ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆಯೊಳಗೊಂದು ಕಥೆ ಹುಟ್ಟಿ...

Last Updated 17 ಮೇ 2012, 19:30 IST
ಅಕ್ಷರ ಗಾತ್ರ

`ಚಿತ್ರದ ಒಂದು ಕಥೆ ಜೊತೆಗೆ ಮತ್ತೊಂದು ಕಥೆಯಿದೆ. ಎರಡು ಕಥೆಗಳಿರುವುದನ್ನು ಸೂಚಿಸುವ ಸಲುವಾಗಿ ಶೀರ್ಷಿಕೆಯನ್ನು ಈ ರೀತಿ ಇಟ್ಟಿದ್ದೇವೆ~ ಎಂದು ಕುತೂಹಲಕ್ಕೆ ಅರ್ಧ ತೆರೆ ಎಳೆದರು ನಿರ್ದೇಶಕ ಜಗದೀಶ್ ಕೆ.ಆರ್.

ಅವರ ಚಿತ್ರದ ಹೆಸರು `ಸ್ಟೋರಿ ಕಥೆ~. ಹೆಸರು ವಿಚಿತ್ರವಾಗಿದೆಯಲ್ಲ ಎಂದು ನೋಡಿದ ಕೂಡಲೇ ಅನಿಸುತ್ತದೆ. ಹಾಗೆ ಅನಿಸಬೇಕು ಎನ್ನುವುದು ಜಗದೀಶ್ ಬಯಕೆ. ಕಾರಣ ಇದೊಂದು ಥ್ರಿಲ್ಲರ್ ಸಿನಿಮಾ.

ಈ ಎರಡೂ ಕಥೆಗಳು ಸಮನಾಂತರವಾಗಿ ಎರಡು ಹಳಿಗಳ ಮೇಲೆ ಚಲಿಸುತ್ತವೆ ಎಂದರು ಜಗದೀಶ್. ಚಿತ್ರದ ಕಥೆ ತೀರಾ ಅಪರೂಪದ್ದು. ಇಂತಹ ಪ್ರಯತ್ನವನ್ನು ಯಾರೂ ಕನ್ನಡದಲ್ಲಿ ಮಾಡಿಲ್ಲ ಎಂದು ಹೇಳಿಕೊಂಡ ಅವರು ಕಥೆಯ ಎಳೆಯನ್ನು ಬಿಚ್ಚಿಡುವ ಮನಸ್ಸು ಮಾಡಲಿಲ್ಲ. ಪ್ರೇಕ್ಷಕ ಕುತೂಹಲದಿಂದ ಚಿತ್ರಮಂದಿರಕ್ಕೆ ಬಂದು ಅಲ್ಲಿಯೇ ಥ್ರಿಲ್ ಅನುಭವಿಸಲಿ ಎನ್ನುವುದು ಅವರ ಆಶಯ.

ಸುನೀಲ್ ಕುಮಾರ್ ದೇಸಾಯಿ ಬಳಿಕ ಥ್ರಿಲ್ಲರ್ ಚಿತ್ರಗಳನ್ನು ನಿರ್ದೇಶಿಸುವವರ ಸಂಖ್ಯೆ ಕಡಿಮೆಯಾಗಿದೆ ಎನ್ನುವುದು ಅವರ ಅಭಿಪ್ರಾಯ. ಈ ಚಿತ್ರ ಮತ್ತೆ ಅಂತಹ ಪ್ರಯತ್ನಗಳು ಗರಿಗೆದರಲು ಪ್ರೇರಣೆ ನೀಡಲಿದೆ ಎಂಬ ಭರವಸೆ ಅವರದು.

ಇದೊಂದು ಮನೋವೈಜ್ಞಾನಿಕ ರೋಮಾಂಚನಕಾರಿ ಚಿತ್ರ ಎಂದರು ನಟ ತಿಲಕ್. ಚಿತ್ರದಲ್ಲಿ ಅವರದು ಪ್ರಮುಖ ಪಾತ್ರ. ವೈದ್ಯಕೀಯ ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರು ನಿರ್ದೇಶಕರ ಆದಿಯಾಗಿ ಚಿತ್ರತಂಡ ಎಲ್ಲೂ ಹೊಸಬರದು ಎಂಬ ಭಾವನೆ ಮೂಡದಂತೆ ಕೆಲಸ ಮಾಡಿದೆ ಎಂದು ಶ್ಲಾಘಿಸಿದರು.

ಚಿತ್ರದ ಉಳಿದ ಮೂರು ಪ್ರಮುಖ ಪಾತ್ರಗಳಲ್ಲಿ ಹೊಸ ಮುಖಗಳು ಕಾಣಿಸಿಕೊಂಡಿವೆ. ನೇಹಾ ಪಾಟೀಲ್, ಪಾರ್ವತಿ ನಾಯರ್ ಮತ್ತು ಪ್ರತಾಪ್ ನಾರಾಯಣ್‌ಗೆ ಮೊದಲ ಬಾರಿಗೆ ಬಣ್ಣ ಹಚ್ಚುವ ಅವಕಾಶ ಒದಗಿಬಂದಿವೆ.

ರಘುದೀಕ್ಷಿತ್ ಅವರ ಸಹೋದರ ವಾಸು ದೀಕ್ಷಿತ್ ಮೊದಲ ಬಾರಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಅವರೊಂದಿಗೆ ಸತೀಶ್ ಬಾಬು ಕೈ ಜೋಡಿಸಿದ್ದಾರೆ. ಚಿತ್ರೀಕರಣೋತ್ತರ ಕಾರ್ಯಗಳನ್ನೂ ಪೂರ್ಣಗೊಳಿಸಿರುವ ಚಿತ್ರತಂಡ ಮೊದಲ ಪ್ರತಿಗಾಗಿ ಎದುರು ನೋಡುತ್ತಿದೆ. ಜೂನ್‌ನಲ್ಲಿ ಮುಂಗಾರುಮಳೆಯ ತಣ್ಣನೆಯ ವಾತಾವರಣದಲ್ಲಿ ಪ್ರೇಕ್ಷಕನಿಗೆ ಥ್ರಿಲ್ ನೀಡುವುದು ಚಿತ್ರತಂಡದ ಉದ್ದೇಶ.  
                                  
          

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT