? ಅಥವಾ ನಿಜವಾಗಿಯೂ ಅಸಹಾಯಕಳಾಗಿದ್ದಳೇ ಎಂದು ಇವನು ಯೋಚಿಸಿದ.

ಇಂಥವೇ ಯೋಚನೆಗಳು ಬಹಳ ದಿನ ಕಾಡಿದವು. ಅವಳು ಮನೆ ಬಿಟ್ಟು ಬಂದಿದ್ದರೆ... ಆಗ ಅವನಿದ್ದ ಸ್ಥಿತಿಯಲ್ಲಿ ಅವಳನ್ನು ಮದುವೆ ಆಗಲು ಸಾಧ್ಯವಿತ್ತೇ? ಪ್ರಶ್ನೆ ಕೇಳಿಕೊಂಡಿದ್ದ. ಅವನೂ ಅಸಹಾಯಕ. ಓದುವಾಗ ಮದುವೆ ಸಾಧ್ಯವಿತ್ತೇ? ಮನೆಯಲ್ಲಿ ಅಪ್ಪ, ಅಮ್ಮ ಒಪ್ಪುತ್ತಿದ್ದರೆ? ಅಥವಾ ಉದ್ದೇಶಪೂರ್ವಕವಾಗಿ ಹಿಂದೆ ಸರಿದನೇ?

`ಮನೆ ಬಿಟ್ಟು ಬಂದು ಬಿಡು. ಮದುವೆಯಾಗಿ ಎಲ್ಲರನ್ನೂ ಎದುರಿಸೋಣ~ ಎನ್ನುವ ಧೈರ್ಯ ಬರಲಿಲ್ಲವೇಕೆ ಎಂಬ ಪ್ರಶ್ನೆ ಅವನನ್ನು ಬಹಳ ದಿನಗಳ ಕಾಲ ಕಾಡಿತು. ಅವಳಿಗಾಗಿ ಭವಿಷ್ಯವನ್ನು ಪಣಕ್ಕೆ ಒಡ್ಡುವುದು ಮೂರ್ಖತನ ಎಂಬ ವ್ಯವಹಾರಿಕ ಮನಸ್ಥಿತಿಯೇ ಮೇಲುಗೈ ಸಾಧಿಸಿತು. ಅವಳ ಮದುವೆ ಆದದ್ದು ತನಗೆ ಒಂದು ರೀತಿಯಲ್ಲಿ ದೊಡ್ಡ ರಿಲೀಫ್ ಎಂಬ ಭಾವನೆಯಲ್ಲಿ ಕೆಲವು ದಿನ ಕಳೆದ. ಆದರೆ ಆ ಮನಸ್ಥಿತಿ ಹೆಚ್ಚು ದಿನ ಉಳಿಯಲಿಲ್ಲ.

ಅವಳ ಮದುವೆ ಆದ ಹೊಸದರಲ್ಲಿ ನಾನೀಗ ಅವಳಿಗೆ `ಹೊರಗಿನವನು~ ಎಂಬ ಭಾವ ಅವನನ್ನು ಕಾಡತೊಡಗಿತ್ತು. ಅವಳ ಮನಸ್ಸಿನಲ್ಲಿ ತನಗೊಂದು ಸ್ಥಾನ ಇರಬಹುದೇ ಪ್ರಶ್ನೆ ಕೇಳಿಕೊಂಡು ಉತ್ತರ ಹುಡುಕುವ ಪ್ರಯತ್ನ ಮಾಡಿದ. ಅದರಿಂದ ಗೊಂದಲ ಶುರುವಾಯಿತು.
 
ದಿನವಿಡೀ ಇಂಥವೇ ಯೋಚನೆಗಳು. ಅವಳು ಬೇರೊಬ್ಬನ ಹೆಂಡತಿಯಾಗಲು ನಾನೇ ಕಾರಣ ಎಂಬ ಅಪರಾಧಿ ಭಾವದಲ್ಲಿ ನರಳತೊಡಗಿದ. ಬೇರೊಬ್ಬನ ಹೆಂಡತಿ ಬಗ್ಗೆ ಯೋಚಿಸುವುದು ಅನೈತಿಕ ಎಂಬ ಭಾವನೆ ಬೆಳೆಸಿಕೊಳ್ಳಲು ಪ್ರಯತ್ನಿಸಿದ. ಅಂತಹ ಭಾವ ಬೆಳೆಸಿಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ಮನಸ್ಸು ತುಂಬಿಕೊಳ್ಳುತ್ತಿದ್ದಳು.

ಅವಳ ಜತೆ ಕಳೆದ ಕ್ಷಣಗಳು,ಆಡಿದ ಮಾತುಗಳು, ಕಟ್ಟಿದ ಕಸನುಗಳ ನೆನಪುಗಳಿಂದ ಹೊರಬರಲು ಆಗಲೇಇಲ್ಲ. ಎರಡನೇ ವರ್ಷದ ಡಿಗ್ರಿಯಲ್ಲಿ ಎಲ್ಲ ವಿಷಯಗಳಲ್ಲೂ ಫೇಲಾದ. ಭವಿಷ್ಯ ರೂಪಿಸಿಕೊಳ್ಳುವ ವ್ಯಾವಹಾರಿಕ ಭಾವನೆಗೆ ಬಲಿಯಾಗಿ ಪ್ರೀತಿಯನ್ನು ಬಲಿ ಕೊಟ್ಟೆ ಎಂಬ ಭಾವನೆ ಅವನಲ್ಲಿ ಸ್ಥಾಯಿಯಾಗಿ ಉಳಿದುಬಿಟ್ಟಿತು.

ಓದಿನಲ್ಲಿ ಆಸಕ್ತಿ ಕಡಿಮೆಯಾಯಿತು. ಕಾಲೇಜು ಬಿಟ್ಟು ಊರಿಗೆ ಹೋದ. ಒಂದು ವರ್ಷ ಊರಲ್ಲಿದ್ದು ಹೊಲ ಗದ್ದೆ ನೋಡಿಕೊಂಡ. ಹಳೆಯದನ್ನೆಲ್ಲ ಮರೆಯತೊಡಗಿದ. ಮನಸ್ಸು ಸಮಸ್ಥಿತಿಗೆ ಬಂತು ಎನ್ನುವಷ್ಟರಲ್ಲಿ ಮತ್ತೆ ನೆನಪಾಗುತ್ತಿದ್ದಳು. ಆ ದಿನಗಳಲ್ಲೇ ಅವನ ಅಪ್ಪ ಸತ್ತರು. ಆಮೇಲೆ ತನ್ನ ನಿಲುವು ಸರಿ ಅನ್ನಿಸತೊಡಗಿತು. ಮತ್ತೆ ಕಾಲೇಜಿಗೆ ಸೇರಿದ. ಹಠಕ್ಕೆ ಬಿದ್ದವನಂತೆ ಓದಿದ.

ಪೀಜಿ ಮುಗಿಸಿ ದೊಡ್ಡ ಕಂಪೆನಿಯೊಂದರಲ್ಲಿ ಕೆಲಸ ಹಿಡಿದ. ಮಾರನೇ ವರ್ಷವೇ ಸಂಬಂಧಿಕರ ಹುಡುಗಿ ಜಾನಕಿಯನ್ನು ಮದುವೆಯಾದ. ಎಲ್ಲವೂ ಸರಿಯಾಯಿತು. ಹುಣ್ಣಿಮೆ ಚಂದ್ರನ ಬೆಳಕಲ್ಲಿ ಕೂತು ಜೇನುತುಪ್ಪದಲ್ಲಿ ಮಾಡಿದ ರೊಟ್ಟಿಯನ್ನು ಹಾಲಿನಲ್ಲಿ ಅದ್ದಿಕೊಂಡು ತಿನ್ನುತ್ತಿದ್ದೇನೆ ಎಂಬ ಭಾವ ಬಲಿಯತೊಡಗಿತು.

ಮದುವೆಯಾದ ಎರಡನೇ ವರ್ಷ ಅನಿರುದ್ಧ ಹುಟ್ಟಿದ. ಮರುವರ್ಷವೇ ಜಾನಕಿಗೆ ವಿಚಿತ್ರ ಕಾಯಿಲೆ ಇರುವುದು ಪತ್ತೆಯಾಯಿತು. ಹತ್ತು ಲಕ್ಷ ಜನರಲ್ಲಿ ಒಬ್ಬರಿಗೆ ಬರುವ ಕಾಯಿಲೆ ಎಂದರು ವೈದ್ಯರು. ಜಾನಕಿಯನ್ನು ಪರೀಕ್ಷಿಸಿದ ತಜ್ಞ ಡಾಕ್ಟರು ಗುಣಪಡಿಸುವ ಭರವಸೆ ನೀಡುತ್ತ ಅವನಲ್ಲಿ ವಿಶ್ವಾಸ ಹುಟ್ಟಿಸಿದರು.

ಮುಂದಿನ ಹದಿನೈದು ವರ್ಷಗಳ ಕಾಲ ಅವನ ಬದುಕು ಬಟ್ಟಬಯಲಿನಲ್ಲಿ ಹಚ್ಚಿಟ್ಟ ದೀಪವನ್ನು ಆರದಂತೆ ನೋಡಿಕೊಳ್ಳುವ ಕೆಲಸವಾಯಿತು. ವಿಚಿತ್ರ ರೋಗದ ಹೆಂಡತಿಯನ್ನು ಮಗುವಿನಂತೆ ನೋಡಿಕೊಂಡ. ಮಗನನ್ನೂ ಸಾಕಿದ. ದುಡಿಮೆಯ ದೊಡ್ಡ ಪಾಲನ್ನು ಅವಳ ಚಿಕಿತ್ಸೆಗೆ ಖರ್ಚು ಮಾಡಿದ. ಮದುವೆ ನಂತರದ ಮೊದಲ ಮೂರು ವರ್ಷ ಹೆಂಡತಿಯೊಂದಿಗೆ `ಬದುಕಿ~ದ್ದನ್ನು ಬಿಟ್ಟರೆ ಉಳಿದಂತೆ ಅವನು ಒಂಟಿ. ಈಗ ಅವನು ನೆನಪುಗಳ ಮೂಟೆ.

ಜಾನಕಿಯನ್ನು ಆಸ್ಪತ್ರೆಗೆ ಕರೆದು ತಂದ ಮೊದಲ ದಿನವೇ `ಅವಳ~ನ್ನು ಅಲ್ಲಿ ವಿಚಿತ್ರ ಸನ್ನಿವೇಶದಲ್ಲಿ ನೋಡಿದ. ಕಂಕುಳಲ್ಲಿ ಪುಟ್ಟ ಕೂಸು ಕಟ್ಟಿಕೊಂಡು ಬಂಧುಗಳ ಜತೆಯಲ್ಲಿ ಸ್ಪೆಷಲ್‌ವಾರ್ಡಿನ ಎದುರು ನಿಂತಿದ್ದಳು! ಅವಳ ಅಸಹಾಯಕ ಸ್ಥಿತಿಯನ್ನು ನೋಡಿ ತತ್ತರಿಸಿ ಹೋದ. ಅವನೂ ಅಸಹಾಯಕ.

ಇಬ್ಬರೂ ವಿಚಿತ್ರ ಸಂದರ್ಭದಲ್ಲಿ ಪರಿಸ್ಥಿತಿಯ ಶಿಶುಗಳಾಗಿದ್ದರು. ಅವಳ ಗಂಡ ಆಸ್ಪತ್ರೆ ಸೇರಿದ ಎಂಟನೇ ದಿನ ಬೆಳಗಿನಜಾವ ಕಣ್ಣುಮುಚ್ಚಿದ. ಏಳೂ ದಿನಗಳು ಆಸ್ಪತ್ರೆಗೆ ಹೋಗಿ ಅವಳನ್ನು ನೋಡಿ ಧೈರ್ಯ ಹೇಳಿ ಬಂದ. `ನಿನ್ನ ಗಂಡ ಬದುಕುತ್ತಾನೆ ಹೆದರಬೇಡ~ ಎಂಬ ಭರವಸೆ ತುಂಬಿದ. ಅವಳೂ ನಿನ್ನ ಹೆಂಡತಿಗೆ ಗುಣವಾಗುತ್ತದೆ. ಅವಳಿಗಾಗಿ ನಾನು `ಪ್ರೇ~ ಮಾಡುತ್ತೇನೆ ಅಂದಳು.

ಗಂಡನ ಹೆಣದ ಜತೆ ಹೋದವಳು ಮೂರು ತಿಂಗಳ ನಂತರ ಒಂದು ಪತ್ರ ಬರೆದಿದ್ದಳು. ಸಂತಾಪ ಸೂಚಿಸಿ ಪತ್ರ ಬರೆದವರಿಗೆ ಉತ್ತರಿಸುವ ಧಾಟಿಯಲ್ಲಿದ್ದ ಮೂರು ಸಾಲಿನ ಪತ್ರ. ಈಗ ಮತ್ತೆ ಬರೆದಿದ್ದಾಳೆ.

ಪತ್ರವನ್ನು ಮತ್ತೆಮತ್ತೆ ಓದಿದ. ಈ ಪತ್ರವನ್ನು ಅವನು ನಿರೀಕ್ಷಿಸಿರಲಿಲ್ಲ. ಎಲ್ಲ ಮುಗಿಯಿತು ಎಂದುಕೊಳ್ಳುವಷ್ಟರಲ್ಲಿ ಎಲ್ಲೋ ಒಂದೆಡೆ ಮತ್ತೆ ಚಿಗುರುವ ಸಂಬಂಧಗಳ ಹಾಗೆ ಹೆಚ್ಚು ಕಡಿಮೆ ಮೂವತ್ತು ವರ್ಷ ಕಣ್ಣಿನಿಂದ ಮರೆಯಾಗಿದ್ದವಳು ಮತ್ತೆ ಪತ್ರ ಬರೆದು ಹಳೆಯದನೆಲ್ಲ ನೆನಪು ಮಾಡಿದ್ದಳು.

ಅಸಹಾಯಕ ಸ್ಥಿತಿಯಲ್ಲಿದ್ದಾಳೆ. ಮನಸ್ಸಿನ ಭಾವನೆಗಳನ್ನು ಆಪ್ತರ ಬಳಿ ಹೇಳಿಕೊಂಡರೆ ಹಗುರಾಗಬಹುದು ಎಂಬ ಮನಸ್ಥಿತಿಯಲ್ಲಿ ಬರೆದಿರಬಹುದು. ಒಂಟಿಯಾಗಿ ಬದುಕುವ ಕಷ್ಟ ಅವನಿಗೂ ಗೊತ್ತು. ಆದರೆ ಅದಕ್ಕೆ ಪರಿಹಾರ ಇಲ್ಲ. ತೋಟ ಮಾರಿದ ಮೇಲೆ ಮುಂದೇನು ಎಂಬ ಅವಳ ಪ್ರಶ್ನೆಗೆ ಉತ್ತರ ಹೇಳಬೇಕಾದವನು ಅವಳ ಮಗ. ಅದಕ್ಕೆ ನನ್ನ ಬಳಿ ಉತ್ತರ ಇಲ್ಲ.

ಆಸ್ಟ್ರೇಲಿಯಾಕ್ಕೆ ಹೋಗಿ ಮಗನ ಜೊತೆ ಇದ್ದು ಬಿಡು ಎನ್ನಬೇಕು. ಇಲ್ಲಿಗೆ ಬಂದಾಗ ಹಾಗೇ ಹೇಳಬೇಕು ಅಂದುಕೊಂಡ. ಮರುಕ್ಷಣವೇ ಅದು ಅವಳಿಗೆ ಗೊತ್ತಿಲ್ಲವೇ ಅನ್ನಿಸಲು ಶುರುವಾಯಿತು. ಸೆಮಿನಾರ್‌ಗೆ ಚೆನ್ನೈಗೆ ಹೋಗುವುದಕ್ಕಿಂತ ನಿಮ್ಮ ಜತೆ ಮಾತನಾಡುವುದು ಮುಖ್ಯ ಅಂದರೇನು? ಹತ್ತಾರು ಅಸಾಧ್ಯ ಎನ್ನಿಸುವಂತಹ ಸಾಧ್ಯತೆಗಳು ಸುಳಿದು ಮರೆಯಾದವು.

ಆಸ್ಪತ್ರೆಯಲ್ಲಿ ನೋಡಿದಾಗಲೇ ಹೆಂಗಸಿನಂತಾಗಿದ್ದಳು. ಕಣ್ಣುಗಳಲ್ಲಿ ಹೊಳಪು ಕಾಣೆಯಾಗಿತ್ತು. ದೇಹ ಸ್ಥೂಲವಾಗುವ ಪ್ರಕ್ರಿಯೆಗೆ ತೆರೆದುಕೊಂಡಿತ್ತು. ಪ್ರಾಯದಲ್ಲಿ ಸುಂದರವಾಗಿದ್ದಳು ಎಂಬ ಛಾಯೆಯಷ್ಟೇ ಉಳಿದಿತ್ತು. ಈಗ ಹೇಗಿದ್ದಾಳೋ, ಸಾಂತ್ವನ ಹೇಳಬೇಕಾದ ಮಗ ಸಾವಿರಾರು ಕಿಲೋಮೀಟರು ದೂರದಲ್ಲಿದ್ದಾನೆ. ಮಗನ ಬಳಿಗೆ ಹೋಗಲು ಚಡಪಡಿಸುತ್ತಿರಬಹುದೇ? ಹಣಕಾಸಿನ ತೊಂದರೆಗಳು ಇರಲಿಕ್ಕಿಲ್ಲ.

ಗಂಡನನ್ನು ಕಳೆದುಕೊಂಡ ಮೇಲೆ ಹೇಗೆ ಬದುಕಿದಳು. ಮಗನನ್ನು ಹೇಗೆ ಬೆಳೆಸಿದಳು? ಗಂಡ ಸತ್ತ ಮೇಲೆ ಅವಳೇ ಬರೆದ ಪತ್ರಕ್ಕೆ ಉತ್ತರಿಸಿ ಸಾಂತ್ವನ ಹೇಳಬೇಕಿತ್ತು ಎಂದು ಅನ್ನಿಸಲು ಶುರುವಾಯಿತು. ಸಾಂತ್ವನ ಹೇಳುವ ನೆಪದಲ್ಲಿ ಪತ್ರ ಬರೆಯುವುದರ ಹಿಂದೆ `ಸ್ವಾರ್ಥ~ವಿದೆ ಎಂದು ಅವಳು ಭಾವಿಸುವ ಸಾಧ್ಯತೆ ಹೆಚ್ಚು ಅನ್ನಿಸಿ ಹಿಂಜರಿದಿದ್ದ.

ಈಗ ಅವಳೇ ಎಲ್ಲವನ್ನೂ ಹೇಳಿಕೊಂಡು ತನ್ನ ಸಮಸ್ಯೆಗಳಿಗೆ ಸಲಹೆ ಬಯಸಿದ್ದಾಳೆ. ನನ್ನ ಸಮಸ್ಯೆಗಳಿಗೆ ಪರಿಹಾರ ಸೂಚಿಸುವ ಅಧಿಕಾರ ನಿನಗಿದೆ ಅವಳು ಭಾವಿಸಿ ಪತ್ರ ಬರೆದಿರಬಹುದೇ? ಅವಳ ಸಮಸ್ಯೆಗಳಿಗೆ ಸ್ಪಂದಿಸುವುದು ನನ್ನ ಕರ್ತವ್ಯ ಅಲ್ಲವೇ ಎಂದು ಯೋಚಿಸಲು ಆರಂಭಿಸಿದ. ಒಮ್ಮೆ ಸಂಬದ್ಧವಾಗಿ ಮರುಕ್ಷಣವೇ ಅಸಂಬದ್ಧವಾಗಿ ಯೋಚನೆಗಳು ಹರಿದಾಡಿದವು...

ಪತ್ರ ಓದಿದ ಕ್ಷಣದಿಂದ ನೆಮ್ಮದಿ ಹಾಳಾಯಿತು. ಅನಿರುದ್ಧ ಮನಸ್ಸಿನ ಭಿತ್ತಿಯಿಂದಲೇ ಮರೆಯಾದ. ಆ ಸ್ಥಾನಕ್ಕೆ ಅವಳು ಬಂದಿದ್ದಳು. ಎಷ್ಟೇ  ಪ್ರಯತ್ನ ಪಟ್ಟರೂ ಯೋಚನೆಗಳನ್ನು ಹತ್ತಿಕ್ಕಲು ಆಗಲೇ ಇಲ್ಲ. ಅವಳ ಅಸಹಾಯಕತೆಗೆ ನನ್ನ ಬಳಿ  ಪರಿಹಾರ ಇದೆ ಎನ್ನುವುದಾದರೆ ಆ ಪರಿಹಾರ ಏನು? ಮತ್ತೆ ಅವಳ ಜತೆ... ಹೀಗೆ ಇಲ್ಲದ ಅಸಾಧ್ಯತೆಗಳನ್ನು ಕುರಿತು ಯೋಚಿಸಿದ. ಒಂದಕ್ಕೂ ಸ್ಪಷ್ಟರೂಪ ಸಿಗಲಿಲ್ಲ. ಹೀಗೆ ಯೋಚಿಸುತ್ತ ಹೋದರೆ ನೆಮ್ಮದಿ ಕಳೆದುಕೊಳ್ಳುತ್ತೇನೆ ಅನ್ನಿಸಲು ಶುರುವಾಯಿತು.

ಮುಂದಿನ ತಿಂಗಳು ಅವಳು ಇಲ್ಲಿಗೆ ಬಂದ ನಂತರ ಮುಖಾಮುಖಿಯಾಗಿ ಅವಳ ಮಾತುಗಳನ್ನು ಕೇಳುವ ಬದಲು ಫೋನ್ ಮಾಡಿ ಮಾತನಾಡಲೇ ಎಂದು ಯೋಚಿಸಿದ. ಎದುರಲ್ಲಿ ಕುಳಿತು ಆಡುವ ಮಾತುಗಳಿಗೆ ಏನನ್ನೂ ಅಸಂಬದ್ಧವಾಗಿ ಹೇಳುವ ಬದಲು ಫೋನ್‌ನಲ್ಲಿ ಮಾತನಾಡುವುದೇ ಸರಿ ಎಂಬ ನಿರ್ಧಾರಕ್ಕೆ ಬಂದ. ಆದರೆ ಫೋನ್ ಮಾಡಲು ಹೋದರೆ ಮನಸ್ಸು ಹಿಂಜರಿಯಿತು. ಅವಳೇ ರಿಸೀವರ್ ಎತ್ತಿಕೊಂಡರೆ ಸರಿ. ಮನೆಯಲ್ಲಿ ಬೇರೆ ಯಾರಿದ್ದಾರೋ? ಯಾರೆಂದು ಕೇಳಿದರೆ ಏನು ಉತ್ತರ ಹೇಳುವುದು? ಯೋಚಿಸಿದ. ಇಡೀ ದಿನ ಇಂಥವೇ ಯೋಚನೆಗಳು.

ಮನಸ್ಸಿನಲ್ಲಿ ಅನ್ನಿಸಿದಂತೆ ಮಾಡಲು ಆಗುತ್ತಿಲ್ಲ. ಅವಳು ಪರಿಚಯವಾದ ಹೊಸದರಲ್ಲಿ ಅವಳನ್ನು ಕುರಿತಂತೆ ಕಲ್ಪಿಸಿಕೊಂಡ ಪರಿಯನ್ನು ಕುರಿತು ಯೋಚಿಸಿದ. ಒಂದೂ ಸ್ಪಷ್ಟವಾಗುತ್ತಿಲ್ಲ. ಈ ವಯಸ್ಸಿಗೆ ಕಲ್ಪನೆಗಳೂ ದುಬಾರಿ ಅನ್ನಿಸತೊಡಗಿತ್ತು. ಹಲವು ರಾತ್ರಿ ಎಷ್ಟೋ ಹೊತ್ತಿತನಕ ಇಂಥವೇ ಯೋಚನೆಗಳು. ನಿದ್ದೆ ಇಲ್ಲದೆ ಹೊರಳಾಡಿ ಬೆಳಗಿನ ಜಾವದ ಹೊತ್ತಿಗೆ ನಿದ್ದೆಗೆ ಜಾರುತ್ತಿದ್ದ. ಹಾಗೆ ನಿದ್ದೆಗೆ ಜಾರು ಹೊತ್ತಿನಲ್ಲೇ ಒಂದು ಕನಸು ಕಂಡ.

ಅವಳ ಜತೆಯಲ್ಲಿ ಮತ್ತೆ ಸಂಸಾರ ಹೂಡಿದಂತೆ. ಮದುವೆ ಆಗದೆ ಒಟ್ಟಿಗೆ ಬದುಕುವ ಅಧುನಿಕರ ಹಾಗೆ. ಕೆಲವೇ ಕ್ಷಣಗಳ ಪುಟ್ಟ ಕ್ಷಣಗಳ ಕನಸು... ಅನಿರುದ್ಧ ಮತ್ತು ಜೆನ್ನಿ ಮನೆಗೆ ಬಂದಿದ್ದಾರೆ. ಅನಿರುದ್ಧ ಹೇಳಿದ `ಅಪ್ಪ ಒಳ್ಳೆಯ ಕೆಲಸ ಮಾಡಿದಿರಿ... ಈ ವಯಸ್ಸಿನಲ್ಲಿ ಒಂಟಿಯಾಗಿರುವ ಬದಲು... ಇದೇ ಸರಿ... ನನಗೆ ಸಂತೋಷವಾಗಿದೆ~.

ಕಂಡದ್ದು ಕನಸು ಎಂಬುದು ಅರಿವಿಗೆ ಬಂತು. ನಮ್ಮ ಸಂಬಂಧಕ್ಕೆ ಅನಿರುದ್ಧ ಒಪ್ಪಿಗೆ ಕೊಟ್ಟ ಎಂಬ ಸಂತಸದ ಭಾವ ಉಳಿಯಲಿಲ್ಲ. ಇಂಥದೊಂದು ಸಾಧ್ಯತೆಯನ್ನು ಅವನ್ನು ಎಚ್ಚರ ಸ್ಥಿತಿಯಲ್ಲೂ ಊಹಿಸಿದ್ದ. ಆದರೆ ಅದಕ್ಕೆ ಸ್ಪಷ್ಟ ರೂಪ ಸಿಕ್ಕಿರಲಿಲ್ಲ....

ಮಾರನೇ ದಿನ ಆಫೀಸಿಗೆ ಬರುವ ಹೊತ್ತಿಗೆ ಅವನ ಟೇಬಲ್ ಮೇಲೆ ಒಂದು ಪತ್ರ! ಅವಳ್ದ್ದದೇ ಪತ್ರ ಅನ್ನಿಸಿತು. ನಿಜವಾಗಿಯೂ ಅವಳದೇ. ಆತಂಕಗೊಳ್ಳದೆ ಸಾವಧಾನವಾಗಿ ಒಡೆದ.

`ಈ ಪತ್ರವನ್ನು ಏರ್‌ಪೋರ್ಟಿನಲ್ಲಿ ಕುಳಿತು ಬರೆಯುತ್ತಿದ್ದೇನೆ. ಕಳೆದ ವಾರ ಮಗ ಆಸ್ಟ್ರೇಲಿಯಾದಿಂದ ಬಂದ. ತೋಟವನ್ನು ಮಾರಾಟ ಮಾಡಿದೆ. ಮಗನ ಜತೆ ಆಸ್ಟ್ರೇಲಿಯಾಕ್ಕೆ ಹೊರಟ್ಟಿದ್ದೇನೆ. ಮತ್ತೆ ಇಂಡಿಯಾಕ್ಕೆ ಬರುತ್ತೇನೋ ಇಲ್ಲವೋ. ನಿಮ್ಮ ಜತೆ ಮಾತನಾಡುವ ಆಸೆ ಉಳಿದು ಹೋಯಿತು. 

ನನಗೆ ಜನ್ಮಾಂತರಗಳಲ್ಲಿ ನಂಬಿಕೆ ಇಲ್ಲ... ಈ ಜನ್ಮಕ್ಕೆ ಇಷ್ಟು ಸಾಕು. ನನ್ನನ್ನು ಕ್ಷಮಿಸಿ...~

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT