ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಹಣ... ಕರೇ ಬೆಕ್ಕಪ್ಪಾ!

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಅಮಾಸಿ ಕಗ್ಗತ್ತಲೆಯಲ್ಲಿ ಕರಿ ಬೆಕ್ಕು ಕರಿ ಕಂಬಳಿಯಲ್ಲಿ ಅಡಗಿ ಕುಂತರೆ ನೀವು ಕಾಣಬಲ್ಲಿರಾ?
ಓ .... ಕಪ್ಪು ಹಣ ಇಂಥಾ ಕರಿಯ ಬೆಕ್ಕೇ ಸೈ!

ಹಿಂದೆ ಒಂದು ಕಾಲಕ್ಕೆ ಮಣಗಟ್ಟಲೆ ಬಂಗಾರ ನಾಣ್ಯಗಳನ್ನು ಕರಿಯ ಗಡಿಗಿಯಲ್ಲಿ ಹಾಕಿ, ಮೇಲೆ ಮುಚ್ಚಳ ಮುಚ್ಚಿ; ತಮ್ಮ ಹೊಲದಲ್ಲಿ ಆಳವಾದ ತಗ್ಗು ತೆಗೆದು ಹುಗಿಯುತ್ತಿದ್ದರು. ಇಂಥಾ ಹೊಲಗಳೇ (ಹಿಂದೆ) ನಮ್ಮವರ ಸ್ವಿಸ್ ಬ್ಯಾಂಕ್ ಆಗಿದ್ದವು. ಒಂದು ವೇಳೆ ಈ ಪುಣ್ಯಾತ್ಮರು ಸತ್ತರೂ ದೆವ್ವ ಆಗಿ ಆ ಹೂಳಿಟ್ಟ ಹಣ ಕಾಯುತ್ತಿದ್ದರು.

ಬ್ಯಾಂಕಿಂಗ್ ವ್ಯವಸ್ಥೆ ಹಾಗೂ ನಾಣ್ಯ ಟಂಕಿಸುವ ಪದ್ಧತಿ ಬಂದನಂತರ ಈ ಮಣ್ಣಲ್ಲಿ ಹೂತ ಭೂತಗಳು ಮೆಲ್ಲಗೆ ಮೇಲೆದ್ದು ಬರಲು ಶತಮಾನಗಳೇ ಗತಿಸಿದವು. ಇನ್ನೂ ಕೆಲವು ಹಳೇ ಮನೆಗಳಲ್ಲಿ, ಹೊಲಗಳಲ್ಲಿ ಇಂಥಾ ಮುಚ್ಚಿಟ್ಟ ತಪ್ಪಲೆ, ಹಂಡೆ, ಮಡಿಕೆ.ಕುಡಿಕೆಗಳು ಸಿಗುತ್ತಲೇ ಇವೆ. ಬೇಕಿದ್ದರೆ ನಿಮ್ಮ ಹಳೇ ಮನೆ ಅಗೆದು ನೋಡಿರಿ.

ಇಂದು ಸರ್ಕಾರದ ಕಣ್ಣಿಗೆ ಮಣ್ಣೆರಚಿ; ಕಳ್ಳ ಹಣ, ಸುಳ್ಳ ಹಣ ಮುಚ್ಚಿಡುವ ಸಾವಿರ ಸಾವಿರ ಸುಂದರ ಹೈಟೆಕ್ ಮಾರ್ಗಗಳಿವೆ. ಪೋರ್ಚುಗೀಸರು ಗೋವಾದಲ್ಲಿದ್ದಾಗ (1950) ಹುಬ್ಬಳ್ಳಿಯ ಎಷ್ಟೋ ಹೆಣ್ಣುಮಕ್ಕಳು ಗೋವಾಕ್ಕೆ ಹೋಗಿ, ತಮ್ಮ ಚಪ್ಪಲಿಯಲ್ಲಿ ಬಂಗಾರದ ತಗಡುಗಳನ್ನು ಬೆಸಕೊಂಡು ಬರುತ್ತಿದ್ದರು. ಆದರೆ ಇಂದು ಹಣವನ್ನು ಹೆಣ ಮಾಡಿ ಇಡುವ ಪರದೇಶದ ಕುಣಿಗಳು ಗಿಣಿಯಾಗಿ ಕೂಗುತ್ತಿವೆ!

ಅಣ್ಣಾ ಹಜಾರೆಯವರು, ಬಾಬಾ ರಾಮದೇವರು ಯಾಕೆ ಉಪವಾಸ ಬಿದ್ದು ವಿಲಿವಿಲಿ ವದ್ದಾಡುವರೋ ತಿಳಿಯದಾಗಿದೆ! ಗುಡ್ಡ ಅಗೆದು ಇಲಿ ಹಿಡಿಯುವಂತೆ ಎಲ್ಲೋ ಒಂದೆಡೆ ಚೂರುಪಾರು ಪೈಪಾವಾಣೆ ಸಿಕ್ಕರೂ ಸಿಗಬಹುದು. ಆದರೆ ಅದರ ನೂರುಪಟ್ಟು, ಸಾವಿರ ಪಟ್ಟು,ಲಕ್ಷಪಟ್ಟು ಹಣ ಎಲ್ಲೋ ವಾಕಿಂಗ್ ಹೋಗಿರುತ್ತದೆ!

ಕಪ್ಪು ಹಣ ಪತ್ತೆ ಹಚ್ಚಲು ಅತ್ಯದ್ಭುತ ಮ್ಯಾಗ್ನೇಟ್ ಅಂದರೆ ಇಂಡಿಯಾದಲ್ಲಿರುವ ಅದ್ಧೂರಿ ಮದುವೆ ಸಮಾರಂಭಗಳು! ಈ ಮದುವೆಗಳಿಗೆ ಇಂದ್ರ ಬಂದರೂ ಪ್ಯಾಪ್ಯಾ ಅನ್ನುತ್ತಾನೆ.

ಕುಬೇರ ಬಂದರೂ ಕುರಿ ಹಾಲು ಕುಡಿಯುತ್ತಾನೆ. ಕೂಳು ಸಿಗಲಾರದ ಈ ಪವಿತ್ರ ಇಂಡಿಯಾ ದೇಶದಲ್ಲಿ ಒಂದು ಬಲಂಡ ಭಾರೀ ಮದುವೆ! ಅಲ್ಲಿ ತಿನ್ನಲೆಂದು ಅಂದಾಜು ಎರಡು ನೂರಕ್ಕಿಂತ ಅಧಿಕ ಅಬ್ಬಡ ದಿಬ್ಬಡ ಊಟದ ಮೆನು!

ಈಗಿನವರಿಗೆ ಊಟವೆಂದರೆ ಊಟವಲ್ಲ; ಅದು ಕೇವಲ ಈಟಿಂಗ್ ಫ್ಯಾಶನ್! ಹಸಿವೆ ಮುಖ್ಯವಲ್ಲ; ಕಲರ್ ಕಾಂಬಿನೇಶನ್ ಮುಖ್ಯ! ಹೆಂಡತಿ ಮುಖ್ಯವಲ್ಲ ಅವಳ ಲಿಪ್‌ಸ್ಟಿಕ್ ಮುಖ್ಯ! ಇಂಥಾದ್ದರಲ್ಲಿ ನಮ್ಮ ಟೇಬಲ್ಲಿಗೆ ಇಬ್ಬರು ಧುಮಶ್ಯಾನಿ ಧಡೂತಿ ಹುಡುಗಿಯರು ಊಟಕ್ಕೆ ಕುಳಿತರು. ಅದು ಸೆಲ್ಫ್ ಸರ್ವೀಸ್ ಊಟದ ಪದ್ಧತಿ.
 
ಆ ಹುಡುಗಿಯರು ಎಂಥಾ ಅದ್ಭುತ ಜಾಣೆಯರಿದ್ದರೆಂದರೆ ಒಂದು ಕೂಳಿನ ಕಾರ್ನರಿಗೆ ಹೋಗಿ; ಹತ್ತಾರು ಬಗೆಯ ತುಪ್ಪ - ಗೋಡಂಬಿಯ ದಿನಸುಗಳನ್ನು ಬಡಿಸಿಕೊಂಡು ನಮ್ಮ ಟೇಬಲ್ಲಿಗೆ ಬಂದು; ಇಲಿ ತಿಂದಂತೆ ತರಗಾಬರಗಾ ತಿಂದರು!

ತಕ್ಷಣ ಅವರು ಮಿಂಚಿನ ವೇಗದಿಂದ ಎದ್ದು ಹೋಗಿ; ತಾಟಿನಲ್ಲಿ ಉಳಿದ ಎಲ್ಲ ತಿನಿಸುಗಳನ್ನು ಒಂದು ಮುಸುರೆ ಡ್ರಮ್ಮಿಗೆ ಸುರುವಿ; ಮತ್ತೊಂದು ಕೂಳಿನ ಕಾರ್ನರಿಗೆ ಹೋಗಿ ಮತ್ತೆ ಹಲ್ವಾ - ಚಿರೋಟು - ಪರೋಟು - ಪಲಾವ್ - ಚಲಾವ್ ನೀಡಿಸಿಕೊಂಡು ಬಂದರು!
 
ಅವನ್ನೂ ಚೂರುಚಾರು ಬಾಯಾಡಿಸಿ; ಟೇಸ್ಟ್ ಮಾತ್ರ ನೋಡಿ; ತಕ್ಷಣ ಆ ಎಲ್ಲ ದಿನಸುಗಳನ್ನು ಅದೇ ಮುಸುರಿ ಡ್ರಮ್ಮಿಗೆ ಹಾಕಿ; ಮತ್ತೊಂದು ಮೂಲೆಗೆ ಹೋಗಿ ಮತ್ತೂ ಬಣ್ಣಬಣ್ಣದ ಕೂಳು ಹಾಕಿಸಿಕೊಂಡು ಬಂದರು. ನಮ್ಮೂರಿನಲ್ಲಿ ಕಟಗರೊಟ್ಟಿ - ಖಾರಾಯಣ್ಣಿ ತಿಂದರೂ ಕಲ್ಲುತಿಂದು ಕರಗಿಸುವಷ್ಟು ಬಲಂಡ ಭಾರೀ ಇರುತ್ತಾರೆ.
 
ಇಂದು ಈ ಮಹಾ ಮದುವೆಗಳನ್ನು ನೋಡಿದರೆ ಈ ಕಪ್ಪುಹಣ ಇನ್ನೆಲ್ಲೂ ಇಲ್ಲ; ನಮ್ಮ ನಮ್ಮ ಹೊಟ್ಟೆಯಲ್ಲಿಯೇ ಗಪ್ಪುಗಾರಾಗಿ ಅಡಗಿ ಕುಂತದ್ದು ಗಾಂಧಿವಾದಿ ಅಣ್ಣಾ ಹಜಾರೆ ಅವರಿಗೂ ಗೊತ್ತಿಲ್ಲ; ಗಾಳಿಯನ್ನೇ ತಿಂದುಂಡು ಸುಖಪಡುವ ಯೋಗ ಗುರು ರಾಮದೇವ ಮಹಾರಾಜರಿಗೂ ಗೊತ್ತಿಲ್ಲ!

ಇನ್ನು ಬಂಗಾರ! ಬಂಗಾರ ರೇಟು ಎಷ್ಟೊಂದು ಬಾರಿ ಏರಿತೋ ಆಗ ಬಂಗಾರ ಕೊಳ್ಳುವವರೂ ಅಷ್ಟೇ ಭಯಂಕರ ಹೆಚ್ಚಾದರು. ಈಗ ಎಷ್ಟೋ ಹೆಂಗಸರ ಶರೀರಗಳೇ ಓಪನ್ ಸ್ವಿಸ್ ಬ್ಯಾಂಕುಗಳು! ಮೂವಿಂಗ್ ಗೋಲ್ಡ್ ಮೈನ್ಸ್‌ಗಳು ಅಂದರೆ ಅವರೇ!
ಬೆಂಗಳೂರಲ್ಲಿ ಕಾರುಗಳಂತೂ ಬಿಡಾಡಿ ನಾಯಿಗಳಿಗಿಂತ ಹೆಚ್ಚಾದವು. ಹೀಗೆ ಕೊಳ್ಳುವುದು; ಹಾಗೆ ಮಾರುವುದು! ಏನದ್ಭುತ?

ಇಂದು ಇನ್ನೂ ಒಂದು ಥರಾ ಸ್ವಿಸ್ ಬ್ಯಾಂಕುಗಳಿವೆ. ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಿಂದ ಅಸಂಖ್ಯ ಅಣ್ಣಯ್ಯಗಳೆಲ್ಲ ಒಂದು ಕಾಲಕ್ಕೆ ಬೆಂಗಳೂರ ಸೀಮೆಗೆ ಬಂದು ಸೋವಿ ಕಾಲದಲ್ಲಿ ಎಕರೆಗಟ್ಟಲೆ ಭೂಮಿ ಖರೀದಿಸಿದರು.
 
ಒಂದು ಕಾಲಕ್ಕೆ ಒಂದು ಎಕರೆಗೆ ನಾಲ್ಕು ಸಾವಿರದಿಂದ ಎಂಟು ಸಾವಿರದವರೆಗೆ ಇದ್ದ ಭೂಮಿ; ಈಗ ಇದ್ದ ಇದ್ದಲ್ಲೇ ಎಕರೆಗೆ ನಾಲ್ಕು ಕೋಟಿ, ಆರು ಕೋಟಿ, ಹತ್ತು ಕೋಟಿ ಆತು! ಒಬ್ಬ ಮೇನಕಾ ರಾಣಿ ನನಗೆ ಒಂದು ಸುದ್ದಿ ಹೇಳಿದಳು. ಅವಳ ಅಪ್ಪ ಜಯನಗರದಲ್ಲಿ ಒಂದು ಸೈಟನ್ನು ಒಂದುಕಾಲಕ್ಕೆ ಐದು ನೂರು ರೂಪಾಯಿಗೆ ಕೊಂಡನಂತೆ. ಈಗ ಆ ಸೈಟಿನ ಬೆಲೆ ಒಂದೂವರೆ ಕೋಟಿ ರೂಪಾಯಿ!

ಓ .... ನಿಮಗೆ ಸ್ವಿಸ್ ಬ್ಯಾಂಕ್ ಬೇಕೆ? ಟಾಂಟಾಂ ಕಳ್ಳಹಣ ಬೇಕೆ? ನೇರವಾಗಿ ಬೆಂಗ್ಳೂರಿಗೆ ಬಂದು ಬಿಡಿ. ಸ್ವಿಸ್ ಬ್ಯಾಂಕಿನ ಅಪ್ಪನ ಅಪ್ಪಗಳು ಇಲ್ಲಿ ಗಪ್ಪಗಾರು ಕುಂತು ವಡಾ - ಇಡ್ಲಿ ತಿನ್ನುತ್ತಿದ್ದಾರೆ!

ನಮ್ಮ ರಾಯಚೂರು - ವಿಜಾಪೂರ - ಗುಲಬರ್ಗಾ - ಕೊಪ್ಪಳ ಸೀಮೆಗಳ ಗಂಡಸರು - ಹೆಂಗಸರು - ಮಕ್ಕಳು ಬೆಂಗಳೂರಿಗೆ ಬಂದು ಪುಡಿಜೋಪಡಿಗಳಲ್ಲಿದ್ದು; ಇವರ ಕಾರು ಒರೆಸಲು, ಗಟಾರ ಬಳಿಯಲು, ಮನೆಕಟ್ಟಲು ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತಿಯಿಂದ ತೊಡಗುತ್ತಾರೆ.
 
ಪೂಜ್ಯ ಬಾಬಾ ರಾಮದೇವರಿಂದ, ಅಣ್ಣಾ ಹಜಾರೆಯವರಿಂದ ಈ ಹೊಸರೂಪದ ಗುಲಾಮಿ ದಂಧೆಯನ್ನು ನಿಲ್ಲಿಸಿದರೆ ಎಂಥಾ ಚೊಲೋ!

ಕಣ್ಣಿಗೆ ಕಾಣಲಾರದ ಈ ಕರಿಯ ಬೆಕ್ಕುಗಳು ಇಂದು ನಮ್ಮ ಹೊಟ್ಟೆಯಲ್ಲಿ, ನಮ್ಮ ಹೈಟೆಕ್ ಹಾಸ್ಪಿಟಲ್ಲುಗಳಲ್ಲಿ, ಸೂಪರ್ ಟೆಕ್ ಆಪರೇಶನ್ನುಗಳಲ್ಲಿ ಹಾಗೂ ಸೋಮಾರಿಟೆಕ್ ಕ್ರಿಕೆಟ್ಟಿನಲ್ಲಿ ತುಂಬಿ ತುಳುಕುತ್ತಿವೆ.

ಓ .... ಹಜಾರೆ ಅಣ್ಣಾ, ಗುರು ರಾಮದೇವ ಮಾರಾಜ .... ಒಮ್ಮೆ ಬನ್ನಿ! ಈ ಕರಿಯ ಬೆಕ್ಕುಗಳನ್ನು ಕಣ್ಣಾರೆ ಕಂಡು ಧನ್ಯರಾಗಿರಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT