ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಯುವರಾಜ ಇಂದು ಹುಬ್ಬಳ್ಳಿಗೆ

Last Updated 1 ಜೂನ್ 2012, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮುಂಬರುವ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡೇ ಸಂಘಟಿಸಲಾಗಿರುವ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ಕಾಂಗ್ರೆಸ್ `ಯುವರಾಜ~ ರಾಹುಲ್ ಗಾಂಧಿ ಶನಿವಾರ ನಗರಕ್ಕೆ ಆಗಮಿಸಲಿದ್ದು, ನೆಹರೂ ಮೈದಾನದಲ್ಲಿ ನಡೆಯುವ ಕಾರ್ಯಕರ್ತರ ಬಹಿರಂಗ ಅಧಿವೇಶನದಲ್ಲೂ ಅವರು ಮಾತನಾಡಲಿದ್ದಾರೆ.

ವಿಮಾನ ನಿಲ್ದಾಣದಿಂದ ನವೀನ್ ಹೋಟೆಲ್ ಮತ್ತು ನೆಹರೂ ಮೈದಾನಕ್ಕೆ ತೆರಳುವ ರಸ್ತೆಗಳು ಕಾಂಗ್ರೆಸ್ ಬಾವುಟ ಮತ್ತು ಫ್ಲೆಕ್ಸ್‌ಗಳಿಂದ ರಾರಾಜಿಸುತ್ತಿದ್ದು, ಎಲ್ಲೆಲ್ಲೂ ರಾಹುಲ್ ಚಿತ್ರಗಳೇ ತುಂಬಿಹೋಗಿವೆ. ಪ್ರಮುಖ ಬೀದಿಗಳಲ್ಲಿ ಕಾಂಗ್ರೆಸ್ ಧ್ವಜಗಳ ತೋರಣ ಕಟ್ಟಲಾಗಿದ್ದು, ನಗರದ ಹೃದಯ ಭಾಗವಾದ ಟ್ರಾಫಿಕ್ ಐಲ್ಯಾಂಡ್‌ನಲ್ಲಿ ಅಶ್ವಾರೂಢ ರಾಣಿ ಚನ್ನಮ್ಮ  ಪ್ರತಿಮೆಯೂ ಕಾಣದಂತೆ ಕಾಂಗ್ರೆಸ್ ತೋರಣಗಳೇ ಆಕ್ರಮಿಸಿಬಿಟ್ಟಿವೆ.

ವಿಮಾನ ನಿಲ್ದಾಣದ ಪಕ್ಕದಲ್ಲೇ ಇರುವ ಕಾಟನ್ ಕೌಂಟಿ ಕ್ಲಬ್‌ನಲ್ಲಿ ಕಾಂಗ್ರೆಸ್  ವಿದ್ಯಾರ್ಥಿ ಸಂಘಟನೆಯಾದ ಎನ್‌ಎಸ್‌ಯುಐ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯುತ್ತಿದ್ದರೆ, ನವೀನ್ ಹೋಟೆಲ್‌ನಲ್ಲಿ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಂಘಟಿಸಲಾಗಿದೆ. ಎಲ್ಲೆಡೆ ಓಡಾಡುತ್ತಿರುವ ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಸಂಭ್ರಮ ಎದ್ದು ಕಾಣುವಂತೆ ಮಾಡಿದ್ದಾರೆ.

ಹುಬ್ಬಳ್ಳಿ ನೆಲದಲ್ಲಿ ದೇಶದ ಯುವ ಕಾಂಗ್ರೆಸ್ ಶಕ್ತಿಯನ್ನು ಕಲೆ ಹಾಕಲಾಗಿದ್ದು, ಹತ್ತು ರಾಜ್ಯಗಳ ಚುನಾವಣಾ ತಯಾರಿಗೆ ಇಲ್ಲಿಂದಲೇ ರಣಕಹಳೆ ಮೊಳಗಲಿದೆ. ಉತ್ತರ ಪ್ರದೇಶದ ಸೋಲಿನ ಕಹಿ ಮರೆತು ಮತ್ತೆ ಎದ್ದು ನಿಲ್ಲಲು ಈ ಸಮಾವೇಶವನ್ನೇ `ಚಿಮ್ಮು ಹಲಗೆ~ಯನ್ನಾಗಿ ಮಾಡಿಕೊಳ್ಳಲಾಗುತ್ತಿದೆ ಎಂಬ ವಿಶ್ಲೇಷಣೆ ಕೇಳಿ ಬರುತ್ತಿದೆ.

ಸದ್ಯದ ವೇಳಾಪಟ್ಟಿ ಪ್ರಕಾರ, ರಾಹುಲ್ ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಮುಂಜಾನೆ 10.30ಕ್ಕೆ ಹುಬ್ಬಳ್ಳಿಗೆ ಬಂದಿಳಿಯಲಿದ್ದಾರೆ. ಅಲ್ಲಿಂದ ನೇರವಾಗಿ ಎನ್‌ಎಸ್‌ಯುಐ ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಹುರಿದುಂಬಿಸಲಿದ್ದಾರೆ. ಬಳಿಕ ಯುವ ಕಾಂಗ್ರೆಸ್ ಕಾರ್ಯಕಾರಿಣಿಯಲ್ಲಿ ಭಾಗಹಿಸುವ ಅವರು, ಎಲ್ಲ ರಾಜ್ಯ ಘಟಕಗಳ ಅಧ್ಯಕ್ಷರೊಂದಿಗೆ ಸಂವಾದ ನಡೆಸಲಿದ್ದಾರೆ.

ಊಟ ಮುಗಿಸಿದ ನಂತರ ಲಘು ವಿಶ್ರಾಂತಿ ಪಡೆಯುವ ರಾಹುಲ್, ಅಲ್ಲಿಂದ ಮಧ್ಯಾಹ್ನ 3.30ಕ್ಕೆ ನೇರವಾಗಿ ನೆಹರೂ ಮೈದಾನಕ್ಕೆ ತೆರಳಿ ಬಹಿರಂಗ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬಹಿರಂಗ ಅಧಿವೇಶನ: ಬಹಿರಂಗ ಅಧಿವೇಶನಕ್ಕೆ 28/18 ಅಡಿ ಉದ್ದದ ವೇದಿಕೆ ನಿರ್ಮಿಸಲಾಗಿದ್ದು, ಹವಾ ನಿಯಂತ್ರಣದ ವ್ಯವಸ್ಥೆ ಮಾಡಲಾಗಿದೆ. ವೇದಿಕೆ ಹಿಂಭಾಗದಲ್ಲೇ ಒಂದು ವಿಶ್ರಾಂತಿ ಕೋಣೆ ಸಿದ್ಧವಾಗಿದ್ದು, ಶೌಚಾಲಯವನ್ನೂ ಈ ಕೋಣೆ ಹೊಂದಿದೆ.

ಆಯ್ದ ನಾಯಕರಿಗಷ್ಟೇ ವೇದಿಕೆ ಮೇಲೆ ಆಸೀನರಾಗಲು ಅವಕಾಶ ಕಲ್ಪಿಸಲಾಗಿದ್ದು, ಉಳಿದ ಮುಖಂಡರು ಮತ್ತು ಕೆಪಿಸಿಸಿ ಸದಸ್ಯರಿಗೆ ಪ್ರಧಾನ ವೇದಿಕೆ ಎಡ-ಬಲ ಬದಿಯಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ.
ಕೇಂದ್ರ ಸಚಿವರಾದ ವಯಲಾರ್ ರವಿ, ಜಿತೇಂದರ್ ಸಿಂಗ್, ರಾಜಸ್ತಾನ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್, ರಾಹುಲ್ ಕೋರ್ ಸಮಿತಿಯ ಪ್ರಮುಖ ಸದಸ್ಯೆಯರಾದ ಮೀನಾಕ್ಷಿ ನಟರಾಜನ್, ಶಾನಿಮೊಲ್ ಉಸ್ಮಾನ್, ಸಂಘಟನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ರಾಜೀವ್ ಸಾತವ್ ಈಗಾಗಲೇ ಎಲ್ಲ ಪದಾಧಿಕಾರಿಗಳಿಗೆ ಉತ್ಸಾಹ ತುಂಬುವ ಕೆಲಸ ಮಾಡಿದ್ದು, ರಾಹುಲ್ ಆಗಮನದಿಂದ ಆ ಉತ್ಸಾಹ ಇಮ್ಮಡಿಗೊಳ್ಳಲಿದೆ.

ಬಹಿರಂಗ ಸಭೆಗೆ ಮೊದಮೊದಲು ಹಿಂದೇಟು ಹಾಕಿದ್ದ `ಯುವರಾಜ~ನನ್ನು ರಾಜ್ಯದ ಮುಖಂಡರು ಕಷ್ಟಪಟ್ಟು ಮಾತನಾಡಲು ಒಪ್ಪಿಸಿದ್ದಾರೆ.ಭದ್ರತೆಗೆ 10 ಕೆಎಸ್‌ಆರ್‌ಪಿ, 10 ಸಿಎಆರ್ ತುಕಡಿಗಳು ಸೇರಿದಂತೆ 1,500 ಜನ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಸ್ಥಳಗಳಲ್ಲಿ 52 ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ರಾಜ್ಯ ಗುಪ್ತಚರ ಇಲಾಖೆ ಸಿಬ್ಬಂದಿಯೂ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡಲಿದ್ದಾರೆ.

ವೇದಿಕೆ ಸುತ್ತ ವಿಶೇಷ ಭದ್ರತಾ ಪಡೆ (ಎಸ್‌ಪಿಜಿ) ಯೋಧರು `ಕೋಟೆ~ ಕಟ್ಟಲಿದ್ದಾರೆ. ಮೂರು ದಿನಗಳ ಹಿಂದೆಯೇ ಎಸ್‌ಪಿಜಿ ಯೋಧರು ನಗರಕ್ಕೆ ಆಗಮಿಸಿದ್ದು, ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ.

ನೆನಪಿದೆಯೇ ರಾಹುಲ್ ಜಟ್ಟಗಿ  ತಾಂಡಾ?
ಹುಬ್ಬಳ್ಳಿ:
ದೇಶದ ಭವಿಷ್ಯದ ಪ್ರಧಾನಿಯೆಂದೇ ಬಿಂಬಿಸಲಾಗುತ್ತಿರುವ ಕಾಂಗ್ರೆಸ್ ಪಕ್ಷದ ಯುವ ನೇತಾರ ರಾಹುಲ್ ಗಾಂಧಿ ವಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲ್ಲೂಕಿನ ಜಟ್ಟಗಿ ತಾಂಡಾಕ್ಕೆ ಭೇಟಿ ನೀಡಿ ನಾಲ್ಕು ವರ್ಷಗಳ ಮೇಲಾಯಿತು. ಅವರ ಭೇಟಿ ಇಲ್ಲಿನ ಜನ-ಜೀವನದಲ್ಲಿ ಯಾವುದೇ ನಿರೀಕ್ಷಿತ ಬದಲಾವಣೆ ತಂದಿಲ್ಲ.
ನಾಲ್ಕು ವರ್ಷಗಳ ಹಿಂದೆ ಇಲ್ಲಿ ಯಾವ ಪರಿಸ್ಥಿತಿ ಇತ್ತೋ ಈಗಲೂ ಅದೇ ಪರಿಸ್ಥಿತಿ ಇದೆ. ಕಿತ್ತು ತಿನ್ನುವ ಬಡತನ, ಕುಡಿಯುವ ನೀರಿನ ತೀವ್ರ ಅಭಾವ, ನಿರುದ್ಯೋಗದ ಸಮಸ್ಯೆ ಈಗಲೂ ಇಲ್ಲಿನ ಲಂಬಾಣಿಗರನ್ನು ಪ್ರತಿ ವರ್ಷ ಗೋವಾಕ್ಕೆ ಗುಳೇ ಹೋಗುವಂತೆ ಮಾಡುತ್ತಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT