ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಕಗಿರಿ: ಕೂಲಿ ಅರಸಿ ಮಕ್ಕಳ ಜತೆಗೆ ಗುಳೆ

Last Updated 19 ಡಿಸೆಂಬರ್ 2013, 10:45 IST
ಅಕ್ಷರ ಗಾತ್ರ

ಕನಕಗಿರಿ: ಇಲ್ಲಿಗೆ ಸಮೀಪದ ಕರಡೋಣ ಹಾಗೂ ಚಿಕ್ಕ ಡಂಕನಕಲ್‌ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಕಿ ಮತ್ತು ಜೀರಾಳ ಗ್ರಾಮದ ನೂರಾರು ಕೂಲಿಕಾರರು ಬುಧವಾರ ಕೂಲಿ ಅರಸಿ ಯಾದಗಿರಿ ಜಿಲ್ಲೆಯ ಕಡೆಗೆ ಪ್ರಯಾಣ ಬೆಳಸಿದರು.

ಗ್ರಾಮದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೂಲಿ ಕೊಡದ ಕಾರಣ  ಸುರಪುರ ತಾಲ್ಲೂಕಿನಲ್ಲಿ ಬತ್ತದ ಸಸಿ ಹಚ್ಚುವ ಕೆಲಸ ಜೋರಾಗಿದ್ದು ತಾವು ಅಲ್ಲಿಗೆ ಪ್ರಯಾಣ ಬೆಳಸಿರುವುದಾಗಿ ಅವರು ಪತ್ರಕರ್ತರಿಗೆ ತಿಳಿಸಿದರು.

ಕನಕಗಿರಿ, ಹುಲಿಹೈದರ ಮತ್ತು ನವಲಿ ಕಂದಾಯ ಗ್ರಾಮಗಳ ರೈತರು ನೀರಾವರಿ  ಸೌಲಭ್ಯದ ಯೋಜನೆ ಯಿಂದ ವಂಚಿತಗೊಂಡಿದ್ದು ಒಣ ಭೂಮಿ ಪ್ರದೇಶ ನಂಬಿ ವ್ಯವಸಾಯ ಮಾಡುತ್ತಾರೆ, ಕಳೆದ ಮೂರು ವರ್ಷಗಳಿಂದಲೂ ಈ ಭಾಗದಲ್ಲಿ ’ಬರ’ ಆವರಿಸಿಕೊಂಡ ಕಾರಣ ’ಗುಳೆ’ ನಿರಂತರವಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿಯೂ ಹೇಳಿಕೊ ಳ್ಳುವಂತ ಮಳೆ ಬಿದ್ದಿಲ್ಲ, ದುಡಿಯಲು ಕೂಲಿ ಕೆಲಸ ಸಹ ಇಲ್ಲ ಹೀಗಾಗಿ ಮಕ್ಕಳು ಮರಿಗಳೊಂದಿಗೆ ಕೂಲಿಗಾಗಿ ಬಾಡಿಗೆ ಕ್ಯಾಂಟರ್‌  ವಾಹನ ಮಾಡಿಕೊಂಡು ಸುರಪುರ ದತ್ತ ಹೊರ ಟಿದ್ದೇವೆ ಎಂದು  ಜೀರಾಳ ಗ್ರಾಮದ ಲಕ್ಷ್ಮಿ ಉದ್ಯಾಳ ಅಳಲು ತೋಡಿಕೊಂಡರು.

ಕರಡೋಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಡಕಿ ಗ್ರಾಮದಲ್ಲಿ ಕೂಲಿ ಕೆಲಸ ಆರಂಭಿಸಿಲ್ಲ, ಖಾತರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಸರಿಯಾದ ಸಮಯಕ್ಕೆ ದುಡ್ಡು ಬರುವುದಿಲ್ಲ, ಎಲ್ಲಿ ದುಡಿದರೂ ಅಷ್ಟೆ ಅಂತ  ಬತ್ತದ ಸಸಿ ಹಚ್ಚುವ ಕೆಲಸಕ್ಕೆ ಹೋಗುತ್ತಿದ್ದೇವೆ ಎಂದು ಕೂಲಿಕಾರ ಹನುಮಂತ ಹಬ್ಬುಲಿ ಹೇಳಿದರು.

ಶಾಲಾ ಮಕ್ಕಳು ಗುಳೆ: ಜೀರಾಳ ಗ್ರಾಮದ ಯಂಕೋಬ ಯಮನಪ್ಪ (7ನೇ ತರಗತಿ), ದುರಗಮ್ಮ ನಾಗರಾಜ (3ನೇ ತರಗತಿ), ದುರಗಪ್ಪ ಶರಣಪ್ಪ (3ನೇ ತರಗತಿ) ಸೇರಿದಂತೆ ವಡಕಿ ಮತ್ತು ಜೀರಾಳ ಗ್ರಾಮದ ಹತ್ತಾರು ಶಾಲಾ ಮಕ್ಕಳು ಶಾಲಾ ಸಮವಸ್ತ್ರದಲ್ಲಿ ವಾಹನ ಏರಿದ್ದು ಕಂಡು ಬಂತು.

’ಮನೆಯ ಎಲ್ಲಾ ಸದಸ್ಯರು ಕೂಲಿಗೆ ಹೊಂಟಿವಿ, ಹುಡುಗಿ ಒಬ್ಬಾಕೆಯನ್ನು ಮನೆಯಲ್ಲಿ ಬಿಟ್ಟು ಹೋಗಾಕ, ಆಗಲ್ಲ, ನಮ್ಮ ಜತೆ ಮಗಳು ಬಂದಾಳ ರೀ ’ ಎಂದು ವಡಕಿ ಗ್ರಾಮದ ಎಂ. ರಾಮಣ್ಣ ತಿಳಿಸಿದರು.

ಒಂದು ಎಕರೆ ಬತ್ತದ ಸಸಿ ನಾಟಿ ಮಾಡಿದರೆ ₨ 1200–1500 ಕೊಡುತ್ತಾರೆ, ಇಲ್ಲಿ  ಕೂಲಿ ಕೆಲಸ ಇಲ್ಲ ಹೊಟ್ಟೆ ತುಂಬಿಸಿಕೊಳ್ಳುವುದಕ್ಕೆ ದೂರ ಹೋಗುತ್ತಿದ್ದೇವೆ ಎಂದು ಜೀರಾಳದ ರೇಣುಕಮ್ಮ, ಶರಣಮ್ಮ ತಿಳಿಸಿದರು. ಎರಡು ವಾಹನದಲ್ಲಿ ದಿನ ನಿತ್ಯ ಬೇಕಾಗುವ ಅಡುಗೆ ಪಾತ್ರೆ ಸಾಮಾಗ್ರಿ, ಕಾಳು, ಕಡಿ, ಜೋಳ, ಕಟ್ಟಿಗೆ, ಕೊಡ ಸೇರಿದಂತೆ ಸಾಮಾನು ಸರಂಜಾಮು ಗಳೊಂದಿಗೆ ಪ್ರಯಾಣ ಬೆಳಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT