ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಸಮ್ಮೇಳನದ ಶಕ್ತಿ

Last Updated 23 ಫೆಬ್ರುವರಿ 2011, 19:45 IST
ಅಕ್ಷರ ಗಾತ್ರ

ಬೆಳಗಾವಿಯಲ್ಲಿ ಎರಡನೆಯ ವಿಶ್ವ ಕನ್ನಡ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ವಿಶ್ವಕನ್ನಡ ಸಾಹಿತ್ಯ ಸಮ್ಮೇಳನದ ಕಲ್ಪನೆ ಇಂದಿನ ಅಧಿಕಾರಿಗಳಿಗೆ ಹೊಸತು. ಅದರ ರೂಪುರೇಷೆಗಳು ಇನ್ನೂ ಯಾರಿಗೂ ತಿಳಿದಿಲ್ಲ. ಇತ್ತೀಚೆಗೆ ತಾನೇ ಬೆಂಗಳೂರಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವರೂಪವನ್ನೇ ವಿಶ್ವಕನ್ನಡ ಸಮ್ಮೇಳನವೂ ಹೊಂದಿದ್ದರೆ ಪ್ರಯೋಜನವಿಲ್ಲ. ಅದೇ ವಿಚಾರಗೋಷ್ಠಿ, ಕವಿ ಸಮ್ಮೇಳನಗಳಿಂದ ತುಂಬಿದ್ದರೆ ಪ್ರಯೋಜವಿಲ್ಲ. ಕೃಶವಾಗುತ್ತಿರುವ ಕನ್ನಡ ಭಾಷೆಯನ್ನು ಸಶಕ್ತ ಮಾಡುವ ಶಪಥ ಮಾಡಬೇಕು. ಕರಗುತ್ತಿರುವ ಕನ್ನಡಾಸಕ್ತಿಯನ್ನು ಹೆಚ್ಚಿಸುವ ಕೆಲಸ ಆಗಬೇಕು,  ಮೂಲಸೌಲಭ್ಯ ನೀಡಲು 30 ಕೋಟಿ ರೂಪಾಯಿ ಒದಗಿಸಿದೆಯಾದರೂ ಅದನ್ನು ವ್ಯವಸ್ಥಿತವಾಗಿ ವಿತರಣೆ ಮಾಡುವ ಕೆಲಸ ದಕ್ಷತೆಯಿಂದ ಆಗಬೇಕಿದೆ. ಬಹಳಷ್ಟು ಜನ ಕೊರತೆಯ ಬಗ್ಗೆಯೇ ಮಾತನಾಡುತ್ತಾರೆ. ಊಟ-ಉಪಚಾರ ದೊಡ್ಡ ಸಮಸ್ಯೆಯಲ್ಲ. ಆ ಕೊರತೆ ಲವಲೇಶವೂ ಇಲ್ಲದಂತೆ ನೋಡಿಕೊಳ್ಳುವ ಕೆಲಸವಾಗಬೇಕು. ವಿಶ್ವ ಕನ್ನಡ ಸಮ್ಮೇಳನ ಎಂದರೆ ಏನು? ಅದನ್ನು ಏಕೆ ಮಾಡಲಾಗುತ್ತಿದೆ ಎನ್ನುವ ಅಂಶವನ್ನು ಸರ್ಕಾರ ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಮೊದಲನೆಯ ವಿಶ್ವ ಕನ್ನಡ ಸಮ್ಮೇಳನವನ್ನು ಮೈಸೂರಿನಲ್ಲಿ ನಡೆಸಿದಾಗ ಕುವೆಂಪು, ಶಿವರಾಮಕಾರಂತ ಮೊದಲಾದ ದಿಗ್ಗಜ ಸಾಹಿತಿಗಳು ಅದನ್ನು ಮುನ್ನಡೆಸಿದ್ದರು. ಅರಮನೆ ಅಂಗಳದಲ್ಲಿ ಅದರ ಸೊಬಗು ಮತ್ತಷ್ಟು ಸೊಗಯಿಸಿತ್ತು. ವಿಶ್ವ ಕನ್ನಡ ಸಮ್ಮೇಳನದಲ್ಲಿ ಎಲ್ಲ ಕನ್ನಡಿಗರು ತೊಡಬೇಕಾದ ಕಂಕಣ ಏನು? ಎಲ್ಲ ಜಿಲ್ಲೆಗಳಿಂದ ಒಂದೊಂದು ತೇರನ್ನು ಎಳೆದು ಬೆಳಗಾವಿಯಲ್ಲಿ ಸಮಾವೇಶಗೊಳಿಸಲಾಗುತ್ತಿದೆ. ಒಟ್ಟಾರೆ ಸರ್ಕಾರಿ ಅಧಿಕಾರಿಗಳು ಕೆಲಸದಲ್ಲಿ ತೊಡಗಿಕೊಂಡಿದ್ದಾರೆಯೇ ಹೊರತು ಕನ್ನಡಿಗರು, ಕನ್ನಡ ಸಾಹಿತಿಗಳು ಎಚ್ಚೆತ್ತಿಲ್ಲ.

ಆನಂತರದ ದಿನಗಳಲ್ಲಿ ವಿಶ್ವಕನ್ನಡ ಸಮ್ಮೇಳನ ಎಂದರೆ ಅಮೆರಿಕದ ಅಕ್ಕ, ನಾವಿಕ ಮೊದಲಾದವರು ಮಾಡುವ ಸಾಹಿತ್ಯ ಸಮ್ಮೇಳನ ಎಂಬ ಅರ್ಥ ಬಂದು ಬಿಟ್ಟಿದೆ. ಅಧಿಕೃತವಾಗಿ ಸರ್ಕಾರ ಮಾಡುವ ಇಂಥ ಸಮ್ಮೇಳನಗಳಿಗೆ ಒಂದು ಶಕ್ತಿ ಇದೆ. ಕನ್ನಡದ ಅಭಿಮಾನ ಒಡಮೂಡುವಂತೆ, ಕನ್ನಡಿಗರು ಒಂದು ಸಾಂಘಿಕ ಶಕ್ತಿಯಾಗಿ ಎದ್ದು ನಿಲ್ಲುವಂತೆ ಮಾಡುವ ಸ್ಫೂರ್ತಿ ಅದರಲ್ಲಿದೆ. ಅಂಥ ಅಭಿಮಾನವನ್ನು ಬೆಳೆಸುವ ಕೆಲಸ ಈಗ ಆಗಬೇಕು. ವಿಶ್ವ ಕನ್ನಡ ಸಮ್ಮೇಳನವನ್ನು ಪ್ರಧಾನಿ, ರಾಷ್ಟ್ರಪತಿ, ನಾರಾಯಣ ಮೂರ್ತಿ ಏಕೆ ಉದ್ಘಾಟಿಸಬೇಕು. ಇವರೆಲ್ಲ ಸಮ್ಮೇಳನಕ್ಕೆ ಬರಲು ಇಷ್ಟಪಟ್ಟಿಲ್ಲ. ರಾಜಕಾರಣಿಗಳನ್ನು ಕರೆದುಕೊಂಡು ಬಂದು ಉದ್ಘಾಟನೆ ಮಾಡಿಸಲೇ ಬೇಕೆಂಬ ಹಟ ಏಕೆ? ಒಬ್ಬ ಪ್ರಾಮಾಣಿಕ ಕನ್ನಡಿಗ, ಪ್ರಾಮಾಣಿಕ ಸಾಹಿತಿ ಸಾಕಲ್ಲವೇ? ಇದು ಕನ್ನಡಿಗರ ವೇದಿಕೆ. ಕನ್ನಡದ ಮಕ್ಕಳೆಲ್ಲಾ ಒಂದಾಗಿ ಬರುವ ವೇದಿಕೆ. ಇಲ್ಲಿ ಎಲ್ಲ ವಲಯಗಳಿಂದ ಕನ್ನಡಿಗರು ಬಂದು ಸೇರಬೇಕು. ವಿಶ್ವಕನ್ನಡ ಸಾಹಿತ್ಯ ಒಂದು ಅರ್ಥಪೂರ್ಣ ಸಂಚಲನದೊಂದಿಗೆ ಮುಗಿಯಬೇಕು. ಆಗ ಅಲ್ಲಿ ಸೇರಿದ ಎಲ್ಲ ಕನ್ನಡಿಗರು ಒಂದು ಮಂತ್ರಶಕ್ತಿಯನ್ನು ಪಡೆದು ವಾಪಸು ಬಂದಂತಾಗುತ್ತದೆ. ಶಾಸ್ತ್ರೀಯ ಭಾಷೆಯ ಹಿರಿಮೆಯನ್ನು ವಿಶ್ವಕ್ಕೇ ಪ್ರಸರಿಸುವ ಒಂದು ನಿಲುವನ್ನು ಸಮ್ಮೇಳನ ತೆಗೆದುಕೊಳ್ಳಬೇಕು. ಸೀಮಿತವಾಗಿರುವ ಕನ್ನಡ ಭಾಷೆಯ ಎಲ್ಲೆಯನ್ನು ವಿಸ್ತರಿಸುವ ಒಂದು ಠರಾವನ್ನು ಈ ಸಮ್ಮೇಳನ ತನ್ನ ಒಡಲೊಳಗಿಟ್ಟುಕೊಂಡಿರಲಿ. ಆಗ ಸಮ್ಮೇಳನ ಸಾರ್ಥಕ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT