ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಶಾಲೆ ಮುಚ್ಚುವ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ

Last Updated 1 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಸ್ತಾವ ಸರ್ಕಾರದ ಮುಂದೆ ಇದ್ದರೆ ತಕ್ಷಣವೇ ಅದನ್ನು ಕೈಬಿಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಪ್ರೊ.ಬಿ.ಕೆ.ಚಂದ್ರಶೇಖರ್ ಮತ್ತು ಪ್ರಧಾನ ಕಾರ್ಯದರ್ಶಿ ಡಾ.ಎಲ್.ಹನುಮಂತಯ್ಯ ಒತ್ತಾಯಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, `ತೀರಾ ಕಡಿಮೆ ವಿದ್ಯಾರ್ಥಿಗಳು ಇರುವ ಶಾಲೆಗಳ ನಿರ್ವಹಣೆ ಆರ್ಥಿಕವಾಗಿ ಹೊರೆಯಾಗುತ್ತಿದೆ ಎಂಬ ಕಾರಣ ನೀಡಿ ಅಂತಹ ಶಾಲೆಗಳನ್ನು ಮುಚ್ಚಲು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಮುಂದಾಗಿದ್ದಾರೆ. ಆದರೆ, ಇದು ಸರಿಯಾದ ನಿರ್ಧಾರವಲ್ಲ. ಶಾಲೆಗಳನ್ನು ಮುಚ್ಚುವ ಮೊದಲು ಶಾಲೆಯಿಂದ ದೂರ ಉಳಿದಿರುವ ಆರು ಲಕ್ಷ ಮಕ್ಕಳನ್ನು ತಲುಪುವ ಪ್ರಯತ್ನ ಮಾಡಬೇಕು' ಎಂದು ಆಗ್ರಹಿಸಿದರು.

ಸಮೀಕ್ಷೆಯ ಪ್ರಕಾರ ಆರು ಲಕ್ಷ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಆ ಮಕ್ಕಳನ್ನು ಶಾಲೆಗಳಿಗೆ ಕರೆತರುವ ಕೆಲಸ ಆಗಬೇಕು. ಇರುವ ಶಾಲೆಗಳನ್ನು ಮುಚ್ಚಿದರೆ ಇನ್ನಷ್ಟು ಮಕ್ಕಳು ಶಿಕ್ಷಣ ವಂಚಿತರಾಗುತ್ತಾರೆ ಎಂದು ಚಂದ್ರಶೇಖರ್ ಹೇಳಿದರು.

`ಕುವೆಂಪು ಅವರ ಸಮಗ್ರ ಸಾಹಿತ್ಯವನ್ನು ಮುದ್ರಿಸಿ ಎಲ್ಲಾ ಸರ್ಕಾರಿ ಶಾಲೆಗಳಿಗೆ ಒದಗಿಸುವುದಾಗಿ ಸಚಿವರು ಹೇಳಿದ್ದಾರೆ. ಇನ್ನೊಂದೆಡೆ ಅವರೇ ಶಾಲೆಗಳನ್ನು ಮುಚ್ಚುವ ಬಗ್ಗೆಯೂ ಯೋಚಿಸುತ್ತಿದ್ದಾರೆ. ಶಾಲೆಗಳೇ ಇಲ್ಲದಿದ್ದರೆ ಸರ್ಕಾರ ಮುದ್ರಿಸುವ ಸಾಹಿತ್ಯವನ್ನು ಓದುವವರು ಯಾರು' ಎಂದು ಪ್ರಶ್ನಿಸಿದರು.

ವೃತ್ತಿಪರ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪ್ರಕ್ರಿಯೆಯಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಶೇಕಡ 5ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಈ ಪ್ರಮಾಣವನ್ನು ಶೇ 25ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಬೇಕು. ಆ ಮೂಲಕ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡಬೇಕು ಎಂದರು.

`ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಲು ಖಾಸಗಿ ಶಾಲೆಗಳ ಹಾವಳಿಯೇ ಕಾರಣ. ಹಳ್ಳಿಗಳಲ್ಲೂ ಖಾಸಗಿ ಶಾಲೆಗಳ ಆರಂಭಕ್ಕೆ ಅನುಮತಿ ನೀಡುವುದನ್ನು ಸರ್ಕಾರ ಮೊದಲು ಸ್ಥಗಿತಗೊಳಿಸಬೇಕು. ಆಗ ಸರ್ಕಾರಿ ಶಾಲೆಗಳ ಪರಿಸ್ಥಿತಿ ಸುಧಾರಿಸುತ್ತದೆ' ಎಂದು ಹನುಮಂತಯ್ಯ ಸಲಹೆ ಮಾಡಿದರು.

ಕೆಪಿಎಸ್‌ಸಿ ಪಟ್ಟಿ ತಿರಸ್ಕರಿಸಲು ಆಗ್ರಹ
ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸಲ್ಲಿಸಿರುವ ಆಯ್ಕೆಪಟ್ಟಿಯನ್ನು ತಕ್ಷಣವೇ ತಿರಸ್ಕರಿಸಬೇಕು ಎಂದು ಪ್ರೊ.ಬಿ.ಕೆ.ಚಂದ್ರಶೇಖರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದರು.

`ಹಿಂದೆಯೂ ಕೆಪಿಎಸ್‌ಸಿ ನೇಮಕಾತಿಯಲ್ಲಿ ಅವ್ಯವಹಾರ ನಡೆದಿತ್ತು. ಆದರೆ, ಸರ್ಕಾರ ತನಿಖೆಗೆ ಆದೇಶಿಸಿರಲಿಲ್ಲ. ಹೈಕೋರ್ಟ್ ಆದೇಶದ ಪ್ರಕಾರ ತನಿಖೆ ನಡೆದಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ನೇರವಾಗಿ ತನಿಖೆಗೆ ಆದೇಶಿಸಿದೆ. ಈ ಕಾರಣಕ್ಕಾಗಿ ಮುಖ್ಯಮಂತ್ರಿಯವರನ್ನು ನಾವು ಅಭಿನಂದಿಸುತ್ತೇವೆ' ಎಂದರು.

`ಕೆಪಿಎಸ್‌ಸಿ ಸಲ್ಲಿಸಿರುವ ಆಯ್ಕೆ ಪಟ್ಟಿಯನ್ನು ತಿರಸ್ಕರಿಸಿ, ಹೊಸದಾಗಿ ಸಂದರ್ಶನ ಪ್ರಕ್ರಿಯೆ ನಡೆಸಬೇಕು. ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿರುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು' ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT