ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಗ ಬಂತು ಕರಗ

Last Updated 14 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಭಾಗ-1

ಚೆಲ್ಲಿದರು ಮಲ್ಲಿಗೆಯ...

ಯುಗ ಯುಗ ಕಳೆದರೂ `ಯುಗಾದಿ' ಮರಳಿ ಬರುತ್ತಿದೆ. ವರ್ಷ ವರ್ಷಗಳು ಉರುಳಿದರೂ `ಬೆಂಗಳೂರು ಕರಗ' ನಡೆಯುತ್ತಲೇ ಇದೆ. ಕೆಂಪೇಗೌಡರ ಬೆಂಗಳೂರಿಗೆ ಇರುವ ಸುಮಾರು ಐನೂರು ವರ್ಷಗಳ ಚರಿತ್ರೆಯಲ್ಲಿ ಅಂದಾಜು ಇನ್ನೂರು ವರ್ಷಗಳಿಂದ `ಬೆಂಗಳೂರು ಕರಗ' ನಿರಂತರವಾಗಿ ನಡೆದುಕೊಂಡು ಬಂದಿದೆ.

ಬೆಂಗಳೂರಿಗೆ ಬೆಂಗಳೂರೇ ಈಗ ಚೈತ್ರ ಮಾಸದ ಸಂಭ್ರಮದಲ್ಲಿದೆ. ನಿಸರ್ಗ ಸಿಂಗಾರಗೊಂಡಿದೆ. ತರುಲತೆಗಳಿಂದ, ದೇಶ ವಿದೇಶಗಳ ಪುಷ್ಪ ವೈಭವದಿಂದ ಕಂಗೊಳಿಸುತ್ತಿರುವ ಬೆಂಗಳೂರು ಮಹಾನಗರವೀಗ ಜನಾಕರ್ಷಣೆಯ ಕರಗ ಉತ್ಸವಕ್ಕೆ ಸಜ್ಜುಗೊಂಡಿದೆ.

ಫಳಫಳನೆ ಹೊಳೆಯುವ ಗಾಜುಗಳನ್ನು ಹೊದ್ದುಕೊಂಡ ಕಾಂಕ್ರೀಟ್ ಕಟ್ಟಡಗಳಿಂದ, ಪ್ರಾಚೀನ-ನವೀನ ಶೈಲಿಯ ಮನೆ ಮಾರುಗಳಿಂದ ತುಂಬಿಹೋಗಿದ್ದರೂ ಇನ್ನೂ ಹಸಿರು ಸೊಗಸನ್ನು ಉಳಿಸಿಕೊಂಡಿರುವ ಬೆಂಗಳೂರಿಗೆ ನೀರುಣಿಸಲು ಹಿಂದೆ ಇದ್ದ ಆಸರೆ ಎಂದರೆ ಮಳೆ ಹಾಗೂ ಕೆರೆಗಳ ಸಮೂಹ.

ಕೋಟೆ ಕಟ್ಟಿದ ಕೆಂಪೇಗೌಡರು ಕೃಷಿಗಾಗಿ ನಿರ್ಮಿಸಿದ ಕೆರೆಗಳ ಅಚ್ಚುಕಟ್ಟಿನಲ್ಲಿ ಕಾಳುಕಡ್ಡಿ ಜೊತೆಗೆ ಕಾಯಿಪಲ್ಲೆಗಳನ್ನು ನಂಬಿಕೊಂಡವರು ವಹ್ನಿ ಕುಲಸ್ಥರು. ಕೆಂಪುತೋಟ ರೂಪಿಸಲು ತಮಿಳು ಪ್ರದೇಶದಿಂದ ಬರಮಾಡಿಕೊಂಡ ತೋಟಗಾರರು ವಹ್ನಿ ಕುಲಸ್ಥರೆಂದು ಕೆಲವರ ಅಭಿಪ್ರಾಯವಾದರೂ ಕೆಂಪೇಗೌಡರೇ ಕಟ್ಟಿಕೊಟ್ಟ ಕೆರೆಯಂಗಳವೇ ತಮ್ಮ ಮೂಲನೆಲೆ ಎಂಬುದಕ್ಕೆ ಸಾಕ್ಷಿ ಪುರಾವೆಗಳನ್ನು ಒದಗಿಸುತ್ತಾರೆ ವಹ್ನಿ ಕುಲದ (ತಿಗಳರು) ಮುಂದಾಳುಗಳು.

ತಿಗಳರ ಮೂಲ ಯಾವುದೇ ಇರಲಿ, ಕನ್ನಡ ಮಣ್ಣಿನಲ್ಲಿ ಬೆರೆತುಹೋಗಿರುವ ವಹ್ನಿ ಕುಲದವರ ಕರಗ ಸಂಸ್ಕೃತಿ ಕರ್ನಾಟಕ ಸಾಂಸ್ಕೃತಿಕ ಇತಿಹಾಸದಲ್ಲಿ ಸೇರಿಹೋಗಿದೆ. ತಮಿಳುನಾಡಿನಲ್ಲಿ ಕೆಲವೆಡೆ ಕರಗ ಉತ್ಸವಗಳಿದ್ದರೂ ಹೆಸರಾಗಿರುವುದು ಬೆಂಗಳೂರು ಕರಗ ಎನ್ನುವುದನ್ನು ಎಲ್ಲರೂ ಒಪ್ಪಿಕೊಳ್ಳಬೇಕು.
ನಾಲ್ಕು ಕಾವಲು ಗೋಪುರಗಳ ಎಲ್ಲೆಯೊಳಗೆ ತಾವು ಕಟ್ಟಿದ ಬೆಂಗಳೂರೆಂಬ ನಗರ ಇರಬೇಕೆಂದು ಕೆಂಪೇಗೌಡರು ಆಶಿಸಿದರೂ ವಾಸ್ತವವಾಗಿ ಆಗಿನ ಬೆಂಗಳೂರು ನಿರ್ಮಾಣಗೊಂಡಿದ್ದು ಮುಖ್ಯವಾಗಿ ಪೇಟೆಗಳೇ ಇದ್ದ ಕೋಟೆಯ ಆವರಣದಲ್ಲಿ. ಕೋಟೆ ಪರಧಿಯಲ್ಲೇ ಇರುವ ಕರಗ ಉತ್ಸವದ ಕೇಂದ್ರ ಸ್ಥಳ ಶ್ರೀ ಧರ್ಮರಾಯಸ್ವಾಮಿ ದೇವಾಲಯ ಯಾವಾಗ ಕಟ್ಟಲಾಯಿತೆನ್ನುವುದಕ್ಕೆ ಯಾವುದೇ ನಿಖರ ದಾಖಲೆಗಳಿಲ್ಲ.

ಗಂಗರ ಆಳ್ವಿಕೆಯ ಕಾಲದಲ್ಲಿ ಶಕ್ತಿಪೀಠವಾಗಿ ನಿರ್ಮಾಣಗೊಂಡು ಇರಬಹುದೆನ್ನಲಾದ ಈ ಆಲಯದಲ್ಲಿ ಚೋಳಶೈಲಿಯ ಗರ್ಭಗುಡಿ ಮೇಲ್ಭಾಗ, ಸೊಗಸಾದ ಗೋಪುರಗಳೂ ಇರುವ ಛಾಯಾಚಿತ್ರವೊಂದು ಲಭ್ಯವಿದೆ. ಗಂಗರ ರಾಜಲಾಂಛನಗಳನ್ನೂ ಇಲ್ಲಿ ನೋಡಬಹುದು.

ಗರುಡಾಕೃತಿಯ ವಿಶಾಲ ದೇಗುಲವೀಗ ಪೂರ್ಣ ಪ್ರಮಾಣದಲ್ಲಿ ಕಾಣಸಿಗುವುದಿಲ್ಲ, ಹಿಂದೆ ಇಲ್ಲಿದ್ದ ಕಲ್ಯಾಣಿ ಕೂಡ ಕಟ್ಟಡಗಳಿಂದ ಕಾಣಿಸುವುದಿಲ್ಲ. ಮಧ್ಯಗಂಗರು ಜೀರ್ಣೋದ್ಧಾರ (ಸುಮಾರು 5-6ನೇ ಶತಮಾನದಲ್ಲಿ) ಮಾಡಿದರೆಂದು ಹೇಳಲಾಗುವ ಈ ದೇವಾಲಯದಲ್ಲಿ ವಿಜಯನಗರ ಶೈಲಿಯ ರಾಜಗೋಪುರಗಳನ್ನು ಕಾಣಬಹುದು.

ಪ್ರಾಚ್ಯ ಸಂಶೋಧನಾ ಇಲಾಖೆ ತಜ್ಞರ ಅಭಿಪ್ರಾಯದಂತೆ ಈ ಗುಡಿಗಿರುವ ಪ್ರಾಚೀನತೆ 800-900 ವರ್ಷಗಳು. ಶಿಥಿಲಗೊಂಡಿದ್ದ ಧರ್ಮರಾಮಸ್ವಾಮಿ ದೇವಾಲಯದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ನಡೆದಿರುವುದು 2009ರಲ್ಲಿ. ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಶಕ್ತಿಪೀಠವಿದೆ. ಇಲ್ಲೇ ಕರಗ ಕೂರಿಸುವುದು. ವಿಶೇಷ ಪೂಜಾ ಕೈಂಕರ್ಯ ಜರುಗುವುದು ಇಲ್ಲೇ.

ಪೀಠದ ಹಿಂಭಾಗದಲ್ಲಿ ಧರ್ಮರಾಯನ ಮೂರ್ತಿ, ಕೃಷ್ಣನ ವಿಗ್ರಹ ದ್ರೌಪದಿ-ಅರ್ಜುನರ ಜೋಡಿ ಮೂರ್ತಿಗಳಿವೆ. ಪಂಚಪಾಂಡವರ ಮರದ ಮೂರ್ತಿಗಳು, ಕುಂತಿ ಮಾದ್ರಿ, ಸುಭದ್ರೆ, ವೀರಾಸನದಲ್ಲಿರುವ ಪೋತರಾಜ ಮೂರ್ತಿಗಳೂ ಇಲ್ಲಿವೆ.

ಧರ್ಮರಾಯನ ಗುಡಿ ಎಂದು ಹೆಸರಾದರೂ ಇಲ್ಲಿ ಪೂಜೆಗೊಳ್ಳುವ ಪ್ರಮುಖ ದೈವ ದ್ರೌಪದಿ ಅಥವಾ ಆದಿಶಕ್ತಿ ಈಕೆಯೇ ಕರಗ ಶಕ್ತಿ.
ಕರಗ ಶಕ್ತ್ಯೋತ್ಸವದ ಎಲ್ಲಾ ಬಹುಮುಖ್ಯ ವಿಧಿವಿಧಾನಗಳು ನೆರವೇರುವುದು ಶ್ರೀ ಧರ್ಮರಾಯಸ್ವಾಮಿ ಆವರಣದಲ್ಲಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT