ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ವಿರುದ್ಧ ಹೋರಾಟಕ್ಕೆ ನಿರ್ಣಯ

Last Updated 3 ಜೂನ್ 2013, 19:42 IST
ಅಕ್ಷರ ಗಾತ್ರ

ಬೆಂಗಳೂರು: ಹಿಂದಿನ ಸರ್ಕಾರದ ಕಾರ್ಯವೈಖರಿ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಟೀಕಿಸಿರುವುದನ್ನು ಬಿಜೆಪಿ ಉಗ್ರವಾಗಿ ಖಂಡಿಸಿದ್ದು, ಈ ಸಂಬಂಧ ವಿಧಾನಸಭೆ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲು ತೀರ್ಮಾನಿಸಿದೆ.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಬಳಿಕ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಶಿ ಅವರು ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದರು.

`ಕಳೆದ ಕೆಲವು ವರ್ಷಗಳಲ್ಲಿ ಬಯಲಿಗೆ ಬಂದ ಭ್ರಷ್ಟಾಚಾರದ ಹಗರಣಗಳಿಂದಾಗಿ ದೇಶದ ಎದುರು ಕರ್ನಾಟಕ ತಲೆ ತಗ್ಗಿಸುವಂತಾಗಿದೆ' ಎಂದು ರಾಜ್ಯಪಾಲರು ತಮ್ಮ ಭಾಷಣದಲ್ಲಿ ಟೀಕಿಸಿರುವುದನ್ನು ಬಿಜೆಪಿ ಖಂಡಿಸಿದೆ.

ಹಿಂದಿನ ಸರ್ಕಾರಗಳ ಕಾರ್ಯವೈಖರಿಯನ್ನು ಟೀಕೆ ಮಾಡುವುದರ ಮೂಲಕ ರಾಜ್ಯಪಾಲರು ಹೊಸ ಸಂಪ್ರದಾಯಕ್ಕೆ ನಾಂದಿಹಾಡಿದ್ದಾರೆ. ದ್ವೇಷ ರಾಜಕಾರಣ ಇದರಲ್ಲಿ ಕಾಣುತ್ತಿದ್ದು, ಅದರ ವಿರುದ್ಧವೂ ಸದನದಲ್ಲಿ ಪ್ರತಿಭಟಿಸಲು ತೀರ್ಮಾನಿಸಲಾಗಿದೆ ಎಂದು ಜೋಶಿ ತಿಳಿಸಿದರು.

ಹೊಸ ತಾಲ್ಲೂಕು ರಚನೆ ಸೇರಿದಂತೆ ಇತರ ಪ್ರಮುಖ ನಿರ್ಧಾರಗಳನ್ನು ಹಿಂದಿನ ಸರ್ಕಾರದ ಅವಧಿಯಲ್ಲಿ ತೆಗೆದುಕೊಳ್ಳಲಾಗಿತ್ತು. ಈಗಿನ ಸರ್ಕಾರ ಆ ಎಲ್ಲ ನಿರ್ಧಾರಗಳನ್ನು ರದ್ದು ಮಾಡಲು ಮುಂದಾಗಿದೆ. ಇದರ ವಿರುದ್ಧವೂ ಹೋರಾಟ ನಡೆಸುವುದಾಗಿ ಅವರು ಹೇಳಿದರು.

ಪದಾಧಿಕಾರಿಗಳ ಸಭೆ: ಇದೇ 6ರಂದು ಬಿಜೆಪಿ ರಾಜ್ಯ ಘಟಕದ ಪದಾಧಿಕಾರಿಗಳು ಮತ್ತು ಜಿಲ್ಲಾಧ್ಯಕ್ಷರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದು, ಅಲ್ಲಿ ಪಕ್ಷದ ಸಾಂಸ್ಥಿಕ ಚುನಾವಣೆಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.

ರಾಷ್ಟ್ರೀಯ ಕಾರ್ಯಕಾರಿಣಿ ಇದೇ 7ರಿಂದ 9ರವರೆಗೆ ಗೋವಾದಲ್ಲಿ ನಡೆಯಲಿದೆ. ಅದರ ಬಳಿಕ ಮುಂಬರುವ ಲೋಕಸಭಾ ಚುನಾವಣೆಗೆ ತಯಾರಿ ನಡೆಸುವ ಕುರಿತು ಚರ್ಚಿಸಲಾಗುವುದು ಎಂದರು.

ವಿಧಾನಸಭೆಯಲ್ಲಿ ಪಕ್ಷದ ಮುಖ್ಯ ಸಚೇತಕರಾಗಿ ಯಾರನ್ನು ನೇಮಕ ಮಾಡಬೇಕು ಎಂಬುದನ್ನು ಮುಖಂಡರಾದ ಡಿ.ವಿ.ಸದಾನಂದ ಗೌಡ ಮತ್ತು ಜಗದೀಶ ಶೆಟ್ಟರ್ ಅವರು ನಿರ್ಧರಿಸಲಿದ್ದಾರೆ. ಅವರಿಗೆ ಸಭೆ ಅಧಿಕಾರ ನೀಡಿತು ಎಂದರು.

ಯಡಿಯೂರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆತರುವ ವದಂತಿ ಬಗ್ಗೆ ಕೇಳಿದಾಗ `ಅಂತಹ ಪ್ರಯತ್ನ ನಡೆದಿಲ್ಲ. ಅದು ಚರ್ಚೆ ಕೂಡ ಆಗಿಲ್ಲ' ಎಂದು ಜೋಶಿ ಸ್ಪಷ್ಟಪಡಿಸಿದರು. 

4ಬಿಜೆಪಿ ಮುಖಂಡರ ವಿರುದ್ಧ ಶಾಸಕರ ಆಕ್ರೋಶ: ಪುಟ 5

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT