ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಮಾಧ್ಯಮದಲ್ಲೇ ಶಿಕ್ಷಣ: ಸರ್ಕಾರ ಚಿಂತನೆ

Last Updated 26 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂಬುದು ಸರ್ಕಾರಕ್ಕೂ ಮನವರಿಕೆಯಾಗಿದೆ. ಆದರೆ, ಅದನ್ನು ಹೇಗೆ ಅನುಷ್ಠಾನಕ್ಕೆ ತರಬೇಕೆಂಬ ಜಿಜ್ಞಾಸೆ ಕಾಡುತ್ತಿದೆ. ಆದರೂ ಸರ್ಕಾರ ಈ ಬಗ್ಗೆ ಖಂಡಿತಾ ಚಿಂತನೆ ನಡೆಸಲಿದೆ~ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಸೋಮವಾರ ಇಲ್ಲಿ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್. ಅನಂತಮೂರ್ತಿ ಹಾಗೂ ಡಾ. ಕಂಬಾರರೂ ಸೇರಿದಂತೆ ಅನೇಕ ಹಿರಿಯರ ಆಶಯಕ್ಕೆ ಮನ್ನಣೆ ನೀಡುವ ನಿಟ್ಟಿನಲ್ಲಿ 1ರಿಂದ 10ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಲು ಸರ್ಕಾರ ಪರಿಶೀಲಿಸಲಿದೆ ಎಂದರು.

`ಕಳೆದ ಒಂದು-ಒಂದೂವರೆ ವರ್ಷದಿಂದ ದಿನ ಬೆಳಗಾದರೆ ಪತ್ರಿಕೆಗಳಲ್ಲಿ ಬೇರೆ ಬೇರೆ ರೀತಿಯ ಸುದ್ದಿಗಳನ್ನು ಓದಿ ಜನತೆಗೂ ಬೇಸರವಾಗಿತ್ತು. ಆದರೆ, ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ದಿನ ಜನತೆಗೆ ಭರವಸೆಯ ದಿನ. ಎಲ್ಲ ಪತ್ರಿಕೆಗಳಲ್ಲಿಯೂ ಕಂಬಾರರ ಸುದ್ದಿ ಓದಿ ಜನ ಪುಳಕಿತರಾದರು.
 
ಇನ್ನು ಮುಂದೆ ಇಂಥದೇ ದಿನಗಳು ಬರಲಿ ಎಂದು ನಾನು ಕೂಡ ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸುತ್ತೇನೆ~ ಎಂದು ಮುಖ್ಯಮಂತ್ರಿಗಳು ಹೇಳಿದಾಗ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಸಭಿಕರು ಚಪ್ಪಾಳೆ ಹೊಡೆದು ಹರ್ಷ ವ್ಯಕ್ತಪಡಿಸಿದರು.

ನಮ್ಮದೂ ಸ್ವಾರ್ಥ ಇದೆ: `ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದ ಕಂಬಾರರನ್ನು ಸರ್ಕಾರದ ಪರವಾಗಿ ಅಭಿನಂದಿಸುವುದರಲ್ಲಿ ನಮ್ಮದೂ ಸ್ವಲ್ಪ ಸ್ವಾರ್ಥ ಇದೆ. ಪರವಾಗಿಲ್ಲ, ಸರ್ಕಾರ ಕಂಬಾರರನ್ನು ಅಭಿನಂದಿಸುವಂತಹ ಒಳ್ಳೆಯ ಕೆಲಸ ಮಾಡಿದೆ ಎಂದು ಜನ ಭಾವಿಸುವುದರ ಜತೆಗೆ, ಇಂತಹ ಕೆಲಸಗಳಿಂದ ಸರ್ಕಾರದ ಗೌರವವೂ ಹೆಚ್ಚಿದಂತಾಗುತ್ತದೆ.

ಕಂಬಾರರು ಉತ್ತರ ಕರ್ನಾಟಕದವರು ಎಂಬ ಕಾರಣಕ್ಕೆ ಸಚಿವ ಕಾರಜೋಳ ಕೂಡ ಪ್ರಶಸ್ತಿ ಪ್ರಕಟವಾದ ದಿನದಿಂದಲೇ `ಸನ್ಮಾನ ಯಾವಾಗ ಮಾಡೋಣ ಸಾರ್~ ಎಂದು ಪಟ್ಟು ಹಿಡಿದರು. ಇದರಲ್ಲಿ ಅವರದೂ ಸ್ವಲ್ಪ ಸ್ವಾರ್ಥ ಅಡಗಿತ್ತು~ ಎಂದು ಮುಖ್ಯಮಂತ್ರಿಗಳು ನಗೆ ಚಟಾಕಿ ಹಾರಿಸಿದರು.

ಕಂಬಾರರ ಸಮಗ್ರ ಸಾಹಿತ್ಯ ಮರು ಮುದ್ರಣ: ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಎಂ. ಕಾರಜೋಳ, `ಡಾ. ಕಂಬಾರರ ಸಮಗ್ರ ಸಾಹಿತ್ಯವನ್ನು ಮರು ಮುದ್ರಣ ಮಾಡುವ ಮೂಲಕ ಜನತೆಗೆ ಸುಲಭ ಬೆಲೆಗೆ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ~ ಎಂದು ಪ್ರಕಟಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ, `ಒಂದರಿಂದ ಹತ್ತನೇ ತರಗತಿವರೆಗೆ ಕನ್ನಡ ಶಿಕ್ಷಣ ಮಾಧ್ಯಮವಾಗಿ ಉಳಿಯಬೇಕು. ಇಲ್ಲದಿದ್ದರೆ ಕನ್ನಡ ಅಡುಗೆ ಮನೆ ಭಾಷೆಯಾಗಿ ಉಳಿಯುವ ಅಪಾಯವಿದೆ~ ಎಂದು ಆತಂಕ ವ್ಯಕ್ತಪಡಿಸಿದರು.

`ಬೆಂಗಳೂರಿನಲ್ಲಿ ಮನಃಪೂರಕವಾಗಿ ಕನ್ನಡ ಕಲಿಯುವ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕಾಗಿದೆ. ಇಂಗ್ಲಿಷ್ ಭಾಷೆಗೆ ಸ್ವೀಕರಿಸುವ ಗುಣವಿರಬಹುದು. ಆದರೆ, ಕನ್ನಡವೂ ಶ್ರೀಮಂತ. ಗ್ರಹಿಸುವ ಶಕ್ತಿಗಾಗಿ ಇಂಗ್ಲಿಷ್ ಕಲಿತರೆ, ಜ್ಞಾನದ ವೃದ್ಧಿ ಹಾಗೂ ಅಭಿವ್ಯಕ್ತಿಗಾಗಿ ಕನ್ನಡ ಬಳಸಬೇಕಾಗಿದೆ~ ಎಂದರು.

`ಬೆಂಗಳೂರಿನ ಪ್ರತಿಯೊಂದು ಬಹುರಾಷ್ಟ್ರೀಯ ಕಂಪೆನಿಗಳಲ್ಲಿಯೂ ಇಂಗ್ಲಿಷ್ ಜತೆಗೆ ಕನ್ನಡವನ್ನು ಬಳಸಲು ಸರ್ಕಾರ ಕಾನೂನು ಜಾರಿಗೊಳಿಸಬೇಕು. ನಾವು ಭಾಷಾಂಧರಲ್ಲ ನಿಜ. ಆದರೆ, ನಗರದಲ್ಲಿ ಕನ್ನಡವನ್ನು ಗಟ್ಟಿಯಾಗಿ ಬೆಳೆಸಲು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಕೇವಲ ಕನ್ನಡ ನಾಡಿಗಷ್ಟೇ ಅಲ್ಲ, ಇಡೀ ಜಗತ್ತಿಗೇ ನಷ್ಟ~ ಎಂದರು.

ಇದೇ ಸಂದರ್ಭದಲ್ಲಿ ಕವಿ ಡಾ. ಚಂದ್ರಶೇಖರ ಕಂಬಾರ- ಸತ್ಯಭಾಮ ಕಂಬಾರ ದಂಪತಿಯನ್ನು ಸರ್ಕಾರದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಪ್ರಥಮ ಬಾರಿಗೆ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾದವರಿಗೆ ಸರ್ಕಾರದ ವತಿಯಿಂದ ಐದು ಲಕ್ಷ ರೂಪಾಯಿ ಗೌರವಧನದ ಚೆಕ್ ನೀಡಲಾಯಿತು. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಬಸವರಾಜು ಸ್ವಾಗತಿಸಿದರು. ಆಯುಕ್ತ ಮನು ಬಳಿಗಾರ್ ವಂದಿಸಿದರು. ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ಜಾನಪದ ಪರಿಷತ್ತಿನ ಅಧ್ಯಕ್ಷ ಜಿ. ನಾರಾಯಣ ಸೇರಿದಂತೆ ಅನೇಕ ಸಾಹಿತಿಗಳು ಸಮಾರಂಭಕ್ಕೆ ಸಾಕ್ಷಿಯಾದರು.

ವಿವಿ ಮಾದರಿ ಶಿಕ್ಷಣ ಕೇಂದ್ರ ಸ್ಥಾಪನೆ: ಕಂಬಾರ ಸಲಹೆ
ಬೆಂಗಳೂರು:
ಎಲ್‌ಕೆಜಿಯಿಂದ ಹಿಡಿದು ಸ್ನಾತಕೋತ್ತರ ಪದವಿವರೆಗೆ ಕನ್ನಡದಲ್ಲಿಯೇ ಬೋಧನೆ ಮಾಡುವಂತಹ ವಿಶ್ವವಿದ್ಯಾಲಯ ಮಾದರಿಯ ಒಂದು ಶಿಕ್ಷಣ ಕೇಂದ್ರವನ್ನು ಸ್ಥಾಪಿಸುವಂತೆ ಡಾ. ಚಂದ್ರಶೇಖರ ಕಂಬಾರ ಅವರು ಸಲಹೆ ನೀಡಿದರು.

ರಾಜ್ಯ ಸರ್ಕಾರದಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, `ಕನ್ನಡ ಭಾಷೆಯ ಅಗತ್ಯತೆಗಳನ್ನು ಪೂರೈಸಲು ಹಾಗೂ ಶಿಕ್ಷಣ ವ್ಯವಸ್ಥೆಯ ನ್ಯೂನತೆ-ಕೊರತೆಗಳ ಬಗ್ಗೆ ಚರ್ಚಿಸಲು ಇದರಿಂದ ಸಹಕಾರಿಯಾಗಲಿದೆ~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT