ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಡಿ- ಗೂಳಿಗಳ ಆಟದಲ್ಲಿ ಗೆದ್ದು ಬಂದ ಕುದುರೆ...

Last Updated 8 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

‘ಷೇರುಪೇಟೆ ಬಗ್ಗೆ ಏನೂ ಗೊತ್ತಿಲ್ಲ. ಸೆನ್ಸೆಕ್ಸ್, ಗೂಳಿಯಾಟ- ಕರಡಿ ಕುಣಿತದ ಏರಿಳಿತ, ಮೋಸದ ಭಯ. ಯಾವ ಕಂಪೆನಿ ಮೇಲೆ ದುಡ್ಡು ಹಾಕಿದ್ರೆ ಏನಾಗುತ್ತೆ ಅನ್ನೋ ಮಾಹಿತಿಯಿಲ್ಲ. ಆದ್ರೆ ದೀರ್ಘಾವಧಿಯಲ್ಲಿ ಷೇರುಪೇಟೆಯಲ್ಲಿ ಸಿಗುವಷ್ಟು ರಿಟರ್ನ್ಸ್ ಇನ್ನೆಲ್ಲೂ ಸಿಗಲ್ವಂತೆ ಏನು ಮಾಡೋದು...?’

- ಗೆಳೆಯ ಪ್ರವೀಣನ ಮಿಲಿಯನ್ ಡಾಲರ್ ಪ್ರಶ್ನೆ ಇದು. ರಾಜ್ಯದ ಅಸಂಖ್ಯ ಜನರನ್ನೂ ಇದೇ ರೀತಿಯ ಪ್ರಶ್ನೆಗಳು ಕಾಡುತ್ತಿರುತ್ತವೆ.ಷೇರುಪೇಟೆಗಿಂತ ಸುರಕ್ಷಿತ ಎಂದು ಮ್ಯೂಚುವಲ್ ಫಂಡ್‌ಗಳಲ್ಲಿ ದುಡ್ಡು ಹಾಕೋಕೆ ಹೋದ್ರೆ 27 ಮ್ಯೂಚುವಲ್ ಫಂಡ್ ಕಂಪೆನಿಗಳಲ್ಲಿ 200ಕ್ಕೂ ಹೆಚ್ಚು ಫಂಡ್ ವೈವಿಧ್ಯಗಳು ಇವೆ. ಇವು ಹೂಡಿಕೆದಾರರಲ್ಲಿ ಸಾಕಷ್ಟು ಗೊಂದಲ ಮೂಡಿಸುತ್ತವೆ.

ಅಂಡರ್ ಪರ್ಫಾಮೆನ್ಸ್, ಆವರೇಜ್ ಪರ್ಫಾಮೆನ್ಸ್, ಎಬೌ ಆವರೇಜ್, ಗುಡ್ ಪರ್ಫಾಮೆನ್ಸ್, ಎಕ್ಸಲೆಂಟ್ ಪರ್ಫಾಮೆನ್ಸ್‌ಗಳ ಬಗ್ಗೆ ಏಜೆಂಟರು ಗಂಟೆಗಟ್ಟಲೆ ಭಾಷಣ ಮಾಡಿದರೂ ‘ಅದೆಲ್ಲಾ ಸರಿ ಯಾವ ಫಂಡ್ ಚೆನ್ನಾಗಿದೆ, ಹಾಕಿದ ದುಡ್ಡು ಒಂದು ವರ್ಷದಲ್ಲಿ ಎಷ್ಟು ಬೆಳೆಯುತ್ತೆ?’ ಪ್ರಶ್ನೆಗಳು ಮನಸಿನಲ್ಲಿ ಉಳಿದು ಹೋಗುತ್ತವೆ.

ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದಲ್ಲಿ ಯೂಟ್ ಟ್ರಸ್ಟ್ ಆಫ್ ಇಂಡಿಯಾ (ಯುಟಿಐ) ಮಾಸ್ಟರ್ ಷೇರ್ ಮ್ಯೂಚುವಲ್ ಫಂಡ್ ವಿವಿಧ ಕಾರಣಗಳಿಂದಾಗಿ ಹೂಡಿಕೆದಾರರಿಗೆ ಮೆಚ್ಚುಗೆ ಆಗುವುದು. ಎಲ್ಲ ಮ್ಯೂಚುವಲ್ ಫಂಡ್‌ಗಳಲ್ಲಿಯೂ ‘ಹಿಂದಿನ ಸಾಧನೆ ಭವಿಷ್ಯದಲ್ಲಿ ಮುಂದುವರಿಯಬಹುದು ಅಥವಾ ಮುಂದುವರಿಯದೇ ಇರಬಹುದು’ ಎಂಬ ಎಚ್ಚರಿಕೆ ಇದ್ದೇ ಇರುತ್ತದೆ. ಆದರೆ ಗೆಲುವಿನ ವಿಶ್ವಾಸ ಖಾತ್ರಿ ಪಡಿಸದ ಹೊಸ ಫಂಡ್‌ಗಳಿಗಿಂತ ಮೂರ್ನಾಲ್ಕು ವರ್ಷ ಲಾಭ ತೋರಿಸಿರುವ ಫಂಡ್‌ಗಳನ್ನು ಆರಿಸಿಕೊಳ್ಳುವುದೇ ಜಾಣತನ ಎನ್ನುತ್ತಾರೆ ಹಣ ಹೂಡಿಕೆ ತಜ್ಞರು.

ಈ ಮಾನದಂಡದಿಂದ ಅಳೆದರೆ ‘ಯುಟಿಐ’ನ ಮಾಸ್ಟರ್‌ಷೇರ್ ಮ್ಯೂಚುವಲ್ ಫಂಡ್ ಕಳೆದ 25 ವರ್ಷಗಳಿಂದ ನಿಚ್ಚಳ ಗೆಲುವು ದಾಖಲಿಸಿದೆ. ಷೇರು ಮಾರುಕಟ್ಟೆಯ ಎಲ್ಲ ರೀತಿಯ ಏರಿಳಿತಗಳಲ್ಲಿಯೂ ಹಣ ಹೂಡಿದ ಗ್ರಾಹಕರಿಗೆ ತೆರಿಗೆ ಮುಕ್ತ ಡೆವಿಡೆಂಡ್ ನೀಡಿದೆ.ಮಾಸ್ಟರ್‌ಷೇರ್ ಫಂಡ್ ದೇಶದ ಮೊಟ್ಟಮೊದಲ ಡೈವರ್ಸಿಫೈಡ್ ಈಕ್ವಿಟಿ ಫಂಡ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದೆ. 1986ರಲ್ಲಿ ಈ ಫಂಡ್‌ನಲ್ಲಿ ಹೂಡಿದ್ದ  ರೂ.1 ಲಕ್ಷ ರೂ 2010ಕ್ಕೆ 44 ಲಕ್ಷ ರೂ ಮೌಲ್ಯ ಪಡೆದಿತ್ತು. ಐದು ವರ್ಷ ಎಸ್‌ಐಪಿ (ಸಿಸ್ಟೆಮೆಟಿಕ್ ಇನ್ವೆಸ್ಟ್‌ಮೆಂಟ್ ಪ್ಲಾನ್) ಮೂಲಕ ತಿಂಗಳಿಗೆ  ರೂ.1000  ಹೂಡಿಕೆ ಮಾಡಿದ್ದರೆ ಅದರ ಮೌಲ್ಯ ರೂ. 95,284   ಆಗಿರುತ್ತಿತ್ತು.

ಡೈವರ್ಸಿಫೈಡ್ ಮ್ಯೂಚುವಲ್ ಫಂಡ್‌ಗಳು ದೀರ್ಘಕಾಲದ ಹೂಡಿಕೆಗೆ ಹೆಚ್ಚು ಸೂಕ್ತ. ಈಕ್ವಿಟಿ ಪೋರ್ಟ್‌ಫೋಲಿಯೊದ ಬುನಾದಿಯಾಗಿರುವ ಡೈವರ್ಸಿಫೈಡ್ ಫಂಡ್‌ಗಳು ಪೋರ್ಟ್‌ಫೋಲಿಯೋಗೆ ಸ್ಥಿರತೆ ಮತ್ತು ವೈವಿಧ್ಯತೆ  ಒದಗಿಸುತ್ತವೆ. ಯಾವುದಾದರೂ ಒಂದೇ ಪ್ರಕಾರ ಅಥವಾ ಕ್ಷೇತ್ರದಲ್ಲಿ ಎಲ್ಲ ಹಣವನ್ನೂ ಹೂಡುವ ಅಪಾಯವನ್ನು ಇಂಥ ಫಂಡ್‌ಗಳು ದೂರ ಮಾಡುತ್ತವೆ.

ಹೀಗಾಗಿ ಮಾರುಕಟ್ಟೆಯ ಏರುಪೇರನ್ನು ಮೀರಿ ಈ ಫಂಡ್‌ಗಳು ಸಾಧನೆ ಮಾಡುತ್ತವೆ. ಇಂಥ ಫಂಡ್‌ಗಳಲ್ಲಿ ವಿಪರೀತ ಎನ್ನುವಂಥ ಲಾಭದ ಸಾಧ್ಯತೆಯೂ ಇರುವುದಿಲ್ಲ. ಅದರ ಜತೆಜತೆಗೆ ಅಸಲಿಗೇ ಮೋಸ ಎನ್ನಿಸುವ ನಷ್ಟದ ಅಪಾಯವೂ ದೂರ. ಮೊದಲ ಹೂಡಿಕೆಗೆ ಸೂಕ್ತ ಈಕ್ವಿಟಿ ಫಂಡ್ ಆಗಿ ‘ಮಾಸ್ಟರ್‌ಶೇರ್’ ಜನರ ಮೆಚ್ಚುಗೆ ಗಳಿಸಿದೆ.

ಮಾಸ್ಟರ್ ಷೇರ್‌ನಲ್ಲಿ ದೇಶದ ಒಟ್ಟು 6.58 ಲಕ್ಷ ಗ್ರಾಹಕರು ಹಣ ಹೂಡಿದ್ದಾರೆ.  ‘ಯುಟಿಐ’ನಲ್ಲಿ ರೂ 67,620 ಕೋಟಿ  ಹಣ ಸಂಚಯವಾಗಿದೆ.ಮಾಸ್ಟರ್‌ಷೇರ್‌ಗೆ ಆರಂಭದಲ್ಲಿ ಕನಿಷ್ಠ ರೂ 5000  ಹೂಡಬೇಕು. ಪ್ರವೇಶ ಶುಲ್ಕ ( ಎಂಟ್ರಿ ಲೋಡ್) ಇರುವುದಿಲ್ಲ. ಒಂದು ವರ್ಷದೊಳಗೆ ಹಣ ಹಿಂದೆ ಪಡೆಯಬಯಸಿದರೆ ಎಕ್ಸಿಟ್ ಲೋಡ್ ಶೇ 1 ರಷ್ಟು ಇರುತ್ತದೆ. ನಂತರದ ದಿನಗಳಲ್ಲಿ ಎಕ್ಸಿಟ್ ಲೋಡ್ ಸಹ ಇರುವುದಿಲ್ಲ.ಪೇಔಟ್ ಮತ್ತು ಮರುವಿನಿಯೋಜನೆ ಸೌಲಭ್ಯಗಳೊಂದಿಗೆ ಗ್ರೋತ್ ಹಾಗೂ ಡೆವಿಡೆಂಟ್ ವಿಧಾನದಲ್ಲಿ ಹೂಡಿಕೆ ಮಾಡುವ ಅವಕಾಶ ಇದೆ.

ಗ್ರಾಹಕರಿಂದ ಸಂಗ್ರಹಿಸಿದ ಹಣವನ್ನು ಮಾಸ್ಟರ್‌ಷೇರ್‌ನ ಫಂಡ್ ಮ್ಯಾನೇಜರ್ ಮುಖ್ಯವಾಗಿ ಬ್ಯಾಂಕಿಂಗ್/ಫೈನಾನ್ಸ್, ಇಂಧನ, ತೈಲ, ತಂತ್ರಜ್ಞಾನ, ಎಂಜಿನಿಯರಿಂಗ್, ಫಾರ್ಮಾಸ್ಯುಟಿಕಲ್ಸ್ ಉದ್ಯಮ ನಡೆಸುವ ಕಂಪೆನಿಗಳ ಮೇಲೆ ಹೂಡುತ್ತಾರೆ. ಈ ಫಂಡ್‌ನ ಗಮನಾರ್ಹ ಪ್ರಮಾಣದ ಹಣ ಇನ್ಫೋಸಿಸ್, ಎಚ್‌ಡಿಎಫ್‌ಸಿ, ಐಸಿಐಸಿಐ, ಎಸ್‌ಬಿಐ, ಐಟಿಸಿ ಕಂಪೆನಿಗಳಲ್ಲಿ ಹೂಡಿಕೆಯಾಗಿದೆ.

ಮತ್ತೊಂದು ಗಮನಿಸಲೇ ಬೇಕಾದ ಅಂಶ ಏನೆಂದರೆ, ಷೇರುಪೇಟೆಯಲ್ಲಿ ಹೂಡಿಕೆಯಾದ ಹಣದ ರಿಟರ್ನ್ಸ್ ಬಗ್ಗೆ ಯಾರೂ ನಿಖರ ಖಾತ್ರಿ ನೀಡಲು ಸಾಧ್ಯವಿಲ್ಲ. ಯುಟಿಐ ಮಾಸ್ಟರ್‌ಷೇರ್ ಕುರಿತು ಹೆಚ್ಚಿನ ಮಾಹಿತಿಗಾಗಿ 1800 22 1230 (ಟೋಲ್‌ಫ್ರೀ) ಸಂಪರ್ಕಿಸಬಹುದು. ಅಥವಾ invest@uti.co.in ಗೆ ಈಮೇಲ್ ಮಾಡಬಹುದು.

ಕೆನರಾ ರೊಬ್ಯಾಕೋ ಫೋರ್ಸ್, ಟಾಟಾ ಡೆವಿಡೆಂಟ್ ಯೀಲ್ಡ್, ಎಚ್‌ಡಿಎಫ್‌ಸಿ ಈಕ್ವಿಟಿ, ಫ್ರಾಕ್ಲಿನ್ ಇಂಡಿಯಾ ಬ್ಲೂಚಿಪ್, ಎಸ್‌ಬಿಐ ಮ್ಯಾಗ್ನಮ್ ಕಾಂಟ್ರಾ ಫಂಡ್‌ಗಳ ಬಗ್ಗೆಯೂ ಈಕ್ವಿಟಿಯಲ್ಲಿ ಹಣ ಹೂಡಬಯಸುವ ಗ್ರಾಹಕರು ಪರಿಶೀಲಿಸಬಹುದಾಗಿದೆ. ಫಂಡ್‌ಗಳ ತುಲನೆ ಮಾಡಬಯಸುವವರು ಒಮ್ಮೆ http://www.moneycon-trol.com ವೆಬ್‌ಸೈಟ್ ನೋಡಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT