ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದ ಗುಂಡಿಯಾದ ಕೆ.ಆರ್.ಮಾರುಕಟ್ಟೆ

Last Updated 27 ಅಕ್ಟೋಬರ್ 2011, 19:10 IST
ಅಕ್ಷರ ಗಾತ್ರ

ಬೆಂಗಳೂರು:  ಒಂದೆಡೆ ಹೂವಿನ ಕಂಪಿದ್ದರೆ ಮತ್ತೊಂದೆಡೆ ಅದನ್ನೂ ಮೀರಿಸುವ ದುರ್ನಾತ. ಹಣ್ಣುಗಳ ಸುಮಧುರ ವಾಸನೆ ಬರುತ್ತಿರುವಂತೆ ಅದನ್ನೂ ಮರೆಸುವ ಕೊಳಕು ನೀರು, ಕೊಳೆತ ಹಣ್ಣುಗಳ ಸಾಮ್ರಾಜ್ಯ. ಈ ಎಲ್ಲ ಲಕ್ಷಣಗಳು ನಿಮ್ಮ ಕಣ್ಣಿಗೆ ಬಿದ್ದಿತೆಂದರೆ ಅದು ಖಂಡಿತವಾಗಿಯೂ ನಗರದ ಪ್ರಸಿದ್ಧ ಕೃಷ್ಣರಾಜೇಂದ್ರ ಮಾರುಕಟ್ಟೆ.

ಇಡೀ ಏಷ್ಯಾದಲ್ಲೇ ಮೊಟ್ಟ ಮೊದಲ ವಿದ್ಯುತ್ ಸಂಪರ್ಕ ಪಡೆದದ್ದು ಇದೇ ಮಾರುಕಟ್ಟೆ. ಆದರೆ, ಇದೀಗ ದುರವಸ್ಥೆಯ ಆಗರವಾಗಿ ಪರಿವರ್ತನೆಯಾಗಿದೆ. ಅದರಲ್ಲೂ ಮುಖ್ಯವಾಗಿ ಸ್ವಚ್ಛತೆಯ ಸಮಸ್ಯೆ ಇಲ್ಲಿನ ವ್ಯಾಪಾರಿಗಳನ್ನು ಹಾಗೂ ಸಾರ್ವಜನಿಕರನ್ನು ಕಾಡುತ್ತಿದೆ. ಮಾರುಕಟ್ಟೆ ಹಿಂಭಾಗದ ಸೇತುರಾವ್ (ಎಸ್.ಸಿ.ರಸ್ತೆ) ರಸ್ತೆಯ ಪಕ್ಕದಲ್ಲಿ ಮೆಟ್ರೊ ರೈಲು ಮಾರ್ಗ ನಿರ್ಮಿಸುವ ಸಲುವಾಗಿ ರಸ್ತೆಯನ್ನು ಬಂದ್ ಮಾಡಿದ್ದರಿಂದ ಬಿಬಿಎಂಪಿ ಸ್ವಚ್ಛತಾ ವಾಹನಗಳು ಮತ್ತು ಸಿಬ್ಬಂದಿ ಇತ್ತ ಬರುವುದನ್ನೇ ನಿಲ್ಲಿಸಿದ್ದಾರೆ.

`ಪ್ರ್ಯೂಟ್ ಮಂಡಿ~ ಎಂದು ಕರೆಯಲಾಗುವ ಈ ರಸ್ತೆಯುದ್ದಕ್ಕೂ ಹಣ್ಣುಗಳ ಸಂರಕ್ಷಣೆಗೆಂದು ಹೊದಿಸಲಾಗಿದ್ದ ಕಸ ತುಂಬಿಕೊಂಡಿರುತ್ತದೆ. ಕೆ.ಆರ್.ಮಾರುಕಟ್ಟೆಯ ಒಳಭಾಗ ಹಾಗೂ ಆ ಕಟ್ಟಡದ ಅಂಚಿನ ಭಾಗವನ್ನು ಬಿಬಿಎಂಪಿ ಸಿಬ್ಬಂದಿ ಸ್ವಚ್ಛಗೊಳಿಸುತ್ತಾರೆ.

ಆದರೆ ಬಿ.ವಿ.ಕೆ. ಅಯ್ಯಂಗಾರ್ ರಸ್ತೆಯಿಂದ ಮಾರುಕಟ್ಟೆಯ ಹಿಂಭಾಗದ ರಸ್ತೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಮಧ್ಯೆಯೇ ಇದೀಗ `ನಮ್ಮ ಮೆಟ್ರೊ~ದ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಕಳೆದ ಒಂದು ತಿಂಗಳಿಂದ ಹಣ್ಣುಗಳನ್ನು ಹೊತ್ತ ಲಾರಿಗಳು ಇತ್ತ ಬರುತ್ತಿಲ್ಲ. ಲಾರಿಗಳೇ ಬರುತ್ತಿಲ್ಲ ಎಂದಾದ ಕಸವಾದರೂ ಎಲ್ಲಿ ಬೀಳುತ್ತದೆ ಎಂದು ಯೋಚಿಸಿದ ಬಿಬಿಎಂಪಿ ಸಿಬ್ಬಂದಿ ಅಲ್ಲಿ ಕಸ ವಿಲೇವಾರಿ ಮಾಡುವುದನ್ನು ಸ್ಥಗಿತಗೊಳಿಸಿದ್ದಾರೆ.

ಈ ರಸ್ತೆಯಲ್ಲಿ ಹಣ್ಣಿನ ಅಂಗಡಿಯನ್ನು ಹೊಂದಿರುವ ಪಿ.ಕೆ.ಫಾರೂಕ್ `ಪ್ರಜಾವಾಣಿ~ಯೊಂದಿಗೆ ಮಾತನಾಡಿ, `ಮೊದಲು ಆರ್‌ಎಂಸಿ ಯಾರ್ಡ್ ಇಲ್ಲಿಯೇ ಇದ್ದುದರಿಂದ ಪ್ರತಿ ವಾರ ನಮ್ಮಿಂದ ಸುಂಕ ವಸೂಲಿ ಮಾಡಿ ಅದನ್ನು ಬಿಬಿಎಂಪಿಗೆ ನೀಡಿ ಕಸವನ್ನು ತೆಗೆಸುತ್ತಿದ್ದರು. ಇದೀಗ ಮೆಟ್ರೊ ಮಾರ್ಗ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಲಾರಿಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಆರ್‌ಎಂಸಿ ಯಾರ್ಡ್ ಸಹ ಬೇರೆಡೆ ಸ್ಥಳಾಂತರವಾಯಿತು.

ಅಂದಿನಿಂದಲೇ ಯಾರೂ ಕಸವನ್ನು ಸಾಗಿಸುತ್ತಿಲ್ಲ. ಇದೇ ದುರ್ನಾತದಲ್ಲೇ ನಾವು ಕಾಲ ಕಳೆಯುವಂತಾಗಿದೆ. ಮೆಟ್ರೊ ಯಾವಾಗ ಆರಂಭವಾಗುತ್ತದೋ, ನಮ್ಮ ಗೋಳು ಯಾವಾಗ ಮುಗಿಯುತ್ತದೋ~ ಎಂದು ಆತಂಕ ವ್ಯಕ್ತಪಡಿಸಿದರು.

ಇದು ಬರೀ ಎಸ್.ಆರ್.ರಸ್ತೆಯ ಸಮಸ್ಯೆಯಲ್ಲ. ಇಡೀ ಮಾರುಕಟ್ಟೆ ಸಂಕೀರ್ಣದಲ್ಲೆಲ್ಲ ಕಸ ವಿಲೇವಾರಿಯ ಸಮಸ್ಯೆ ಇದೆ. ತ್ಯಾಜ್ಯ ವಿಲೇವಾರಿ ವಾಹನವೊಂದು ನಿರಂತರವಾಗಿ ಓಡಾಡುತ್ತದೆ. ಆದರೆ ಮಾರುಕಟ್ಟೆ ಒಳಭಾಗದ ಕಸವನ್ನು ಒಯ್ಯುತ್ತದೆ. ಒಂದು ವಾರದಿಂದಲೂ ಮಾರುಕಟ್ಟೆ ಹೊರಭಾಗದ ಕಸವನ್ನು ವಿಲೇವಾರಿ ಮಾಡಿಲ್ಲ ಎಂದು ವ್ಯಾಪಾರಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
 
ಹೂವಿನ ವ್ಯಾಪಾರಿಗಳಿಂದ ಸುಂಕ ವಸೂಲಿ ಮಾಡುತ್ತಿರುವ ಕೃಷ್ಣೇಗೌಡ ಹಾಗೂ ಅವರ ಅಣ್ಣ ಅಪ್ಪಾಜಿ ಅವರದ್ದು ಇನ್ನೊಂದು ಸಮಸ್ಯೆ. ಹೂವಿನ ಮಾರಾಟಕ್ಕೆಂದು ಬರುವವರಿಂದ ಇವರು ದಿನದ ಲೆಕ್ಕದಲ್ಲಿ ಸುಂಕ ವಸೂಲಿ ಮಾಡಬೇಕು.  ಈ ಸಂಬಂಧ ಇವರ ಮಾಲೀಕರಾಗಿರುವ ಗುತ್ತಿಗೆದಾರರು ಬಿಬಿಎಂಪಿಗೆ ಹಣ ನೀಡಿ ಸುಂಕ ವಸೂಲಿ ಪರವಾನಗಿ ಪಡೆದಿದ್ದಾರೆ. ಇವರಿಬ್ಬರೂ ಅವರ ಪರವಾಗಿ ಸುಂಕ ಸಂಗ್ರಹಿಸುತ್ತಾರೆ. 

`ತ್ಯಾಜ್ಯವನ್ನು ಬೇರೆಡೆ ಸಾಗಿಸದೇ ಇರುವುದರಿಂದ ಹೂವಿನ ವ್ಯಾಪಾರಿಗಳು ನಮಗೆ ಸುಂಕ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಕಸ ತೆಗೆಯುವುದು ಬಿಬಿಎಂಪಿ ಕರ್ತವ್ಯ. ಆದರೆ ನಮಗೆ ಸುಂಕ ಸಂಗ್ರಹವಾಗುವುದಿಲ್ಲ ಎಂದು ಹೆದರಿ, ನೂರಾರು ರೂಪಾಯಿ ಖರ್ಚು ಮಾಡಿ ಕಸವನ್ನು ಬೇರೆಡೆ ಸಾಗಿಸಿದ್ದೇವೆ~ ಎಂದು ಕೃಷ್ಣೇಗೌಡ ನುಡಿದರು.

ಸಮಸ್ಯೆಯ ಕುರಿತು ಪ್ರತಿಕ್ರಿಯೆ ಪಡೆಯಲು ಈ ಭಾಗದ ಬಿಬಿಎಂಪಿ ಸದಸ್ಯ ಜಿ.ಎ.ಅಶ್ವತ್ಥನಾರಾಯಣ ಅವರನ್ನು ಸಂಪರ್ಕಿಸುವ ಯತ್ನ ಫಲ ನೀಡಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT