ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳ್‌ಮಂಜನ ಕಾಸು ವಿಚಾರ

Last Updated 17 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ತಮ್ಮನ್ನು ಸಿಕ್ಕಾಪಟ್ಟೆ ಹೊಗಳಿದ ಕೋಮಲ್‌ಗೆ ವಿತರಕ ಕೆ.ಸಿ.ಎನ್.ಕುಮಾರ್ ಇಟ್ಟ ಹೆಸರು ‘ಸುಳ್‌ಮಂಜ’.
‘ಕಳ್‌ಮಂಜ’ ಚಿತ್ರ ಲಾಭ ಗಳಿಸುತ್ತಿದೆ. ವೆಚ್ಚ ಕಳೆದು 80-85 ಲಕ್ಷ ಲಾಭ ಬಂದಿದೆ. 76 ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ಸದ್ಯಕ್ಕೆ ನಾನು ಸೇಫ್. ಗ್ರಾಮಾಂತರ ಭಾಗಗಳಲ್ಲಿ ಚೆನ್ನಾಗಿ ಓಡುತ್ತಿದೆ. ಸೇಫ್ ಆಗುವುದಕ್ಕಿಂತ ಹೆಚ್ಚಾಗಿ ಒಳ್ಳೆಯ ಗುಣಮಟ್ಟದ ಸಿನಿಮಾ ಮಾಡವಾಸೆಯಿಂದ ಈ ಸಿನಿಮಾ ಮಾಡಿದ್ದೇನೆ’

ಹೀಗೆ  ಕೋಮಲ್ ವಿವರ ನೀಡುತ್ತಾ ಹೋದರು. ಚಿತ್ರವನ್ನು ತಮ್ಮದೇ ತಂತ್ರಗಾರಿಕೆಯಿಂದ ಬಿಡುಗಡೆ ಮಾಡಿದ ಕುಮಾರ್ ಯಶಸ್ಸಿಗೆ ಮೂಲ ಕಾರಣ ಎಂದು ತುಂಬು ಹೃದಯದಿಂದ ವಂದಿಸಿದರು.

ಚಿತ್ರದ ಹೆಸರಿಡುವ ಕೆಲಸದಿಂದ ಆರಂಭಿಸಿ ಬಿಡುಗಡೆಯಾಗುವ ದಿನದವರೆಗೂ ಸಹಾಯ ಮಾಡಿರುವ ಕುಮಾರ್, ಕೋಮಲ್ ಅವರಿಂದ ಹಣ ಪಡೆದಿಲ್ಲವಂತೆ. ಅದಕ್ಕೆ ಬದಲಾಗಿ ತಾವು ಅವರಿಗೆ ಉಚಿತವಾಗಿ ಕಾಲ್‌ಶೀಟ್ ನೀಡುವುದಾಗಿ ಕೋಮಲ್ ಘೋಷಿಸಿದಾಗ ಅವರ ಕಣ್ಣಂಚಿನಲ್ಲಿ ಸಂಕೋಚದ ಮುದ್ರೆ. 

ಬಾಯ್ತುಂಬಾ ನಗುತ್ತಾ ಮಾತನಾಡಿದ ಕುಮಾರ್, ‘ಕೋಮಲ್ ಮಾಡಿದ ಒಳ್ಳೆಯ ಪ್ರಯತ್ನಕ್ಕೆ ನಾನು ಸಹಕರಿಸಿದೆ ಅಷ್ಟೇ. ಆದರೆ ಅದು ಈ ಹಂತಕ್ಕೆ ಯಶಸ್ಸಾಗುವ ನಿರೀಕ್ಷೆ ಇರಲಿಲ್ಲ. ಇತ್ತೀಚೆಗೆ ಬಂದ ಸಿನಿಮಾಗಳಲ್ಲೇ ‘ಕಳ್‌ಮಂಜ’ನದು ಒಳ್ಳೆಯ ಗಳಿಕೆ. ಅದು 50 ದಿನ ಓಡುವ ನಿರೀಕ್ಷೆ ಹುಟ್ಟಿಸಿದೆ. ಯಾವ ಥಿಯೇಟರ್ ಆದರೂ ಪರವಾಗಿಲ್ಲ. ಸಿನಿಮಾ ಚೆನ್ನಾಗಿ ಇದ್ದರೆ, ಜನ ನೋಡೇ ನೋಡ್ತಾರೆ. ಇದು ತ್ರಿಭುವನ್ ಥಿಯೇಟರ್‌ನಲ್ಲಿ ಹೆಚ್ಚು ಲಾಭ ಮಾಡಿದ ಸಿನಿಮಾ ಎನಿಸಿಕೊಳ್ಳುತ್ತಿದೆ. ಸಿನಿಮಾದ ಪ್ಲಸ್‌ಪಾಯಿಂಟ್ ಟೈಟಲ್. ಪ್ರಚಾರ ಚೆನ್ನಾಗಿ ಆಗಿದೆ. ನಾನು ಹೇಳಿದಂತೆ ಕೋಮಲ್ ಕೇಳಿದ್ದರಿಂದ ಈ ಸಂತಸ ಅವರದಾಗಿದೆ. ‘ವಾರೆವ್ಹಾ’ ಚಿತ್ರ ಹಲವು ಕಡೆ ಬಿಡುಗಡೆಯೇ ಆಗಿಲ್ಲ.
ಬಿಡುಗಡೆಯಾಗುವುದೂ ಇಲ್ಲ. ನಕಲಿ ಸೀಡಿಗಳು ಬರುವುದಕ್ಕಿಂತ ಮುಂಚೆ ನಾವು ಹಳ್ಳಿಗಳನ್ನು ತಲುಪುವ ಅನಿವಾರ್ಯತೆ ಇದೆ. ಅದರಿಂದ ನಿರ್ಮಾಪಕರಿಗೆ ಒಳ್ಳೆಯದಾಗುತ್ತದೆ. ಆದಕಾರಣ ಹೆಚ್ಚು ಹೆಚ್ಚು ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡುವುದು ಒಳಿತು. ಇಂದಿನ ತಂತ್ರಜ್ಞಾನ ಬಳಸಿಕೊಂಡು ನಾವು ಮುನ್ನುಗ್ಗಬೇಕಿದೆ’ ಎಂದ ಅವರು ಕೋಮಲ್ ಕಡೆ ಮುಖ ಮಾಡಿ ‘ನಾನು ಬೆರಳು ತೋರಿಸಿದೆ ಇವರು ಹಸ್ತ ನುಂಗಿದರು’ ಎಂದು ನಕ್ಕರು.

ಎಮಿಲ್ ಅವರ ಪ್ರಕಾರ ಅವರ ಯಶಸ್ಸು ಕೋಮಲ್ ಮತ್ತು ನಿರ್ದೇಶಕರಿಗೆ ಸಲ್ಲಬೇಕಂತೆ. ರಾತ್ರಿ ಹಗಲು ತಮ್ಮೊಂದಿಗೆ ಇದ್ದು ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚೆನ್ನಾಗಿ ಬರಲು ಸಹಕರಿಸಿದ ಕೋಮಲ್ ಅವರ ಶ್ರಮಕ್ಕೆ ಸಿಕ್ಕ ಪ್ರತಿಫಲ ಈ ಯಶಸ್ಸು ಎಂದರು.

ನಿರ್ದೇಶಕ ರಮೇಶ್ ಪ್ರಭಾಕರ್, ಕೋಮಲ್ ಬೆಳೆಯಲಿ ಚಿತ್ರ ಸೂಪರ್ ಡೂಪರ್ ಹಿಟ್ ಆಗಲಿ ಎಂದು ತಮಿಳ್ಗನ್ನಡದಲ್ಲಿ ಹಾರೈಸಿದರು.
ಮಿರಿಮಿರಿ ಮಿಂಚುವ ಜರಿ ಉಡುಪು ತೊಟ್ಟು ಕಂಗೊಳಿಸುತ್ತಿದ್ದ ನಾಯಕಿ ಐಶ್ವರ್ಯಾ ನಾಗ್ ‘ನಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಒಳ್ಳೆಯ ವಿಮರ್ಶೆಗಳು ಮತ್ತು ಪ್ರತಿಕ್ರಿಯೆಗಳು ಬಂದಿವೆ’ ಎಂದಷ್ಟೇ ಉಲಿದರು.

ನಂತರ ಕೋಮಲ್ ಲಹರಿ ಹೀಗೆ ಹರಿಯಿತು... ‘ಚಿತ್ರಕ್ಕೆ ಕೆಲಸ ಮಾಡಿದ ಕೆಲವರನ್ನು ಕರೆದೆ. ಅವರಿಗೆ ‘ಮೆಂಟಲ್ ಬ್ಲ್ಯಾಕೇಜ್’ ಆಗಿದೆ. ಆದ ಕಾರಣ ಬಂದಿಲ್ಲ.  ನಾನು ಮಾಡುವ ಎಲ್ಲಾ ನಿರ್ಮಾಪಕರಿಗೂ ಸಿನಿಮಾ ಚೆನ್ನಾಗಿ ಓಡಿದರೆ ಕಾಸು ಕೊಡಿ ಅಂದಿದ್ದೀನಿ. ನನ್ನ ಹಿಂದಿನ ಚಿತ್ರದ ನಿರ್ಮಾಪಕರು ನನ್ನೊಂದಿಗೆ ಮಾತನಾಡುತ್ತಿಲ್ಲ. ಅದರಲ್ಲಿ ನನ್ನ ತಪ್ಪೇನಿಲ್ಲ. ‘ಆಪ್ತರಕ್ಷಕ’ ಚಿತ್ರವನ್ನು ಒಪ್ಪಿಕೊಂಡು ನಾನು ‘ಚಮ್ಕಾಯ್ಸಿ ಚಿಂದಿ ಉಡಾಯ್ಸಿ’ ಚಿತ್ರದ ಚಿತ್ರೀಕರಣಕ್ಕಾಗಿ ಮಲೇಷ್ಯಾಗೆ ತೆರಳಿದ್ದೆ. ವಾಸು ಅವರ ಮಾತಿಗೆ ಕಟ್ಟುಬಿದ್ದು ಮಲೇಷ್ಯಾದಿಂದ ಬ್ಯಾಂಕಾಕ್‌ಗೆ ಹೋಗಬೇಕಿದ್ದ ಚಿತ್ರತಂಡವನ್ನು ವಾಪಸ್ಸು ಕರೆದುಕೊಂಡು ಬಂದು ‘ಆಪ್ತರಕ್ಷಕ’ದಲ್ಲಿ ನಟಿಸಿದೆ. ಅದರಿಂದ ನನಗೆ 40 ಲಕ್ಷ ನಷ್ಟವಾಯಿತು.

ಆದರೆ ವಿಷ್ಣುವರ್ಧನ್ ಅವರ 200ನೇ ಚಿತ್ರದಲ್ಲಿ ನಟಿಸಿದ ಮತ್ತು ಪಿ.ವಾಸು ಅವರಂಥ ನಿರ್ದೇಶಕರೊಂದಿಗೆ ಕೆಲಸ ಮಾಡಿದ ಅವಕಾಶ ಸಿಕ್ಕಿತು. ಹಣ ಕಳೆದುಕೊಂಡರೂ ವ್ಯಕ್ತಿಯನ್ನು ಪಡೆದೆ’ ಎಂದ ಅವರು ತಡವಾಗಿ ಬಂದ ಪತ್ನಿ ಅನುಸೂಯ ಅವರನ್ನು ವೇದಿಕೆಗೆ ಕರೆತಂದು, ಕುಳಿತರು.

ಅನುಸೂಯ ಅವರ ಮುಖದಲ್ಲಿ ಪತಿಯ ಉದ್ವೇಗಕ್ಕೆ ವಿರುದ್ಧವಾದ ಸಂತಸದ ಭಾವ ತುಂಬಿ ತುಳುಕುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT