ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದು ಹೋದವರು

Last Updated 19 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಆಜ್ಞೆ ಮಾಡುವ ರಾಮ
ಕೈಕತ್ತರಿಸುವ ದ್ರೋಣ
ಇನ್ನೂ ಇರುವುದರಿಂದ
ಶಂಭೂಕ ಏಕಲವ್ಯರಿಗೆ ಕೊರತೆಯಿಲ್ಲ.
ವಿಚಿತ್ರವೆಂದರೆ ಈ ಮಧ್ಯೆ 
ನಾಡಿಗೆ ಹೊರಟ ಏಕಲವ್ಯರು
ಇದ್ದಕ್ಕಿದ್ದಂತೆ ಕಳೆದುಹೋಗಿದ್ದಾರೆ

ಜುಟ್ಟ ಬಿಗಿದು ಬಿಲ್ಲುಬಾಣಗಳ ಹೆಗಲಿಗೇರಿಸಿ
ಹುಲಿಯ ಬೆನ್ನೇರಿದ ಗುಂಪು
ಹಾದಿ ಉದ್ದಕ್ಕೂ ಹೆಜ್ಜೆ ಮೂಡಿಸಿದವರು
ಎಡಕ್ಕೆ ತಿರುಗಿದರೋ
ಬಲಕ್ಕೆ ಹೊರಳಿದರೋ
ಒಡೆದು ಹೋಗಿದ್ದಾರೆ ಅವರೆಲ್ಲೋ

ಕರಾಳ ರಾತ್ರಿಗೆ ಮೈತಾಗಿಸಿ
ಉರಿಯುವ ಬೆಂಕಿಗೆ ಕೈಕಾಲು ಒಪ್ಪಿಸಿ
ದಾರಿಯುದ್ದಕ್ಕೂ ಕಣ್ಣು ಹಾಯಿಸಿದ್ದಾರೆ ಬಂಧುಗಳು

ಹೆಬ್ಬೆರಳು ಕತ್ತರಿಸಿಕೊಂಡು
ಸರಕಾರಿ ಆಸ್ಪತ್ರೆಯಲ್ಲಿ ಬಿದ್ದಿರಬಹುದೆಂದು
ಓಡಿಹೋಗಿ ಹುಡುಕಿದ್ದಾಯಿತು
‘ಏಕಲವ್ಯ’ ಹೆಸರಿನ ಯಾವ ಕೇಸೂ
ದಾಖಲಾಗಿಲ್ಲವಂತೆ ಅಲ್ಲಿ.

ಬೆರಳು ಕತ್ತರಿಸಿಕೊಡುವ ಹುಂಬರಲ್ಲ
ಕಾಡಿನ ಹುಡುಗರು
ಬಲಗೈಯ ಕಡಿದರೂ
ಎಡಗೈನಿಂದ ಬಾಣಬಿಡುವ ಪ್ರವೀಣರು

ಪಾಂಡವರ ಪಕ್ಷ ಸೇರಿದರೋ
ಕೌರವರೊಂದಿಗೆ ದೂಳೀಪಟವಾದರೋ
ಒಂದೂ ತಿಳಿಯದೆ
ಹುಡುಕುತ್ತಿದ್ದಾರೆ ಅಣ್ಣತಮ್ಮಂದಿರು

ಯಾವ ಪಕ್ಷ ಸೇರಿದರೂ
ಒಂದೇ ಕಡೆ ನಿಲ್ಲುವ ಕರ್ಣನಂತೆ ಅಲ್ಲ ಅವರು
ಕರದಲ್ಲಿ ಕರತಳವನಿಟ್ಟು
ಕೈಗೆ ಕೈಕೊಟ್ಟು
ಕೈಯಲ್ಲಿ ಕಮಲವ ಹಿಡಿದು
ಹುಲ್ಲಿನ ಹೊರೆಗೆ ಭಾರವಾದವರು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT