ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪುಹಣ ಪ್ರಕರಣ: ನ್ಯಾಯಪೀಠದಲ್ಲಿ ಭಿನ್ನಮತ

Last Updated 23 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ, (ಪಿಟಿಐ): ಕಪ್ಪುಹಣ ಪ್ರಕರಣಗಳಿಗೆ ವಿಶೇಷ ತನಿಖಾ ತಂಡ ರಚಿಸಬೇಕು ಎಂಬ ಆದೇಶವನ್ನು ವಾಪಸ್ ಪಡೆಯಬೇಕು ಎಂಬ ಸರ್ಕಾರದ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್‌ನ ಇಬ್ಬರು ನ್ಯಾಯಮೂರ್ತಿಗಳನ್ನು ಒಳಗೊಂಡ ಪೀಠ ವಿಭಿನ್ನ ತೀರ್ಪು ನೀಡಿದೆ.

ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಅವರು ಸರ್ಕಾರದ ಅರ್ಜಿ ವಿಚಾರಣೆಗೆ ಯೋಗ್ಯ ಎಂದು ಅಭಿಪ್ರಾಯಪಟ್ಟಿದ್ದು, ಇನ್ನೊಬ್ಬ ನ್ಯಾಯಮೂರ್ತಿ ಎಸ್.ಎಸ್.ನಿಜ್ಜರ್ ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ತೀರ್ಪು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ, ಅರ್ಜಿಯ ವಿಚಾರಣೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ವಿಸ್ತೃತ ಪೀಠವನ್ನು ರಚಿಸಬೇಕು ಎಂದು ಈ ನ್ಯಾಯಪೀಠ ಮುಖ್ಯ ನ್ಯಾಯಮೂರ್ತಿ ಅವರನ್ನು ಕೋರಿದೆ.

ವಿದೇಶಿ ಬ್ಯಾಂಕುಗಳಲ್ಲಿ ಇರುವ ಕಪ್ಪುಹಣ ಪತ್ತೆ ಹಚ್ಚಲು ಕೇಂದ್ರ ಸರ್ಕಾರ ರಚಿಸಿದ್ದ ಉನ್ನತ ಮಟ್ಟದ ತನಿಖಾ ತಂಡವನ್ನು ಸುಪ್ರೀಂಕೋರ್ಟ್ ಜುಲೈ 4ರಂದು ಪುನರ್‌ರಚಿಸಿ ಆದೇಶ ಹೊರಡಿಸಿತ್ತು. ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಪಿ.ಜೀವನ್ ರೆಡ್ಡಿ ಮತ್ತು ಎಂ.ಬಿ.ಷಾ ಅವರನ್ನು ಕ್ರಮವಾಗಿ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

13 ಸದಸ್ಯರ ಸಮಿತಿಯಲ್ಲಿ ಸಿಬಿಐ, ಐಬಿ, ಜಾರಿ ನಿರ್ದೇಶನಾಲಯದ ನಿರ್ದೇಶಕರು, ಸಿಬಿಡಿಟಿ ಅಧ್ಯಕ್ಷ, ಕಂದಾಯ ಗುಪ್ತಚರ ಮಹಾ ನಿರ್ದೇಶಕ, ಮಾದಕ ವಸ್ತು ನಿಯಂತ್ರಣ ಮಹಾ ನಿರ್ದೇಶಕ, ವಿದೇಶ ಗುಪ್ತಚರ ಕಚೇರಿಯ ನಿರ್ದೇಶಕ, ವಿದೇಶಾಂಗ ವ್ಯಾಪಾರದ ಜಂಟಿ ಕಾರ್ಯದರ್ಶಿ, ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ನಿರ್ದೇಶಕರು ಇದ್ದಾರೆ.

ಸರ್ಕಾರ ರಚಿಸಿದ ವಿಶೇಷ ತನಿಖಾ ತಂಡದ ನಿಧಾನಗತಿಯ ಕಾರ್ಯ ನಿರ್ವಹಣೆ ಮತ್ತು ಮೃದು ಧೋರಣೆಯ ಬಗ್ಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿ ಸಮಿತಿಯನ್ನು ಪುನರ್‌ರಚಿಸಿತ್ತು. ನಂತರ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಸಮಿತಿ ಪುನರ್‌ರಚನೆಯ ಆದೇಶವನ್ನು ವಾಪಸ್ ಪಡೆಯಬೇಕು ಎಂದು ಮನವಿ ಮಾಡಿತ್ತು.

ಅರ್ಜಿ ವಿಚಾರಣೆಗೆ ಯೋಗ್ಯವಲ್ಲ ಎಂದು ರಾಮ್ ಜೇಠ್ಮಲಾನಿ ಮತ್ತು ಇತರ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ, ಅರ್ಜಿಯ ಬಗ್ಗೆ ತೀರ್ಪು ನೀಡುವ ಬದಲು ಅದು ವಿಚಾರಣೆಗೆ ಯೋಗ್ಯವೇ ಎಂಬುದರ ಬಗ್ಗೆ ವಿಚಾರಣೆ ನಡೆದಿತ್ತು. ತಾನು ಮನವಿ ಮಾಡದೆ ನ್ಯಾಯಾಲಯವೇ ವಿಶೇಷ ತಂಡ ರಚಿಸಿರುವುದು ಸರಿಯಲ್ಲ ಎಂಬುದು ಸರ್ಕಾರದ ವಾದವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT