ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳಸ: ಖಾತೆ ತೆರೆದ ಬಿಜೆಪಿ

Last Updated 5 ಜನವರಿ 2011, 10:30 IST
ಅಕ್ಷರ ಗಾತ್ರ

ಕಳಸ: ಹೋಬಳಿ ವ್ಯಾಪ್ತಿಯ ಎರಡು ಜಿ.ಪಂ. ಮತ್ತು ಮೂರು ತಾ.ಪಂ. ಕ್ಷೇತ್ರಗಳಲ್ಲಿ ಬಿಜೆಪಿ ಜಯ ಸಾಧಿಸುವುದರೊಂದಿಗೆ ಹೋಬಳಿ ರಾಜಕೀಯ ಕ್ಷೇತ್ರದಲ್ಲಿ ತನ್ನ ಸಂಪೂರ್ಣ ಮೇಲುಗೈ ಸಾಧಿಸಿದೆ. ಮಂಗಳವಾರ ಬೆಳಿಗ್ಗೆ ಮೊದಲು ಮತ ಎಣಿಕೆ ನಡೆದ ಕಳಸ ತಾ.ಪಂ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾಗಿದ್ದ ಅನ್ನಪೂರ್ಣ 1870 ಮತ ಪಡೆದು ಕಾಂಗ್ರೆಸ್‌ನ ಮೀನಾಕ್ಷಿ (1504 ಮತ) ಅವರನ್ನು  366 ಮತಗಳ ಅಂತರದಿಂದ ಸೋಲಿಸಿ ಕಳಸ ಹೋಬಳಿಯಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯ ಖಾತೆ ತೆರೆದರು.
 

ಆನಂತರ ನಡೆದ ಮತ ಎಣಿಕೆಯಲ್ಲಿ ಕಳಸ ಜಿ.ಪಂ. ಕ್ಷೇತ್ರದಲ್ಲಿ ಬಿಜೆಪಿಯ ಕವಿತಾ ಚಂದ್ರು 3690 ಮತ ಗಳಿಸಿ ತಮ್ಮ ಸಮೀಪದ ಸ್ಪರ್ಧಿಯಾಗಿದ್ದ ಕಾಂಗ್ರೆಸ್‌ನ ರಾಜಮ್ಮ(2654 ಮತ) ಅವರನ್ನು 1036 ಮತಗಳ ಅಂತರದಿಂದ ಸೋಲಿಸಿದರು.  ಕೂವೆ ಜಿ.ಪಂ. ಕ್ಷೇತ್ರದಲ್ಲಿ 4283 ಮತ ಗಳಿಸಿದ ಅರೇಕೊಡಿಗೆ ಶಿವು ಜೆಡಿಎಸ್‌ನ ಬಿ.ಎಲ್. ಸಂದೀಪ್(3250 ಮತ) ಅವರನ್ನು 1033 ಮತಗಳಿಂದ ಸೋಲಿಸಿದರು. ಆನಂತರ ಎಣಿಕೆ ನಡೆದ ಸಂಸೆ ಮತ್ತು ಮರಸಣಿಗೆ ತಾ.ಪಂ ಕ್ಷೇತ್ರಗಳಲ್ಲೂ ಕ್ರಮವಾಗಿ ಎಂ.ಎ.ಶೇಷಗಿರಿ ಮತ್ತು ಹಿತ್ಲುಮಕ್ಕಿ ರಾಜೇಂದ್ರ ಜಯಗಳಿಸುವುದರೊಂದಿಗೆ ಕಳಸ ಹೋಬಳಿಯ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಪಾರಮ್ಯ ಸಾಧಿಸಿತು.

2154 ಮತ ಪಡೆದ ಶೇಷಗಿರಿ ತಮ್ಮ ಎದುರಾಳಿ ಕಾಂಗ್ರೆಸ್‌ನ ದೇಜಪ್ಪ(1459 ಮತ) ಅವರಿಗಿಂತ 695 ಹೆಚ್ಚು ಮತ ಪಡೆದರೆ, 1891 ಮತ ಗಳಿಸಿದ ರಾಜೇಂದ್ರ ಕಾಂಗ್ರೆಸ್‌ನ ರತ್ನಾಕರ (1329 ಮತ) ಅವರಿಗಿಂತ 562 ಹೆಚ್ಚು ಮತ ಪಡೆದರು.   ಕಳೆದ ಬಾರಿಯ ಐದೂ ಸ್ಥಾನ ಕಳೆದುಕೊಂಡ ಜೆಡಿಎಸ್ ನಾಲ್ಕು ಕ್ಷೇತ್ರಗಳಲ್ಲಿ ಮೂರನೇ ಸ್ಥಾನ ಗಳಿಸಿ ಕಳಪೆ ಸಾಧನೆ ತೋರಿತು. ಮರಸಣಿಗೆ ಮತ್ತು ಸಂಸೆಯಲ್ಲಿ ತಾ.ಪಂ. ಸ್ಥಾನದ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಕೂಡ ಯಾವುದೇ ಸ್ಥಾನ ಪಡೆಯದೆ ಸೋಲಿನ ಸರಮಾಲೆ ತೊಟ್ಟಿತು.

ಕಳಸದಲ್ಲಿ ಮಂಗಳವಾರ ಸಂಜೆ ನಡೆದ ವಿಜಯೋತ್ಸವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಜಯಕಾರ ಹಾಕಿದರು. ಅಭ್ಯರ್ಥಿಗಳನ್ನು ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕರೆದೊಯ್ದು ಸಂಭ್ರಮಿಸಿದರು. ಮುಖಂಡರಾದ ವೆಂಕಟಸುಬ್ಬಯ್ಯ, ಗಿರೀಶ್ ಹೆಮ್ಮಕ್ಕಿ, ಬಾಲಕೃಷ್ಣ ಕಾಮತ್, ಶಿವೇಗೌಡ, ಜಗದೀಶ್, ಉಷಾ, ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT