ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಟ ಅರಳಿ ಕಲೆಯಾಗಿ...

Last Updated 11 ಜೂನ್ 2012, 19:30 IST
ಅಕ್ಷರ ಗಾತ್ರ

`ಆಸಕ್ತಿ ಇರಬೇಕು ನೋಡಿ, ಯಾವುದೂ ಅಸಾಧ್ಯ ಅನ್ನೋದೇ ಇಲ್ಲ. ಹತ್ತು ವರ್ಷದ ಹಿಂದೆ ಹೊಸ ವ್ಯಾಪಾರ ಆರಂಭಿಸಿಬೇಕು ಎಂದಾಗ ನೂರಾರು ಯೋಜನೆಗಳು ತಲೆಯೊಳಗೆ ಹಾದು ಹೋಗಿದ್ದವು. ಕೇವಲ ಲಾಭ ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಪರಿಸರಕ್ಕೆ ಪೂರಕವಾದ ಹೊಸ ಉತ್ಪನ್ನ ತಯಾರಿಸಬೇಕೆಂಬ ಕನಸಿತ್ತು. ಅದು ಕೈಗೂಡಿದ್ದು ಈ ತೆಂಗಿನ ಚಿಪ್ಪಿನಿಂದ...

`ಛಾಯಾ ನಿಸರ್ಗ~ದ ರೂವಾರಿ ರವಿಶಂಕರ್ ಅವರ ಮಾತು ಹೀಗೇ ಮುಂದುವರೆಯುತ್ತಿತ್ತು. ಹಾಗೇ ಸಾಲಾಗಿ ಜೋಡಿಸಿಟ್ಟ ತೆಂಗಿನ ಕಾಯಿ ಕರಟದಿಂದ ತಯಾರಿಸಿದ ನೆಕ್ಲೇಸ್‌ಗಳು, ಕಿವಿಯೋಲೆಗಳು ಒಡೆಯನತ್ತ ಹೊಳಪಿನ ನಗೆ ಬೀರಿದವು. ಅವರೇ ರಚಿಸಿದ ಗಡಿಯಾರವೂ ಠಣ್ ಎಂದು ಸದ್ದು ಮಾಡಿ ಸುಮ್ಮನಾಯಿತು. ಅವರು ಮುಂದುವರೆಸಿದರು...

`ಇದು ಸುಲಭದ ಕೆಲಸವಲ್ಲ. ಅತಿ ಸೂಕ್ಷ್ಮದ್ದು. ಚಿಪ್ಪು ಸಂಗ್ರಹವೇ ನಮಗೆ ಸವಾಲು. ತಿಪಟೂರು, ಶಿವಮೊಗ್ಗ, ತೀರ್ಥಹಳ್ಳಿಯಿಂದ ತೆಂಗಿನ ಚಿಪ್ಪುಗಳನ್ನು ತರಿಸುತ್ತೇವೆ. ಅದನ್ನು ಮಳೆ ನೀರು ತಾಕದಂತೆ ರಕ್ಷಿಸಬೇಕು. ನೆಲಕ್ಕೆ ಬಿದ್ದು ಒಡೆಯದಂತೆ ಕಾಪಾಡಬೇಕು. ಚಿಪ್ಪಿನೊಂದಿಗೆ ಮರದ ಕಾಂಡದಿಂದಲೂ ಕೆಲವಷ್ಟು ಉತ್ಪನ್ನಗಳನ್ನು ತಯಾರಿಸುವುದುಂಟು. ಅವುಗಳಂತೂ ಮಣ್ಣಿನ ಗುಣಲಕ್ಷಣ ಆಧರಿಸಿ ಬಹುಬೇಗ ತುಂಡಾಗುತ್ತವೆ. ಮಣ್ಣಿನಲ್ಲಿ ಉಪ್ಪಿನಂಶ ಹೆಚ್ಚಿದ್ದರೆ ಕಾಂಡವೂ ಬೇಗ ಹಾಳಾಗುತ್ತದೆ.  ಅದನ್ನು ಕಣ್ಣೋಟದಿಂದ ನಿರ್ಧರಿಸುವುದೂ ಕಠಿಣವೇ ಎನ್ನುವುದು ಅವರ ಅನುಭವದ ಮಾತು.

ಕಾರ್ಮಿಕರ ಕೊರತೆ ಸಮಸ್ಯೆ ಇವರನ್ನೂ ಬಿಟ್ಟಿಲ್ಲ. ವಿನ್ಯಾಸಕ್ಕಾಗಿ ಇವರು ವೃತ್ತಿಪರರಿಗಾಗಿ ಕಾದಿಲ್ಲ. ನಂದಿನಿ ಲೇಔಟ್‌ನ ಸುತ್ತಮುತ್ತ ಇರುವ ಆಸಕ್ತ ಕಲಾವಿದರ ತಂಡ ರಚಿಸಿಕೊಂಡಿದ್ದಾರೆ. ಕಾಲೇಜಿಗೆ ತೆರಳುತ್ತಲೇ ಪಾರ್ಟ್ ಟೈಂ ಕೆಲಸ ಮಾಡಲು ಇಷ್ಟವಿರುವ ಒಂದಷ್ಟು ಹುಡುಗರನ್ನು ಸೇರಿಸಿಕೊಂಡು ಹಾಳೆಯ ಮೇಲೆ ವಿನ್ಯಾಸ ರಚಿಸಿಕೊಳ್ಳುತ್ತಾರೆ. ಒಂದಷ್ಟು ಚಿಪ್ಪುಗಳನ್ನು ನೀಡಿ ಸಮಯ ಮಿತಿ ಹಾಕದೆ `ನಿಮಗೆ ಬೇಕಾದಷ್ಟು ಸಮಯ ತೆಗೆದುಕೊಳ್ಳಿ, ಅಂತಿಮ ಉತ್ಪನ್ನ ಮಾತ್ರ ಅದ್ಭುತವಾಗಿರಬೇಕು~ ಎಂಬ ಸೂಚನೆಯಷ್ಟೇ ನೀಡಿರುತ್ತಾರೆ.

ಹೀಗೆ ತಯಾರಾದ ಉತ್ಪನ್ನಗಳಿಗೆ ಅಂತಿಮ ಸ್ಪರ್ಶ ನೀಡುವವರು ಸ್ಥಳೀಯ ಮಹಿಳೆಯರು. `ತಯಾರಾದ ಬಹುತೇಕ ಎಲ್ಲಾ ಉತ್ಪನ್ನಗಳಿಗೆ ರಂಗೋಲಿಯ ಚಾದರ ಹೊದೆಸುವುದರಿಂದ ಕಲಾತ್ಮಕವಾಗಿಯೂ ಸುಂದರವಾಗಿ ಕಾಣಿಸುತ್ತದೆ. ಅಲ್ಲದೆ ಸ್ಥಳೀಯ ಮಹಿಳೆಯರಿಗೆ ಕೆಲಸ ದೊರೆತು ಸ್ವಾವಲಂಬಿಗಳನ್ನಾಗಿ ಮಾಡಿದ ಖುಷಿಯೂ ಸಿಗುತ್ತದೆ. ಅವರು ಬಿಡಿಸುವ `ಹೂವಾ~ ವಿನ್ಯಾಸಗಳಿಗೆ ಬೇಡಿಕೆಯೂ ಇದೆ. ಲಾಭಕ್ಕಿಂತ ಹೆಚ್ಚು ಖುಷಿ ಜನರಿಗೆ ಕೆಲಸ ಕೊಟ್ಟಿದ್ದರಲ್ಲಿ ಸಿಗುತ್ತದೆ ಎಂಬ ಮನೋಭಾವ ಅವರದ್ದು.

ಇವರ ಸಂಗ್ರಹದಲ್ಲಿ ಬಟ್ಟಲುಗಳು, ಕ್ಯಾಂಡಲ್ ದೀಪ, ಸೂಪ್ ಹಾಕುವ ಬಟ್ಟಲು, ಪಿಂಗಾಣಿ, ಮನೆಯ ಅಲಂಕಾರಿಕ ವಸ್ತುಗಳು, ಓಲೆ, ನೆಕ್ಲೇಸ್, ಪೆಂಡೆಂಟ್, ಗಡಿಯಾರ, ಪೆನ್‌ಸ್ಟ್ಯಾಂಡ್, ಮೊಬೈಲ್ ಸ್ಟ್ಯಾಂಡ್, ಸಣ್ಣ ಭರಣಿ, ಬೊಂಬೆ, ಆಮೆ, ಬ್ಯಾಗ್, ಚಮಚ, ಕೀ ಬಂಚ್ ಹೀಗೆ ಎಂಬತ್ತಕ್ಕೂ ಅಧಿಕ ಉತ್ಪನ್ನಗಳಿವೆ. ಇವು ಮಕ್ಕಳಿಂದ ವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುತ್ತವೆ.

ಈ ಉದ್ಯಮ ಆರಂಭವಾಗಿದ್ದು 2000ದಿಂದ. ಕೈಯಲ್ಲಿ ಮಾಡುವುದು ಕಷ್ಟ ಎಂಬ ಕಾರಣಕ್ಕೆ ಇದನ್ನೇ ವೃತ್ತಿಯಾಗಿ ಸ್ವೀಕರಿಸಿದವರು ಕಡಿಮೆ. ಮರದ ಇಲ್ಲವೇ ಜೂಟ್ ಉತ್ಪನ್ನಗಳೊಂದಿಗೆ ಇದನ್ನೂ ಸೇರಿಸಿ ಮಾರಾಟ ಮಾಡುತ್ತಾರಷ್ಟೇ. ತೆಂಗಿನ ಚಿಪ್ಪನ್ನೇ ಬಂಡವಾಳ ಮಾಡಿಕೊಂಡಿರುವ ಏಕೈಕ ಸಂಸ್ಥೆ `ಛಾಯಾ ನಿಸರ್ಗ~ ಎನ್ನುತ್ತಾರೆ ಅವರು.

ಹೀಗಿದ್ದೂ ಈ ಕರಕುಶಲ ಉತ್ಪನ್ನಗಳಿಗೆ ಭಾರತದಲ್ಲಿ ಬೇಡಿಕೆ ಅಷ್ಟಿಲ್ಲ. ಜನಸಾಮಾನ್ಯರಿಗೆ ಈ ಕುರಿತಾದ ಮಾಹಿತಿ ಇಲ್ಲದಿರುವುದೇ ಇದಕ್ಕೆ ಕಾರಣ . ಪ್ಲಾಸ್ಟಿಕ್‌ಗೆ ವಿರುದ್ಧವಾಗಿ ಪರಿಸರ ಸ್ನೇಹಿಯಾಗಿ ಬಳಸಬಹುದಾದ ಉತ್ಪನ್ನವಿದು.

ಇದೇ ಕಾರ್ಯವನ್ನು ದೊಡ್ಡ ಮಟ್ಟದಲ್ಲಿ ಮಾಡಬೇಕೆಂಬ ಕನಸಿದ್ದರೂ ಮೂಲಸೌಕರ್ಯದ ಕೊರತೆ ಇದೆ. ವಿದೇಶಿಯರು ನಮ್ಮ ಉತ್ಪನ್ನಗಳನ್ನು ಇಷ್ಟಪಟ್ಟು ಕೊಳ್ಳುತ್ತಾರೆ. ಆ ಮನೋಭಾವ ಕನ್ನಡಿಗರಲ್ಲಿಲ್ಲ ಎಂಬ ವಿಷಾದ ಅವರದು.

ಭಿನ್ನ ಸಾಮರ್ಥ್ಯದ ಮಕ್ಕಳಿಗೂ ಅವಕಾಶ ಕೊಡಬೇಕು ಎಂಬ ಕಾರಣಕ್ಕೆ ತೆಂಗಿನ ಮರದ ಈ ಉತ್ಪನ್ನಗಳ ತಯಾರಿಕೆಗೆ ಅವರನ್ನೂ ಬಳಸಿಕೊಂಡಿದ್ದಾರೆ. ಗುಂಡಿ ಹಾಕುವುದು, ಬಟ್ಟೆ ಹೊಲಿಯುವುದು, ಫೊಟೋ ಫ್ರೇಮ್ ಇವೇ ಮೊದಲಾದ ಸೂಕ್ಷ್ಮ ಕೆಲಸಗಳನ್ನು ಅವರಿಂದಲೇ ಮಾಡಿಸುತ್ತಿದ್ದಾರೆ. ತಮ್ಮ ಮನೆಯಲ್ಲೇ ಎರಡು ಕೊಠಡಿ ನೀಡಿ ಅವರನ್ನು ಸಾಕುತ್ತಾರೆ ಅಲ್ಲದೆ ಸಂಬಳ ನೀಡಿ ಅದನ್ನು ಅವರ ಮನೆ ತಲುಪುವಂತೆ ನೋಡಿಕೊಳ್ಳುತ್ತಾರೆ. ಅವರಿಗೂ ಸಾಮರ್ಥ್ಯವಿದೆ, ನಾವು ಅವಕಾಶ ನೀಡಬೇಕಷ್ಟೇ ಎನ್ನುತ್ತಾರೆ ರವಿಶಂಕರ್. ಮಾಹಿತಿಗೆ:94485 87136

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT