ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನಸುಗಳ ಸರ್ದಾರ

Last Updated 28 ಜೂನ್ 2012, 19:30 IST
ಅಕ್ಷರ ಗಾತ್ರ

 `ನಾಲ್ಕಾರು ಹಾಡು, ಏಳೆಂಟು ಫೈಟು, ಕತೆಗೆ ನಾಯಕ, ಅವನಿಗೆ ನಾಯಕಿ... ಈ ರೀತಿಯ ಕತೆಯಲ್ಲ ನನ್ನದು~ ಎಂದರು ಇಮ್ರಾನ್ ಸರ್ದಾರಿಯಾ. ಅನುಭವಿ ನೃತ್ಯ ನಿರ್ದೇಶಕರೊಬ್ಬರು ಸಿನಿಮಾ ಚುಕ್ಕಾಣಿ ಹಿಡಿದಾಗ ನಿರೀಕ್ಷೆಗಳು ಸಹಜ. ಆ ನಿರೀಕ್ಷೆಗಳಿಗೆ ಚ್ಯುತಿ ಬರದಂತೆ ಸಿನಿಮಾ ಮಾಡಬೇಕು ಎನ್ನುವ ಕನಸಿನೊಂದಿಗೆ ಮೊದಲ ಬಾರಿಗೆ ನಿರ್ದೇಶನಕ್ಕಿಳಿದಿದ್ದಾರೆ ಇಮ್ರಾನ್.

ಸ್ನೇಹಿತರಾದ ದಿಗಂತ್, ಯೋಗೀಶ್ ಹಾಗೂ ಪ್ರೀತಿಯ ಶಿಷ್ಯ ಪ್ರಜ್ವಲ್ ದೇವರಾಜ್ ಅವರನ್ನೊಳಗೊಂಡ ಬಹುತಾರಾಗಣದ ಹೊಸ ಚಿತ್ರಕ್ಕೆ ಅವರು ಮುನ್ನುಡಿ ಬರೆದಿದ್ದಾರೆ. ಅದೊಂದು ಸಾಹಸ ಪ್ರಧಾನ ಹಾಸ್ಯಚಿತ್ರವಂತೆ.

ನಗರದ ಒಂದು ಪ್ರದೇಶದಲ್ಲಿ ನಡೆಯುವ ಕತೆಯನ್ನು ಚಿತ್ರ ಒಳಗೊಂಡಿದೆಯಂತೆ. ಕತೆ ಕೇಳುತ್ತಿದ್ದಂತೆ ಒಪ್ಪಿದ್ದು ಇಮ್ರಾನ್‌ರನ್ನು ಚಿತ್ರರಂಗಕ್ಕೆ ಕರೆತಂದವರಲ್ಲಿ ಒಬ್ಬರಾದ ನಿರ್ಮಾಪಕ ಕೆ. ಮಂಜು. ಇಮ್ರಾನ್ ಬಳಿ ಎರಡು ಮೂರು ಕತೆಗಳಿದ್ದರೂ ಮಂಜು ಈ ಕತೆಗೇ ಮನ ಸೋತಿದ್ದಾರೆ.

ಚಿತ್ರಕ್ಕೆ ಇನ್ನೂ ನಾಮಕರಣವಾಗಿಲ್ಲ. ನಿರ್ದೇಶಕರೊಳಗೆ ಈಗಾಗಲೇ ನಾಲ್ಕೈದು ಹೆಸರು ಓಡಾಡುತ್ತಿವೆ. ಅಲ್ಲದೆ ಪೋಷಕ ನಟ ವರ್ಗ ಇನ್ನಷ್ಟೇ ಅಂತಿಮಗೊಳ್ಳಬೇಕಿದೆ. ಸಂಗೀತ ನಿರ್ದೇಶನ ಹರಿಕೃಷ್ಣ ಅವರದ್ದು. ಸತ್ಯ ಹೆಗಡೆ ಕ್ಯಾಮೆರಾ ಹಿಡಿದರೆ ಸಂಕಲನದ ಹೊಣೆ ಹೊತ್ತವರು ದೀಪು. ಸೆಪ್ಟೆಂಬರ್ ವೇಳೆಗೆ ಚಿತ್ರ ಸೆಟ್ಟೇರಲಿದೆ.

ಈ ಮಧ್ಯೆ ಇಮ್ರಾನ್ ಇಬ್ಬರು ನಾಯಕಿಯರ ಹುಡುಕಾಟದಲ್ಲಿದ್ದಾರೆ, ಅವರು ಕನ್ನಡದವರೇ ಆಗಿರಬೇಕು ಎಂಬ ನಿರ್ಧಾರದೊಂದಿಗೆ. ಕತೆಗೆ ತಕ್ಕಂತೆ ಕಿರುತೆರೆ ಹಿನ್ನೆಲೆಯ ನಟಿಯೊಬ್ಬರ ಹುಡುಕಾಟ ನಡೆಯುತ್ತಿದೆ. ಅಲ್ಲದೆ ಪ್ರೀತಿಯ ಸಿಂಚನ ಮಾಡಲು ಮತ್ತೊಬ್ಬ ನಾಯಕಿ.
 
ಮೂವರು ನಾಯಕರಿಗೆ ಇಬ್ಬರು ನಾಯಕಿಯರೇ? ಎಂದರೆ ಅವರದು ತುಂಟ ನಗು. ಅಲ್ಲೇ ಇರುವುದು ಕತೆ ಎಂಬ ಚುಟುಕು ಉತ್ತರ. ಚಿತ್ರದ ಸಂಭಾಷಣೆ ಕೂಡ ಅವರದೇ.
ಹಾಗೆ ನೋಡಿದರೆ ಮೊದಲು ಅವರು ಉಪೇಂದ್ರರ ಚಿತ್ರವೊಂದನ್ನು ನಿರ್ದೇಶಿಸಬೇಕಿತ್ತು.

ಆದರೆ `ಕಲ್ಪನಾ ಹಾರರ್~ ಹಾಗೂ `ಟೋಪಿವಾಲ~ ಚಿತ್ರದ ಬಳಿಕವಷ್ಟೇ ಉಪ್ಪಿ ಲಭಿಸಲಿದ್ದಾರೆ. ಹೀಗಾಗಿ ಸದ್ಯಕ್ಕೆ ಆ ಯೋಜನೆಯನ್ನು ಮುಂದೂಡಲಾಗಿದೆ.

ಹೀಗೆ ಮಾತನಾಡುತ್ತಲೇ ಇಮ್ರಾನ್ ತಮ್ಮ ಹಿಂದಿನ ದಿನಗಳಿಗೆ ಸರಿದರು. ತರಗತಿಗಳಿಗೆ ಚಕ್ಕರ್ ಹೊಡೆದು ನೃತ್ಯದಲ್ಲಿ ಮುಳುಗುತ್ತಿದ್ದ ಅವರ `ಪೂರ್ವಾಶ್ರಮ~ ಕೂಡ ಭಿನ್ನವಾಗಿದೆ. ಹುಟ್ಟಿದ್ದು ಚೆನ್ನೈನಲ್ಲಿ, ಬೆಳೆದಿದ್ದು ಮುಂಬೈನಲ್ಲಿ, ಇರುವುದು ಬೆಂಗಳೂರಿನಲ್ಲಿ ಎಂದು ಅವರ ಬಗ್ಗೆ ಹಾಡು ಕಟ್ಟಬಹುದು! ಮುಂಬೈನಲ್ಲಿ ಗಣೇಶ್ ಹೆಗಡೆ ಅವರ ನೃತ್ಯ ಕಾರ್ಯಕ್ರಮಗಳು ಇಮ್ರಾನ್‌ಗೆ ಪ್ರೇರಣೆ ನೀಡಿದವು. ಆ ನಂತರ ಬೆಂಗಳೂರಿನಲ್ಲಿ ತಮ್ಮದೇ ಆದ ನೃತ್ಯಶಾಲೆಯೊಂದನ್ನು ತೆರೆದರು.

ಅಲ್ಲಿಗೆ ಮಗಳನ್ನು ಕರೆದುಕೊಂಡು ಬರುತ್ತಿದ್ದ ನಟ ರಮೇಶ್ ಅರವಿಂದ್ ಇಮ್ರಾನ್‌ಗೆ ಚಿತ್ರರಂಗಕ್ಕೆ ಆಹ್ವಾನವಿತ್ತರು. ಅಲ್ಲಿಂದ ಮುಂದೆ ಶಿವರಾಜ್‌ಕುಮಾರ್, ಪುನೀತ್, ಉಪೇಂದ್ರ, ನಾಗತಿಹಳ್ಳಿ ಚಂದ್ರಶೇಖರ್ ಅವರೊಂದಿಗೆ ಕೆಲಸ ಮಾಡಿದ ಅನುಭವ.

ಪ್ರಜ್ವಲ್ ನೃತ್ಯ ಕಲಿತದ್ದು ಇಮ್ರಾನ್‌ರ ನೃತ್ಯಶಾಲೆಯಲ್ಲಿ. ಆದರೆ ಅವರ ಒಂದು ಹಾಡಿಗೂ ನೃತ್ಯ ನಿರ್ದೇಶನ ಮಾಡುವುದು ಇಮ್ರಾನ್‌ರಿಂದ ಸಾಧ್ಯವಾಗಿರಲಿಲ್ಲ. ಆದರೇನಂತೆ ತಮ್ಮ ಚಿತ್ರದಲ್ಲಿ ಪ್ರಜ್ವಲ್ ಪಾತ್ರ ಮಾಡುತ್ತಿರುವುದು ಅವರಿಗೆ ಖುಷಿ ಹಾಗೂ ಹೆಮ್ಮೆಯ ಸಂಗತಿ.

ಅಂದಹಾಗೆ ಹೊಸ ಚಿತ್ರಕ್ಕೆ ಇಮ್ರಾನ್ ಅವರದ್ದೇ ಕೊರಿಯೋಗ್ರಫಿ ಇದೆ. ಹಾಗಾಗಿ ಅವರ ನೃತ್ಯ ನಿರ್ದೇಶನದ ಝಲಕ್ ಕೂಡ ಚಿತ್ರದಲ್ಲಿ ಲಭ್ಯ. ನಿರ್ದೇಶಕರಾಗಿ ಬಡ್ತಿ ಪಡೆದ ಬಳಿಕವೂ ತಮ್ಮ ಮೂಲ ವೃತ್ತಿ ನೃತ್ಯ ನಿರ್ದೇಶನವನ್ನು ಕೈ ಬಿಡುವುದಿಲ್ಲವಂತೆ. ನಿರ್ದೇಶನ ಪ್ರವೃತ್ತಿ, ನೃತ್ಯ ನಿರ್ದೇಶನ ವೃತ್ತಿ ಎಂಬ ಧೋರಣೆ ಅವರದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT