ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲ್ಯಾಣ್ ಕಣ್ಣಲ್ಲಿ ರೆಹಮಾನ್

Last Updated 14 ಜೂನ್ 2012, 19:30 IST
ಅಕ್ಷರ ಗಾತ್ರ

`ಗಾಡ್‌ಫಾದರ್~ ಚಿತ್ರಕ್ಕೆ ಹಾಡು ಹೆಣೆಯುವ ಹೊತ್ತು ಅದು. ಆದರೆ ಎದುರಿಗೆ ಚಿತ್ರಸಂಗೀತ ಲೋಕದ ದಿಗ್ಗಜ ಎ.ಆರ್.ರೆಹಮಾನ್ ಇರಲಿಲ್ಲ. ಅತ್ತ ಚೆನ್ನೈನ ಸ್ಟುಡಿಯೋದಲ್ಲೂ ಅವರು ಲಭ್ಯವಿಲ್ಲ. ಒಂದು ದಿನ ಲಂಡನ್‌ನಲ್ಲಿ, ಮತ್ತೊಂದು ದಿನ ಸ್ವಿಜರ್‌ಲೆಂಡ್‌ನಲ್ಲಿ.
 
ಆದರೂ ಅವರು `ಸಿಗುತ್ತಿದ್ದರು~! ಕಂಪ್ಯೂಟರ್ ತೆರೆಯ ಮೇಲೆ ಪ್ರತ್ಯಕ್ಷವಾಗಿ ತಾವು ಸಂಯೋಜಿಸಿದ ರಾಗಗಳನ್ನು ಒದಗಿಸುತ್ತಿದ್ದರು. ನಂತರ ಚೆಂಡು ಚಿತ್ರ ಸಾಹಿತಿ ಕೆ. ಕಲ್ಯಾಣ್ ಅವರ ಅಂಗಳಕ್ಕೆ. ಸಂಯೋಜಿಸಿದ ರಾಗಗಳಿಗೆ ತಕ್ಕಂತೆ ಪದ ಪೋಣಿಸುವ ಕೆಲಸ ಅವರದು.

ಹಗಲು ಹೊತ್ತು ಬರವಣಿಗೆ ಮುಗಿಸಿ, ನಿರ್ದೇಶಕ ಎಸ್. ಶ್ರೀರಾಂ ಹಾಗೂ ನಾಯಕ ನಟ ಉಪೇಂದ್ರ ಅವರೊಂದಿಗೆ ಚರ್ಚಿಸುತ್ತಿದ್ದರು. ಮತ್ತೆ ರಾತ್ರಿ ಹೊತ್ತು ರೆಹಮಾನ್ ಅವರೊಂದಿಗೆ ಆನ್‌ಲೈನ್ ಸಂವಾದ.

ಈ ಪ್ರಕ್ರಿಯೆಯಲ್ಲಿ ಕಲ್ಯಾಣ್ ಅವರಿಗೆ ನೆರವಾದದ್ದು ರೆಹಮಾನ್‌ರ ಸಂಗೀತ ನಿರ್ವಾಹಕ ಶ್ರೀನಿವಾಸಮೂರ್ತಿ. ಇವರಿಗೆ ಕನ್ನಡ ತಿಳಿದಿದ್ದರಿಂದ ಸಂವಹನ ಸುಲಭವಾಯಿತು. `ಕಿವಿಗೆ ಇಯರ್‌ಫೋನ್ ಹಾಕಿಕೊಂಡು ಮಾತಿಗಿಳಿದರೆ ಅಲ್ಲಿಂದ ಬರುತ್ತಿದ್ದುದು ಒಂದೊಂದೇ ಸಾಲಿನ ಉತ್ತರ.

ಹೆಚ್ಚು ಮಾತನಾಡದ ಅವರು ಮುಗುಳ್ನಕ್ಕರೆ ಅದೇ ದೊಡ್ಡ ವಿಷಯ ಎನ್ನುವಂತಾಗಿತ್ತು. ಚಿತ್ರ ಸಾಹಿತ್ಯದ ದಂತಕತೆ ಎನಿಸಿಕೊಂಡ ಬಹುತೇಕರೊಂದಿಗೆ ಅವರು ದುಡಿದಿದ್ದಾರೆ. ಆದ್ದರಿಂದ ಸಾಹಿತ್ಯ ಜ್ಞಾನ ಅವರಿಗೆ ತುಸು ಹೆಚ್ಚೇ ಇದೆ. ಪದ ಪದವನ್ನೂ ತೂಗಿ ನೋಡುತ್ತಿದ್ದ ಅವರೊಂದಿಗೆ ಕೆಲಸ ಮಾಡುವುದು ಸವಾಲಿನ ಹಾಗೂ ಉತ್ಸಾಹದ ಕೆಲಸ~ ಎನ್ನುತ್ತಾರೆ ಕಲ್ಯಾಣ್.

ಈ ಮೊದಲೇ ಕಲ್ಯಾಣ್ ಅವರಿಗೆ ರೆಹಮಾನ್ ಜತೆ ಕೆಲಸ ಮಾಡಿದ ಅನುಭವವಿತ್ತು. ವಿಜಯ್, ಸಿಮ್ರಾನ್ ಅಭಿನಯದ `ಉದಯ~ ಚಿತ್ರಕ್ಕೆ ಕನ್ನಡ ಹಾಡಿನ ಸಾಲುಗಳ ಅಗತ್ಯವಿತ್ತು. ಆಗ ರೆಹಮಾನ್ ಸಂಪರ್ಕಿಸಿದ್ದು ಕಲ್ಯಾಣ್‌ರನ್ನು. ಇವರು ರಚಿಸಿದ ಪುಟ್ಟ ಗೀತೆಗೆ ದನಿ ನೀಡಿದ್ದು ಖ್ಯಾತ ಗಾಯಕಿ ಎಸ್.ಜಾನಕಿ. ನಂತರ ತಾಜ್‌ಮಹಲ್ ಕುರಿತಾದ `ಒನ್ ಲವ್~ ಆಲ್ಬಂಗಾಗಿಯೂ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದರು.

ಅಂದಹಾಗೆ ಮೊದಲು ಹಾಡುಗಳಿಗೆ `ಸ್ಟೈಲಿಶ್~ ಆಗಿ ಸಾಹಿತ್ಯ ಬರೆಯಲಾಗಿತ್ತಂತೆ. ಆದರೆ ತುಂಬಾ ಮೆದುವಾದ ಪದಗಳು ಬೇಕು. ಅದೊಂದು ಆಲ್ಬಂ ರೀತಿ ಇರಬೇಕು ಎಂದು ಹಟ ಹಿಡಿದಿದ್ದು ಸ್ವತಃ ರೆಹಮಾನ್.
 

ಹೀಗಾಗಿ ಒಂದು ಹಾಡಿಗೆ ಹತ್ತಾರು ಪಲ್ಲವಿ- ಚರಣ ಮೂಡಿದವು. ಅಂತಿಮ ಆಯ್ಕೆ ರೆಹಮಾನ್ ಅವರಿಗೇ ಬಿಡಲಾಗಿತ್ತು. ಅವರಿಗೆ ತೃಪ್ತಿಯಾದ ನಂತರ ಗಾಯಕರು ಹಾಡುತ್ತಿದ್ದರು. ಆ ನಂತರ ಹಾಡಿನ ಧಾಟಿಯ ಪರೀಕ್ಷೆ.

`ಲಾಲಿ ಲಾಲಿ ಅಮ್ಮ~ ಹಾಡನ್ನು ಅವರು ಬಹಳ ಮೆಚ್ಚಿಕೊಂಡಿದ್ದರಂತೆ. ಆದರೆ `ಗಾಡೇ ಕಾರಣವಾಗಿರಲಿ, ಗಾಡ್‌ಫಾದರೇ ಕಾರಣವಾಗಿರಲಿ, ನಿನ್ನೀಗತಿಗೆ ತಂದವರ ಮನ್ನಿಸಲಾರೆ ಬದುಕಿನಲಿ~ ಎಂಬ ಸಾಲು ರೆಹಮಾನ್ ಅವರನ್ನು ತುಂಬಾ ಕೆಣಕಿತ್ತಂತೆ. ಏನಿದು ಹೀಗೆ ವಿಚಿತ್ರವಾಗಿದೆಯಲ್ಲಾ ಎಂಬ ಪ್ರಶ್ನೆ ಅತ್ತಲಿಂದ. ಆ ಸಾಲಿನ ಮಹತ್ವವನ್ನೂ ಅದು ಚಿತ್ರದ ಸನ್ನಿವೇಶಕ್ಕೆ ಹೇಗೆ ಹೊಂದಿಕೊಳ್ಳುತ್ತದೆ ಎಂಬುದನ್ನೂ ವಿವರಿಸಿದಾಗ ಅವರು ನಿಟ್ಟುಸಿರು ಬಿಟ್ಟರಂತೆ.

ಆರಂಭದ ಪಲ್ಲವಿಯನ್ನೇ ಮರುಕಳಿಸುವಂತೆ ನೋಡಿಕೊಳ್ಳುವುದು ಬಹುತೇಕ ಸಂಗೀತ ನಿರ್ದೇಶಕರ ಶೈಲಿ. ಆದರೆ ಈ ಹಾಡಿಗೆ ಆರಂಭದ ಪಲ್ಲವಿಯೇ ಬೇರೆ ಕೊನೆಯ ಪಲ್ಲವಿಯೇ ಬೇರೆ. ಅಮ್ಮನ ಹುಚ್ಚು ಹಿಡಿದ ಲಾಲಿ ಲಾಲಿ ಅಮ್ಮ, ತೂಗದ ಜೋಕಾಲಿ ಅಮ್ಮ, ಖಾಲಿ ಖಾಲಿ ಅಮ್ಮ, ಮನೆಗೆ ಸದಾ ಸುವ್ವಲಾಲಿ ಅಮ್ಮ...~ ಇದು ಮೊದಲ ಪಲ್ಲವಿಯಾದರೆ,

`ನಾನು ಒಬ್ಬ ಹುಚ್ಚ ಅಮ್ಮನ ಹುಚ್ಚು ಹಿಡಿದ ಹುಚ್ಚ, ಅಮ್ಮನೆದುರು ಯಾರೇ ಇರಲಿ ಅವಳಿಗಿಂತ ಹೆಚ್ಚಾ~ ಎಂಬುದು ಕಡೆಯ ಪಲ್ಲವಿ. ಎರಡರ ಸಾಹಿತ್ಯವೂ ಚೆನ್ನಾಗಿರುವುದರಿಂದ ಹಾಗೆಯೇ ಉಳಿಸಿಕೊಂಡರಂತೆ ರೆಹಮಾನ್.

ಚಿತ್ರದಲ್ಲಿ ಒಟ್ಟು ಏಳು ಹಾಡುಗಳಿದ್ದು ಐದಕ್ಕೆ ಕಲ್ಯಾಣ್ ಅವರ ಸಾಹಿತ್ಯವಿದೆ. `ಆಲಾಪನೆ ಮೆಲ್ಲನೆ~ ಹಾಗೂ `ಲಾಲಿ ಲಾಲಿ ಅಮ್ಮ~ ಹಾಡುಗಳಿಗೆ ಕೇಳುಗರಿಂದ ಅಭಿನಂದನೆಯ ಮಹಾಪೂರವೇ ಹರಿದು ಬರುತ್ತಿದೆಯಂತೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT