ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ಅಬ್ಬರದ ಮಳೆ

Last Updated 2 ಜೂನ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಕರಾವಳಿ ಪ್ರದೇಶದಲ್ಲಿ ಮತ್ತು ಕೊಡಗು ಜಿಲ್ಲೆಯಲ್ಲಿ ಮಳೆ ಭಾನುವಾರ ಚುರುಕುಗೊಂಡಿತ್ತು. ಉಳಿದೆಡೆ ಹೇಳಿಕೊಳ್ಳುವಂತಹ ಮಳೆ ಆಗಿಲ್ಲ.

ಕರಾವಳಿಯಲ್ಲಿ ಶನಿವಾರ ರಾತ್ರಿ ಮತ್ತು ಭಾನುವಾರ ಮಳೆಯ ಅಬ್ಬರ ಜೋರಾಗಿತ್ತು. ಮಂಗಳೂರು ನಗರದ ವಿವಿಧೆಡೆ ಭಾರಿ ಮಳೆ ಸುರಿಯಿತು.

ನಗರದ ನಾಗುರಿಯ ಗುಡ್ಡೆ ತೋಟದ ಮನೆಯೊಂದರ ಬಳಿ ನಿಲ್ಲಿಸಿದ್ದ ಆಮ್ನಿ ಕಾರಿನ ಮೇಲೆ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಬಿದ್ದುದರಿಂದ ಕಾರು ನಜ್ಜುಗುಜ್ಜಾಗಿದೆ.

ಮಂಗಳೂರು ತಾಲ್ಲೂಕಿನಲ್ಲಿ 34.4 ಮಿ.ಮೀ, ಬಂಟ್ವಾಳ ತಾಲ್ಲೂಕಿನಲ್ಲಿ 15.5 ಮಿ.ಮೀ,  ಸುಳ್ಯ ತಾಲ್ಲೂಕಿನಲ್ಲಿ 12.2 ಮಿ.ಮೀ, ಪುತ್ತೂರು ತಾಲ್ಲೂಕಿನಲ್ಲಿ 7.05 ಮಿ.ಮೀ ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ 2.8 ಮಿ.ಮೀ ಮಳೆ ದಾಖಲಾಗಿದೆ.

ಉಡುಪಿಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಜಿಲ್ಲೆಯಲ್ಲಿ ಸರಾಸರಿ 26.74ಮಿ.ಮೀ ಮಳೆಯಾಗಿದೆ. ಯಾವುದೇ ಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಉಡುಪಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಅಂದರೆ 16.4 ಮಿ.ಮೀ ಮಳೆಯಾಗಿದ್ದರೆ, ಕುಂದಾಪುರದಲ್ಲಿ 8.2ಮಿ.ಮೀ ಹಾಗೂ ಕಾರ್ಕಳದಲ್ಲಿ 0.4ಮಿ.ಮೀ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಘಟ್ಟ ಪ್ರದೇಶ ಸೇರಿದಂತೆ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗಿದೆ.

ತುಮಕೂರು  ಜಿಲ್ಲೆಯ ಹಲವೆಡೆ ಭಾನುವಾರ ಮಳೆಯಾಗಿದೆ. ತಿಪಟೂರು, ಕೊರಟಗೆರೆ, ಗುಬ್ಬಿ, ಪಾವಗಡ ತಾಲ್ಲೂಕಿನ ಹಲವೆಡೆ ಮಳೆ ಸುರಿಯಿತು. ಗಾಳಿ ಇಲ್ಲದ ಹದವರಿತ ಮಳೆಯಾಗಿದ್ದರಿಂದ ಈಗಾಗಲೇ ಹಾಕಿರುವ ಬೆಳೆಗೆ ಹಾಗೂ ಬಿತ್ತನೆ ಕಾರ್ಯಕ್ಕೆ ಅನುಕೂಲವಾಗಿದೆ. ಮೈಸೂರು ಜಿಲ್ಲೆಯಲ್ಲಿ ಮುಂಗಾರು ಪೂರ್ವ ಮಳೆ  ಭಾನುವಾರವೂ ಮುಂದುವರಿಯಿತು. ಹುಣಸೂರು ತಾಲ್ಲೂಕಿನಲ್ಲಿ ಅತಿ ಹೆಚ್ಚು (40 ಮಿ.ಮೀ.) ಮಳೆಯಾಗಿದ್ದರೆ, ನಂಜನಗೂಡಿನಲ್ಲಿ ಅತಿ ಕಡಿಮೆ (4 ಮಿ.ಮೀ.) ಮಳೆಯಾಗಿದೆ.

ಉಳಿದಂತೆ ಮೈಸೂರು ನಗರದಲ್ಲಿ 27.5 ಮಿ.ಮೀ., ಕೆ.ಆರ್. ನಗರದಲ್ಲಿ 12.5 ಮಿ.ಮೀ., ಪಿರಿಯಾಪಟ್ಟಣದಲ್ಲಿ 5 ಮಿ.ಮೀ.ನಷ್ಟು ಮಳೆಯಾಗಿರುವ ಬಗ್ಗೆ ದಾಖಲಾಗಿದೆ. ಮಳೆಯಿಂದ ಯಾವುದೇ ಹಾನಿ ಆಗಿರುವ ಬಗ್ಗೆ ವರದಿಯಾಗಿಲ್ಲ. ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಾನುವಾರ ಉತ್ತಮವಾಗಿ ಮಳೆ ಸುರಿದಿದೆ. ಮಡಿಕೇರಿ ನಗರ, ನಾಪೋಕ್ಲು, ವಿರಾಜಪೇಟೆ, ಪೊನ್ನಂಪೇಟೆ, ಶ್ರೀಮಂಗಲ, ಶಾಂತಳ್ಳಿ, ಭಾಗಮಂಡಲ ಸೇರಿದಂತೆ ಮತ್ತಿತರ ಪ್ರದೇಶಗಳಲ್ಲಿ ಮಳೆಯಾಗಿದೆ. ಉತ್ತರ ಕರ್ನಾಟಕದ ವಿವಿಧೆಡೆ ಭಾನುವಾರ ಮಳೆ ಇಳಿಮುಖವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT