ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬರಗಿ: ಮೂರು ಬಣವೆ ಭಸ್ಮ-ಲಕ್ಷಾಂತರ ಹಾನಿ

Last Updated 1 ಮೇ 2012, 9:20 IST
ಅಕ್ಷರ ಗಾತ್ರ

ಹನುಮಸಾಗರ: ಸಮೀಪದ ಕಬ್ಬರಗಿ ಗ್ರಾಮದಲ್ಲಿ ಭಾನುವಾರ ರಾತ್ರಿ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಶೇಂಗಾ ಹೊಟ್ಟಿನ ಮೂರು ಬಣವೆಗಳು ಬೆಂಕಿಗೆ ಭಸ್ಮವಾದ ದುರ್ಘಟನೆ ಜರುಗಿದೆ.

ಮಾಸಪ್ಪ ಕಪಲೆಪ್ಪ ಬಿಳಿಯಪ್ಪನವರ, ಮಲ್ಲಪ್ಪ ಕಪಲೆಪ್ಪ ಬಿಳಿಯಪ್ಪನವರ, ನಿಂಗಪ್ಪ ಕಪಲೆಪ್ಪ ಬಿಳಿಯಪ್ಪನವರ ಎಂಬ ಸಹೋದರರಿಗೆ ಸೇರಿದ್ದ ಈ ಹೊಟ್ಟಿನ ಬಣವೆಗಳಲ್ಲಿ ಸುಮಾರು 40 ಟ್ರಾಕ್ಟರ್ ಶೇಂಗಾ ಹೊಟ್ಟು ಸಂಗ್ರಹಿಸಲಾಗಿತ್ತು.

ಬಣವೆಯ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿಗಳು ಗಾಳಿಗೆ ಹೊಯ್ದಾಡಿ ಒಂದಕ್ಕೊಂದು ತಗುಲಿದ ಪರಿಣಾಮವಾಗಿ ಕಿಡಿ ಹೊತ್ತಲು ಕಾರಣವಾಗಿದೆ ಎನ್ನಲಾಗಿದೆ. ಅಲ್ಲದೆ ರಾತ್ರಿ ಹೊತ್ತಿನಲ್ಲಿ ಭಾರಿ ಪ್ರಮಾಣದಲ್ಲಿ ಗಾಳಿ ಇದ್ದದ್ದರಿಂದಾಗಿ ತೀವ್ರರೀತಿಯಿಂದ ಹೊತ್ತಿದ ಬೆಂಕಿ ಮೂರು ಬಣವೆಗಳನ್ನು ಭಸ್ಮ ಮಾಡಿವೆ. ಇಲ್ಲಿಂದ ಸುಮಾರು 30ಕಿ.ಮೀ ದೂರದ ಕುಷ್ಟಗಿಯಿಂದ ಅಗ್ನಿಶಾಮಕದಳದಕ್ಕೆ ವಿಷಯ ತಿಳಿದು ಇಲ್ಲಿಗೆ ಬರುವ ಹೊತ್ತಿಗೆ ಬಣವೆಗಳ ಹೊಟ್ಟು ಬೆಂಕಿಯ ಕೆನ್ನಾಲಿಗೆಗೆ ಆಪೋಸನವಾಗಿತ್ತು ಎಂದು ಮಾಸಪ್ಪ ನೊಂದು ಹೇಳುತ್ತಾರೆ.

10 ಎಕರೆ ಪ್ರದೇಶದಲ್ಲಿ ಹಾಕಲಾಗಿದ್ದ ಶೇಂಗಾ ಬೆಳೆ, ಕೊಯಿಲಾದ ನಂತರ ಬಣವೆ ಹಾಕಲಾಗಿತ್ತು, ಅಲ್ಲದೆ ಅದರ ಜೊತೆಗೆ ಹಳೆಯ ಬಣವೆಯೊಂದು ಇತ್ತು, ರಾತ್ರಿ ಸಮಯದಲ್ಲಿ ಇದ್ದಕ್ಕಿದ್ದಂತೆ ಕಿಡಿ ಹೊತ್ತಿದ್ದು ಕಂಡು ಕೂಡಲೆ ವಿದ್ಯುತ್ ಸಂಚಾರ ಸ್ಥಗಿತಗೊಳಿಸಿ ಊರ ಜನರೆಲ್ಲ ಸೇರಿ ಏನೆಲ್ಲ ಪ್ರಯತ್ನ ಮಾಡಿದರೂ ಹೊಟ್ಟು ಉಳಿಸಿಕೊಳ್ಳಲು ನಮ್ಮಿಂದ ಸಾಧ್ಯವಾಗಲಿಲ್ಲ ಎಂದು ಮಲ್ಲಪ್ಪ ಹೇಳಿದರು.

ಈ ಭಾಗದಲ್ಲಿಯೇ ಹೆಸರುವಾಸಿಯಾದ 34 ಸದಸ್ಯರ ಅವಿಭಕ್ತ ಕುಟುಂಬ ಇದಾಗಿದ್ದು ಕುಟುಂಬದ ಬಹುತೇಕ ಸದಸ್ಯರು ಸಂಪೂರ್ಣ ಕೃಷಿ ಅವಲಂಬಿತರಾಗಿದ್ದಾರೆ, ನಾಲ್ಕು ಜೊತೆ ಎತ್ತು ಸೇರಿದಂತೆ ಒಟ್ಟು 50 ದನಗಳು ಇದ್ದು ಅವುಗಳಿಗೆ ಹೊಟ್ಟು ಮೇವಿನ ಚಿಂತೆ ನಮ್ಮನ್ನು ಕಾಡುತ್ತಿದೆ, ನಿನ್ನೆ 40 ಟ್ರಾಕ್ಟರ್ ಹೊಟ್ಟು ಇತ್ತು ಆದರೆ ಇಂದು ಬೇರೆಯವರರಿಂದ ಹಿಡಿ ಮೇವು ತಂದು ನಮ್ಮ ದನಗಳಿಗೆ ಹಾಕುವಂತಾಯಿತು ಎಂದು ನಿಂಗಪ್ಪ ಕಣ್ಣೀರು ಹಾಕಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಮುಖಂಡ ಬಸವರಾಜ ಹಳ್ಳೂರ ಬಿಳಿಯಪ್ಪನವರ ಕುಟುಂಬಕ್ಕೆ ಸಾಂತ್ವನ ಹೇಳಿದ ಅವರು ಸುಮಾರು ನಾಲ್ಕು ಲಕ್ಷ ರೂಪಾಯಿಯಷ್ಟು ಹೊಟ್ಟು ನಷ್ಟವಾಗಿದ್ದು, ಈ ಕುಟುಂಬದ ಸ್ಥಿತಿ ಚಿಂತಾಜನಕವಾಗಿದೆ, ಜಿಲ್ಲಾಡಳಿತ ಕೂಡಲೆ ನೆರವು ನೀಡಬೇಕು ಎಂದು ಅವರು ಒತ್ತಾಯಿಸಿದರು.ಸೋಮವಾರ ಘಟನಾ ಸ್ಥಳಕ್ಕೆಭೇಟಿ ನೀಡಿದ ಕಂದಾಯ ನಿರೀಕ್ಷಕ ಮಹಮ್ಮದ್ ಮುಸ್ತಫಾ , ಗ್ರಾಮಲೆಕ್ಕಿಗ ಕೆ.ಮಲ್ಲಿಕಾರ್ಜುನ ಸ್ಥಳ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT