ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಪತರು ನಾಡಿಗೆ ಬರ: ಶವ ಕೀಳುತ್ತಿರುವ ಜನ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ತುಮಕೂರು: ಬರದ ತೀವ್ರತೆಯಿಂದ ಸಹಾಯ ಹಸ್ತ ಸಿಗದೆ ಹತಾಶರಾದ ಜನತೆ, ಮೂಢನಂಬಿಕೆಗಳಿಗೆ ಮಾರುಹೋಗುತ್ತಿದ್ದಾರೆ. ಹೂತ ಶವ ಕಿತ್ತು ಬಿಸಾಡಿದ ಅಮಾನವೀಯ ಘಟನೆಯೊಂದು ಗುಬ್ಬಿ ತಾಲ್ಲೂಕಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಹೋಬಳಿ ಬಡಗೀರನಹಟ್ಟಿಯಲ್ಲಿ ಈ ಘಟನೆ ನಡೆದಿದೆ. ಕಾಡಗೊಲ್ಲ ಸಮುದಾಯಕ್ಕೆ ಸೇರಿದ ದೇವರಾಜ್ ಶವವನ್ನು ಜನರು ಗುಂಡಿಯಿಂದ ಹೊರತೆಗೆದು ಕೈ-ಕಾಲು, ತಲೆ ಕಡಿದು ಬಿಸಾಡಿದ್ದಾರೆ. ಈ ಘಟನೆ ನಡೆದು 15 ದಿನ ಕಳೆದಿದ್ದರೂ ಪೊಲೀಸರೂ ಸೇರಿದಂತೆ ಜಿಲ್ಲಾಡಳಿತದ ಗಮನಕ್ಕೆ ಬಂದಿಲ್ಲ.

ಈ ಘಟನೆ ಬೆನ್ನಿಗೆ ಮತ್ತೊಂದು ಘಟನೆ ಚೆನ್ನೇನಹಳ್ಳಿಯಲ್ಲೂ ನಡೆದಿದೆ. ಸುತ್ತಮುತ್ತಲ ಯಾವುದೇ ಗ್ರಾಮಕ್ಕೂ ಹೋದರೂ ಸಣ್ಣ ಮಕ್ಕಳಿಂದ ಹಿಡಿದು, ಮುದುಕರವರೆಗೂ ಇದೇ ಚರ್ಚೆ. ಊರಿಗೆ ಬರ ಅಪ್ಪಳಿಸಲು ಸತ್ತವರೇ ಕಾರಣ. ಶವ ಹೊರತೆಗೆದು ಕಡಿದು ಬಿಸಾಡಿದರೆ ಮಳೆ ಬರುತ್ತದೆ ಎಂಬ ಮೂಢನಂಬಿಕೆಯಿಂದ ಹೂತ ಶವತೆಗೆದು ಸಿಗಿದು ಹಾಕಲಾಗುತ್ತಿದೆ.

ಶನಿವಾರ ಬಡಿಗೀರನಹಟ್ಟಿ ಮೃತ ದೇವರಾಜ್ ಮನೆಗೆ `ಪ್ರಜಾವಾಣಿ~ ಭೇಟಿ ನೀಡಿ ಅವರ ಪತ್ನಿ ಪುಟ್ಟಕ್ಕ ಅವರನ್ನು ಘಟನೆ ಕುರಿತು ಮಾಹಿತಿ ಕೇಳಿದಾಗ; `ಮುಸುಕಿನ ಜೋಳಕ್ಕೆ ಕಾಡು ಹಂದಿ ಬರ‌್ತಾವೆಂದು ಸಮಾಧಿಯಿಂದ ಏಳೆಂಟು ಮಾರು ದೂರವೇ ನಾನು, ನನ್ನ ಮಗ ಮಲಗಿದ್ದೆವು. ಸಣ್ಣದಾಗಿ ಮಳೆ ಹನಿ ಬೀಳುತ್ತಿತ್ತು. ಬೆಳಿಗ್ಗೆ ಎದ್ದು ನೋಡಿದರೆ ಯಜಮಾನರ ಗುಂಡಿ ಬಗೆದು ಹೋಗಿದ್ದರು. ಗುಂಡಿ ಒಳಗೆ ಏನೇನು ಇರಲಿಲ್ಲ. ಜನರಿಗೆ ಅವರು ಮಾಡಿದಷ್ಟು ಸಹಾಯವನ್ನು ಯಾರೂ ಮಾಡಿರಲಿಲ್ಲ...~ ಎಂದು ಬಿಕ್ಕಿದರು.

~ನಮ್ಮ ಆತ್ಮಕ್ಕೆ ನಮ್ಮೆಜಮಾನ್ರು ದೇವ್ರ ಇದ್ದಂಗೆ. ನಾವು ಅವರ‌್ನ ದೇವ್ರ ಅಂಥಲೇ ಪೂಜೆ ಮಾಡ್ತಾ ಇದ್ವಿ. ಅವರ ಒಳ್ಳೆತನ ನೆನೆದು ಅವರ ಸ್ನೇಹಿತರು, ಪರಿಚಿತರು ಇಂದಿಗೂ ಕಣ್ಣೀರು ಹಾಕ್ತಾರೆ. ಆದ್ರೆ ಮಳೆ ಹೋಯ್ತು ಅಂಥ ಗುಂಡಿ ಅಗೆದು ಹೀಗೆ ಮಾಡ್ಬಿಟ್ಟರು. ಪೊಲೀಸರಿಗೆ ದೂರು ಕೊಡಲು ಹೋಗುತ್ತಿದ್ದಾಗ ಕೆಲವರು ತಡೆದರು~ ಎಂದಾಗ ಅವರೊಂದಿಗೆ ಮಕ್ಕಳು ಕೂಡ ಕಣ್ಣೀರಾದರು.

ಪುಟ್ಟಕ್ಕ ಅವರಿಗೆ ಮೂವರು ಗಂಡು ಮಕ್ಕಳಿದ್ದು, ಅದರಲ್ಲಿ ಇಬ್ಬರು ಐಟಿಐ ಅಭ್ಯಾಸ ಮಾಡಿದ್ದಾರೆ. ಮೂರನೇ ಮಗ ದ್ವಿತೀಯ ಪಿಯುಸಿ ಓದುತ್ತಿದ್ದಾರೆ. ಎರಡು ಎಕರೆ ಭೂಮಿ ಇದೆ. ಎರಡು ವರ್ಷಗಳ ಹಿಂದೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆದಿದ್ದು, ಇಲಾಖೆ ಇನ್ನು ಮೋಟರ್-ಪಂಪ್ ಕೊಟ್ಟಿಲ್ಲ. ಬಡತವನ್ನೇ ಈ ಕುಟುಂಬ ಹಾಸಿ ಹೊದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT