ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ವಿಂಗಡನೆ: ಮೊದಲ ದಿನ ನೀರಸ ಸ್ಪಂದನ

Last Updated 1 ಅಕ್ಟೋಬರ್ 2012, 18:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ಪೂರೈಸಬೇಕೆಂಬ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಪ್ರಯತ್ನಕ್ಕೆ ಮೊದಲನೇ ದಿನ ಸಾರ್ವಜನಿಕರಿಂದ ನೀರಸ ಸ್ಪಂದನೆ ದೊರೆತಿದೆ.

ನಾಗರಿಕರಲ್ಲಿ ಇನ್ನೂ ಅಷ್ಟೊಂದು ಜಾಗೃತಿ ಮೂಡದಿರುವುದು, ಪೌರ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡದಿರುವುದು ಹಾಗೂ ಗುತ್ತಿಗೆದಾರರು ಪೌರ ಕಾರ್ಮಿಕರಿಗೆ ಪ್ರತ್ಯೇಕವಾದ ಬಿನ್‌ಗಳನ್ನು ನೀಡದಿರುವುದು ಮತ್ತಿತರ ಕಾರಣಗಳಿಂದ ಸೋಮವಾರ ಕೇವಲ ಶೇ 15.6ರಷ್ಟು ಹಸಿ ತ್ಯಾಜ್ಯವನ್ನು ಸಂಗ್ರಹಿಸಲು ಸಾಧ್ಯವಾಗಿದೆ.

ಮಂಡೂರು ತ್ಯಾಜ್ಯ ವಿಲೇವಾರಿ ಘಟಕವನ್ನು ಮುಚ್ಚಲು ಸ್ಥಳೀಯರು ಒಂದು ತಿಂಗಳ ಗಡುವು ನೀಡಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿಯು ಅ. 1ರಿಂದಲೇ ಮೂದಲ್ಲೇ ಒಣ ಹಾಗೂ ಹಸಿ ತ್ಯಾಜ್ಯವನ್ನು ವಿಂಗಡಿಸುವುದನ್ನು ಕಡ್ಡಾಯಗೊಳಿಸಿತು. ಕಳೆದ 15 ದಿನಗಳಿಂದ ಈ ಬಗ್ಗೆ ಮಾಧ್ಯಮಗಳಲ್ಲಿ ಪಾಲಿಕೆಯು ವ್ಯಾಪಕ ಪ್ರಚಾರ ನೀಡಿದರೂ ಮೊದಲ ದಿನ ಅಂತಹ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.

ನಗರದ ಬಹುತೇಕ ಕಡೆಗಳಲ್ಲಿ ಸಾರ್ವಜನಿಕರು ಹಸಿ ಹಾಗೂ ಒಣ ತ್ಯಾಜ್ಯವನ್ನು ವಿಂಗಡಿಸದೆ ಪೂರೈಸಿದರು. ಪರಿಣಾಮ ಪೌರ ಕಾರ್ಮಿಕರು ಹಸಿ ತ್ಯಾಜ್ಯವನ್ನು ವಿಂಗಡಿಸಿ ನಂತರ ವಿಲೇವಾರಿ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಯಿತು. ಇದರಿಂದ ಮಧ್ಯಾಹ್ನದ ನಂತರ ಪೌರ ಕಾರ್ಮಿಕರು ರಸ್ತೆಗಳನ್ನು ಗುಡಿಸುವ ಕಾರ್ಯದಲ್ಲಿ ಮಗ್ನರಾಗಿರುವ ಚಿತ್ರಣ ಹಲವೆಡೆ ಕಂಡು ಬಂದಿತು.

 `ಮೂಲದಲ್ಲೇ ಕಸ ವಿಂಗಡಿಸಬೇಕೆಂಬ ವ್ಯವಸ್ಥೆ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಅರಿವಿನ ಕೊರತೆಯಿದೆ. ಆದರೂ, ಕೆಲವು ಕಡೆಗಳಲ್ಲಿ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ~ ಎಂದು ಪಾಲಿಕೆ ಆಯುಕ್ತ ರಜನೀಶ್ ಗೋಯಲ್ ತಿಳಿಸಿದ್ದಾರೆ.

ಈ ನಡುವೆ, ಬೇರ್ಪಡಿಸಿದ ಒಣ ಹಾಗೂ ಹಸಿ ತ್ಯಾಜ್ಯವನ್ನು ಸ್ವೀಕರಿಸುವ ಕುರಿತು ಪೌರ ಕಾರ್ಮಿಕರಿಗೆ ಪೂರ್ಣ ಪ್ರಮಾಣದ ತರಬೇತಿ ನೀಡಲಾಗಿದೆ ಎಂದು ಬಿಬಿಎಂಪಿ ಹೇಳಿಕೊಂಡರೂ, ಅದನ್ನು ಪೌರ ಕಾರ್ಮಿಕರ ಸಂಘ ತಳ್ಳಿಹಾಕಿದೆ.

`ಗುತ್ತಿಗೆದಾರರು ಹಸಿ ತ್ಯಾಜ್ಯ ಸಂಗ್ರಹಿಸಲು ಪ್ರತ್ಯೇಕ ಬಿನ್‌ಗಳನ್ನು ನೀಡಲಿಲ್ಲ. ಕನಿಷ್ಠ ಕಸ ಗುಡಿಸುವ ಪೊರಕೆಗಳನ್ನು ಕೂಡ ಸರಿಯಾಗಿ ಪೂರೈಸುತ್ತಿಲ್ಲ. ಅಲ್ಲದೆ, ಸರಿಯಾಗಿ ಸಿದ್ಧತೆ ಮಾಡಿಕೊಳ್ಳದೆಯೇ ಪಾಲಿಕೆಯು ಒಣ ಹಾಗೂ ಹಸಿ ತ್ಯಾಜ್ಯ ವಿಂಗಡಿಸುವುದನ್ನು ಕಡ್ಡಾಯಗೊಳಿಸಿರುವುದು ಆರಂಭದಲ್ಲಿ ಸಾರ್ವಜನಿಕರಲ್ಲಿ ಗೊಂದಲ ಮೂಡುವಂತಾಗಿದೆ~ ಎಂದು ಗುತ್ತಿಗೆ ಪೌರ ಕಾರ್ಮಿಕರ ಸಂಘದ ಹೆಸರೇಳಲು ಇಚ್ಛಿಸದ ಪದಾಧಿಕಾರಿಯೊಬ್ಬರು ದೂರಿದರು.

ಈ ನಡುವೆ, `ಆರಂಭದಲ್ಲಿಯೇ ಸಾರ್ವಜನಿಕರಿಂದ ಶೇ 15ರಿಂದ 20ರಷ್ಟು ಉತ್ತಮ ಸ್ಪಂದನೆ ದೊರೆತಿರುವುದು ಸಂತಸದ ವಿಚಾರ. ಮಂಗಳವಾರದಿಂದ ನಾನು ಕೂಡ ಕತ್ರಿಗುಪ್ಪೆ ವಾರ್ಡ್‌ನ ಕೆಂಪೇಗೌಡ ಲೇಔಟ್‌ನಲ್ಲಿ ಮನೆ-ಮನೆಗೆ ಭೇಟಿ ನೀಡಿ ಹಸಿ ತ್ಯಾಜ್ಯವನ್ನು ವಿಂಗಡಿಸಿ ಪೂರೈಸುವಂತೆ ಜನರಲ್ಲಿ ಮನವಿ ಮಾಡುತ್ತೇನೆ. ಶಾಸಕರು ಹಾಗೂ ಪಾಲಿಕೆ ಸದಸ್ಯರು ಕೂಡ ಈ ಆಂದೋಲನ ಯಶಸ್ವಿಯಾಗಲು ಕೈಜೋಡಿಸಬೇಕು~ ಎಂದು ಮೇಯರ್ ಡಿ. ವೆಂಕಟೇಶಮೂರ್ತಿ ತಿಳಿಸಿದ್ದಾರೆ.



 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT