ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣಿ ಮಧ್ಯೆ ಅಪೂರ್ವ ಗಣೇಶ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಅಲ್ಲೊಂದು ಕಲ್ಯಾಣಿ. ಸುತ್ತಲೂ ಮೆಟ್ಟಿಲು. ಇದರ ನಡುವೆ 15 ಅಡಿ ಎತ್ತರದಲ್ಲಿ ರಾರಾಜಿಸುತ್ತಿರುವ ಕಪ್ಪು ಬಣ್ಣದ ಮುದ್ದಾದ ಗಣೇಶ. ಚತುರ್ಭುಜವನ್ನು ಹೊಂದಿ ಪೀಠಾರೂಢನಾಗಿರುವ ಈತನನ್ನು ನೋಡುವುದೇ ಸಂಭ್ರಮ. ಈತನಿಗೀಗ ವಿಶೇಷ ಪೂಜೆಯ ಸಂಭ್ರಮ.

ಈತನ ದರ್ಶನ ಆಗುವುದು ಬೆಂಗಳೂರಿನ ಲಾಲ್‌ಬಾಗ್ ಬಳಿ. ಲಾಲ್‌ಬಾಗ್ ಪೂರ್ವ ದ್ವಾರದ ಎದುರಿಗೆ, ಅಂದರೆ ಸಿದ್ದಾಪುರ ವೃತ್ತದಿಂದ ಒಂದರ್ಧ ಕಿ.ಮೀ. ಕ್ರಮಿಸಿ ಹಾಗೇ ಸುಮ್ಮನೆ ಕಣ್ಣು ಹಾಯಿಸಿದಲ್ಲಿ ಬಲಕ್ಕೆ ಥಟ್ಟನೆ ಎದುರುಗೊಳ್ಳುತ್ತಾನೆ ಈ ಗಣೇಶ. ಸಮರ್ಪಕ ನಿರ್ವಹಣೆ ಇಲ್ಲದೇ, ಕಲುಷಿತಗೊಂಡು ಸೊರಗಿರುವ ಕಲ್ಯಾಣಿಯ ನಡುವೆಯೇ ವೈಭವದಿಂದ ಮೆರೆಯುತ್ತಿದೆ ಈ ಕಪ್ಪುಶಿಲಾಮೂರ್ತಿ.

ಕಲ್ಯಾಣಿಯ ಮಧ್ಯದವರೆಗೂ ಒಂದು ಸೇತುವೆಯನ್ನು ನಿರ್ಮಿಸಲಾಗಿದೆ. ಈತನನ್ನು ನೋಡುತ್ತಿದ್ದರೆ ಚಿತ್ರದುರ್ಗದ ಹೊಳಲ್ಕೆರೆ ಗಣಪ ಅಥವಾ ದಕ್ಷಿಣ ಕನ್ನಡದ ಸೌತಡ್ಕದ ಬಯಲು ಗಣಪರು ನೆನಪಿಗೆ ಬರುತ್ತಾರೆ.  ಸುವ್ಯವಸ್ಥಿತ ಮೆಟ್ಟಿಲುಗಳನ್ನು ಹೊಂದಿರುವ ವಿಶಾಲವಾದ ಚೌಕದ ಕಲ್ಯಾಣಿಯೂ ಬಹಳ ಆಕರ್ಷಣೀಯವಾಗಿದ್ದರೂ ಕಸ, ತ್ಯಾಜ್ಯಗಳಿಂದ ಕಲುಷಿತಗೊಂಡಿದೆ. ಸುಂದರವಾದ ಕಲ್ಯಾಣಿಯ ದುರಾವಸ್ಥೆ ಮನಸ್ಸಿಗೆ ಬಹಳ ಖೇದ ಉಂಟು ಮಾಡುತ್ತದೆ. 

ದೇಗುಲದ ಇತಿಹಾಸದ ಬಗ್ಗೆ ಅಥವಾ ಇನ್ನಾವುದೇ ಪೂರಕ ಮಾಹಿತಿ ಸಂಗ್ರಹಿಸಲೂ ಇಲ್ಲಿ ಯಾರೂ ಕಂಡುಬರುವುದಿಲ್ಲ. ನಿತ್ಯ ಪೂಜೆ ನಡೆಯುತ್ತಿುವುದು ಮಾತ್ರ ಸಮಾಧಾನದ ಸಂಗತಿ. ಸಮರ್ಪಕ ನಿರ್ವಹಣೆಯಿದ್ದಲ್ಲಿ, ಕಲುಷಿತಗೊಂಡು ಪಾಚಿ ಕಟ್ಟಿರುವ ಆ ಕಲ್ಯಾಣಿಯ ನೀರನ್ನು ತೆಗೆದು ಹಾಕಿ ಶುದ್ಧವಾದ ನೀರನ್ನು ಹರಿಸಿ ಮತ್ತೆ ಆ ನೀರು ಮಲಿನಗೊಳ್ಳದಂತೆ ಎಚ್ಚರವಹಿಸಿ ಕಲ್ಯಾಣಿಯ ಒಡಲನ್ನು ತಾವರೆಗಳಿಂದ ಅಲಂಕರಿಸಿದ್ದೇ ಆದಲ್ಲಿ ನಿಜಕ್ಕೂ ಇದೊಂದು ಭವ್ಯತಾಣವೇ ಆಗುತ್ತದೆ. ಈ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಸೂಕ್ತ ಕ್ರಮ ಕೈಗೊಂಡಲ್ಲಿ ಕಾಲಗರ್ಭದಲ್ಲಿ ಮರೆಯಾಗುತ್ತಿರುವ ಒಂದು ಸುಂದರ ದೇಗುಲವನ್ನು ಉಳಿಸಿಕೊಂಡಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT