ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಗತವೈಭವ ದರ್ಶನ...

ನಗರದಲ್ಲಿ ಪಾಟಾ ಆಯೋಜಿಸಿರುವ ‘ಟ್ರಾವೆಲ್‌ ಮಾರ್ಟ್‌ 2015’ರಲ್ಲಿ ಪ್ರದರ್ಶನ
Last Updated 7 ಸೆಪ್ಟೆಂಬರ್ 2015, 19:36 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರು ಅರಮನೆ, ಹಂಪಿಯ ಕಲ್ಲಿನ ರಥ, ಬೇಲೂರು ದೇವಸ್ಥಾನ, ಬಾದಾಮಿ ಗುಹಾಂತರ ದೇವಾಲಯ, ಸಾಸಿವೆ ಗಣಪತಿ, ಚಾಮುಂಡಿ, ಗೊಮ್ಮಟೇಶ್ವರನ ವಿಗ್ರಹ ಹೀಗೆ ಕರ್ನಾಟಕದ ಗತವೈಭವವನ್ನು ಒಂದೇ ಪರಿಸರದಲ್ಲಿ ನೋಡುವ ಅವಕಾಶ. ಇದಕ್ಕೆ ವೇದಿಕೆಯಾದುದು ನಗರದ ಹೊರವಲಯದ ಬೆಂಗಳೂರು ಅಂತರರಾಷ್ಟ್ರೀಯ ಪ್ರದರ್ಶನ ಕೇಂದ್ರದ  (ಬಿಐಇಸಿ) ಆವರಣ.

 ಪೆಸಿಫಿಕ್‌ ಏಷ್ಯಾ ಟ್ರಾವೆಲ್‌ ಅಸೋಸಿಯೇಷನ್‌ನಿಂದ (ಪಾಟಾ) ಆಯೋಜಿಸಿರುವ ‘ಟ್ರಾವೆಲ್‌ ಮಾರ್ಟ್‌ 2015’ರಲ್ಲಿ 61 ದೇಶಗಳ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಅವರಿಗೆ ಒಂದೇ ಪರಿಸರದಲ್ಲಿ ಕರ್ನಾಟಕದ ಇತಿಹಾಸವನ್ನು ಪರಿಚಯಿಸಿಕೊಡುವ ಪ್ರಯತ್ನ ರಾಜ್ಯ ಸರ್ಕಾರ ಮಾಡಿದೆ.

ಹೊಯ್ಸಳ ಶೈಲಿಯ ನಂದಿ ಸೇರಿದಂತೆ ಹಲವು ವಿಗ್ರಹಗಳ ಮಾದರಿಯನ್ನು ಪ್ರತಿಷ್ಠಾಪಿಸಲಾಗಿದೆ. ದಾರಿಯುದ್ದಕ್ಕೂ ವಿಜಯನಗರ ಸಾಮ್ರಾಜ್ಯದ ಬಜಾರ್ ರಸ್ತೆ, ಗೋಲ್ಡನ್ ಚಾರಿಯೆಟ್ ರೈಲು, ಗೊಮ್ಮಟೇಶ್ವರ, ಚಾಮುಂಡಿ, ಮಹಿಷಾಸುರ, ಬೇಲೂರು ದೇವಾಲಯ, ಮೆಕ್ಕಿಕಟ್ಟು ಗೊಂಬೆ, ಯೋಗನರಸಿಂಹ ಸೇರಿದಂತೆ ಒಟ್ಟು 14 ವಿಗ್ರಹಗಳನ್ನು ನಿರ್ಮಿಸಲಾಗಿದೆ.

ಎಫ್ ಆರ್‌ಪಿಯಿಂದ ಈ ಪ್ರತಿಮೆಗಳನ್ನು ಮಾಡಲಾಗಿದೆ. ಪ್ರದರ್ಶನ ನಡೆಯುತ್ತಿರುವ ಸಭಾಂಗಣದ ಮುಂಭಾಗದಲ್ಲಿ ರಾಜ್ಯವನ್ನು ಆಳಿದ ಎಂಟು ಮನೆತನಗಳ ಲಾಂಛನ, ಮೈಸೂರು ಅರಮನೆಯ ದರ್ಬಾರ್ ಹಾಲ್, ಅದರ ಒಳಗಡೆ ಇರುವ ಸಿಂಹಾಸನ ಎಲ್ಲರನ್ನೂ ಆಕರ್ಷಿಸುತ್ತಿದೆ.

ದರ್ಬಾರ್‌ ಹಾಲ್‌ಗೆ 550 ಎಲ್‌ಇಡಿ ಲೈಟುಗಳನ್ನು ಹಾಕಲಾಗಿದೆ. ಇದರ ಆವರಣದಲ್ಲಿ ಹಾಕಿರುವ ನೆಲಹಾಸನ್ನು ಕೊರಿಯಾದಿಂದ ತರಿಸಿಕೊಳ್ಳಲಾಗಿದೆ. ಇದನ್ನು ನೋಡುತ್ತಿದ್ದರೆ ಥೇಟ್‌ ಮೈಸೂರು ಅರಮನೆಯ ದರ್ಬಾರ್‌ ಹಾಲ್‌ ನೋಡಿದ ಅನುಭವ ಆಗುತ್ತದೆ.

ಅಂದ ಹಾಗೆ ಇದಕ್ಕೆ ನೈಜಸ್ವರೂಪ ನೀಡಿದವರು ಪ್ರತಿರೂಪಿ ಸಂಸ್ಥೆಯ ಅಧ್ಯಕ್ಷ ಶಶಿಧರ ಅಡಪ ಅವರ ನೇತೃತ್ವದ 170 ಕಲಾವಿದರ ತಂಡ. ಈ ತಂಡವು ಒಂದೂವರೆ ತಿಂಗಳಲ್ಲಿ ಖಾಸಗಿ ದರ್ಬಾರ್‌ ನಿರ್ಮಾಣ ಮಾಡಿದೆ. ಸಂಜೆ ವಿವಿಧ ಜಾನಪದ ತಂಡಗಳು ಸಾಂಸ್ಕೃತಿಕ ಕಲೆಗಳನ್ನು ಪ್ರದರ್ಶಿಸಿ ವಿದೇಶಿಯರಿಗೆ ಕರ್ನಾಟಕದ ಕಲೆ ಪರಿಚಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT