ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸದಿಂದ ವಿದ್ಯುತ್: ಖಾಸಗಿ ಗುತ್ತಿಗೆಗೆ ನಗರಸಭೆ ಚಿಂತನೆ

Last Updated 9 ಆಗಸ್ಟ್ 2011, 6:20 IST
ಅಕ್ಷರ ಗಾತ್ರ

ಮಂಡ್ಯ: ನಗರದಲ್ಲಿ ಎಲ್ಲೆಂದರಲ್ಲಿ ಕಂಡು ಬರುವ ಕಸದ ರಾಶಿ ಸಮಸ್ಯೆಗೆ ಪರೋಕ್ಷ ಪರಿಹಾರ ಕಂಡು ಕೊಳ್ಳಲು ನಗರಸಭೆ ಚಿಂತನೆ ನಡೆಸಿದೆ.

ಸತತ ಮೂರು ವರ್ಷಗಳ ಅವಧಿಯಲ್ಲಿ ಕೆಲವು ಸದಸ್ಯರಿಂದ ಅಪರೇಷನ್ ಕಮಲದತ್ತ ಒಲವು, ಒಳಜಗಳ, ವಾಗ್ವಾದದಲ್ಲೇ ಕಳೆದ ಆಡಳಿತ ಚುಕ್ಕಾಣಿ ಹಿಡಿದ ಜೆಡಿಎಸ್ ನೇತೃತ್ವದ ನಗರಸಭೆ ಈಗ ಕಸದಿಂದಲೇ ವಿದ್ಯುತ್ ಉತ್ಪಾದಿಸುವ ಚಿಂತನೆಗೆ ಒಲವು ತೋರಿದೆ.

ನಗರಸಭೆಯ ಮಾಹಿತಿ ಅನುಸಾರ, ನಗರಸಭೆ ವ್ಯಾಪ್ತಿ ಒಟ್ಟು 17.05 ಕಿ.ಮೀ. ಆಗಿದ್ದು, ಒಟ್ಟು 35 ವಾರ್ಡ್‌ಗಳಿವೆ. ಇಲ್ಲಿ ನಿತ್ಯ ಸರಾಸರಿ 60 ಟನ್ ಕಸ ಸಂಗ್ರಹವಾಗಲಿದೆ. ಇದನ್ನು ಬಳಸಿ ವಿದ್ಯುತ್ ಉತ್ಪಾದಿಸುವುದು ಈಗಿನ ಚಿಂತನೆ.

ಹೀಗೆ ಸಂಗ್ರಹವಾಗುವ ಘನತ್ಯಾಜ್ಯವನ್ನು ಪಟ್ಟಣದ ಹೊರಗೆ 10 ಕಿ.ಮೀ. ದೂರದ ಆಚೆ ಕಾಳೇನಹಳ್ಳಿಯಲ್ಲಿ ಇರುವ ಘನತ್ಯಾಜ್ಯ ಶೇಖರಣಾ ಘಟಕಕ್ಕೆ ಒಯ್ದು, ಪರಿಸರಕ್ಕೆ ಧಕ್ಕೆ ಯಾದಂತೆ ಬೇರ್ಪಡಿಸಿ, ವೈಜ್ಞಾನಿಕ ರೀತಿಯಲ್ಲಿ ಅದನ್ನು ವಿಲೇವಾರಿ ಮಾಡಬೇಕು.

ವೈಜ್ಞಾನಿಕ ಕ್ರಮದಲ್ಲಿ ನೆಲದಲ್ಲಿ ಹೂತು ಮಣ್ಣು ಗುಂಡಿ ತುಂಬದಿದ್ದರೆ ಅದರಿಂದ ಪರಿಸರಕ್ಕೂ ಧಕ್ಕೆ. ಆದರೆ, ಪ್ರಸ್ತುತ, 10 ಕಿ.ಮೀ. ದೂರವಿರಲಿ, ಹೊಳಲು ರಸ್ತೆ, ಕಲ್ಲಹಳ್ಳಿ ಸಂಪರ್ಕಿಸುವ ರಸ್ತೆಯ ಒಂದು ಬದಿಯಲ್ಲಿಯೇ ಕಸವನ್ನು ವಿಲೇವಾರಿ ಮಾಡಲಾಗುತ್ತದೆ. ಪರಿಣಾಮ, ಅದು ನಾಯಿಗಳ ಆವಾಸ ಸ್ಥಾನವಾಗಿದೆ.

ಈ ಎಲ್ಲದಕ್ಕೂ ಪರಿಹಾರ ಕಂಡುಕೊಳ್ಳಲು ಇದರಿಂದ ವಿದ್ಯುತ್ ಉತ್ಪಾದಿಸಲು, ಇದಕ್ಕಾಗಿ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲು ನಗರಸಭೆಯು ಚಿಂತನೆ ನಡೆಸಿದೆ. ಅಧಿಕಾರಿಗಳ ಪ್ರಕಾರ, ಈಗಾಗಲೇ ಪೂನಾ, ಬಾಂಬೆಯಲ್ಲಿ ಈ ಕಾರ್ಯವನ್ನು ಕೈಗೊಂಡಿರುವ ಕಾನ್‌ಕಾರ್ಡ್ ಬ್ಲೂ ಟೆಕ್ನಿಕಲ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ವಿದ್ಯುತ್ ಉತ್ಪಾದನೆ ಮಾಡಲು ಮುಂದೆ ಬಂದಿದೆ.

ಈ ಸಂಸ್ಥೆಗೆ ಗುತ್ತಿಗೆ ಆಧಾರದಲ್ಲಿ ಮೂರು ಎಕರೆ ಭೂಮಿಯನ್ನು ನೀಡಬೇಕು. ನಗರದಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಆ ಸ್ಥಳಕ್ಕೆ ಸಾಗಿಸಬೇಕು ಎಂಬುದಷ್ಟೇ ನಗರಸಭೆಯ ಹೊಣೆ. ವಿದ್ಯುತ್ ಉತ್ಪಾದನೆಗೆ ತಗಲುವ ನಿರ್ಮಾಣ ವೆಚ್ಚವನ್ನು ಕಂಪೆನಿಯೇ ಭರಿಸಲಿದೆ. ನಿರ್ಮಾಣ-ನಿರ್ವಹಣೆ-ವರ್ಗಾವಣೆ ಆಧಾರ ದಲ್ಲಿ ಇದು ಜಾರಿಗೆ ಬರಲಿದ್ದು, ಕಾಲಾನಂತರ ನಗರಸಭೆಯ ಸುಪರ್ದಿಗೆ ಬರಲಿದೆ ಎಂಬುದು ಈಗಿನ ಮಾಹಿತಿ.

ಪ್ರಾಯೋಗಿಕವಾಗಿಯಾದರೂ ಈ ಕಾರ್ಯಕ್ಕೆ ಅನುಮೋದನೆ ನೀಡಿದರೆ, ಪರಿಸರ ಮಾಲಿನ್ಯ ತಡೆಯುವುದರ ಜೊತೆಗೆ, ನಗರದಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡು ಕೊಂಡಂತೆ ಆಗಲಿದೆ ಎಂದು ಭಾವಿಸಲಾಗಿದೆ.

ಆದರೆ, ಇನ್ನು ಚರ್ಚೆಗೆ ಒಳಪಡಬೇಕಾದ ಈ ಪ್ರಸ್ತಾಪ ಜಾರಿಗೆ ಬರಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ. ಕಳೆದ ಸಾಮಾನ್ಯ ಸಭೆಯ ಅಜೆಂಡಾದಲ್ಲೂ ಈ ವಿಷಯ ಉಲ್ಲೇಖವಾಗಿದ್ದರೂ, ಸದಸ್ಯರಿಂದ ಗಂಭೀರ ಚರ್ಚೆ ಆಗಲಿಲ್ಲ.

ಕಲಾಪದ ಬಹುತೇಕ ಅವಧಿಯನ್ನೂ ಜೆಡಿಎಸ್‌ನ ಪಕ್ಷದ ಸದಸ್ಯರ ಮನಸ್ತಾಪ, ವಾಗ್ವಾದಗಳೇ ಕಲಾಪದ ಹೆಚ್ಚಿನ ಅವಧಿಯನ್ನು ಆವರಿಸಿದ್ದು ಇದಕ್ಕೆ ಕಾರಣ. ಬಹುಶಃ ಸದಸ್ಯರಲ್ಲಿ  ಈ ಕುರಿತು ಸಹಮತ ಮೂಡಿದರೆ ನಗರವನ್ನು ಕಾಡುತ್ತಿರುವ ಕಸ, ರಸವೂ ಆಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT