ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮರಿದ ಕನಸು...

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ

ಅಕ್ಟೋಬರ್ 2010. ಅದು ಬಾರ್ಡರ್-ಗಾವಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದ ಐದನೇ ದಿನ. ಇಡೀ ದೇಶ ತುದಿಗಾಲಿನಲ್ಲಿ ನಿಂತು ನೋಡಿದ್ದ ಪಂದ್ಯ ಅದು. 

ಮೊಹಾಲಿ ಅಂಗಳದಲ್ಲಿ ವಿವಿಎಸ್ ಲಕ್ಷ್ಮಣ್ ಬೆನ್ನುನೋವಿನಲ್ಲೂ ಛಲದಿಂದ ಆಡಿದ ರೀತಿಗೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಬಳಗ ಶರಣಾಗಿತ್ತು. ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸವೇ ಸೃಷ್ಟಿಯಾಗಿತ್ತು.

ಅದೇ ಸರಣಿಯ ಎರಡನೇ ಪಂದ್ಯಕ್ಕೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಐದೂ ದಿನವೂ ಕಚಾಕಚ್ ಭರ್ತಿಯಾಗಿ ಹೋಗಿತ್ತು. ಮಾಸ್ಟರ್-ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ದ್ವಿಶತಕ, ಚೊಚ್ಚಲ ಪಂದ್ಯದಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಚೇತೇಶ್ವರ ಪೂಜಾರ, ಮುರಳಿ ವಿಜಯ್ ಅವರ ಆಟಕ್ಕೆ ಆ ಪಂದ್ಯದಲ್ಲಿ ಭಾರತ ಗೆಲುವಿನ ಕೇಕೆ ಹಾಕಿತ್ತು. 

2011ರಲ್ಲಿ ಇಂಗ್ಲೆಂಡ್‌ನಲ್ಲಿ ಹೀನಾಯ ಸರಣಿ ಸೋಲು ಅನುಭವಿಸಿದರೂ ರಾಹುಲ್ ದ್ರಾವಿಡ್ ಕಲಾತ್ಮಕ ಬ್ಯಾಟಿಂಗ್ ನೋಡುವ ಅವಕಾಶವಾದರೂ ಸಿಕ್ಕಿತ್ತು. ಆದರೆ ಈಗ ಏನಾಯಿತು?

ತಮ್ಮ ಜೀವಮಾನದ ಕನಸು ಹೊತ್ತು ಆಸ್ಟ್ರೇಲಿಯಾಕ್ಕೆ ಪಯಣಿಸಿದ್ದ ಈ `ತ್ರಿಮೂರ್ತಿ~ಗಳ ಮುಖದಲ್ಲಿ ಈಗ ನಿರಾಸೆಯ ನೆರಳು. 22 ವರ್ಷದ ಅಂತರರಾಷ್ಟ್ರೀಯ ಕ್ರಿಕೆಟ್ ಜೀವನದಲ್ಲಿ ಐದು ಬಾರಿ ಆಸ್ಟ್ರೇಲಿಯಾ ಪ್ರವಾಸಕ್ಕೆ ಹೋಗಿರುವ ಸಚಿನ್‌ಗೆ ಒಂದೇ ಒಂದು ಸರಣಿಯಲ್ಲಿಯೂ ಭಾರತದ ಗೆಲುವನ್ನು ನೋಡಲು  ಸಾಧ್ಯವಾಗಿಲ್ಲ.
 
ಕಳೆದ 16 ವರ್ಷಗಳಿಂದ ಭಾರತ ತಂಡದಲ್ಲಿರುವ ರಾಹುಲ್ ದ್ರಾವಿಡ್ ಮತ್ತು ಲಕ್ಷ್ಮಣ್ ಪರಿಸ್ಥಿತಿಯೂ ಅಷ್ಟೇ. ಅವರು ಕಳೆದ ನಾಲ್ಕು ಪ್ರವಾಸದಲ್ಲಿಯೂ ಗೆಲುವು ಸಿಕ್ಕಿರಲಿಲ್ಲ. ಈ ಬಾರಿಯಾದರೂ ಕಾಂಗರೂ ನಾಡಿನಲ್ಲಿ ವಿಜಯದ ನಗೆ ಬೀರುವ ಈ ಮೂವರು ದಿಗ್ಗಜರ ಕನಸು ನುಚ್ಚುನೂರಾಗಿದೆ.

ಸಿಡ್ನಿ ಟೆಸ್ಟ್‌ನಲ್ಲಿ ಸೋತಾಗಲೇ ಸರಣಿ ಗೆಲುವಿನ ಆಸೆಯೂ ಕಮರಿಹೋಯಿತು. ಕನಿಷ್ಟ ಪಕ್ಷ ಸರಣಿ ಸಮ ಮಾಡಿಕೊಳ್ಳಲು ಮೈಕೆಲ್ ಕ್ಲಾರ್ಕ್ ತಂಡ ಅವಕಾಶ ಕೊಡುವಂತೆ ಕಾಣುತ್ತಿಲ್ಲ. (ಈ ಲೇಖನ ಬರೆಯುವ ಹೊತ್ತಿಗೆ ಪರ್ತ್‌ನಲ್ಲಿ ನಡೆಯುತ್ತಿರುವ ಸರಣಿಯ ಮೂರನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಭಾರತ 161 ರನ್ನುಗಳಿಗೆ ಆಲೌಟ್ ಆಗಿತ್ತು)

ವಿಚಿತ್ರವೆಂದರೆ ಈ ಮೂವರಿಗೂ ಆಸೀಸ್‌ನಲ್ಲಿ ಹೆಚ್ಚು ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇವರ ಬ್ಯಾಟಿಂಗ್ ಸೊಬಗನ್ನು ಸವಿಯಲೆಂದೇ ಕ್ರೀಡಾಂಗಣಕ್ಕೆ ಬರುವ ಜನರು ಆಸ್ಟ್ರೇಲಿಯಾದಲ್ಲಿ ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಅವರಿಗೆಲ್ಲ ಈ ಬಾರಿ ಡಬಲ್ ನಿರಾಸೆಯಾಗಿರುವುದಂತೂ ನಿಜ.

ತೆಂಡೂಲ್ಕರ್ ಶತಕದ ಶತಕ ನೋಡುವ ಆಸೆ ಇನ್ನೂ ಈಡೇರಿಲ್ಲ. ಇನ್ನೂ ಲಕ್ಷ್ಮಣ್ ಮತ್ತು ದ್ರಾವಿಡ್ ಸುಂದರ ಶೈಲಿಯ ಬ್ಯಾಟಿಂಗ್ ವೀಕ್ಷಿಸುವುದೂ ಆಗಿಲ್ಲ.

`ನಿವೃತ್ತಿಯ ಅಂಚಿನಲ್ಲಿ ಈ ಮೂವರೂ ಇದ್ದಾರೆ. 2014-15ರಆ್ಲಸ್ಟ್ರೇಲಿಯಾಕ್ಕೆ ಸರಣಿ ಆಡಲು ಭಾರತ ಬರುವಾಗ ಇವರು ತಂಡದಲ್ಲಿ ಇರುವುದು ಸಂಶಯ. ಈ ಬಾರಿಯದ್ದು ಬಹುತೇಕ ಕೊನೆಯ ಅವಕಾಶವಾಗಿತ್ತು~ ಎಂದು ಕ್ರಿಕೆಟ್ ವಿಶ್ಲೇಷಕ ಬಿಲ್ ಲಾರಿ ಹೇಳುತ್ತಾರೆ.

ಆದರೆ ಈ ಮೂವರೂ ತಮ್ಮ ಕನಸನ್ನು ನನಸುಗೊಳಿಸಿಕೊಳ್ಳಲು ವೈಯಕ್ತಿಕವಾಗಿ ಪ್ರಯತ್ನ ಮಾಡದಿರುವುದೂ ಎದ್ದು ಕಾಣುತ್ತದೆ. ವಿಶ್ವದ ಯಾವುದೇ ಕ್ರಿಕೆಟ್ ತಂಡದ ವಿರುದ್ಧವೂ ಕೆಚ್ಚೆದೆಯ ಹೋರಾಟಕ್ಕೆ ಹೆಸರಾದ ಈ ತ್ರಿಮೂರ್ತಿಗಳ ಬ್ಯಾಟಿನಿಂದ ರನ್ನುಗಳ ಹೊಳೆ ಹರಿದಿಲ್ಲ.

ಇದ್ದುದರಲ್ಲಿ ತೆಂಡೂಲ್ಕರ್ ಸ್ವಲ್ಪಮಟ್ಟಿಗೆ ಯಶಸ್ವಿ ಎನಿಸಿದರೂ, ದ್ರಾವಿಡ್ ಮತ್ತು ಲಕ್ಷ್ಮಣ್ ಆಟವನ್ನೇ ಮರೆತಂತಿದೆ. ಭಾರತದ ಬ್ಯಾಟಿಂಗ್ ಬೆನ್ನೆಲುಬಾದ ಈ ಮೂವರನ್ನು ಕಟ್ಟಿಹಾಕುವಲ್ಲಿ ಸತತ ಮೂರು ಟೆಸ್ಟ್‌ಗಳಲ್ಲಿಯೂ ಆಸೀಸ್ ಬೌಲರ್‌ಗಳು ಸಫಲರಾಗಿದ್ದಾರೆ.
 
ಉತ್ತಮ ಮೊತ್ತದ ಬೆಂಬಲವಿರದಿದ್ದರೆ ಬೌಲರ್‌ಗಳು ಹೆಚ್ಚು ಪ್ರಯಾಸಪಡಬೇಕಾಗುತ್ತದೆ. ಸೋಲು ಮತ್ತು ಗೆಲುವು ಆಟದಲ್ಲಿ ಸಹಜ. ಆದರೆ,ಇಷ್ಟೊಂದು ಅನುಭವಿಗಳಿದ್ದೂ ಸುಲಭವಾಗಿ ಶರಣಾಗುತ್ತಿರುವ ರೀತಿ ಅಕ್ಷಮ್ಯವೇ ಸರಿ. ಇದರ ಫಲವೆಂಬಂತೆ ವಿಶ್ವ ಕ್ರಿಕೆಟ್ ಇತಿಹಾಸದ ದಿಗ್ಗಜರಾದ ಈ ಮೂವರ ಕನಸು ಕನಸಾಗಿಯೇ ಉಳಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT