ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಕಟ್ಟಿದ್ದು ಸಿದ್ದನಂಜಪ್ಪ; ಒಡೆದಿದ್ದು ಶಿವಪ್ಪ

Last Updated 27 ಮಾರ್ಚ್ 2014, 7:22 IST
ಅಕ್ಷರ ಗಾತ್ರ

ಹಾಸನ: ಸ್ವಾತಂತ್ರ್ಯಾ ನಂತರ ನಡೆದ ಮೊದಲ ಮೂರು ಲೋಕಸಭಾ ಚುನಾವಣೆಗಳಲ್ಲಿ ಹಾಸನವನ್ನು ಪ್ರತಿನಿಧಿಸಿದ್ದ ಸಿದ್ದನಂಜಪ್ಪ ಅವರು ಜಿಲ್ಲೆಯಲ್ಲಿ ಕಟ್ಟಿದ್ದ ಕಾಂಗ್ರೆಸ್‌ ಕೋಟೆಯನ್ನು ಒಡೆದಿದ್ದು ಎನ್‌. ಶಿವಪ್ಪ.

1967ರಲ್ಲಿ ಇವರು ಕಾಂಗ್ರೆಸ್‌ನ ಹಾರನಹಳ್ಳಿ ರಾಮಸ್ವಾಮಿ ಅವರನ್ನು 42,452 ಮತಗಳಿಂದ ಸೋಲಿಸಿದ್ದರು.ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯುವ ಉದ್ದೇಶದಿಂದ ರಾಜಗೋಪಾಲಾಚಾರಿ ಅವರು ಕಟ್ಟಿದ್ದ  ‘ಸ್ವತಂತ್ರ ಪಾರ್ಟಿ’ಗೆ ಹಾಸನದಲ್ಲಿ ಕಾಣಿಸಿದ್ದ ಅಭ್ಯರ್ಥಿಯೇ ಎನ್‌. ಶಿವಪ್ಪ.
ಹಾಸನದಲ್ಲಿ ವಕೀಲ ವೃತ್ತಿಯಲ್ಲಿದ್ದ ಶಿವಪ್ಪ ಅವರು ಒಳ್ಳೆಯ ವಾಗ್ಮಿಯಾಗಿದ್ದರು ಎಂಬುದನ್ನು ಬಿಟ್ಟರೆ ರಾಜಕೀಯವಾಗಿ ಅಂಥ ಅನುಭವವಾಗಲಿ, ಹಿನ್ನೆಲೆಯಾಗಲಿ ಇರಲಿಲ್ಲ.

ಆದರೆ, ರಾಷ್ಟ್ರಮಟ್ಟದಲ್ಲಿ ಉಂಟಾದ ರಾಜಕೀಯ ಬದಲಾವಣೆ ಅವರ ಪಕ್ಷಕ್ಕೆ ಅನುಕೂಲಕರವಾಯಿತು.ಆ ಕಾಲದಲ್ಲಿ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ ವಿರುದ್ಧದ ಅಲೆ ಕಾಣಿಸಿಕೊಂಡಿದ್ದರಿಂದ ಸಾಕಷ್ಟು ಹೆಸರು ಮಾಡಿಕೊಂಡಿದ್ದ, ಇಲ್ಲಿನ ಕಾಂಗ್ರೆಸ್‌ ಅಭ್ಯರ್ಥಿ ಹಾರನಹಳ್ಳಿ ರಾಮಸ್ವಾಮಿ ಚುನಾವಣೆಯಲ್ಲಿ ಸೋಲು ಅನುಭವಿಸಬೇಕಾಯಿತು.

ಆ ಸಲ ಕಣದಲ್ಲಿ ಇದ್ದವರು ಇವರಿಬ್ಬರು ಮಾತ್ರ. ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ 57.20 ರಷ್ಟನ್ನು ಶಿವಪ್ಪ ಪಡೆದಿದ್ದರು. ಸ್ವತಂತ್ರ ಪಾರ್ಟಿಯ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಶಿವಪ್ಪ ಅವರಿಗೆ ದೀರ್ಘಕಾಲದವರೆಗೆ ಆ ಪಕ್ಷದಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. 1970ರ ದಶಕದ ಆರಂಭದಲ್ಲಿ ಇಂದಿರಾ ಗಾಂಧಿ ಅವರು ಬ್ಯಾಂಕ್‌ ರಾಷ್ಟ್ರೀಕರಣ, ರಾಜಧನ ರದ್ದತಿ ಮುಂತಾದ ಕೆಲವು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿ ಬಂತು. ಇದರಿಂದಾಗಿ ಸರ್ಕಾರಕ್ಕೇ ಕುತ್ತು ಬರುವ ಸಂದರ್ಭದಲ್ಲಿ, ಅವಿಶ್ವಾಸ ನಿರ್ಣಯ ಮಂಡನೆಯಾದಾಗ ಶಿವಪ್ಪ ಕಾಂಗ್ರೆಸ್‌ ಪರ ಮತ ನೀಡಿದರು. ಆ ಬಾರಿ ಸರ್ಕಾರ ಉಳಿದುಕೊಂಡಿತ್ತು. ಇದಕ್ಕೆ ಪ್ರತಿಯಾಗಿ ಮುಂದಿನ (1977) ಚುನಾವಣೆಯಲ್ಲಿ ಶಿವಪ್ಪ ಅವರಿಗೆ ಹಾಸನ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಲಭಿಸಿದ್ದಲ್ಲದೆ, ಆ ಚುನಾವಣೆಯಲ್ಲೂ ಜಯ ಗಳಿಸಿದರು.

ಆ ಕಾಲದಲ್ಲಿ ಜಿಲ್ಲಾ ಕೇಂದ್ರ ಹಾಸನಕ್ಕಿಂತ ಚನ್ನರಾಯಪಟ್ಟಣವೇ ಜಿಲ್ಲೆಯ ರಾಜಕೀಯದ ಶಕ್ತಿ ಕೇಂದ್ರವಾಗಿತ್ತು. ಅನೇಕ ಮುಖಂಡರು ಅಲ್ಲಿಂದಲೇ ಮೇಲೆದ್ದು ಬಂದಿದ್ದರು. ಶಿವಪ್ಪ ಅವರೂ ಚನ್ನರಾಯಪಟ್ಟಣದ, ನುಗ್ಗೆ ಹಳ್ಳಿಯವರು. ಎರಡು ಅವಧಿಗೆ ಸಂಸದರಾಗಿದ್ದರೂ ಜಿಲ್ಲೆಗೆ ಶಿವಪ್ಪ ಅವರು ಸದಾ ನೆನಪಿನಲ್ಲಿಡಬಹುದಾದ ಕಾಣಿಕೆ ಕೊಟ್ಟಿಲ್ಲ ಎಂದು ಅವರ ಅವಧಿಯನ್ನು ಕಂಡಿರುವ ಜಿಲ್ಲೆಯ ಹಿರಿಯರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT