ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರಾವಳಿಯಲ್ಲಿ ನಿಮಿಷಕ್ಕೊಂದು ರೈಲು ಓಡಲಿ: ಆಸ್ಕರ್ ಫರ್ನಾಂಡಿಸ್

Last Updated 19 ಅಕ್ಟೋಬರ್ 2012, 7:50 IST
ಅಕ್ಷರ ಗಾತ್ರ

ಮಂಗಳೂರು: ಬೆಂಗಳೂರಿನಿಂದ ಆಗಮಿಸಿದ ಯಶವಂತಪುರ- ಕಣ್ಣೂರು ರೈಲಿನ 13 ಬೋಗಿಗಳು ಕಾರವಾರಕ್ಕೆ ಸಂಚರಿಸುವ ಮೂಲಕ ಕರಾವಳಿಯ ಬಹುದಿನಗಳ ಕನಸು ಗುರುವಾರ ಸಾಕಾರಗೊಂಡಿತು. ವಿವಿಧ ಸಂಘಟನೆಗಳ ಮುಖಂಡರು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ರೈಲಿನ 13 ಬೋಗಿಗಳನ್ನು ಹೂವು, ಬಣ್ಣ ಬಣ್ಣದ ತೋರಣ, ಬಲೂನುಗಳಿಂದ ಸಿಂಗರಿಸಿ ಸಂಭ್ರಮದಿಂದ ಬೀಳೊಟ್ಟರು. ಕೆಲವರು ಕಾರವಾರ ರೈಲಿಗೆ ಸ್ವಾಗತಕೋರುವ ಬ್ಯಾನರ್‌ಗಳನ್ನು ಪ್ರದರ್ಶಿಸುವ ಮೂಲಕ ಸಡಗರವನ್ನು ಹಂಚಿಕೊಂಡರು.

ಮಂಗಳೂರಿನಿಂದ ಕಾರವಾರಕ್ಕೆ ಹೊರಟ ರೈಲಿಗೆ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹಸಿರು ನಿಶಾನೆ ತೋರಿದರು. 

ಈ ಸಂದರ್ಭದಲ್ಲಿ ಮಾತನಾಡಿದ ಆಸ್ಕರ್, `ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಚತುಷ್ಫಥವಾಗಿ ಅಭಿವೃದ್ಧಿಗೊಂಡರೂ ಇಲ್ಲಿ ರಸ್ತೆ ಅಪಘಾತಗಳು ಕಡಿಮೆಯಾಗಿಲ್ಲ. ಹೆದ್ದಾರಿಗಳಲ್ಲಿ ನಿಮಿಷಕ್ಕೆ ನಾಲ್ಕೈದು ಬಸ್‌ಗಳು ಓಡಾಡುವ ಸ್ಥಿತಿ ಇದೆ. ಹಾಗಾಗಿ ಕರಾವಳಿಯ ಹಳಿಯಲ್ಲಿ ಸಾಧ್ಯವಾದಷ್ಟು ಹೆಚ್ಚು ರೈಲುಗಳನ್ನು ಓಡಿಸಬೇಕು. ಅವಕಾಶವಿದ್ದರೆ ನಿಮಿಷಕ್ಕೊಂದು ರೈಲು ಓಡಿಸಬೇಕು. ದುಡ್ಡಿಲ್ಲದಿದ್ದರೆ ಇಲಾಖೆ ಹಳಿಯನ್ನು ಬಳಸಲು ಜನರಿಗೆ ಒಪ್ಪಿಗೆ ನೀಡಲಿ. ಜನರೇ ರೈಲಿಗೆ ದುಡ್ಡು ಹೊಂದಿಸುತ್ತಾರೆ~ ಎಂದರು.

ಅಧ್ಯಕ್ಷತೆ ವಹಿಸಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ` `ಬಿಡುವಿರುವ ವೇಳೆ ನೋಡಿಕೊಂಡು ಗೋವಾ- ಮಂಗಳೂರು ಹಳಿಯಲ್ಲಿ ಹೆಚ್ಚಿನ ರೈಲು ಒದಗಿಸುವ ಬಗ್ಗೆ ಪರಿಶೀಲಿಸುತ್ತೇನೆ. ಈ ಬಗ್ಗೆ ಶೀಘ್ರ ದೆಹಲಿಯಲ್ಲಿ ರೈಲ್ವೆ ಮಂಡಳಿ ಸಭೆ ಕರೆದು ಅಧಿಕಾರಿಗಳ ಜತೆ ಚರ್ಚಿಸುತ್ತೇನೆ~ ಎಂದು ಭರವಸೆ ನೀಡಿದರು.

`ಬೈಂದೂರಿನ ಮೂಕಾಂಬಿಕಾ ರೋಡ್ ರೈಲ್ವೆ ನಿಲ್ದಾಣವನ್ನು ರೂ 31 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಈಗಾಗಲೇ ಅಲ್ಲಿ 6 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ~ ಎಂದರು.

ಜನವರಿಯಿಂದ ಬುಕಿಂಗ್ ಸುಲಭ
 `ಹೊಸ ರೈಲಿಗೆ ಮೂರು ತಿಂಗಳವರೆಗೆ ಟಿಕೆಟ್ ಕಾಯ್ದಿರಿಸಲಾಗಿದ್ದು,  ಪ್ರಯಾಣಿಕರು ಸ್ವಲ್ಪಮಟ್ಟಿನ ಗೊಂದಲ ಎದುರಿಸುವ ಸಾಧ್ಯತೆ ಇದೆ. ಜನವರಿಯಿಂದ ದೂರವಾಣಿ, ಎಸ್‌ಎಂಎಸ್ ಅಥವಾ ಇ-ಮೇಲ್ ಮೂಲಕವೂ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಜಾರಿಯಾಗಲಿದೆ~ ಎಂದು ಸಚಿವರು ತಿಳಿಸಿದರು. 

ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, `ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ರಚಿಸಬೇಕು. ಮುಂಬೈ- ಮಂಗಳೂರು ನಡುವೆ ಹಾಗೂ ಕಾರವಾರ-ಬೆಂಗಳೂರು ನಡುವೆ ಇನ್ನೊಂದು ರೈಲು ಓಡಿಸಬೇಕು~ ಎಂದು ಒತ್ತಾಯಿಸಿದರು.

ವಿಧಾನಸಭಾ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಮಾತನಾಡಿ, `ವಿಶ್ವದರ್ಜೆಯ ರೈಲುನಿಲ್ದಾಣ ನಿರ್ಮಾಣಕ್ಕೆ ಬೇಕಾದಷ್ಟು ಜಮೀನು ಇಲ್ಲಿ ಲಭ್ಯ. ಜೆಪ್ಪು, ಕುಡುಪಾಡಿ, ಪಡೀಲ್ ಬಳಿ ರೈಲ್ವೆ ಸೇತುವೆ ನಿರ್ಮಿಸಲು ರೂ 6 ಕೋಟಿ ಒದಗಿಸಲು ಸರ್ಕಾರ ಸಿದ್ಧ~ ಎಂದರು.

`ಉಳ್ಳಾಲ, ಸುರತ್ಕಲ್‌ನಂತಹ ಪುಟ್ಟ ರೈಲು ನಿಲ್ದಾಣಗಳನ್ನೂ ಮೇಲ್ದರ್ಜೆಗೆ ಏರಿಸಬೇಕು~ ಎಂದು ಶಾಸಕ ಯು.ಟಿ.ಖಾದರ್ ಒತ್ತಾಯಿಸಿದರು.  ಶಾಸಕರಾದ ರಮಾನಾಥ ರೈ, ಅಂಬರೀಶ್, ವೆಂಕಟಸ್ವಾಮಿ, ಮಾಜಿ ಸಂಸದ ವಿನಯ ಕುಮಾರ್ ಸೊರಕೆ, ಇಬ್ರಾಹಿಂ, ಕಾಂಗ್ರೆಸ್ ಮುಖಂಡರಾದ ವಿಜಯಕುಮಾರ್ ಶೆಟ್ಟಿ, ಎಂ.ಎ.ಗಫೂರ್, ಐವನ್ ಡಿಸೋಜ, ಮೊಯ್ದಿನ್ ಬಾವ ಮತ್ತಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT