ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲೆಯ ಬಲೆಯು!

Last Updated 11 ಜುಲೈ 2013, 19:59 IST
ಅಕ್ಷರ ಗಾತ್ರ

`ಕಲ್ಯಾಣಿ ಸ್ಕೂಲ್'... ಎಲ್ಲಿದೆ ಈ ಶಾಲೆ? ಗಾಂಧಿನಗರದಲ್ಲಿ! ಏನೇನು ಕಲಿಸುತ್ತಾರೆ? ಕ್ಷಮಿಸಿ, ಇಲ್ಲಿ ಶಾಲೆಯೇ ಮೈದಾನ. ಶಿಷ್ಯನೇ ಗುರು. ಚಿತ್ರತಂಡವೇ ಹೇಳಿಕೊಂಡಂತೆ ಇದು `ಚಡ್ಡಿ ಮಿಡ್ಡಿಗಳ ದೊಡ್ಡಿ'.

ಇದನ್ನೆಲ್ಲಾ ಸಾಬೀತು ಮಾಡುವಂತಿತ್ತು ಚಿತ್ರದ ಧ್ವನಿಮುದ್ರಿಕೆ ಬಿಡುಗಡೆ ಸಮಾರಂಭ. ಪುಟ್ಟ ತೆರೆಯ ಮೇಲೆ `ಮಕ್ಕಳು' ಕುಣಿದು ಕುಪ್ಪಳಿಸುತ್ತಿದ್ದರು. `ಹರ‌್ಕಲ್ ಪರ‌್ಕಲ್ ಚಡ್ಡಿ', `ತುಂಟ ಮನಸೇ', `ಮಾಯದ ಲೋಕದ ಜಿಂಕೆ' ಎಂದೆಲ್ಲಾ ಹಾಡಿಕೊಳ್ಳುತ್ತಿದ್ದರು. ಕೋಲು ಹಿಡಿದ ಮೇಷ್ಟ್ರು, ಮೇಡಂ ಕೂಡ ಹಾಡಿನ ಲಯಕ್ಕೆ ಹೆಜ್ಜೆ ಹಾಕುತ್ತಿದ್ದರು.

ಹೆಡ್‌ಮಾಸ್ತರ್ ರೀತಿ ಗಂಟಲು ಸರಿಮಾಡಿಕೊಂಡದ್ದು ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್. ಸ್ಕೂಲ್‌ಗೆಂದು ಅವರು ಒಟ್ಟು ಐದು ಹಾಡುಗಳನ್ನು ಬರೆದಿದ್ದಾರೆ. ಅವರೇ ಹಾಡಿರುವ `ತುಂಟ ಮನಸೇ' ಆ ಶಾಲೆಯ ಅನುದಿನದ ಪ್ರಾರ್ಥನಾ ಗೀತೆಯಂತಿದೆ. ಅಲ್ಲೊಂದಿಷ್ಟು ಪ್ರಯೋಗಗಳಾಗಿವೆ. ತಂತ್ರಜ್ಞಾನ ಬಳಸಿ ಒಂದು ಅಕ್ಷರವನ್ನು ಹೆಣ್ಣೂ ಮತ್ತೊಂದು ಅಕ್ಷರವನ್ನು ಗಂಡು ಕಂಠದಲ್ಲಿ ಮೂಡಿಸಲಾಗಿದೆ.

ಮೇಷ್ಟ್ರಿಲ್ಲದಿದ್ದಾಗ ಮಕ್ಕಳು ಮಾಡುವ ಗಲಾಟೆಯಂತೆ ಮೊದಮೊದಲು ಗೊಂದಲ ತಂದರೂ ಪ್ರಯೋಗ ಇಷ್ಟವಾಗುತ್ತದೆ. ಅಲ್ಲದೆ ಬೇರೆ ಹಾಡುಗಳಿಗೆ ಅನುರಾಧಾ ಭಟ್, ಆನಂದ ಪ್ರಿಯ, ಶಶಾಂಕ್ ಶೇಷಗಿರಿ ದನಿಗೂಡಿಸಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ನಿರ್ದೇಶಕ ಮಯೂರ ವರ್ಮ ಸಾಹಿತ್ಯ ರಚಿಸಿದ್ದಾರೆ.

ಎಂಟರಿಂದ ಎಂಬತ್ತು ವರ್ಷದ ಎಲ್ಲರೂ ನೋಡಬಹುದಾದ ಸಿನಿಮಾ ಎಂದು ಹೇಳಿಕೊಂಡರು ಮಯೂರ ವರ್ಮ. 44 ದಿನಗಳಲ್ಲಿ ಚಿತ್ರೀಕರಣ ಮುಗಿಸಲಾಗಿದೆ. ಆಗುಂಬೆ, ಪಡುವಾರಹಳ್ಳಿ ಕ್ರಾಸ್, ಯಾಣ, ಬೆಂಗಳೂರಿನಲ್ಲಿ `ಸ್ಕೂಲ್' ಮೂಡಿದೆ.

ನಿರ್ಮಾಪಕ ಪಿ. ಅಶ್ವತ್ಥನಾರಾಯಣ್, ಮೇಡಂ ಪಾತ್ರ ಮಾಡಿರುವ ನಟಿ ಅಶ್ವಿನಿ, ನಟ ರಘು ಮುಖರ್ಜಿ ಸಮಾರಂಭದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT