ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ನಿರ್ಲಕ್ಷ್ಯ: ಪಿಡಿಒಗಳಿಗೆ ನೋಟಿಸ್

Last Updated 4 ಡಿಸೆಂಬರ್ 2013, 6:31 IST
ಅಕ್ಷರ ಗಾತ್ರ

ಕೋಲಾರ: ಉದ್ಯೋಗಖಾತ್ರಿ ಯೋಜನೆಯಡಿ ರೂಪಿಸಲಾಗುವ ಅನುದಾನದಲ್ಲಿ ಶೇ 20ರಷ್ಟನ್ನು ಅರಣ್ಯೀಕರಣಕ್ಕೆ ಮೀಸಲಿಡುವಲ್ಲಿ ನಿರ್ಲಕ್ಷ್ಯ ವಹಿಸಿರುವ ತಾಲ್ಲೂಕಿನ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ (ಪಿಡಿಒ) ಕಾರಣ ಕೇಳಿ ನೋಟಿಸ್ ನೀಡಲು ತಾಲ್ಲೂಕು ಪಂಚಾಯಿತಿ ನಿರ್ಧರಿಸಿದೆ.

ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಸಾಮಾಜಿಕ ಅರಣ್ಯ ವಿಭಾಗದ ವಲಯ ಅರಣ್ಯಾಧಿಕಾರಿ ಬಿಂದು ಅವರು ಈ ಬಗ್ಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ  ಅಭಿವೃದ್ಧಿ ಅಧಿಕಾರಿಗಳಿಗೆ ನೋಟಿಸ  ನೀಡಲು ನಿರ್ಧರಿಸಿತು.

ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ ಬಹುತೇಕ ಸಾಮಾಜಿಕ ಅರಣ್ಯದ ಕುರಿತು ಹೆಚ್ಚು ಕಾಳಜಿ ವಹಿಸುತ್ತಿಲ್ಲ. ಉದ್ಯೋಗಖಾತ್ರಿ ಯೋಜನೆ ಅಡಿಯಲ್ಲಿ ರೂಪಿಸಲಾಗುವ ಯೋಜನೆಯ ಅನುದಾನದಲ್ಲಿ ಶೇ 20ರಷ್ಟನ್ನು ಅರಣ್ಯೀಕರಣಕ್ಕೆ ಮೀಸಲಿಡಬೇಕು ಎಂಬ ಸರ್ಕಾರದ ಆದೇಶ ಪಾಲನೆಯ ವಿಚಾರದಲ್ಲಿ ಅಭಿವೃದ್ಧಿ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಗೊಂಡ ಗ್ರಾಮ ಪಂಚಾಯಿತಿಯ ಕ್ರಿಯಾ ಯೋಜನೆಯ ಪ್ರತಿಯನ್ನು ತಮ್ಮ ಇಲಾಖೆಗೆ ಕಳಿಸಿ ಅರಣ್ಯೀಕರಣಕ್ಕೆ ಅಂದಾಜು ಪಟ್ಟಿ ತಯಾರಿಸಿಕೊಡಲು ಕೋರಬೇಕು. ಆದರೆ ಅಂತ ಕೋರಿಕೆಯು ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳಿಂದ ತಮಗೆ ಬಂದಿಲ್ಲ. ಬದಲಿಗೆತಾವೇ ಪಂಚಾಯಿತಿಗಳಿಗೆ ಭೇಟಿ ನೀಡಿ  ಸಂಗ್ರಹಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ ಎಂದು ಅಧಿಕಾರಿ ಅಸಹಾಯಕತೆ ವ್ಯಕ್ತಪಡಿಸಿದರು.

ಇದರಿಂದ ಅಸಮಾಧಾನಗೊಂಡ ಸದಸ್ಯರು, ಅರಣ್ಯೀಕರಣಕ್ಕೆ ಅರಣ್ಯ ಇಲಾಖೆಯು ಸಿದ್ಧವಿದೆ. ಉದ್ಯೋಗ ಖಾತ್ರಿ ಅಡಿಯಲ್ಲಿ ಹಣ ನೀಡಲು ಕೇಂದ್ರ ಮತ್ತು ರಾಜ್ಯ ಸರ್ಕಾರವೂ ಸಿದ್ಧವಿದೆ. ಇಂಥ ಸನ್ನಿವೇಶದಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಬೇಕು ಎಂದು ಸೂಚಿಸಿದರು.

ಸಿಬ್ಬಂದಿ ಕೊರತೆ: ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ. ಇಡೀ ತಾಲ್ಲೂಕಿಗೆ ತಾವೊಬ್ಬರೇ ವಲಯ ಅರಣ್ಯಾಧಿಕಾರಿ. ತಮಗೆ ಸಹಾಯಕರಾಗಿ ಅರಣ್ಯ ರಕ್ಷಕರೊಬ್ಬರು ಇದ್ದಾರೆ. ಎಲ್ಲ 36 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರೇ ಕೆಲಸ ಮಾಡ ಬೇಕಾಗಿದೆ ಎಂದು ಅಧಿಕಾರಿ ಅಲವತ್ತುಕೊಂಡರು. ಸಿಬ್ಬಂದಿ ಕೊರತೆ ಬಗ್ಗೆ ಅಧಿಕಾರಿಗೆ ಪತ್ರ ಬರೆಯಲು ಸಭೆ ನಿರ್ಧರಿಸಿತು.

ನೀರಿನ ಸಮಸ್ಯೆ ನಿರ್ವಹಣೆಯಲ್ಲಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕಾರ್ಯವೈಖರಿ ಕಡೆಗೂ ಗಮನ ಸೆಳೆಯಲಾಯಿತು. ಅರಿನಾಗನಹಳ್ಳಿಯಲ್ಲಿ ಒಂದು ವಾರದಿಂದ ನೀರಿನ ಸಮಸ್ಯೆ ಇದೆ. ಆ ಬಗ್ಗೆ ತಮಗೆ ನಿನ್ನೆಯಷ್ಟೇ ಗೊತ್ತಾಯಿತು. ಸಮಸ್ಯೆಯನ್ನು ಪರಿಹರಿಸಿ ಎಂದು ಸದಸ್ಯೆ ಪುಟ್ಟಮ್ಮ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಅವರನ್ನು ಕೋರಿದರು.

ಒಂದು ವಾರದಿಂದ ಸಮಸ್ಯೆ ಇದ್ದರೂ ತಮ್ಮ ಗಮನಕ್ಕೆ ತರದೇ ಇರುವುದು ಸರಿಯಲ್ಲ. ನೀರಿನ ಸಮಸ್ಯೆ ಎಲ್ಲೇ ಇದ್ದರೂ ಕೂಡಲೇ ಟ್ಯಾಂಕರ್ ಮೂಲಕ ಪೂರೈಸಲಾಗುವುದು ಎಂದು ಹೇಳಿದರು. ಅರಿನಾಗನಹಳ್ಳಿಯ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿದೆಯೇ ಎಂಬುದನ್ನು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಭೆಗೆ ಬಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಕಾರ್ಯ ನಿರ್ವಹಣಾಧಿಕಾರಿ ಡಿ.ಜಾನಕೀರಾಂ ಸೂಚಿಸಿದರು. ತಾಪಂ  ಅಧ್ಯಕ್ಷೆ ಭಾಗ್ಯಲಕ್ಷ್ಮಿ, ಉಪಾಧ್ಯಕ್ಷೆ ಸರಸ್ವತಿ, ಸಹಾಯಕ ನಿರ್ದೇಶಕ ಚೆನ್ನಬಸವಯ್ಯ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT